For the best experience, open
https://m.samyuktakarnataka.in
on your mobile browser.

ತುಂಗಭದ್ರೆಗೆ ನಾಡದೊರೆ ಸಿದ್ದು ಪ್ರಥಮ ಬಾಗೀನ

10:03 PM Sep 21, 2024 IST | Samyukta Karnataka
ತುಂಗಭದ್ರೆಗೆ ನಾಡದೊರೆ ಸಿದ್ದು ಪ್ರಥಮ ಬಾಗೀನ

ಅನಿಲ ಬಾಚನಹಳ್ಳಿ/ಲಕ್ಷ್ಮಣ್ ಕೆ.
ಕೊಪ್ಪಳ: ತುಂಗಭದ್ರಾ ಜಲಾಶಯವು ಪ್ರಸಕ್ತ ವರ್ಷ ಎರಡನೇ ಬಾರಿಗೆ ಭರ್ತಿಯಾಗಿದ್ದು, ಬಾಗೀನ ಅರ್ಪಣೆಗೆ ಮುಂದಾಗಿದ್ದ ಸಿದ್ದರಾಮಯ್ಯರ ಪ್ರವಾಸ ಕಾರಣಾಂತರಗಳಿಂದ ರದ್ದಾಗಿತ್ತು. ಆದರೆ ಮುಖ್ಯಮಂತ್ರಿಯಾಗಿ ಪ್ರಥಮ ಬಾರಿಗೆ ಸಿದ್ದರಾಮಯ್ಯ ತುಂಗಭದ್ರೆಗೆ ಬಾಗೀನ ಸಮರ್ಪಸುತ್ತಿರುವುದು ವಿಶೇಷ.

ತುಂಗಭದ್ರಾ ಜಲಾಶಯವು ಅವಧಿಗೂ ಮುನ್ನವೇ ಭರ್ತಿಯಾಗಿತ್ತು. ಜುಲೈ ೧೯ರಿಂದಲೇ ತುಂಗಭದ್ರಾ ಜಲಾಶಯದ ಎಲ್ಲ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಲಾಯಿತು. ಅಲ್ಲಿಂದ ಪಶ್ಚಿಮಘಟ್ಟಗಳಲ್ಲಿ ಉತ್ತಮ ಮಳೆಯಾಗಿ, ಜಲಾಶಯದ ಒಳಹರಿವು ಹೆಚ್ಚುತ್ತಾ ಸಾಗಿತು. ಒಂದು ವಾರದೊಳಗೆ ಜಲಾಶಯವು ನೀರು ಭರ್ತಿಯಾಯಿತು‌. ಇದರಿಂದಾದ ಅಣೆಕಟ್ಟೆಗೆ ಧಕ್ಕೆ ಆಗಬಾರದೆಂದು ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿತ್ತು. ಇದರಿಂದಾಗಿ ತರಾತುರಿಯಲ್ಲಿ ಆಗಷ್ಟ್ ೬ರಂದು ಬಾಗೀನ ಅರ್ಪಣೆಗೆ ನಾಡದೊರೆ ಸಿದ್ದರಾಮಯ್ಯ ಮುಂದಾದರು. ಆದರೆ ಜಲಸಂಪನ್ಮೂಲ ಸಚಿವ ಮತ್ತು ಡಿಸಿಎಂ ಡಿ‌.ಕೆ.ಶಿವಕುಮಾರ ನಾನೂ ಕೂಡಾ ಭಾಗವಹಿಸುವ ಇರಾದೆ ಹೊಂದಿದ್ದಕ್ಕೆ ಬಾಗೀನ ಅರ್ಪಣೆ ಮುಂದೂಡಲಾಗಿತ್ತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಇಬ್ಬರಿಂದಲೂ ದಿನಾಂಕ ಪಡೆದು, ಆಗಸ್ಟ್ ೧೪ರಂದು ಎರಡನೇ ಬಾರಿಗೆ ತುಂಗಭದ್ರಾ ಜಲಾಶಯಕ್ಕೆ ಬಾಗೀನ ಅರ್ಪಣೆ ಕಾರ್ಯಕ್ರಮ ನಿಗದಿ ಪಡಿಲಾಯಿತು. ವಿಪರ್ಯಾಸ ಎಂಬಂತೆ ಆಗಸ್ಟ್ ೧೦ರಂದು ನಡುರಾತ್ರಿ ಕ್ಟಸ್ಟ್ ಗೇಟ್ ಕೊಂಡಿ ಕಳಚಿ, ನದಿಗೆ ಬಿದ್ದಿತ್ತು. ಈ ಹಿನ್ನಲೆ ನಿಗದಿಯಾಗಿದ್ದ ದಿನಾಂಕ ಎರಡು ಬಾರಿ ರದ್ದಾಗಿತ್ತು. ಬಾಗೀನ ಅರ್ಪಣೆಗೆ ಬರಬೇಕಿದ್ದ ಸಿಎಂ ಸಿದ್ದು ಮತ್ತು ಡಿಸಿಎಂ ಡಿ.ಕೆ.ಶಿ ಕಿತ್ತುಹೋದ ಗೇಟ್ ಪರಿಶೀಲಿಸಿ, ಪೋಲಾಗುತ್ತಿದ್ದ ನೀರು ಕಂಡು ಮರುಗಿದ್ದರು.

'ಗೇಟ್ ಕೂರಿಸುವಲ್ಲಿ ಯಶಸ್ವಿಯಾಗುತ್ತೇವೆ. ಮತ್ತೊಮ್ಮೆ ತುಂಗಭದ್ರಾ ಜಲಾಶಯ ಭರ್ತಿ ಆಗುತ್ತದೆ. ನಾವು ಬಂದು ಬಾಗೀನ ಅರ್ಪಿಸುತ್ತೇವೆ' ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ನುಡಿದ ಮಾತು ಸತ್ಯವಾಗಿದ್ದು, ನುಡಿದಂತೆಯೇ ಬಾಗೀನ ಅರ್ಪಣೆ ಮಾಡುವ ಮೂಲಕ ನಡೆಯುತ್ತಿದ್ದಾರೆ. ಅಲ್ಲದೇ ಮುರಿದಿದ್ದ ೧೯ನೇ ಕ್ರಸ್ಟ್ ಗೇಟ್ ಅಳವಡಿಸುವಲ್ಲಿ ಯಶಸ್ವಿಯಾದ ನಿಗಮದ ಅಧಿಕಾರಿಗಳು, ತಂತ್ರಜ್ಞರು, ಸಿಬ್ಬಂದಿ ಮತ್ತು ಗೇಟ್ ನಿರ್ಮಾಣ ಸಂಸ್ಥೆಗಳ ಪ್ರತಿನಿಧಿಗಳಿಗೆ ತಾಲ್ಲೂಕಿನ ಮುನಿರಾಬಾದಿ ಗ್ರಾಮದ ಹೈಸ್ಕೂಲ್ ಆವರಣದಲ್ಲಿ ಅಭಿನಂದನೆ ಸಲ್ಲಿಸುತ್ತಿರುವುದು ಗಮನಾರ್ಹ.

ಶೃಂಗಾರಗೊಂಡ ತುಂಗಭದ್ರಾ ಅಣೆಕಟ್ಟೆ: ತುಂಗಭದ್ರಾ ಜಲಾಶಯಕ್ಕೆ ಬಾಗೀನ ಅರ್ಪಣೆಯ ನಿಮಿತ್ತ ಅಣೆಕಟ್ಟೆಯನ್ನು ತಳಿರು, ತೋರಣ, ಬಾಳೆದಿಂಡಿನಿಂದ ಶೃಂಗಾರಗೊಳಿಸಲಾಗಿತ್ತು.‌ ಅಲ್ಲದೇ ೧೯ನೇ ಕ್ರಸ್ಟ್ ಗೇಟ್ ಅಳವಡಿಕೆಗೆ ಶ್ರಮಿಸಿದವರ ಅಭಿನಂದನಾ ಸಮಾರಂಭದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಐಸಿಸಿ ಅಧ್ಯಕ್ಷ ಮತ್ತು ಸಚಿವ‌ ಶಿವರಾಜ್ ತಂಗಡಗಿ ದಿನವಿಡಿ ಎಲ್ಲ ಸಿದ್ಧತೆಗಳನ್ನು ಖುದ್ದಾಗಿ ಪರಿಶೀಲಿಸಿದರು

೨ ಡ್ಯಾಂನಷ್ಟು ನೀರು ನದಿಗೆ : ತುಂಗಭದ್ರಾ ಜಲಾಶಯವು ಜುಲೈ ತಿಂಗಳಲ್ಲಿಯೇ ಭರ್ತಿಯಾಗಿತ್ತು. ಆಗಲೂ ಬಹಳಷ್ಟು ನೀರನ್ನು ಜಲಾಶಯದಿಂದ ನದಿಗೆ ಹರಿಸಲಾಗಿತ್ತು. ಅಲ್ಲದೇ ಸುಮಾರು ೩೦ಕ್ಕೂ ಹೆಚ್ಚು ಟಿಎಂಸಿಯಷ್ಟು ನೀರನ್ನು ೧೯ನೇ ಕ್ರಸ್ಟ್ ಗೇಟ್ ಕಿತ್ತುಹೋದಾಗ ನದಿಗೆ ಬಿಡಲಾಯಿತು. ಅಳವಡಿಕೆ ಬಳಿಕ ತುಂಗಭದ್ರಾ ಜಲಾಶಯ ಮತ್ತೊಮ್ಮೆ ಭರ್ತಿಯಾಯಿತು. ಇದರಿಂದಾಗಿ ಒಟ್ಟಾರೆಯಾಗಿ ೨ ಜಲಾಶಯದಷ್ಟು ನೀರು ಅಂದರೆ ೨೦೦ಕ್ಕೂ ಹೆಚ್ಚು ಟಿಎಂಸಿಯಷ್ಟು ನೀರು ನದಿಗೆ ಪೋಲಾಗಿ ಹರಿದುಹೋಗಿದ್ದು, ರೈತರಲ್ಲಿ ಬೇಸರ ತರಿಸಿದೆ. ಹಾಗಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಿಸಿದರೆ, ಅನುಕೂಲ ಆಗಲಿದೆ ಎಂಬುದು ರೈತರ ಒತ್ತಾಸೆ.

Tags :