ತುಮಕೂರು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಡಿ.2ರಂದು ಶಂಕುಸ್ಥಾಪನೆ
ತುಮಕೂರು : ತುಮಕೂರು ಜಿಲ್ಲೆಯಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಇಲಾಖೆಗಳ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲು ಡಿ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಬೃಹತ್ ಕೈಗಾರಿಕೆ ಸಚಿವ ಎಂಬಿ.ಪಾಟೀಲ್, ಕಂದಾಯ ಸಚಿವ ಕೃಷ್ಣಬೈರೇಗೌಡ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮುಂತಾದ ಸಚಿವರು, ಜಿಲ್ಲೆಯ ಎಲ್ಲ ಕ್ಷೇತ್ರಗಳ ಶಾಸಕರು ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ ಎಂದರು.
ಸುಮಾರು ರೂ. 938 ಕೋಟಿ ಮೊತ್ತದ 825 ಕಾಮಗಾರಿಗಳಿಗೆ ಶಂಕುಸ್ಥಾಪನೆ, 94 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೂತನ ಕಾಮಗಾರಿಗಳ ಉದ್ಘಾಟನೆ. ವಿವಿಧ ಇಲಾಖೆಗಳ 1.50 ಲಕ್ಷ ಫಲಾನುಭವಿಗಳಿಗೆ ಸವಲತ್ತು ವಿತರಣೆ, ಕಂದಾಯ ಇಲಾಖೆಯಿಂದ ಇ-ಸ್ವತ್ತು, ಹಕ್ಕು ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಕೃಷಿ ಇಲಾಖೆಯಿಂದ ಫಲಾನುಭವಿ ರೈತರಿಗೆ ಟ್ರ್ಯಾಕ್ಟರ್, ಡೀಸೆಲ್ ಇಂಜಿನ್, ಪಿವಿಸಿ ಪೈಪ್, ತುಂತುರು ನೀರಾವರಿಯ ಕಿಟ್‌ಗಳು, ತೋಟಗಾರಿಕೆ ಇಲಾಖೆಯಲ್ಲಿ ಹನಿನೀರಾವರಿ, ಪವರ್‌ಫೀಡರ್ಸ್, ರೇಷ್ಮೇ ಇಲಾಖೆಯ 2100 ಫಲಾನುಭವಿಗಳಿಗೆ ಸೋಂಕು ನಿವರಣಾ ಕಿಟ್, ದೇವರಾಜು ಅರಸು ನಿಗಮದಿಂದ ಮಹಿಳೆಯರಿಗೆ 200 ಹೊಲಿಗೆ ಯಂತ್ರ, ಟ್ಯಾಕ್ಸಿ, ಕಾರ್ಮಿಕ ಇಲಾಖೆಯಿಂದ ವೆಲ್ಡಿಂಗ್ ಟೂಲ್ ಕಿಟ್ ಸೇರಿದಂತೆ ಜಿಲ್ಲಾಡಳಿತ ಗುರುತಿಸಿರುವ 1.50 ಲಕ್ಷ ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಂಚಿಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ನಮ್ಮ ಸರ್ಕಾರವು ಎಲ್ಲ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ಅಲ್ಲದೇ, ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂಬುದು ಜನಸಮೂಹಕ್ಕೆ ಸಂದೇಶ ರವಾನೆಯಾಗಬೇಕು. ಸರ್ಕಾರದ ಮೇಲೆ ಟೀಕೆ ಟಿಪ್ಪಣಿಗಳನ್ನು ಮಾಡುವವರಿಗೆ ಉತ್ತರವಾಗಲಿದೆ ಎಂದರು.
ಕಂದಾಯ ಇಲಾಖೆಯಿಂದ 2000 ಸಾವಿರ ಹಕ್ಕು ಪತ್ರಗಳನ್ನು ಹಂಚಿಕೆ ಮಾಡಲಾಗುವುದು. ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ನಮ್ಮ ಸರ್ಕಾರವು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಪ್ರಾತಿನಿದ್ಯ ನೀಡಿದೆ. ಸಂಜೀವಿನಿ ಕಾರ್ಯಕ್ರಮದಡಿ 40 ಸಾವಿರ ಮಹಿಳೆಯರಿಗೆ 40 ಕೋಟಿ ರೂ. ನೀಡಲಾಗುತ್ತಿದೆ. ಎಲ್ಲ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದು ತಿಳಿಸಿದರು.
ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಾದ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕೆಎಸ್‌ಸಿಎ ಅಧ್ಯಕ್ಷ ಎ.ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್ ಸೇರಿದಂತೆ ಮುಂತಾದವರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಪಿ.ಗೊಲ್ಲಹಳ್ಳಿ ಮತ್ತು ಸೂರೆಕುಂಟೆ ವ್ಯಾಪ್ತಿಯಲ್ಲಿ 41 ಎಕರೆ ಭೂಮಿಯನ್ನು ಕೆಐಎಡಿಬಿ ವತಿಯಿಂದ ಕೆಎಸ್‌ಸಿಎ ಅವರಿಗೆ ಹಸ್ತಾಂತರಿಸಿದ್ದೇವೆ. ರೂ. 150 ಕೋಟಿ ವೆಚ್ಚದ ಸುಸಜ್ಜಿತ ಸ್ಟೇಡಿಯಂ, ನಿರ್ಮಾಣವಾಗುತ್ತಿದ್ದು, ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಶಾಸಕರಿಗೆ 25 ಕೋಟಿ ರೂ. ಅನುದಾನ ನೀಡಲು ತೀರ್ಮಾನ ಮಾಡಿದ್ದಾರೆ. ವಿರೋಧ ಪಕ್ಷದ ಶಾಸಕರಿಗೂ 10 ರಿಂದ 15 ಕೋಟಿ ರೂ. ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರವು ಕಾಂಗ್ರೆಸ್ ಪಕ್ಷದ ಶಾಸಕರಿಗೆ 10 ಕೋಟಿ ರೂ. ನೀಡುತ್ತಿದ್ದರು. ತಮ್ಮ ಪಕ್ಷದ ಶಾಸಕರಿಗೆ 50 ಕೋಟಿ ರೂ. ಅನುದಾನ ನೀಡಿದ್ದರು ಎಂದು ಆರೋಪಿಸಿದರು.
ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿ, ಶಂಕುಸ್ಥಾಪನೆಗಳಿವೆ. ಯೋಜನೆಗಳ ಫಲಾನುಭವಿಗಳಿದ್ದಾರೆ. ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಾದರೆ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಎಲ್ಲ ಜಿಲ್ಲೆಗಳ ಅಭಿವೃದ್ಧಿಯಾದರೆ ರಾಜ್ಯ ಅಭಿವೃದ್ಧಿಯಾಗುತ್ತದೆ ಎಂಬುದು ನಮ್ಮ ದೂರದೃಷ್ಟಿ. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿಯವರಿಗೆ ವಿಪಕ್ಷದ ಶಾಸಕರು ಕಪ್ಪು ಭಾವುಟ ತೋರಿಸುವ ಅಗತ್ಯವಿಲ್ಲ ಎಂದು ಹೇಳಿದರು.
ತುಮಕೂರಿಗೆ ಮೆಟ್ರೋ ರೈಲು ಯೋಜನೆ ಡಿಪಿಆರ್ ನಡೆಯುತ್ತಿದೆ. ಹೈದ್ರಾಬಾದ್ ಮೂಲದ ಕಂಪನಿಗೆ ಟೆಂಡರ್ ಆಗಿದ್ದು, ಒಂದೂವರೆ ತಿಂಗಳಿಂದ ಮಾಡುತ್ತಿದೆ. ವಸಂತಾನರಸಾಪುರಲ್ಲಿ ಕೈಗಾರಿಕಾ ಪ್ರದೇಶದಲ್ಲಿ ಪಿಪಿಪಿ ಮಾದರಿಯಲ್ಲಿ ಟೌನ್‌ಶಿಪ್ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ, ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾಪಂಚಾಯತ್ ಸಿಇಒ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ, ಎಸ್‌ಪಿ ಅಶೋಕ್ ಅವರು ಇದ್ದರು.
ಪರಮೇಶ್ವರ ಮತ್ತು ಸಿದ್ದರಾಮಯ್ಯ - ಎಣ್ಣೆಸೀಗೆಕಾಯಿ ಕುರಿತು ಸ್ಪಷ್ಟನೆ: ಡಿ.5ರಂದು ಹಾಸನದಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ನನ್ನ ಪ್ರತಿಕ್ರಿಯೆಯನ್ನು ಖಾಸಗಿ ಸುದ್ದಿ ವಾಹಿನಿಯೊಂದು ತಪ್ಪಾಗಿ ಸುದ್ದಿ ಪ್ರಸಾರ ಮಾಡಿದೆ ಎಂದು ಹೇಳಿದರು.
ಹಾಸನದ ಕಾರ್ಯಕ್ರಮದ ಕುರಿತು ನನ್ನ ಪ್ರತಿಕ್ರಿಯೆ ಕೇಳಿದಾಗ, ಅದರ ನನಗೆ ಗೊತ್ತಿಲ್ಲ ಎಂದು ಹೇಳಿದ್ದೆ. ಇದನ್ನು ಆಧರಿಸಿ, ಪರಮೇಶ್ವರ ಮತ್ತು ಸಿದ್ದರಾಮಯ್ಯ ಅವರು ಎಣ್ಣೆಸೀಗೆಕಾಯಿ ಎಂದು ತಪ್ಪಾಗಿ ಸುದ್ದಿ ಪ್ರಸಾರ ಮಾಡಲಾಗಿದೆ. ನಾನು ಮತ್ತು ರಾಜಣ್ಣ ಮಾತಾಡಿಕೊಂಡು, ಮೊದಲು ತುಮಕೂರಿನಲ್ಲಿ ಸ್ವಾಭಿಮಾನ ಸಮಾವೇಶ ಮಾಡಲು ಚಿಂತನೆ ನಡೆಸಿ, ಎರಡು ಸಭೆಗಳನ್ನು ಮಾಡಿದ್ದೇವೆ ಎಂದರು.
ಯಾವತ್ತು ಕೂಡ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಟ್ಟಿಗೆ ಕೆಲಸ ಮಾಡಿದ್ದೇವೆ. ಈಗಲೂ ಒಟ್ಟಿಗಿದ್ದೇವೆ, ಮುಂದೆಯೂ ಒಟ್ಟಿಗೆ ಕೆಲಸ ಮಾಡುತ್ತೇವೆ. ಅವರು ನಮ್ಮ ನಾಯಕರಿದ್ದಾರೆ. ನಮ್ಮ ಮಧ್ಯೆ ಯಾವ ಡಿಫರೆನ್ಸ್, ಭಿನ್ನಾಭಿಪ್ರಾಯಗಳಿಲ್ಲ. ಯಾವ ಎಣ್ಣೆ ಸೀಗೆಕಾಯಿಯು ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.