ತುರ್ತುಪರಿಸ್ಥಿತಿ ಜಾರಿಯಾದಾಗ ಎಲ್ಲಿ ಹೋಗಿತ್ತು ಸಂವಿಧಾನ?
ಹೋಷಿಯಾರ್‌ಪುರ: ಲೋಕಸಭಾ ಚುನಾವಣೆಯ ಕಡೇ ಹಂತದ ಮತದಾನ ಪ್ರಚಾರದ ಅಭಿಯಾನ ಮುಕ್ತಾಯಗೊಂಡಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪಗಳನ್ನು ಮಾಡಿ ವಾಗ್ದಾಳಿ ನಡೆಸಿದವು. ಪಂಜಾಬ್‌ನ ಹೋಷಿಯಾರ್‌ಪುರದಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ತಂದಿದ್ದ ತುರ್ತುಸ್ಥಿತಿ ಮತ್ತು ಇಂದಿರಾ ಹತ್ಯೆ ನಂತರ ನಡೆದ ಸಿಖ್ಖರ ಮಾರಣಹೋಮವನ್ನು ಪ್ರಸ್ತಾವಿಸಿದರು.
ತುರ್ತು ಪರಿಸ್ಥಿತಿ ಕಾಲದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಮಾಡಿದವರು ಕಾಂಗ್ರೆಸ್‌ನವರೇ. ಈಗ ಅವರು ಸಂವಿಧಾನದ ಬಗ್ಗೆ ಮಾತನಾಡುತ್ತಿದ್ದಾರೆ. ಆಗ ಎಲ್ಲಿ ಹೋಗಿತ್ತು ಸಂವಿಧಾನ ಎಂದು ಪ್ರಶ್ನಿಸಿದರು. ೧೯೮೪ ರಲ್ಲಿ ಸಿಖ್ ಸಮುದಾಯದ ಮಾರಣಹೋಮ ನಡೆದಾಗ ಸಂವಿಧಾನಹ ಎಲ್ಲಿತ್ತು ಎಂದು ಪ್ರಧಾನಿ ಮೋದಿ ಪ್ರಶ್ನಿಸಿದರು.
ಇತ್ತೀಚೆಗೆ ಇಂಡಿಯಾ ಒಕ್ಕೂಟದ ಪಕ್ಷಗಳು ಸಂವಿಧಾನದ ರಕ್ಷಣೆ ಬಹಳ ಮಾತನಾಡುತ್ತಿವೆ. ತುರ್ತು ಪರಿಸ್ಥಿತಿ ಕಾಲದಲ್ಲಿ ಈ ಪಕ್ಷಗಳು ಹೇಗೆ ವರ್ತಿಸಿದವು ಎಂಬುದನ್ನು ಜನ ಮರೆತಿಲ್ಲ ಎಂಬುದನ್ನು ಅವರು ನೆನಪಿನಲ್ಲಿಡಬೇಕು ಎಂದರು. ಕಾಂಗ್ರೆಸ್ ಮತ್ತು ಇತರ ಮಿತ್ರ ಪಕ್ಷಗಳು ಮೀಸಲಾತಿ ಬದಲಿಸುವ ಉದ್ದೇಶ ಹೊಂದಿರುವ ಅಪಾಯಕಾರಿ. ಕಳೆದ ೧೦ ವರ್ಷಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗೆ ಇರುವ ಮೀಸಲಾತಿಯನ್ನು ರಕ್ಷಿಸಲಾಗಿದೆ. ಇದನ್ನು ಕಿತ್ತುಕೊಳ್ಳುವುದೇ ಅವರ ಮೂಲ ಗುರಿ. ದಲಿತರ ಮೀಸಲಾತಿಯನ್ನು ಮುಸ್ಲಿಮರಿಗೆ ಹಂಚಲು ಅವರು ಕಾತುರದಿಂದ ಇದ್ದಾರೆ. ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸಲು ದೊಡ್ಡ ಸಂಚು ನಡೆದಿದೆ. ಭ್ರಷ್ಟಾಚಾರದ ತವರುಮನೆಯೇ ಕಾಂಗ್ರೆಸ್. ಅದನ್ನು ಮೀರಿಸುವ ಹಾಗೆ ಆಮ್ ಆದ್ಮಿ ಪಾರ್ಟಿ ಬೆಳೆದಿದೆ. ಅವರು ಪಂಜಾಬ್‌ನಲ್ಲಿ ಪರಸ್ಪರ ಹೋರಾಟ ನಡೆಸುವ ನಾಟಕ ಮಾಡುತ್ತಿದ್ದಾರೆ. ದೆಹಲಿಯಲ್ಲಿ ಅವರಿಬ್ಬರು ಒಂದುಗೂಡಿದ್ದಾರೆ. ಕಾಂಗ್ರೆಸ್ ತನ್ನ ಭ್ರಷ್ಟಾಚಾರದ ಗರ್ಭದಲ್ಲಿ ಎಎಪಿಯನ್ನು ಬೆಳೆಸಿ ಜನ್ಮ
ನೀಡಿದೆ. ಎಎಪಿ ದೆಹಲಿಯಲ್ಲಿ ಮಾದಕ ದ್ರವ್ಯಗಳ
ಮಾಫಿಯಾವನ್ನು ಸದೆಬಡೆಯುವುದಾಗಿ ಹೇಳಿತ್ತು. ಈಗ ಅದನ್ನೇ ತನ್ನ ಸರ್ಕಾರದ ಆದಾಯದ ಮೂಲ ಮಾಡಿಕೊಂಡಿದೆ. ದೆಹಲಿಯ ಅಬ್ಕಾರಿ ಹಗರಣ ಇಡೀ ವಿಶ್ವಕ್ಕೆ ಗೊತ್ತಾಗಿದೆ.ಪಂಜಾಬ್‌ನಲ್ಲಿ ಗಣಿಗಾರಿಕೆಯ ಮಾಫಿಯಾ ತಲೆ ಎತ್ತಿದೆ.
ಅತಿ ಭ್ರಷ್ಟ ಮತ್ತು ಅತಿ ಸುಳ್ಳುಗಾರರ ಪಕ್ಷ ಎಂದರೆ ಎಎಪಿ. ಪಂಜಾಬ್‌ನಲ್ಲಿ ಕೈಗಾರಿಕೆ ಮತ್ತು ಕೃಷಿ ಎರಡೂ ನಾಶವಾಗಿದೆ. ಗುರು ರವಿದಾಸ್ ಹೇಳಿದಂತೆ ನಮ್ಮ ಮನಸ್ಸು ಮತ್ತು ಹೃದಯ ಪರಿಶುದ್ಧವಾಗಿರಬೇಕು. ಆಗ ಎಲ್ಲವೂ ಪರಿಶುದ್ಧವಾಗಿರುತ್ತದೆ ಎಂದರು.