ತೇಗ ಕೊಂಡು ಹಣ ನೀಡದ ಆರೋಪಿಗೆ 75 ಸಾವಿರ ದಂಡ
ಹುಬ್ಬಳ್ಳಿ: ಮರದ ವ್ಯಾಪಾರಿಯೊಬ್ಬರಿಗೆ (ಟಿಂಬರ್ ಮರ್ಚಂಟ್) ನೀಡಿದ್ದ ಚೆಕ್ ತಿರಸ್ಕೃತವಾದ (ಬೌನ್ಸ್) ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ಉದ್ಯಮಿಯೊಬ್ಬರಿಗೆ ೭೫ ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಆರು ತಿಂಗಳು ಸಾದಾ ಜೈಲು ವಾಸಕ್ಕೆ ಆದೇಶ ನೀಡಿದೆ.
ಏನಿದು ಪ್ರಕರಣ ?
ಹುಬ್ಬಳ್ಳಿಯ ಟಿಂಬರ್ ಮರ್ಚಂಟ್ ತುಳಸಿದಾಸ್ ಪಟೇಲ್ (ಮುರಳಿ ಟಿಂಬರ‍್ಸ್) ಎಂಬುವರು, ದಾಂಡೇಲಿಯ ಖಾನ್ ಉದ್ಯಮಗಳ ಮಾಲೀಕ ಮೊಹಮದ್ ರಫೀಕ್ ಖಾನ್ ಎಂಬುವರಿಗೆ ೭೧,೩೯೦ ರೂ. ಮೌಲ್ಯದ ತೇಗದ ಮರದ ತುಂಡನ್ನು ೨೪.೦೧.೨೦೨೩ರಂದು ಮಾರಿದ್ದರು.
ಪರಸ್ಪರರ ನಡುವೆ ವ್ಯಾವಹಾರಿಕ ಸ್ನೇಹ ಮತ್ತು ವಿಶ್ವಾಸ ಇದ್ದುದರಿಂದ, ಖಾನ್ ಉದ್ಯಮ ಮಾಲೀಕರು ಒಂದು ವಾರದ ನಂತರ ಹಣ ಪಾವತಿಸುವುದಾಗಿ ಹೇಳಿದ್ದರು.
ಆದರೆ ನಿಗದಿತ ಸಮಯದಲ್ಲಿ ಹಣ ನೀಡುವಲ್ಲಿ ವಿಫಲರಾದ ಖಾನ್, ಈ ಮೊತ್ತಕ್ಕೆ ಎಸ್‌ಬಿಐ ಚೆಕ್ ನೀಡಿದ್ದರು. ಚೆಕ್ ತಿರಸ್ಕೃತವಾದ್ದರಿಂದ ತುಳಸಿದಾಸ್ ಪಟೇಲ್, ಖಾನ್‌ಗೆ ಕಾನೂನುಬದ್ಧ ನೋಟಿಸ್ ಜಾರಿ ಮಾಡಿದರು. ಇದಕ್ಕೂ ಸಕಾರಾತ್ಮಕ ಪ್ರತಿಕ್ರಿಯೆ ಬಾರದಿದ್ದುದರಿಂದ, ನ್ಯಾಯಾಲಯಕ್ಕೆ ಖಾಸಗಿ ಕ್ರಿಮಿನಲ್ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ನಾಗೇಶ ನಾಯಕ್ ಅವರು ತುಳಸಿದಾಸ್ ಪಟೇಲ್ ವಾದವನ್ನು ಎತ್ತಿ ಹಿಡಿದರು. ಆರೋಪಿ ಖಾನ್ ದೋಷಿಯಾಗಿದ್ದು, ೭೫ ಸಾವಿರ ರೂಪಾಯಿ ದಂಡ ಕಟ್ಟಬೇಕು. ದಂಡದ ಈ ಮೊತ್ತದಲ್ಲಿ ೭೧,೩೯೦ ರೂಪಾಯಿಗಳನ್ನು ದೂರುದಾರರಿಗೆ ಪಾವತಿಸಬೇಕು. ಉಳಿದ ೩,೬೪೦ ರೂಪಾಯಿಗಳನ್ನು ಸರ್ಕಾರಕ್ಕೆ ಕಟ್ಟಬೇಕು ಎಂದು ತೀರ್ಪು ನೀಡಿದರು.
ದೂರುದಾರರ ಪರ ವಕೀಲರಾದ ಹಿರೇನ್‌ಕುಮಾರ್ ಪಟೇಲ್ ವಾದ ಮಂಡಿಸಿದರು. ಆರೋಪಿಯನ್ನು ವಕೀಲ ಆರ್.ವಿ.ಗಡೆಪ್ಪನವರ ಪ್ರತಿನಿಧಿಸಿದ್ದರು.