For the best experience, open
https://m.samyuktakarnataka.in
on your mobile browser.

ತೊರೆಯ ನಾಡು, ನೆತ್ತರ ಬೀಡು

09:34 AM Aug 31, 2024 IST | Samyukta Karnataka
ತೊರೆಯ ನಾಡು  ನೆತ್ತರ ಬೀಡು

ಚಿತ್ರ: ಪೆಪೆ
ನಿರ್ದೇಶನ: ಶ್ರೀಲೇಶ್ ಎಸ್ ನಾಯರ್
ನಿರ್ಮಾಣ: ಉದಯ್ ಶಂಕರ್, ಶ್ರೀರಾಮ್
ತಾರಾಗಣ: ವಿನಯ್ ರಾಜ್‌ಕುಮಾರ್, ಕಾಜಲ್ ಕುಂದರ್, ಮಯೂರ್ ಪಟೇಲ್, ಯಶ್ ಶೆಟ್ಟಿ, ಬಲರಾಜ್‌ವಾಡಿ, ಅರುಣಾ ಬಾಲರಾಜ್, ಮೇದಿನಿ ಕೆಳಮನೆ ಇತರರು.
ರೇಟಿಂಗ್ಸ್: 3

ಜಿ.ಆರ್.ಬಿ

ಆತನ ಹೆಸರು ಪ್ರದೀಪ. ಆದರೆ ಎಲ್ಲರೂ ಆತನನ್ನು ‘ಪೆಪೆ’ ಅಂತಲೇ ಕರೆಯುತ್ತಾರೆ. ಊರಿನಲ್ಲಿ ಹರಿಯುವ ತೊರೆಯ ನೀರಿಗೆ ಸಂಬಂಧಿಸಿದಂತೆ ಅನಾದಿ ಕಾಲದಿಂದಲೂ ನೆತ್ತರು ಹರಿಯುತ್ತಲೇ ಇರುತ್ತದೆ. ಲೆಕ್ಕವಿಲ್ಲದಷ್ಟು ಮಾರಣಹೋಮ ನಡೆಯುತ್ತದೆ. ‘ಇದಕ್ಕೆಲ್ಲ ಅಂತ್ಯ ಹಾಡಬೇಕಾದರೆ ಏನು ಮಾಡಬೇಕು..?’ ಎಂದು ‘ಪೆಪೆ’ ತಾಯಿ ಪ್ರಶ್ನೆ ಮಾಡುತ್ತಾಳೆ. ಅದಕ್ಕೆ ಉತ್ತರವೂ ಸಿಗುತ್ತದೆ. ಆ ಉತ್ತರವೇನು..? ತೊರೆಯ ನೀರಿನ ಪಂಚಾಯ್ತಿ ಕೊನೆಗೊಳ್ಳುತ್ತಾ… ಎಂಬುದಕ್ಕೆ ಸಿನಿಮಾದ ದ್ವಿತೀಯಾರ್ಧ ಪೂರ್ಣಗೊಳ್ಳುವವರೆಗೂ ಕಾಯಬೇಕು. ಅಷ್ಟರೊಳಗೆ ಲೀಟರ್‌ಗಟ್ಟಲೆ ರಕ್ತಪಾತವಾಗಿರುತ್ತದೆ. ಎಣಿಸಲಾರದಷ್ಟು ಕೊಲೆ, ಅತ್ಯಾಚಾರಕ್ಕೆ ಇಡೀ ಊರೇ ಸಾಕ್ಷಿಯಾಗಿರುತ್ತದೆ. ಹಾಗಾದರೆ ‘ಪೆಪೆ’ ನೀರಿಗೆ ಹೋರಾಡುತ್ತಾನಾ… ಊರಿನ ಜನರ ಪರವಾಗಿ ಹೋರಾಡುತ್ತಾನಾ..?

‘ಜನರಿಗೆ ತೊಂದ್ರೆ ಕೊಡೋಕೆ ಮುಂಚೆ ‘ಪೆಪೆ’ನಾ ದಾಟ್ಕೊಂಡ್ ಹೋಗ್ಬೇಕು…’ ಎಂಬ ಉತ್ತರವೂ ‘ಪೆಪೆ’ ಬಾಯಿಂದ ಬರುತ್ತದೆ. ಅಲ್ಲಿಗೆ ಇದೊಂದು ಪಕ್ಕಾ ಮಾಸ್, ರಗಡ್ ಸಿನಿಮಾ ಎಂದು ತೀರ್ಮಾನಿಸಿಬಿಡಬಹುದು. ಆ ದೃಶ್ಯ ಬರುವ ಹೊತ್ತಿಗೆ ನಾಯಕ-ನಾಯಕಿಯ ಪ್ರೇಮ ನಿವೇದನೆಯಾಗಿರುತ್ತದೆ. ಜಾತಿ ಕಾರಣದಿಂದಾಗಿ ಒಂದಷ್ಟು ಕಹಿ ಘಟನೆಗಳೂ ನಡೆದಿರುತ್ತವೆ. ಹೀಗಾಗಿ ಇಲ್ಲಿ ಬರೀ ಹೊಡಿ, ಬಡಿ, ಕಡಿ… ಎನ್ನುವುದರ ಜತೆಗೆ ಮದರ್ ಸೆಂಟಿಮೆಂಟ್‌ಗೂ ಜಾಗವಿದೆ.

ಇಡೀ ಸಿನಿಮಾ ನೆಲ, ಜಲ ಮತ್ತು ಜಾತಿ ವ್ಯವಸ್ಥೆಯ ಸುತ್ತ ಸುತ್ತುತ್ತದೆ. ಅದನ್ನು ಸಾದಾ-ಸೀದಾ ರೀತಿಯಲ್ಲಿ ಪ್ರಸ್ತುತಪಡಿಸದೇ ತಮ್ಮದೇ ಶೈಲಿಯಲ್ಲಿ ಉಣಬಡಿಸಲು ಯತ್ನಿಸಿದ್ದಾರೆ ಯುವ ನಿರ್ದೇಶಕ ಶ್ರೀಲೇಶ್ ಎಸ್ ನಾಯರ್. ಹೀಗಾಗಿ ಲೈಟಿಂಗ್, ದೃಶ್ಯಗಳಲ್ಲಿನ ಬಣ್ಣ, ಸಂಕಲನದ ರೀತಿ… ಎಲ್ಲವೂ ಹೊಸ ರೀತಿಯಲ್ಲಿ ಕಟ್ಟಿಕೊಡಲು ಮುಂದಾಗಿದ್ದಾರೆ. ಮಾಮೂಲಿ ಸಿನಿಮಾ ನೆಚ್ಚಿಕೊಂಡ ಪ್ರೇಕ್ಷಕರಿಗೆ ಇದು ಎಷ್ಟರಮಟ್ಟಿಗೆ ರುಚಿಸುತ್ತದೆ ಎಂಬುದು ಸದ್ಯದ ಕುತೂಹಲ.

ವಿನಯ್ ರಾಜ್‌ಕುಮಾರ್ ಮೌನವಾಗಿದ್ದುಕೊಂಡೇ ಕೆಲವೊಂದು ಸನ್ನಿವೇಶಗಳನ್ನು ದಾಟಿಸಿದ್ದಾರೆ. ಕೆಲವೊಮ್ಮೆ ಅವರ ಅತಿಯಾದ ಮೌನ ಆಯಾ ದೃಶ್ಯದ ತೀವ್ರತೆಗೆ ಭಂಗ ಬರುವಂತೆಯೂ ಭಾಸವಾಗುತ್ತದೆ. ಕಾಜಲ್ ಕುಂದರ್, ಮಯೂರ್ ಪಟೇಲ್, ಬಲರಾಜ್‌ವಾಡಿ, ಅರುಣಾ ಬಾಲರಾಜ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಚಿತ್ರಕ್ಕೆ ಪೂರಕವಾಗಿದೆ.

Tags :