For the best experience, open
https://m.samyuktakarnataka.in
on your mobile browser.

ದಂಡಿನ ದುರ್ಗಮ್ಮನ ಜಾತ್ರೆ: ಸಹಸ್ರಾರು ಪ್ರಾಣಿ ಬಲಿ ಇಂದು?

12:07 AM May 28, 2024 IST | Samyukta Karnataka
ದಂಡಿನ ದುರ್ಗಮ್ಮನ ಜಾತ್ರೆ  ಸಹಸ್ರಾರು ಪ್ರಾಣಿ ಬಲಿ ಇಂದು

ಗದಗ: ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದಂಡಿನ ದುರ್ಗಮ್ಮನ ಜಾತ್ರೆ ಇಂದು ಮೇ ೨೮ರಂದು ನಡೆಯಲಿದ್ದು, ದೇವಿ ಸಂತುಷ್ಟಿಗೋಳಿಸಲು ಸಹಸ್ರಾರು ಪ್ರಾಣಿ ಬಲಿ ನೀಡಲಾಗುತ್ತಿದೆ.
ಬೆಟಗೇರಿ ನಗರದ ಹೊರವಲಯದಲ್ಲಿ ಇರುವ ದಂಡಿನ ದುರ್ಗಮ್ಮ ದೇವಿಯ ಜಾತ್ರೆಗೆ ದೇಶದ ವಿವಿಧ ಪ್ರದೇಶಗಳಿಂದ ಹರಣಶಿಕಾರಿ ಜನಾಂಗದ ಜನರು ಆಗಮಿಸಿ ದೇವಿಗೆ ಸಹಸ್ರಾರು ಕೋಳಿ, ಕುರಿಗಳನ್ನು ಬಲಿ ನೀಡಿ ತಮ್ಮ ಹರಕೆ ಪೂರೈಸಿಕೊಳ್ಳುತ್ತಾರೆ. ದಂಡಿನ ದುರ್ಗಾದೇವಿ ಜಾತ್ರೆಗೆ ಈಗಾಗಲೇ ನೆರೆಯ ಮಹಾರಾಷ್ಟç, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳಿಂದ ಸಹಸ್ರಾರು ಜನ ಭಕ್ತರು ಆಗಮಿಸಿ ದೇವಾಲಯದ ಎದುರಿನ ಜಮೀನುಗಳಲ್ಲಿ ಟೆಂಟ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ದುರ್ಗಾದೇವಿಗೆ ಪ್ರಾಣಿ ಬಲಿ ನೀಡಲು ಈಗಾಗಲೇ ಸಹಸ್ರಾರು ಕೋಳಿ, ಕುರಿ ಖರೀದಿಸಿ ಸಂಗ್ರಹಿಸಿದ್ದಾರೆ. ಮೇ ೨೮ರಂದು ನಸುಕಿನ ೩:೪೫ಕ್ಕೆ ಪ್ರಾಣಿ ಬಲಿ ನಡೆಯಲಿದೆಯೆಂದು ಮೂಲಗಳು ತಿಳಿಸಿವೆ.
ಬೆಳಿಗ್ಗೆ ೩:೪೫ರಿಂದ ೪ರ ಸುಮಾರಿಗೆ ಹರಕೆ ಹೊತ್ತಿರುವ ಹರಣಶಿಕಾರಿ ಸಮಾಜದ ಮಹಿಳೆಯರು ತಣ್ಣೀರು ಸ್ನಾನ ಮಾಡಿ ಬೇವಿನ ಉಡುಗೆ ತೊಟ್ಟುಕೊಂಡು ದೇವಾಲಯದವರೆಗೆ ದೀಡ್ ನಮಸ್ಕಾರ ಹಾಕುತ್ತಾರೆ. ಈ ಸಂದರ್ಭದಲ್ಲಿ ಅಲ್ಲಿ ಭಕ್ತರನ್ನು ಹೊರತುಪಡಿಸಿ ಬೇರೆ ಯಾರಿಗೂ ಅಲ್ಲಿಗೆ ಪ್ರವೇಶ ನೀಡುವದಿಲ್ಲ. ಒಂದು ವೇಳೆ ಯಾವದೇ ವ್ಯಕ್ತಿ ಪ್ರವೇಶಿಸಲು ಪ್ರಯತ್ನಿಸಿದಲ್ಲಿ ಭಕ್ತರು ಹಲ್ಲೆ ನಡೆಸುವ ಮೂಲಕ ಹೊರಗೆ ಕಳಿಸುತ್ತಾರೆ.
ಜಾತ್ರೆಯಲ್ಲಿ ಕುರಿ, ಕೋಳಿಗಳನ್ನು ದೇವಿಗೆ ಬಲಿ ನೀಡುವ ಕಾರ್ಯ ಕಳೆದ ಅನೇಕ ಶತಮಾನಗಳಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಜಿಲ್ಲಾಡಳಿತ ಪ್ರಾಣಿ ಬಲಿ ತಡೆಗೆ ಪ್ರತಿವರ್ಷ ಸಾಕಷ್ಟು ಮುಂಜಾಗೃತಾ ಕ್ರಮ ಜರುಗಿಸಿದರೂ ಸಹ ಪ್ರಾಣಿ ಬಲಿ ತಡೆಯಲು ಸಾಧ್ಯವಾಗದಿರುವದು ವಿಪರ್ಯಾಸ. ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದಂಡಿನ ದುರ್ಗಾದೇವಿ ಜಾತ್ರೆಗೆ ಸೂಕ್ತ ಬಂದೋಬಸ್ತ್ ಒದಗಿಸಲು ಪೊಲೀಸ್ ಇಲಾಖೆ ಈಗಾಗಲೇ ಎರಡು ವ್ಯಾನ್ ಕಳಿಸಿದೆ. ಪೊಲೀಸ್ ಇಲಾಖೆ ಈಗಾಗಲೇ ಬೆಟಗೇರಿ ಪ್ರವೇಶಿಸುವ ರಸ್ತೆಗಳಲ್ಲಿ ನಾಕಾ ಬಂದಿ ಪ್ರಾರಂಭಿಸಿದೆ. ದುರ್ಗಾದೇವಿಗೆ ಬಲಿ ನೀಡಿದ ಕುರಿಗಳ ಚರ್ಮ ಸುಮಾರು ಎರಡು ಟನ್‌ಗಿಂತಲೂ ಹೆಚ್ಚಾಗುತ್ತದೆ. ಈ ಕುರಿಗಳ ಚರ್ಮವನ್ನು ಲಾರಿಗಳ ಮೂಲಕ ಬೆಂಗಳೂರಿಗೆ ಸಾಗಿಸಲಾಗುತ್ತಿದೆ.

ಪ್ರಾಣಿಗಳನ್ನು ಬಲಿ ನೀಡಲು ಸಂಗ್ರಹಿಸಿದ್ದಾರೆ
ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆಯಲು ಜಿಲ್ಲಾಡಳಿತ, ತಾಲೂಕಾಡಳಿತ ಪ್ರಾಣಿ ಬಲಿ ನಿಷೇಧಿಸಿ ಮೂರು ದಿನಗಳ ಮುಂಚಿತವಾಗಿಯೆ ಆದೇಶ ಹೊರಡಿಸುತ್ತಿದ್ದವು. ಪ್ರಾಣಿ ಬಲಿ ನಿಷೇಧದ ಮಧ್ಯೆಯೂ ಭಕ್ತರು ಪೊಲೀಸರ ಕಣ್ಣು ತಪ್ಪಿಸಿ ಪ್ರಾಣಿಗಳನ್ನು ಸಂಗ್ರಹಿಸಿ ಪ್ರಾಣಿ ಬಲಿ ನೀಡುತ್ತಿದ್ದರು. ಈ ಬಾರಿ ಮೇ ೨೮ರಂದೇ ದಂಡಿನ ದುರ್ಗಮ್ಮನ ಜಾತ್ರೆ ನಡೆಯುತ್ತಿದ್ದರೂ ಸಹ ಮೇ ೨೭ರ ಸಂಜೆ ೭ರವರೆಗೆ ಜಿಲ್ಲಾಡಳಿತವಾಗಲಿ, ತಾಲೂಕಾಡಳಿತವಾಗಲಿ ಪ್ರಾಣಿ ಬಲಿ ನಿಷೇಧಿಸದ ಕ್ರಮ ಪ್ರಾಣಿ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ. ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧ ಆದೇಶವಾಗದ್ದರಿಂದ ಭಕ್ತರು ರಾಜಾರೋಷವಾಗಿಯೇ ಸಹಸ್ರಾರು ಪ್ರಾಣಿಗಳನ್ನು ಬಲಿ ನೀಡಲು ಸಂಗ್ರಹಿಸಿದ್ದಾರೆಂದು ತಿಳಿದು ಬಂದಿದೆ.

ರೇಟು ದುಪ್ಪಟ್ಟು
ಬೇಟಗೇರಿ ದಂಡಿನ ದುರ್ಗಮ್ಮನ ಜಾತ್ರೆ ಹಿನ್ನೆಲೆಯಲ್ಲಿ ಕೋಳಿ, ಕುರಿಗಳ ದರದಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಇಲ್ಲಿಯವರೆಗೆ ೬೦೦ ರಿಂದ ೮೦೦ ರೂ.ಗೆ ದೊರೆಯುತ್ತಿದ್ದ ಕೋಳಿಗಳು ಇಂದು ೧೦೦೦ ರೂ. ದಿಂದ ೨೦೦೦ರೂ.ಗೆ, ಆರು ಸಾವಿರ ರೂ. ೧೦ ಸಾವಿರ ರೂ.ಗೆ ದೊರೆಯುತ್ತಿದ್ದ ಕುರಿಗಳು ೧೫ ಸಾವಿರ ರೂ. ದಿಂದ ೨೫ ಸಾವಿರ ರೂ.ಗೆ ಮಾರಾಟವಾಗಿವೆ.