'ದಕ್ಷಿಣೆ' ಕೊಟ್ಟರಷ್ಟೇ ನಮ್ಮ ಪೇಮೆಂಟ್
ಅಧಿಕಾರದ ದುರುಪಯೋಗ ಹಾಗೂ ಮಿತಿಮೀರಿದ ಭ್ರಷ್ಟಾಚಾರ
ಬೆಂಗಳೂರು: ಕಿಯೋನಿಕ್ಸ್‌ನಲ್ಲಿ ಬಿಲ್ ಬಿಡುಗಡೆ ಮಾಡದೆ ಸುಮಾರು 6,000 ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತ ಕರ್ನಾಟಕ ವರದಿ ಹಂಚಿಕೊಂಡು ಪೋಸ್ಟ್ ಮಾಡಿದ್ದು ಗುತ್ತಿಗೆದಾರ ಸಚಿನ್ ಆತ್ಮಹತ್ಯೆಯಲ್ಲಿ ಪ್ರಭಾವಿ ಸಚಿವರ ಹೆಸರು ಬಯಲು ಮಾಡಿದ ಬೆನ್ನಲ್ಲೇ ಈಗ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತದಲ್ಲಿ [KEONICS] ನಲ್ಲಿ ಬಾಕಿ ಬಿಲ್ ಬಿಡುಗಡೆ ಮಾಡದೆ ಸುಮಾರು 6,000 ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ.
ಶಾಸಕ ಶರತ್ ಬಚ್ಚೆ ಗೌಡರು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ 'ದಕ್ಷಿಣೆ' ಕೊಟ್ಟರಷ್ಟೇ ನಮ್ಮ ಪೇಮೆಂಟ್ ಆಗುವುದು ಎಂದು ಗುತ್ತಿಗೆದಾರರು ಹೇಳಿದ್ದಾರೆ.
12 % ಲಂಚ ಕೊಟ್ಟರಷ್ಟೇ ನಿಮ್ಮ ಗುತ್ತಿಗೆ ಹಣಕ್ಕೆ 'ಮುಕ್ತಿ' ಎಂದು ಪ್ರಭಾವಿಗಳು ಹೇಳಿರುವುದು ನಿಜಕ್ಕೂ ದುರದೃಷ್ಟಕರ, ಅಧಿಕಾರದ ದುರುಪಯೋಗ ಹಾಗೂ ಮಿತಿಮೀರಿದ ಭ್ರಷ್ಟಾಚಾರ. ಸರ್ಕಾರ ಕೂಡಲೇ KEONICS ಗುತ್ತಿಗೆದಾರರ ಬಾಕಿ ಹಣವನ್ನು ಬಿಡುಗಡೆ ಮಾಡಬೇಕು ಹಾಗೂ ಸಚಿವ ಖರ್ಗೆ ಹಾಗೂ ಶಾಸಕ ಶರತ್ ಬಚ್ಚೆ ಗೌಡರ ಮೇಲೆ ಮಾಡುವ ಆಪಾದನೆಗಳನ್ನು ನಿಷ್ಪಕ್ಷವಾಗಿ ತನಿಖೆ ಮಾಡಬೇಕು ಎಂದಿದ್ದಾರೆ.