ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದಕ್ಷಿಣ ಕನ್ನಡದ ಐವರಿಗೆ ರಾಜ್ಯೋತ್ಸವ ಪ್ರಶಸ್ತಿ

09:51 PM Oct 30, 2024 IST | Samyukta Karnataka

ಮಂಗಳೂರು: ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೨೦೨೪ರ ಪಟ್ಟಿಯನ್ನು ಸರ್ಕಾರ ಬುಧವಾರ ಪ್ರಕಟಿಸಿದೆ. ಇದರಲ್ಲಿ ದ.ಕ. ಜಿಲ್ಲೆಗೆ ವಿವಿಧ ಕ್ಷೇತ್ರದಲ್ಲಿ ಒಟ್ಟು ಐದು ಮಂದಿಗೆ ಪ್ರಶಸ್ತಿ ಲಭಿಸಿದೆ. ಇದೇ ಸಂದರ್ಭ ಪ್ರಕಟಿಸಲಾದ ಕರ್ನಾಟಕ ಸಂಭ್ರಮ-೫೦ ಸುವರ್ಣ ಮಹೋತ್ಸವ ಪ್ರಶಸ್ತಿ-೨೦೨೪ರಲ್ಲಿ ದ.ಕ. ಜಿಲ್ಲೆಯ ಮೂವರಿಗೆ ಲಭಿಸಿದೆ.
ರಾಜ್ಯೋತ್ಸವ ಪ್ರಶಸ್ತಿ ಪೈಕಿ ಜಾನಪದ ಕ್ಷೇತ್ರದಲ್ಲಿ ಲೋಕಯ್ಯ ಶೇರ(ಭೂತಾರಾಧನೆ), ಹೊರನಾಡ ವಿಭಾಗದಲ್ಲಿ ಡಾ.ತುಂಬೆ ಮೊಹಿಯುದ್ದೀನ್(ತುಂಬೆ ಗ್ರೂಪ್ ಯುಎಇ, ಅಮೆರಿಕ), ಯಕ್ಷಗಾನ ಕ್ಷೇತ್ರದಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಸಾಹಿತ್ಯ ಕ್ಷೇತ್ರದಲ್ಲಿ ಡಾ. ಪ್ರಶಾಂತ್ ಮಾಡ್ತಾ, ಶಿಕ್ಷಣ ಕ್ಷೇತ್ರದಲ್ಲಿ ಡಾ.ರಾಜೇಂದ್ರ ಶೆಟ್ಟಿ ಇವರಿಗೆ ಲಭಿಸಿದೆ.
ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ವಿಶ್ವನಾಥ ಸುವರ್ಣ(ಮಾಧ್ಯಮ), ಸದಾಶಿವ ಶೆಟ್ಟಿ(ಹೊರನಾಡು) ಹಾಗೂ ರೀಟಾ ನರೋನ್ಹಾ(ಸಮಾಜಸೇವೆ)ಇವರಿಗೆ ಲಭಿಸಿದೆ.

ಲೋಕಯ್ಯ ಶೇರ(ಜಾನಪದ)
ಲೋಕಯ್ಯ ಶೇರ ಇವರು ಜಾನಪದ ದೈವ ನರ್ತಕರು. ಪರಿಶಿಷ್ಟ ಜಾತಿಯ ನರೆಯದ ಜನಾಂಗಕ್ಕೆ ಸೇರಿದವರು. ಬಂಟ್ವಾಳದ ಬರಿಮಾರ್‌ನ ಶೇರ ಎಂಬಲ್ಲಿ ಪತ್ನಿ ನೀಲಮ್ಮ, ಪುತ್ರ ದಯಾನಂದ, ಸೊಸೆಯಾದ ಪೂರ್ಣಿಮಾ ಇವರೊಂದಿಗೆ ವಾಸವಿದ್ದಾರೆ.
ಸುಮಾರು ೫೨ ವರ್ಷಗಳಿಂದ ಕಲಾವಿದನಾಗಿ ಜನಪದ ದೈವರಾಧನೆ ನರ್ತಕ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಳುನಾಡಿನ ಕಾರಣಿಕ ದೈವಗಳಾದ ರಕ್ತೇಶ್ವರಿ, ಧೂಮಾವತಿ, ಪಂಜುರ್ಲಿ, ಕಾನಲ್ತಾಯ ಮಹಾಕಾಳಿ, ಶಿರಾಡಿ ದೈವ, ಚಾಮುಂಡೇಶ್ವರಿ, ಕಲ್ಲುರ್ಟಿ-ಕಲ್ಕುಡ ಇತ್ಯಾದಿ ದೈವಗಳ ನೇಮೋತ್ಸವದಲ್ಲಿ ದೈವನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ಕುಲದೈವ ಸೀಮೆದೈವ, ರಾಜನ್ ದೈವ, ಗ್ರಾಮದೈವ ಮುಂತಾದ ದೈವಗಳಿಗೂ ನೇಮವನ್ನು ಕಟ್ಟಿದ್ದಾರೆ. ೨೦೦೨ ನೇ ಸಾಲಿನ ನಲ್ಕೆಯವರ ಬಂಟ್ವಾಳ ಸಮಾಜ ಸೇವಾ ಸಂಘದ ಸ್ಥಾಪಕರಾಗಿದ್ದಾರೆ.

ಡಾ.ತುಂಬೆ ಮೊಯ್ದಿನ್(ಹೊರನಾಡು)
ಯುಎಇ ಯಲ್ಲಿ ಪ್ರತಿಷ್ಠಿತ ಉದ್ಯಮ, ಶಿಕ್ಷಣ ಸಮೂಹ ಕಟ್ಟಿ ಬೆಳೆಸಿದ ಡಾ. ತುಂಬೆ ಮೊಯ್ದಿನ್ ಇವರು ೨೧ನೇ ವಯಸ್ಸಿಗೇ ಉದ್ಯಮ ಜಗತ್ತಿಗೆ ಪ್ರವೇಶಿಸಿದ್ದರು. ಡಾ.ತುಂಬೆ ಮೊಯ್ದಿನ್ ಅವರದ್ದು ಗಲ್ಫ್ ದೇಶಗಳ ಉದ್ಯಮ ವಲಯದಲ್ಲಿ ಇಂದು ಬಹು ದೊಡ್ಡ ಹೆಸರು. ಮಂಗಳೂರಿನ ತುಂಬೆ ಮೂಲದ ಮೊಯ್ದಿನ್ ಅವರು ತಮ್ಮ ತಂದೆ ದಿವಂಗತ ಡಾ. ಬಿ ಅಹಮದ್ ಹಾಜಿ ಮೊಹಿಯುದ್ದೀನ್ ಅವರು ಸ್ಥಾಪಿಸಿದ ದೊಡ್ಡ ಉದ್ಯಮದ ವ್ಯಾಪ್ತಿಯನ್ನು ವಿದೇಶಗಳಲ್ಲೂ ವಿಸ್ತರಿಸಿ ಯಶಸ್ವಿಯಾಗಿ ಮುನ್ನಡೆಸಿದವರು.
ಮಾರ್ಚ್ ೨೩, ೧೯೫೭ರಲ್ಲಿ ಮಂಗಳೂರಿನಲ್ಲಿ ಜನಿಸಿದರು ತುಂಬೆ ಮೊಯ್ದಿನ್. ತಂದೆ ಮತ್ತು ಅಜ್ಜ, ಖ್ಯಾತ ಉದ್ಯಮಿ ಯೆನೆಪೊಯ ಮೊಯ್ದೀನ್ ಕುಂಞಿ ಅವರಿಂದ ಕಲಿತ ಉದ್ಯಮದ ಪಾಠಗಳು, ಮೊಯ್ದಿನ್ ಅವರಿಗೆ ಕೆಲವೇ ವರ್ಷಗಳಲ್ಲಿ ಉದ್ಯಮಕ್ಕೆ ಹೊಸ ಆಯಾಮ ನೀಡಿ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಲು ನೆರವಾದವು.

ವಿಶ್ವನಾಥ ಸುವರ್ಣ(ಮಾಧ್ಯಮ)
ಮೂಲತಃ ಮಂಗಳೂರು ಬಲ್ಲಾಳ್‌ಬಾಗ್ ನವರಾದ ವಿಶ್ವನಾಥ ಸುವರ್ಣ ಅವರು ಪ್ರಜಾವಾಣಿ ದಿನಪತ್ರಿಕೆಯ ಮುಖ್ಯಛಾಯಗ್ರಾಹಕರಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಬೆಂಗಳೂರು ಅಲ್ಲದೆ ರಾಜ್ಯದ ವಿವಿದ ಜಿಲ್ಲೆಗಳಲ್ಲಿ ಪತ್ರಿಕಾ ಛಾಯಗ್ರಾಹಕರಾಗಿ ದುಡಿದ ಅವರು ಬೀದರಿನಿಂದ ಬೇಕಲಕೋಟೆ ತನಕ ರಾಜ್ಯ ಎಲ್ಲ ಜಿಲ್ಲೆಗಳ ಕೋಟೆಕೊತ್ತಲಗಳ ಬೃಹತ್ ಛಾಯಾ ಸಂಪುಟ ಕರುನಾಡಿಮನ ಕೋಟೆಗಳು, ಕನ್ನಡ ನಾಡಿನ ಬಣ್ಣದ ಬಾನಾಡಿಗಳು ಎಂಬ ಪಕ್ಷಿ ಲೋಕದ ಛಾಯಾಕೃತಿಗಳ ನ್ನು ಪ್ರಕಟಿಸಿದ್ದು, ಸದ್ಯದಲ್ಲೆ ಕರ್ನಾಟಕದ ವಾಸ್ತುಶಿಲ್ಪ ದೇವಾಲಯಗಳ ಬಗ್ಗೆ ಕೃತಿಯೊಂದನ್ನು ಪ್ರಕಟಿಸಲು ಸಿದ್ಧತೆ ನಡೆಸಿದ್ದಾರೆ.
ಮಂಗಳೂರಿನ ಕೆನರಾ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ ಸಹೋದರ ದಿ. ಸುಂದರನಾಥ ಸುವರ್ಣ ಅವರ ಸಹಕಾರದಿಂದ ಬೆಂಗಳೂರಿನಲ್ಲಿ ಛಾಯಗ್ರಾಹಕ ವೃತ್ತಿ ಆರಂಭಿಸಿದರು. ದೊಂಬಿ ಗಲಭೆಗಳಂತಹ ಸಂದರ್ಭದಲ್ಲಿ ದಿಟ್ಟತನದಿಂದ ಛಾಯಾಗ್ರಹಣ ನಡೆಸಿ ಗಮನ ಸೆಳೆದಿದ್ದರು.

ಡಾ. ರೀಟಾ ನೊರೊನ್ಹಾ(ಸಮಾಜ ಸೇವೆ)
ಮಂಗಳೂರಿನ ಸ್ಕೂಲ್ ಆಫ್ ಸೋಷಿಯಲ್ ವರ್ಕ್ ರೋಶನಿ ನಿಲಯದಲ್ಲಿ ೧೯೭೧-೨೦೦೯ರ ತನಕ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆಯಾಗಿ, ಡೀನ್ ಆಗಿ ಕೆಲಸ ನಿರ್ವಹಿಸಿ, ನಿವೃತ್ತರಾಗಿರುವ ಡಾ.ರೀಟಾ ನೊರೊನ್ಹಾ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಅನ್ಯಾಯದ ವಿರುದ್ಧದ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡವರು. ರೈತರು (ಮಹಿಳಾ ರೈತರನ್ನು ಒಳಗೊಂಡಂತೆ) ಹಕ್ಕುಗಳ ಪ್ರಚಾರ ಮತ್ತು ಸುಸ್ಥಿರ/ಸಾವಯವ ಕೃಷಿ, ತಮ್ಮ ಸಹಕಾರಿ ಸಂಘಗಳ ಮೂಲಕ ತರಕಾರಿ ಮತ್ತು ಹೈನುಗಾರಿಕೆಯಲ್ಲಿ ತೊಡಗಿರುವ ಮಹಿಳೆಯರಿಗೆ ಬೆಂಬಲ, ಬೀದಿ ಬದಿ ವ್ಯಾಪಾರಿಗಳ ಜೀವನಾಧಾರ ಹಕ್ಕುಗಳ ಉತ್ತೇಜನ, ಸುಸ್ಥಿರ ಅಭಿವೃದ್ಧಿ, ಲಿಂಗ ಸಮಾನತೆ, ಸಾಮಾಜಿಕ ಸಂವೇದನೆ ಮತ್ತು ಮಾನವ ಹಕ್ಕುಗಳು ಮೊದಲಾದ ಹೋರಾಟಗಳಲ್ಲಿ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ.

Next Article