For the best experience, open
https://m.samyuktakarnataka.in
on your mobile browser.

ದಕ್ಷಿಣ ಕನ್ನಡ, ಉಡುಪಿ ಆರು ಸಾಧಕರಿಗೆ, ಒಂದು ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ

07:27 PM Oct 31, 2023 IST | Samyukta Karnataka
ದಕ್ಷಿಣ ಕನ್ನಡ  ಉಡುಪಿ ಆರು ಸಾಧಕರಿಗೆ  ಒಂದು ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿ

ಕರಾವಳಿಯ ಜಿಲ್ಲೆ ದಕ್ಷಿಣ ಕನ್ನಡ ಮತ್ತು ಉಡುಪಿಯ ಆರು ಸಾಧಕರು, ಒಂದು ಸಂಸ್ಥೆಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಸಮಾಜ ಸೇವೆಯಲ್ಲಿ ಚಾರ್ಮಾಡಿ ಹಸನಬ್ಬ, ಯಕ್ಷಗಾನದಲ್ಲಿ ಲೀಲಾವತಿ ಬೈಪಡಿತ್ತಾಯ, ಆರ್ಗೋಡು ಮೋಹನ್‌ದಾಸ್ ಶೆಣೈ, ವೈದ್ಯಕೀಯ ಕ್ಶೇತ್ರದಲ್ಲಿ ಡಾ.ಪ್ರಶಾಂತ್ ಶೆಟ್ಟಿ, ಸಂಕೀರ್ಣ ಕ್ಶೇತ್ರದಲ್ಲಿ ಹಾಜಿ ಅಬ್ದುಲ್ಲಾ ಪರ್ಕಳ, ಪತ್ರಿಕೋದ್ಯಮದಲ್ಲಿ ದಿನೇಶ್ ಅಮೀನ್‌ಮಟ್ಟು ಪ್ರಶಸ್ತಿ ಲಭಿಸಿದೆ.

ಲೀಲಾವತಿ ಬೈಪಾಡಿತ್ತಾಯ: ತೆಂಕು ತಿಟ್ಟು ಯಕ್ಷಗಾನದ ತವರೂರು ಮಧೂರು. ಅಂಥದ್ದೊಂದು ಸುಂದರವಾದ ಪರಿಸರದಲ್ಲೇ ಹುಟ್ಟಿ ಬೆಳೆದ ಲೀಲಾ ಬೈಪಾಡಿತ್ತಾಯರು ಸರಿ ಸುಮಾರು ನಾಲ್ಕು ದಶಕಗಳ ಕಾಲ ತಮ್ಮ ಕಂಠಸಿರಿಯಿಂದ ಮನೆಮಾತಾದವರು. ಸಾಮಾಜಿಕ ಪ್ರೋತ್ಸಾಹವಾಗಲೀ, ಮಾಧ್ಯಮಗಳ ಪ್ರಚಾರವಾಗಲೀ ಇಲ್ಲದ ಕಾಲದಲ್ಲೇ ಅವರು ಬೆಳೆದ ಬಗೆ ಅದ್ಭುತ. ಲೀಲಾ ಅವರ ಕಲಾ ತಪಸ್ಸನ್ನು ರಾಜ್ಯ ಸರಕಾರ ಗುರುತಿಸಿ ೨೦೧೦ನೇ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ಅಷ್ಟೇ ಅಲ್ಲದೆ, ೨೦೧೨ರಲ್ಲಿ ಕರ್ನಾಟಕ ಸರಕಾರ ಕೊಡಮಾಡಿದ ಸಾಧಕ ಹಿರಿಯ ನಾಗರಿಕರು ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.
ಬಡತನದಿಂದಾಗಿ ಓದು ಬರಹ ಇರಲಿಲ್ಲ. ಶಾಲೆಗೆ ಹೋಗದೆಯೇ, ಅಣ್ಣನಿಂದ, ಅಕ್ಕ ಪಕ್ಕದವರಿಂದಲೋ ಅಕ್ಷರಾಭ್ಯಾಸ ಮಾಡಿಸಿಕೊಂಡವರು ಅವರು. ಹಿಂದಿ ವಿಶಾರದ ಕೂಡ ಮಾಡಿದ್ದರೆಂಬುದು ಉಲ್ಲೇಖಾರ್ಹ. ಸಂಗೀತ ಕಲಿತಿದ್ದ ಅವರನ್ನು ತೆಂಕುತಿಟ್ಟಿನ ಅಗ್ರಮಾನ್ಯ ಹಿಮ್ಮೇಳ ಗುರುಗಳಾದ ಹರಿನಾರಾಯಣ ಬೈಪಾಡಿತ್ತಾಯರು ಕೈಹಿಡಿದ ಬಳಿಕ, ಯಕ್ಷಗಾನ ಕಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಎಂಬಲ್ಲಿನ ಪರಿಸರ ಅವರ ಯಕ್ಷಗಾನ ಕಲಿಕೆಗೆ ಪೂರಕವಾಗಿತ್ತು. ಮನೆ ಮನೆಯಲ್ಲೂ ವಿಶೇಷ ಕಾರ್ಯಕ್ರಮವಿದ್ದರೆ ಅಲ್ಲೊಂದು ತಾಳಮದ್ದಳೆ ಕೂಟ ಇದ್ದೇ ಇರುತ್ತಿತ್ತು. ಹೀಗೆ ಕಲಿಯುತ್ತಲೇ, ಹೆಣ್ಣು ಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಆ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತರಲ್ಲೊಬ್ಬರಾಗಿ ಅವರು ಬೆಳೆದದ್ದು ಇತಿಹಾಸ. ಪರಿಣಾಮ ಏಕೈಕ ವೃತ್ತಿಪರ ಮಹಿಳಾ ಭಾಗವತರು ಎಂಬ ಪಟ್ಟ. ಪತಿಯೊಂದಿಗೆ ಅಂದಿನ ಸುಬ್ರಹ್ಮಣ್ಯ, ಪುತ್ತೂರು, ಕದ್ರಿ, ಕರ್ನಾಟಕ, ಅರುವ (ಅಳದಂಗಡಿ), ಕುಂಬಳೆ ಬಪ್ಪನಾಡು ಮೇಳ, ಕುಂಬಳೆ, ತಲಕಳ ಮುಂತಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿಯೂ ೧೭ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ.

ಪ್ರಶಾಂತ್ ಶೆಟ್ಟಿ: ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಉಜಿರೆ ಎಸ್‌ಡಿಎಂ ಯೋಗ ಮತ್ತು ನ್ಯಾಚುರೋಪತಿ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಿರುವ ಡಾ. ಪ್ರಶಾಂತ್ ಶೆಟ್ಟಿ ಅವರು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಡಾ.ಪ್ರಶಾಂತ್ ಶೆಟ್ಟಿ ಅವರು ಮೂಲತಃ ಕಾರ್ಕಳ ತಾಲೂಕಿನ ಹೆಬ್ರಿಯವರು. ಇಲ್ಲಿನ ಮಾಬ್ರಿಯಲ್ಲಿ ಜನಿಸಿದ ಅವರು ಅಲ್ಲಿಯೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ ೧೯೯೪ರಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಉಜಿರೆಯಲ್ಲಿ ಪ್ರಥಮ ಬ್ಯಾಚಿನಲ್ಲಿ ಬಿಎನ್ ವೈಎಸ್ ಪದವಿಯನ್ನು ಮುಗಿಸಿದ್ದಾರೆ. ಶಿಕ್ಷಣ ಮುಗಿಸಿದ ಸಂಸ್ಥೆಯಲ್ಲಿ ತನ್ನ ವೃತ್ತಿ ಜೀವನವನ್ನು ಉಪನ್ಯಾಸಕರಾಗಿ ಹಾಗೂ ವೈದ್ಯಾಧಿಕಾರಿಯಾಗಿ ಸೇವೆ ಆರಂಭಿಸಿದರು.

ಚಾರ್ಮಾಡಿ ಹಸನಬ್ಬ: ಸಮಾಜ ಸೇವೆಯನ್ನು ಅದರಲ್ಲೂ ಇತರರ ಪ್ರಾಣ ರಕ್ಷಣೆಯನ್ನೇ ತನ್ನ ಉಸಿರನ್ನಾಗಿಸಿಕೊಂಡಿರುವ ಚಾರ್ಮಾಡಿ ಹಸನಬ್ಬ ಅವರು ಕಳೆದ ೩೮ ವರ್ಷಗಳಿಂದ ಸಾವಿರಾರು ಮಂದಿಯ ಪ್ರಾಣವನ್ನು ಜಾತಿ, ಮತ ಭೇದವಿಲ್ಲದೆ ರಕ್ಷಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಚಿರಪರಿಚಿತರಾಗಿದ್ದಾರೆ. ಅವರ ಈ ಅನನ್ಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರಕಾರವು ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಲಾಲ ಎಂಬಲ್ಲಿನ ಇಜ್ಜಬ್ಬ-ಬೀಫಾತಿಮಾ ದಂಪತಿಯ ಪುತ್ರನಾಗಿ ೧೯೫೧ರಲ್ಲಿ ಜನಿಸಿದ ಹಸನಬ್ಬ ತುತ್ತು ಅನ್ನಕ್ಕೆ ಕಷ್ಟವಿದ್ದ ಆ ಕಾಲದಲ್ಲಿ ಕೇವಲ ಒಂದನೇ ತರಗತಿಯಷ್ಟೇ ಕಲಿತರು. ತನ್ನ ೮ನೆ ವಯಸ್ಸಿನಲ್ಲಿ ಬಾಳೆಹೊನ್ನೂರಿಗೆ ತೆರಳಿ ಚಿಕ್ಕ ಹೊಟೇಲೊಂದರಲ್ಲಿ ಲೋಟ ತೊಳೆಯುವ ಕೆಲಸ ಮಾಡುತ್ತಲೇ ಹೊಟೇಲ್ ಉದ್ಯಮದ ಕಲೆ ಕರಗತ ಮಾಡಿಕೊಂಡರು. ತನ್ನ ೧೮ನೆ ವಯಸ್ಸಿನಲ್ಲಿ ಹುಟ್ಟೂರಿಗೆ ಮರಳಿ ಸಣ್ಣ ಹೋಟೆಲ್ ತೆರೆದು ಮುಂದೆ ಸಾಧನೆಯ ಹಾದಿಯಲ್ಲಿ ಸಾಗಿದರು.

ದಿನೇಶ್ ಅಮಿನ್‌ಮಟ್ಟು: ದಿನೇಶ್ ಅಮಿನ್ ಮಟ್ಟು ಅವರು ೩೯ ವರ್ಷಗಳ ಕಾಲ ಮುದ್ರಣ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಮಟ್ಟು ಮೂಲದ ದಿನೇಶ್ ಬಿಕಾಂ, ಎಲ್.ಎಲ್.ಬಿ.ಪದವೀಧರು. ೧೯೮೩ರಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಸಂಪಾದಕತ್ವದ ‘ಮುಂಗಾರು’ ದಿನಪತ್ರಿಕೆಯ ಮೂಲಕ ಪತ್ರಿಕಾ ವೃತ್ತಿಜೀವನ ಆರಂಭಿಸಿದ್ದರು. ೧೯೮೯ರಿಂದ ೨೦೧೩ರವರೆಗೆ ಅತೀ ದೀರ್ಘಕಾಲ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ೨೦೧೩ರಿಂದ ೨೦೧೮ರವರೆಗೆ ೫ ವರ್ಷಗಳ ಕಾಲ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾಧ್ಯಮ ಸಲಹೆಗಾರರಾಗಿದ್ದರು. ೨೦೧೦ರಲ್ಲಿ ಜಿ-೨೦ ದೇಶಗಳ ಸಮಾವೇಶದಲ್ಲಿ ಭಾಗವಹಿಸಲು ದಕ್ಷಿಣ ಕೋರಿಯಾಗೆ ಪ್ರವಾಸ ಕೈಗೊಂಡಿದ್ದ ಅಮಿನ್ ಮಟ್ಟು ಅವರು, ಮಾಜಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರು ರಚಿಸಿದ್ದ ಲೋಕಸಭಾ ಮಾಧ್ಯಮ ಸಲಹೆಗಾರರ ಸಮಿತಿ ಸದಸ್ಯರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಅಧ್ಯಯನ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಸಂಪಾದಿಸಿರುವ ದಿವಂಗತ ವಡ್ಡರ್ಸೆ ರಘುರಾಮ ಶೆಟ್ಟರ ಬರಹಗಳ ಪುಸ್ತಕ ’ಬೇರೆಯೇ ಮಾತು’ ಕಳೆದ ವರ್ಷ ಪ್ರಕಟವಾಗಿದೆ. ರಾಜಕೀಯ, ಸಾಮಾಜಿಕ ಚಿಂತನೆಗಳ ಅವರ ನೂರಾರು ಲೇಖನಗಳು ನಾಡಿನ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಮೀಫ್’: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ಸೃಷ್ಟಿಸಲು ಶ್ರಮಿಸಿದ ‘ಮೀಫ್’ ಸಂಘಟನೆಗೆ ಕರ್ನಾಟಕ ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ರಾಜ್ಯದ ಮಾಜಿ ಉನ್ನತ ಶಿಕ್ಷಣ ಸಚಿವ ಬಿ.ಎ.ಮೊಹಿದಿನ್ ಅವರ ಕನಸಿನ ಕೂಸಾದ ‘ಮುಸ್ಲಿಂ ಎಜುಕೇಶನ್ ಇನ್ಸ್ಟಿಟ್ಯೂಶನ್ಸ್ ಫೆಡರೇಶನ್’ (ಮೀಫ್) ಕಳೆದ ೨೨ ವರ್ಷಗಳಲ್ಲಿ ಸಲ್ಲಿಸಿದ ಶೈಕ್ಷಣಿಕ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿ ಯನ್ನು ರಾಜ್ಯ ಸರಕಾರ ಘೋಷಿಸಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು ೧೮೦ ಆಂಗ್ಲ ಮಾಧ್ಯಮ ಶಾಲೆಗಳು ‘ಮೀಫ್’ನ ಸದಸ್ಯತ್ವ ಪಡೆದಿವೆ. ಬಿ.ಎ. ಮೊಹಿದಿನ್ರ ದೂರದರ್ಶಿತ್ವದ ಪರಿಣಾಮವಾಗಿ ಇಂದು ‘ಮೀಫ್’ ಅತ್ಯಂತ ಯಶಸ್ವೀಯಾಗಿ ಕಾರ್ಯಾಚರಿಸುತ್ತಿದೆ. ಕೆಲವು ಶಾಲೆಗಳು ಪದವಿ ಪೂರ್ವ ಸಂಯುಕ್ತ ಕಾಲೇಜು ಹಂತವನ್ನೂ ತಲುಪಿರುವುದು ಗಮನಾರ್ಹ.
‘ಶಿಕ್ಷಣವೇ ಅಭಿವೃದ್ಧಿಯ ಮೂಲ’ ಎಂಬ ತತ್ವದಡಿ ಉತ್ತಮ ಶಿಕ್ಷಣದೊಂದಿಗೆ ತೀರಾ ಹಿಂದುಳಿದ ಮುಸ್ಲಿಂ ಸಮುದಾಯ ವನ್ನು ಸುಶಿಕ್ಷಿತಗೊಳಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಮೋಹನದಾಸ ಶೆಣೈ: ಕುಂದಾಪುರ ತಾಲೂಕಿನ ಕಮಲಶಿಲೆ ಬಳಿಯ ಅರ್ಗೋಡು ಮೋಹನದಾಸ ಶೆಣೈ ಸುಮಾರು ೪ ದಶಕಗಳಿಂದ ಯಕ್ಷಗಾನ ಕಲಾಸೇವೆಯಲ್ಲಿದ್ದಾರೆ.
ಹಿರಿಯಡಕ ಮೇಳದಲ್ಲಿ ಕಲಾವಿದನಾಗಿ ಸೇರ್ಪಡೆಗೊಳ್ಳುವ ಮೂಲಕ ಕಲಾಸೇವೆ ಆರಂಭಿಸಿ ಪೆರ್ಡೂರು, ಸಾಲಿಗ್ರಾಮ, ಕಮಲಶಿಲೆ, ಕುಮಟಾ, ಅಮೃತೇಶ್ವರಿ ಮೇಳಗಳಲ್ಲಿ ಕಾರ‍್ಯನಿರ್ವಹಿಸಿದ್ದಾರೆ. ಸುಧನ್ವ, ದಶರಥ, ಭೀಷ್ಮ, ಶ್ರೀರಾಮ, ಶಂತನು, ನಾರದ, ಭೀಮ, ಅರ್ಜುನ, ಹನುಮಂತ ಮೊದಲಾದ ಪಾತ್ರಗಳು ಅವರಿಗೆ ಖ್ಯಾ ತಂದಿತ್ತ ಪಾತ್ರಗಳು, ಜೊತೆಗೆ ಐತಿಹಾಸಿಕ ಮತ್ತು ಸಾಮಾಜಿಕ ಪ್ರಸಂಗಗಳ ಪಾತ್ರಗಳಲ್ಲೂ ಅಭಿನಯಿಸಿದ್ದಾರೆ.
ಯಕ್ಷಗಾನ ಪ್ರಸಂಗಕರ್ತರೂ ಆಗಿರುವ ಮೋಹನದಾಸ ಶೆಣೈ, ಯಾವುದೇ ಪೂರ್ವತಯಾರಿ ಇಲ್ಲದೇ ನಿರರ್ಗಳವಾಗಿ ಅಹೋರಾತ್ರಿ ಅರ್ಥ ಹೇಳಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ವಿವಿಧ ಸಂಘಸಂಸ್ಥೆಗಳು ಅವರನ್ನು ಗೌರವಿಸಿವೆ.

ಹಾಜಿ ಅಬ್ದುಲ್ಲ ಪರ್ಕಳ: ತನ್ನ ೨೪ನೇ ವಯಸ್ಸಿಗೇ ಕೇರಳದಿಂದ ಉಡುಪಿಗೆ ಬಂದು ವ್ಯಾಪಾರ ಜೀವನ ಆರಂಭಿಸಿದ ಹಾಜಿ ಅಬ್ದುಲ್ಲ ಪರ್ಕಳ ಕೊಡುಗೈ ದಾನಿ ಎಂದೇ ಅಭಿಮಾನಿಗಳ ಮನ್ನಣೆಗೆ ಪಾತ್ರರಾಗಿರುವವರು. ಮಣಿಪಾಲದ ಡಾ.ಟಿ.ಎ.ಪೈ. ಸಲಹೆ ಹಾಗೂ ಉತ್ತೇಜನದಿಂದ ಸಣ್ಣ ಪ್ರಮಾಣದಲ್ಲಿ ಉದ್ಯಮ ಪ್ರಾರಂಭಿಸಿದ ಅಬ್ದುಲ್ಲಾ, ಕ್ರಮೇಣ ತಮ್ಮ ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ವ್ಯವಹಾರದಿಂದ ಉದ್ಯಮ ವಿಸ್ತರಿಸಿ ಉಡುಪಿಯ ಓರ್ವ ಯಶಸ್ವೀ ಉದ್ಯಮಿಯಾಗಿ ಬೆಳೆದರು.
ಮಣಿಪಾಲಕ್ಕೆ ದೇಶ ವಿದೇಶಗಳಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆ ಅರಸಿಕೊಂಡು ಬರುವ ವಿದ್ಯಾರ್ಥಿಗಳು ಮತ್ತು ಬಡಜನರಿಗೆ ನೆರವಿನ ಹಸ್ತ ನೀಡುತ್ತಿದ್ದಾರೆ. ಮಣಿಪಾಲ ಮಸೀದಿ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವರು, ಸರ್ವಧರ್ಮೀಯರೊಂದಿಗೆ ಸೌಹಾರ್ದಯುತ ಜೀವನ ನಡೆಸುತ್ತಿದ್ದಾರೆ.
ಜಮೀಯತುಲ್ ಫಲಾಹ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಮೊದಲಾದ ಸಂಘಸಂಸ್ಥೆಗಳಲ್ಲಿ ತೊಡಗಿರುವ ಅವರು, ಕಾಂಗ್ರೆಸ್ ಅಲ್ಪಸಂಖ್ಯಾತರ ಉಡುಪಿ ಘಟಕ ಅಧ್ಯಕ್ಷರಾಗಿದ್ದರು. ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಪ್ರಥಮ ಅಧ್ಯಕ್ಷರಾಗಿದ್ದರು.