ಮಹಿಳೆಗೆ ಕೊಠಡಿಯ ‘ದಿಗ್ಬಂಧನ’
ಪುತ್ತೂರು: ಮನೆಯ ಪಕ್ಕದ ಪ್ರತ್ಯೇಕ ಕೊಠಡಿಯಲ್ಲಿ ವಿವಾಹಿತ ಮಹಿಳೆಯನ್ನು ಕೂಡಿಹಾಕಿ ದಿಗ್ಬಂಧನ ವಿಧಿಸಿದ ಘಟನೆ ಬೆಳಕಿಗೆ ಬಂದಿದ್ದು, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯನ್ನು ರಕ್ಷಿಸಿದ್ದಾರೆ.
ಪುತ್ತೂರು ಹೊರವಲಯದ ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪ ಈ ಘಟನೆ ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ ಮಹಿಳೆಯನ್ನು ಪಕ್ಕದ ಕೋಣೆಯಲ್ಲಿ ಕೂಡಿಹಾಕಿ ಬಾಗಿಲು ಮುಚ್ಚಲಾಗಿತ್ತು. ೩ ತಿಂಗಳಿಂದ ಈ ವಿದ್ಯಮಾನ ನಡೆಯುತ್ತಿದೆ ಎಂಬ ಮಾಹಿತಿ ಬಂದ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರ ತಂಡ ಭೇಟಿ ನೀಡಿ ಪರಿಶೀಲಿಸಿದಾಗ ಮಹಿಳೆ ಎದ್ದು ನಡೆಯಲಾರದ ಸ್ಥಿತಿಯಲ್ಲಿದ್ದು, ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದಾಗ ನಿರಾಕರಿಸಿದರು ಎನ್ನಲಾಗಿದೆ. ಬಳಿಕ ಸ್ಥಳೀಯರ ನೆರವು ಪಡೆದು ಮಹಿಳೆಯನ್ನು ಒಪ್ಪಿಸಲಾಗಿದ್ದು, ದಿಗ್ಬಂಧನದಿಂದ ರಕ್ಷಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧನಕ್ಕೆ ಒಳಗಾಗಿದ್ದ ಮಹಿಳೆಯ ಗಂಡ ಮತ್ತು ಆತನ ಸಹೋದರಿ ಇದೇ ಮನೆಯಲ್ಲಿ ವಾಸವಾಗಿದ್ದು, ಮಹಿಳೆಯನ್ನು ದಿಗ್ಬಂಧನಕ್ಕೆ ಒಳಪಡಿಸಿದ ಕಾರಣ ತಿಳಿಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.