For the best experience, open
https://m.samyuktakarnataka.in
on your mobile browser.

ಸಂಸತ್ತಿನಲ್ಲಿ ಹಿಂದೂಗಳಿಗೆ ಅವಮಾನ ಎಸಗಿದ ರಾಹುಲ್ ಗಾಂಧಿ ಕ್ಷಮೆ ಯಾಚಿಸಲಿ

01:48 AM Jul 03, 2024 IST | Samyukta Karnataka
ಸಂಸತ್ತಿನಲ್ಲಿ ಹಿಂದೂಗಳಿಗೆ ಅವಮಾನ ಎಸಗಿದ ರಾಹುಲ್ ಗಾಂಧಿ ಕ್ಷಮೆ ಯಾಚಿಸಲಿ

ಮಂಗಳೂರು: ಲೋಕಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರು ಸೋಮವಾರ ಸಂಸತ್ತಿನಲ್ಲಿ ಆಡಿದ ಮಾತುಗಳು ದೇಶದ ಹಿಂದೂಗಳನ್ನು ತೀವ್ರವಾಗಿ ಘಾಸಿಗೊಳಿಸಿದೆ. 'ಹಿಂದುಗಳೆಂದು ಹೇಳಿಕೊಳ್ಳುವವರು ದೇಶದಲ್ಲಿ ಹಿಂಸೆ, ಸುಳ್ಳು, ದ್ವೇಷ ಉತ್ಪಾದಿಸುವವರು' ಎಂದು ಹೇಳಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಬಿಜೆಪಿ ದ.ಕ ಜಿಲ್ಲಾ ವಕ್ತಾರರಾದ ಸತೀಶ್ ಪ್ರಭು ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಸಮುದಾಯವನ್ನು ಹಿಂಸೆಯೊಂದಿಗೆ, ದ್ವೇಷದೊಂದಿಗೆ ಸಮೀಕರಿಸುವುದು ಸರಿಯಲ್ಲ. ಯಾರನ್ನೋ ಓಲೈಸಲು, ರಾಜಕೀಯ ಲಾಭ ಪಡೆಯಲು ವಿಶ್ವಕ್ಕೆ ನಿರ್ಮಲ ಜ್ಞಾನ, ಶಾಂತಿಯ ಸಹಬಾಳ್ವೆಯ ಸಂದೇಶ ನೀಡಿದ, ಉದಾತ್ತ ಮನೋಭಾವದ ಹಿಂದೂಗಳನ್ನು ಹಿಂಶೆ, ಅಸತ್ಯ, ದ್ವೇಷ ಹರಡುವವರೆಂದು ಬಿಂಬಿಸಿರುವುದು ಅವರ ಅಪಕ್ವ ಮಾನಸಿಕತೆಯನ್ನು ಬಿಂಬಿಸುತ್ತದೆ ಎಂದು ಹೇಳಿದರು.

ಸಂವಿಧಾನದ ಅತ್ಯುಚ್ಚ, ಪವಿತ್ರ ಕೇಂದ್ರವಾಗಿರುವ ಸಂಸತ್ತಿನಲ್ಲಿ, ಘನತೆ ಗೌರವ ಹೊಂದಿರುವ ವಿಪಕ್ಷ ನಾಯಕನ ಸ್ಥಾನದಿಂದ ಈ ಮಾತುಗಳನ್ನು ಆಡಿರುವುದು ಸಂಸತ್ತಿಗೆ ಮತ್ತು ವಿಪಕ್ಷ ನಾಯಕನ ಸ್ಥಾನಕ್ಕೂ ಮಾಡಿರುವ ಅಪಚಾರ ಮತ್ತು ಅಗೌರವ ಎಂದು ಬಿಜೆಪಿ ಹೇಳಿದೆ.

ಸಂಸತ್ತಿನಲ್ಲಿ ಹಿಂದೂ ದೇವರುಗಳ ಚಿತ್ರಗಳನ್ನು ಪ್ರದರ್ಶಿಸಿರುವುದು ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿದೆ. ಯಾವುದೇ ಧರ್ಮದ ಜೊತೆಗೆ ಹಿಂಸಾಚಾರವನ್ನು, ಅಸತ್ಯವನ್ನು, ದ್ವೇಷವನ್ನು ತಳುಕು ಹಾಕುವುದು ಸಭ್ಯತೆ ಅಲ್ಲ. ರಾಹುಲ್ ಗಾಂಧಿ ದೇಶದ ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸುತ್ತದೆ ಎಂದು ಸತೀಶ್ ಪ್ರಭು ಹೇಳಿದರು.

ಕೇವಲ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಈ ಹಿಂದೆ ಸಂವಿಧಾನಕ್ಕೆ ಹಲವು ಬಾರಿ ತಿದ್ದುಪಡಿ ತಂದ, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿದ, ದೇಶದ ಜನತೆಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹರಣ ಮಾಡಿದ, ತುರ್ತು ಪರಿಸ್ಥಿತಿ ಜಾರಿಗೊಳಿಸಿ ವಿರೋಧಿಗಳನ್ನು ಹಿಂಸಿಸಿದ ಕಾಂಗ್ರೆಸ್‌ನ ನಾಯಕರು ಇಂದು ಸಂವಿಧಾನದ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ ಎಂದು ಅವರು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮತ್ತೋರ್ವ ಜಿಲ್ಲಾ ವಕ್ತಾರ ಅರುಣ್ ಜಿ ಶೇಟ್, ಜಿಲ್ಲಾ ಮಾಧ್ಯಮ ಸಂಚಾಲಕ ವಸಂತ ಪೂಜಾರಿ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಗುರುಚರಣ್ ಉಪಸ್ಥಿತರಿದ್ದರು.