ದಟ್ಟ ಮಂಜಿಗೆ ಎರಡು ಅಪಘಾತ: ಒಂದೇ ಕುಟುಂಬದ ನಾಲ್ವರು ಬಲಿ
ಹೈದರಾಬಾದ್: ದುರ್ವಿಧಿ ಅನ್ನೋದು ಇದಕ್ಕೆ ಇರಬಹುದು. ಅಪಘಾತವೊಂದರಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ. ಆ ವ್ಯಕ್ತಿಯ ಕುಟುಂಬದ ಮೂವರು ಅಪಘಾತ ನಡೆದ ಸ್ಥಳಕ್ಕೆ ಧಾವಿಸಲು ಮುಂದಾದರು. ಆಗ ಮತ್ತೊಂದು ಅಪಘಾತ ಸಂಭವಿಸಿ, ಮೂವರೂ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.
ಈ ಎರಡೂ ಅಪಘಾತಗಳಿಗೆ ದಟ್ಟವಾದ ಮಂಜು ಕಾರಣವಾಗಿದೆ. ಎನ್‌ಎಚ್ 186ರಲ್ಲಿ ಸಂಭವಿಸಿದ ಎರಡು ರಸ್ತೆ ಅಪಘಾತಗಳಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಭಾನುವಾರ ರಾತ್ರಿ ಗೋಚರತೆ ಸರಿಯಾಗಿಲ್ಲದ ಕಾರಣ ವೇಂಪಹಾಡ್‌ನಲ್ಲಿ ನಡೆದ ಮೊದಲ ಅಪಘಾತದಲ್ಲಿ, ಪಾದಚಾರಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.
ಅಪಘಾತದ ಬಗ್ಗೆ ರಾಮಾವತ್ ಕೇಶವ್ ಅವರ ಕುಟುಂಬಕ್ಕೆ ತಿಳಿದಾಗ, ಅವರು ಮಂಜು ಕವಿದ ವಾತಾವರಣದ ನಡುವೆಯೇ ಪಾರ್ವತಿಪುರಂ ಬಳಿ ಅವರ ಟಾಟಾ ಏಸ್ ವಾಹನದಲ್ಲಿ ಬರುತ್ತಿದ್ದಾಗ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಟಾಟಾ ಏಸ್‌ನಲ್ಲಿ ಪ್ರಯಾಣಿಸುತ್ತಿದ್ದ ಏಳು ಜನರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಮೃತ ಮೂವರನ್ನು ರಾಮಾವತ್ ಪಾಂಡು(40), ರಾಮಾವತ್ ಘನ್ಯಾ(40) ಮತ್ತು ರಾಮಾವತ್ ಬುಜ್ಜಿ(38) ಮಲ್ಲೇವಣಿ ಕುಂಟ ತಾಂಡಾ ಗ್ರಾಮದವರು ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಿರ್ಯಾಲಗೂಡ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.