For the best experience, open
https://m.samyuktakarnataka.in
on your mobile browser.

ದತ್ತಜಯಂತಿ ಉತ್ಸವದ ಅಂಗವಾಗಿ ಶೋಭಾಯಾತ್ರೆ

09:30 PM Dec 13, 2024 IST | Samyukta Karnataka
ದತ್ತಜಯಂತಿ ಉತ್ಸವದ ಅಂಗವಾಗಿ ಶೋಭಾಯಾತ್ರೆ

ಚಿಕ್ಕಮಗಳೂರು: ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಶನಿವಾರ ತೆರೆ ಕಾಣಲಿರುವ ದತ್ತಜಯಂತಿ ಉತ್ಸವದ ಅಂಗವಾಗಿ ಚಿಕ್ಕಮಗಳೂರಿನಲ್ಲಿ ಶುಕ್ರವಾರ ನಡೆದ ಶೋಭಾಯಾತ್ರೆ ಶಾಂತಿಯುತವಾಗಿ ನಡೆಯಿತು.
ಪೂರ್ವ ನಿಗದಿಯಂತೆ ಶೋಭಾಯಾತ್ರೆ ಇಲ್ಲಿನ ಶ್ರೀ ಕಾಮಧೇನು ಗಣಪತಿ ದೇವಸ್ಥಾನದಿಂದ ಹೊರಟಿತು. ಆರಂಭದಲ್ಲಿ ದತ್ತಮಾಲಾಧಾರಿಗಳ ಸಂಖ್ಯೆ ಕಡಿಮೆಯಂತೆ ಕಂಡು ಬಂದರೂ ಟೌನ್ ಕ್ಯಾಂಟಿನ್ ವೃತ್ತದಿಂದ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಸಾಗಿ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ಮಾಲಾಧಾರಿಗಳು ರಸ್ತೆಯ ಉದ್ದಕ್ಕೂ ಕಂಡು ಬಂದಿತು.
ತಂಡೋಪ ತಂಡವಾಗಿ ಯಾತ್ರೆಯಲ್ಲಿ ಸಾಗಿದ ಯುವಕರು ಮುಗಿಲು ಮುಟ್ಟುವಂತೆ ಘೋಷಣೆ ಹಾಕುತ್ತಿದ್ದರು, ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆಗೆ ರಸ್ತೆಯ ಉದ್ದಕ್ಕೂ ನಿಂತಿದ್ದ ಸಾರ್ವಜನಿಕರು ಧ್ವನಿ ಗೂಡಿಸುತ್ತಿದ್ದರು. ಶೋಭಾಯಾತ್ರೆಯಲ್ಲಿ ಡಿಜೆ, ಗೊಂಬೆ ಮೇಳ, ಹಳ್ಳಿ ವಾದ್ಯಗಳು ಮಾತ್ರ ಇದ್ದವೂ ಆದರೆ, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಕಲಾ ತಂಡಗಳ ಸಂಖ್ಯೆ ಕಡಿಮೆಯಾಗಿತ್ತು. ನಿರೀಕ್ಷೆಯಷ್ಟು ಮಾಲಾಧಾರಿಗಳು ಭಾಗವಹಿಸಲಿಲ್ಲ. ಚಿಕ್ಕಮಗಳೂರು ನಗರ ಪ್ರದೇಶದ ಯುವಕ, ಯುವತಿಯರು ಹಾಗೂ ಬಿಜೆಪಿಯ ಮುಖಂಡರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಯಾತ್ರೆಯ ಮುಂಚೂಣಿಯಲ್ಲಿ ಮಾಜಿ ಸಚಿವ ಸಿ.ಟಿ. ರವಿ, ಮುಖಂಡರಾದ ಪ್ರಮೋದ್ ಮಧ್ವರಾಜ್, ವಿಎಚ್‌ಪಿ ಹಾಗೂ ಭಜರಂಗದಳ ಮುಖಂಡರಾದ ಶ್ರೀಕಾಂತ್ ಪೈ, ಯೋಗೀಶ್ ರಾಜ್ ಅರಸ್, ಮಹೇಂದ್ರ ಇದ್ದರು.

Tags :