ದರ್ಶನ್ ಜಾಮೀನು ವಿಚಾರಣೆ ಮುಂದೂಡಿಕೆ
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ದಿನಗಳಿಂದ ನಗರದ ೫೭ನೇ ಸಿಸಿಎಚ್ ಕೋರ್ಟ್ನಲ್ಲಿ ವಾದ-ಪ್ರತಿ ವಾದ ನಡೆಯುತ್ತಿದ್ದು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಗುರುವಾರಕ್ಕೆ ಮುಂದೂಡಿತು.
ಪಟ್ಟಣಗೆರೆ ಶೆಡ್‌ಗೆ ಬರುತ್ತಿದ್ದಂತೆ ದರ್ಶನ್, ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ. ಆತನ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದಿದ್ದಾರೆ. ಪರಿಣಾಮ ಎದೆ ಭಾಗದ ೧೭ ಮೂಳೆಗಳು ಮುರಿದಿವೆ, ಶ್ವಾಸಕೋಶ ಹಾನಿಯಾಗಿದೆ. ದೇಹದಲ್ಲಿ ೩೯ ಗಾಯಗಳಾಗಿವೆ. ಯಾವ ಅರೇಬಿಯನ್ ನೈಟ್ಸ್ ಕಥೆಯಲ್ಲೂ ಈ ರೀತಿ ಹಿಂಸೆ ಇಲ್ಲ. ಇದೊಂದು ರಕ್ತ ಚರಿತ್ರೆ. ರೇಣುಕಾಸ್ವಾಮಿಯ ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ದರ್ಶನ್ ಸಲ್ಲಿಸಿರುವ ಅರ್ಜಿಗೆ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನ ಕುಮಾರ್ ೫೭ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ನಲ್ಲಿ ವಾದ ಮಂಡಿಸಿದರು.
ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ. ತನಿಖಾಧಿಕಾರಿಗಳ ತನಿಖೆಯು ಅರೇಬಿಯನ್ ನೈಟ್ಸ್ ಕಥೆಯಂತಿದೆ ಎಂದು ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ವಾದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ಎಸ್‌ಪಿಪಿ ಪ್ರಸನ್ನಕುಮಾರ್ ದೋಷಾರೋಪ ಪಟ್ಟಿಯ ಸಾಕ್ಷ್ಯಾಧಾರಗಳು, ಸಾಕ್ಷಿಗಳ ಹೇಳಿಕೆಯನ್ನು ಓದಿ ಪ್ರತ್ಯುತ್ತರ ನೀಡಿದರು. ದರ್ಶನ್ ಮತ್ತು ಗ್ಯಾಂಗ್ ಕ್ರೌರ್ಯದ ಬಗ್ಗೆ ಎಳೆ ಎಳೆಯಾಗಿ ನ್ಯಾಯಾಧೀಶರ ಮುಂದೆ ವಿವರಿಸಿದರು.
ಇದಕ್ಕೂ ಮುನ್ನ ಎ-೧೧ ಆರೋಪಿ ನಾಗರಾಜ್, ಎ೧೮ನೇ ಆರೋಪಿ ಲಕ್ಷ್ಮಣ್ ಎಂಬುವರ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು. ಅವರ ವಿರುದ್ಧ ಕೊಲೆ, ಒಳಸಂಚು ಮತ್ತು ಸಾಮಾನ್ಯ ಉದ್ದೇಶ ಹೊಂದಿದ್ದ, ಸಾಕ್ಷಿ ನಾಶ, ಹಲ್ಲೆ ಆರೋಪವಿದೆ. ಕಳೆದ ೪ ತಿಂಗಳಿನಿಂದ ಕಸ್ಟಡಿಯಲ್ಲಿ ಆರೋಪಿಗಳಾಗಿದ್ದಾರೆ. ಅವರಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ. ಪ್ರಕರಣದ ತನಿಖೆ ಮುಗಿದಿದ್ದು, ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ಕಾರಣ ಆರೋಪಿಗಳು ಜಾಮೀನು ಪಡೆಯಲು ಅರ್ಹರಾಗಿದ್ದಾರೆ. ಹಾಗಾಗಿ, ಜಾಮೀನು ನೀಡುವಂತೆ ಕೋರಿದರು.