ದಲಿತ ಚಳುವಳಿಯ ಹಿರಿಯ ಮುಖಂಡ ಜಿಗಣಿ ಶಂಕರ್ ನಿಧನ
ಆನೇಕಲ್: ದಲಿತ ಚಳುವಳಿಯ ಹಿರಿಯ ಮುಖಂಡರು, ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಜಿಗಣಿ ಶಂಕರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಚಾರವಾದಿ ಎಂದು ಖ್ಯಾತರಾಗಿದ್ದ ಜಿಗಣಿ ಶಂಕರ್ ಜಿಗಣಿ ಬಳಿಯ ಬಂಡೇನಲ್ಲಸಂದ್ರ ಗ್ರಾಮದ ನಿವಾಸಿ. ಅವರು ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಕೋಲಾರಕ್ಕೆ ಹೋಗಿದ್ದಾಗ ಹೃದಯಾಘಾತ ಸಂಭವಿಸಿದೆ. ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜಿಗಣಿ ಬಳಿಯ ಬಂಡೇನಲ್ಲಸಂದ್ರ ಗ್ರಾಮದ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಬಂಡೇನಲ್ಲಸಂದ್ರ ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಿರುವುದಾಗಿ ಕುಟುಂಬಿಕರು ತಿಳಿಸಿದ್ದಾರೆ. ಜಿಗಣಿ ಶಂಕರ್ ಅವರು ತಮ್ಮ ಬದುಕಿನುದ್ದಕ್ಕೂ ದಲಿತ ಸಂಘಟನೆ ಮತ್ತು ದಲಿತ ಪಕ್ಷಕಟ್ಟಿ ಹೋರಾಟ ಮಾಡಿದವರು.
ಎಂ. ಬಿ. ಪಾಟೀಲ ಸಂತಾಪ: ದಲಿತ ಚಳುವಳಿಯ ಹಿರಿಯ ಮುಖಂಡರು, ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ಜಿಗಣಿ ಶಂಕರ್ ಅವರು ನಿಧನರಾಗಿರುವ ಸುದ್ದಿ ಆಘಾತ ತರಿಸಿದೆ. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಅವರು ಶೋಷಿತ ಸಮುದಾಯಗಳ ಹೋರಾಟದಲ್ಲಿ ತಮ್ಮನ್ನು ಸದಾ ತೊಡಗಿಸಿಕೊಳ್ಳುತ್ತಿದ್ದರು. ಅವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ. ಮೃತರ ಆತ್ಮಕ್ಕೆ ಚಿರ ಶಾಂತಿ ಲಭಿಸಲಿ, ಆಪ್ತರು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ