ದಿಂಗಾಲೇಶ್ವರ ಶ್ರೀ ನಾಮಪತ್ರ ವಾಪಸ್: ಯಾರಿಗೆ ಲಾಭ, ನಷ್ಟ?
ಬಿ.ಅರವಿಂದ
ಹುಬ್ಬಳ್ಳಿ: ಧಾರವಾಡ ಕಣದಿಂದ ದಿಂಗಾಲೇಶ್ವರ ಸ್ವಾಮಿಗಳು ಹಿಂದೆ ಸರಿದಿರುವುದಕ್ಕೆ ನೈಜ ಕಾರಣವೇನು? ಈ ವಿದ್ಯಮಾನದ ರಾಜಕೀಯ ಲಾಭ ಬಿಜೆಪಿ ಪಡೆಯುತ್ತದೋ, ಕಾಂಗ್ರೆಸ್ ನಿರಾಳವಾದಂತಾಯಿತೋ ಎನ್ನುವ ಪ್ರಶ್ನೆಗಳು ಈಗ ಮೂಡಿವೆ.
ದಿಂಗಾಲೇಶ್ವರ ಸ್ವಾಮೀಜಿಯವರು ಕಣದಲ್ಲಿ ಉಳಿಯುವುದಿಲ್ಲ ಎಂದು ಅವರನ್ನು ಸಮೀಪದಿಂದ ಬಲ್ಲವರು ಪ್ರಾರಂಭದಿಂದಲೇ ಹೇಳುತ್ತಿದ್ದರು. ಆದರೆ ಸ್ವಾಮಿಗಳು ಮಾತ್ರ ನಾಮಪತ್ರ ಸಲ್ಲಿಸಿದ್ದಷ್ಟೇ ಅಲ್ಲ, ಪ್ರಲ್ಹಾದ ಜೋಶಿ ವಿರುದ್ಧ ತಮ್ಮ ಸ್ಪರ್ಧೆ ನಿಶ್ಚಿತ ಎಂದಿದ್ದರು. ಜೊತೆಗೆ ಹರಿಹರ ಬ್ರಹ್ಮಾದಿಗಳು ಬಂದರೂ ತಮ್ಮನ್ನು ಕಣದಿಂದ ಹಿಂದೆ ಸರಿಸಲಾರರು ಎಂದಿದ್ದರು.
ಬಿ.ಎಸ್.ಯಡಿಯೂರಪ್ಪ ಮತ್ತು ಡಿ.ಕೆ.ಶಿವಕುಮಾರ ಇಬ್ಬರೂ ದಿಂಗಾಲೇಶ್ವರ ಸ್ವಾಮೀಜಿಗೆ ಫೋನ್ ಮಾಡಿ ಒತ್ತಾಯಪೂರ್ವಕ ಮನವಿ ಮಾಡಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಈಗ ದಿಂಗಾಲೇಶ್ವರರು ಯಾರನ್ನು ಬೆಂಬಲಿಸುತ್ತಾರೆ ಎನ್ನುವುದೇ ಈಗ ಕುತೂಹಲ.
ಸ್ವಾಮೀಜಿಯವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸುತ್ತಾರೆ ಎನ್ನುವ ಮಾತುಗಳು ದಟ್ಟವಾಗಿ ಹರಿದಾಡುತ್ತಿದ್ದು, ಕಾಂಗ್ರೆಸ್ ಎರಡನೇ ಶ್ರೇಣಿ ಮುಖಂಡರೊಬ್ಬರು ಇದನ್ನು ಪುಷ್ಟೀಕರಿಸಿದ್ದಾರೆ.
ಇದರಿಂದ ಬಿಜೆಪಿಗೆ ಏನೇನೂ ನಷ್ಟವಿಲ್ಲ ಎಂದು ಪಕ್ಷದ ಕಚೇರಿಯಲ್ಲಿ ಸಂಜೆ ನಡೆದ ಮುಖಂಡರ ಅನೌಪಚಾರಿಕ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಸ್ವಾಮೀಜಿ ಮಾತ್ರ ಇನ್ನೂ ತಮ್ಮ ನಿಲುವನ್ನು ಬಹಿರಂಗಪಡಿಸಿಲ್ಲ. ನಾಮಪತ್ರ ಹಿಂದಕ್ಕೆ ಪಡೆಯುವ ಮುನ್ನ ಸಚಿವ ಸಂತೋಷ ಲಾಡ್ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ ಎನ್ನಲಾಗುತ್ತಿರುವ ಅವರು ಜೋಶಿ ವಿರುದ್ಧ ಧರ್ಮಯುದ್ಧ ಮುಂದುವರಿಯಲಿದೆ ಎಂಬುದನ್ನು ಮಾತ್ರ ಸ್ಪಷ್ಟಪಡಿಸಿದ್ದಾರೆ.
ಶ್ರೀಗಳು ಕಾಂಗ್ರೆಸ್ ನಾಯಕರ ಮಾತುಗಳಿಗೆ ಸ್ಪಂದಿಸಿದರೇ? ಜೋಶಿ ವಿರುದ್ಧದ ಧರ್ಮಯುದ್ಧ’ಕ್ಕೆ ಕಾಂಗ್ರೆಸ್ ಸ್ವಾಮೀಜಿಯವರನ್ನು ಗುರಾಣಿ ಮಾಡಿಕೊಳ್ಳುತ್ತಿದೆಯೇ? ಈ ಪ್ರಶ್ನೆಗಳು ಹಾಗೂ ಕಣದಿಂದ ಹಿಂದೆ ಸರಿದ ನೈಜ ಕಾರಣಕ್ಕೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ. ಅಲ್ಲದೇ,
ಪೇಮೆಂಟ್ ಕಾರಣಕ್ಕೆ ಜೋಶಿ ವಿರುದ್ಧ ಸ್ಪರ್ಧೆ’ ಮಾಡುತ್ತಿರುವ ಅಭ್ಯರ್ಥಿ ಎಂಬುದಾಗಿ ಎರಡು ದಿನಗಳ ಹಿಂದಷ್ಟೇ ಶಾಸಕ ಬಸನಗೌಡ ಪಾಟೀಲ ಯತ್ನಾಳ ದಿಂಗಾಲೇಶ್ವರರ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು. ಈ ಅಂಶದ ಸುತ್ತ ಕೂಡ ಚರ್ಚೆಗಳು ಆರಂಭವಾಗಿವೆ.