ದಿಢೀರ್ ನಿವೃತ್ತಿ ಘೋಷಿಸಿದ ಟೀಮ್ ಇಂಡಿಯಾ ಪ್ಲೇಯರ್
2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಸಾಹಗೆ ಭಾರತ ತಂಡದ ಬಾಗಿಲು ತೆರೆದಿತ್ತು.
ನವದೆಹಲಿ : ಭಾರತೀಯ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ವೃದ್ಧಿಮಾನ್ ಸಾಹ ನಿವೃತ್ತಿ ಘೋಷಣೆ ಮಾಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಆಡುತ್ತಿರುವ ಸಾಹ ಸೋಮವಾರ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಎಲ್ಲ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದು, ಈ ಮೂಲಕ 17 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಸಾಹ 15 ವರ್ಷಗಳ ಕಾಲ ಬಂಗಾಳ ಪರವಾಗಿ ಮತ್ತು 2 ವರ್ಷಗಳ ಕಾಲ ತ್ರಿಪುರಾ ಪರ ಆಡಿದ್ದಾರೆ. ಭಾರತ ಪರ ಒಟ್ಟು 9 ಏಕದಿನ ಪಂದ್ಯವನ್ನಾಡಿದ್ದಾರೆ. 2014 ರಲ್ಲಿ ಭಾರತ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2021 ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದರು. ಟೆಸ್ಟ್ ಆಟಗಾರನಾಗಿದ್ದರೂ ಕೂಡ ಐಪಿಎಲ್ನಲ್ಲಿ ಸಹಾ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. 170 ಐಪಿಎಲ್ ಪಂದ್ಯವನ್ನಾಡಿ 2934 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 13 ಅರ್ಥಶತಕ ಒಳಗೊಂಡಿದೆ.
2010 ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಾಹ ಭಾರತ ಪರ 40 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ 56 ಇನಿಂಗ್ಸ್ ಆಡಿ ಅವರು 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1353 ರನ್ ಕಲೆಹಾಕಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮೂರು ಮಾದರಿಯ ಕ್ರಿಕೆಟ್ನಲ್ಲಿ ಕೀಪರ್ ಆಗಿದ್ದ ಕಾರಣ ವೃದ್ಧಿಮಾನ್ ಸಾಹಗೆ ಭಾರತ ಪರ ಹೆಚ್ಚಿನ ಪಂದ್ಯವನ್ನಾಡುವ ಅವಕಾಶ ಲಭಿಸಲಿಲ್ಲ.