For the best experience, open
https://m.samyuktakarnataka.in
on your mobile browser.

ದಿಲ್ಲಿ ಮೊಬಿಲಿಟಿ ಎಕ್ಸ್‌ಪೋದಲ್ಲಿ ಟೊಯೊಟ ಹೊಸ `ಕಾರು'ಬಾರು

12:48 AM Jan 24, 2025 IST | Samyukta Karnataka
ದಿಲ್ಲಿ ಮೊಬಿಲಿಟಿ ಎಕ್ಸ್‌ಪೋದಲ್ಲಿ ಟೊಯೊಟ ಹೊಸ  ಕಾರು ಬಾರು

ಶಶಿಧರ್. ಎನ್.
ನವದೆಹಲಿ: ನವದೆಹಲಿಯಲ್ಲಿ ಸಮಾಪ್ತಗೊಂಡ ಮೊಬಿಲಿಟಿ ಎಕ್ಸ್ಪೋದಲ್ಲಿ ದೇಶ ವಿದೇಶಗಳ ಆಟೋ ಕಂಪನಿಗಳು ಭಾಗವಹಿಸಿದ್ದು, ಟೊಯೊಟ ಕಂಪನಿ ತನ್ನ ನೂತನ ವಿವಿಧ ಮಾದರಿಗಳ ಕಾರುಗಳನ್ನು ಪ್ರದರ್ಶಿಸಿತು.
ಭವಿಷ್ಯದ ವಿವಿಧ ಮಾದರಿಯ ವಾಹನಗಳನ್ನು ಪರಿಚಯಿಸಿದ ಟೊಯೊಟಾ ಕಿರ್ಲೋಸ್ಕರ್‌ನ ಕಾರ್ಯಕಾರಿ ಉಪಾಧ್ಯಕ್ಷ ವಿಕ್ರಮ್ ಗುಲಾಟಿ, ಸ್ವಚ್ಛ ಇಂಧನದ ದೃಷ್ಟಿಯಿಂದ ಮೂರು ಪ್ರಮುಖ ಮಾದರಿಗಳನ್ನು ಟೊಯೊಟ ಸಿದ್ಧಪಡಿಸಿದೆ. ಸಂಪೂರ್ಣ ವಿದ್ಯುತ್ ಬ್ಯಾಟರಿ ಚಾಲಿತ ಬಿಜೆಡ್೪ಎಕ್ಸ್ ಮತ್ತು ಅರ್ಬನ್ ಬಿಇವಿ ಮಾದರಿಗಳು ಸುಧಾರಿತ ವಿನ್ಯಾಸ ಮತ್ತು ನಿರ್ವಹಣೆಯ ವಾಹನಗಳಾಗಿವೆ ಎಂದರು. ಅದೇ ರೀತಿ ಫ್ಯುಯೆಲ್ ಸೆಲ್ ಎಲೆಕ್ಟ್ರಿಕ್ ವೆಹಿಕಲ್ಸ್(ಎಫ್‌ಸಿಇವಿ) ವಾಹನಗಳನ್ನು ಟೊಯೊಟ ಪರಿಚಯಿಸುತ್ತಿದೆ. ಈ ವಾಹನಗಳು ಎಫ್‌ಸಿಇವಿ ಕಾರ್ಬನ್ ಡೈಆಕ್ಸೈಡ್ ಹೊರಸೂಸುವುದಿಲ್ಲ. ಇದರಲ್ಲಿ ಇಂಧನವಾಗಿ ಹೈಡ್ರೋಜನ್ ಅನ್ನು ಬಳಸಿಕೊಳ್ಳಲಾಗುತ್ತದೆ. ಇದರಿಂದ ನೀರಿನ ಕಣಗಳು ಬಿಡುಗಡೆಯಾಗುತ್ತವೆ. ವಾತಾವರಣ ಕಲುಷಿತವಾಗುವ ಯಾವುದೇ ಅನಿಲ ಹೊರಸೂಸುವುದಿಲ್ಲ.
ಪ್ಲಗ್ ಇನ್ ಹೈಬ್ರಿಡ್ ವಾಹನ(ಪಿಎಚ್‌ಇವಿ) ಹೊಸದಾಗಿ ಆವಿಷ್ಕಾರಗೊಂಡಿರುವ ಮತ್ತೊಂದು ಮಾದರಿಯ ವಾಹನ. ಇದರಲ್ಲಿ ಡೀಸೆಲ್ ಕೂಡ ಬಳಸಬಹುದು. ಅಲ್ಲದೆ ಬ್ಯಾಟರಿಯನ್ನು ಚಾರ್ಜ್ ಮಾಡಿಕೊಂಡು ವಿದ್ಯುತ್ ವಾಹನವಾಗಿ ಬಳಸಿಕೊಳ್ಳಬಹುದು ಎಂದು ಗುಲಾಟಿ ವಿವರಿಸಿದರು.
ಫ್ಲೆಕ್ಸಿ ಫ್ಯುಯೆಲ್ ಪ್ಲಗ್ ಇನ್ ಹೈಬ್ರಿಡ್ ವಿದ್ಯುತ್ ವಾಹನಗಳು (ಎಫ್‌ಎಫ್‌ವಿ-ಪಿಎಚ್‌ಇವಿ): ಇವುಗಳಲ್ಲಿ ನಾನಾ ರೀತಿಯ ಇಂಧನಗಳನ್ನು ಬಳಸಬಹುದು. ಪೆಟ್ರೋಲ್, ಎಥನಾಲ್ ಮಿಶ್ರಿತ ಪೆಟ್ರೋಲ್, ಅಥವಾ ಸಂಪೂರ್ಣ ಎಥನಾಲ್ ಮೂಲಕ ಗಾಡಿ ಚಲಾಯಿಸಬಹುದು. ಅಲ್ಲದೆ, ವಾಹನ ಚಲಾಯಿಸುವಾಗಲೇ ಬ್ಯಾಟರಿಗಳು ಚಾರ್ಜ್ ಆಗುತ್ತವೆ.
ಅದನ್ನೂ ಬಳಸಿಕೊಳ್ಳಬಹುದಾಗಿದೆ ಎಂದರು. ಸೂಕ್ತ ಬೇಡಿಕೆ ಕಂಡುಬಂದರೆ ಕೂಡಲೇ ಉತ್ಪಾದನೆ ಆರಂಭಿಸಲಾಗುವುದು ಎಂದರು.