ದೀನಬಂಧು ಗೃಹ ನಿರ್ಮಾಣ ಸಹಕಾರಿ ಸಂಘದ ಆಸ್ತಿ ಕಬಳಿಕೆ ಹುನ್ನಾರ, ಪ್ರತಿಭಟನೆ
ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯ ದೀನಬಂಧು ಕಾಲೋನಿಯ ದೀನಬಂಧು ಗೃಹ ನಿರ್ಮಾಣ ಸಹಕಾರಿ ಸಂಘ ನಿಯಮಿತದ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ. ಸರಕಾರ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ದೀನಬಂಧು ಕಾಲೋನಿ ನಿವಾಸಿಗಳ ಸಂಘದಿಂದ ಶಾಂತಿಯುತ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಲಾಯಿತು.
ರವಿವಾರ ಕಾರವಾರ ರಸ್ತೆ ಚರ್ಚ್‌ನಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ನೂರಾರು ಜನ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ನ್ಯಾಯಕ್ಕಾಗಿ ಒತ್ತಾಯಿಸಿದರು.
೧೯೫೦ ರಲ್ಲಿ ಅಲ್ಪಸಂಖ್ಯಾತ ಕ್ರಿಸ್ಚಿಯನ್ ಸದಸ್ಯರು ನಿವೇಶನ ಹೊಂದುವ ಉದ್ದೇಶದಿಂದ ಸಂಘವನ್ನು ಸ್ಥಾಪನೆ ಮಾಡಲಾಯಿತು. ೧೯೯೩ ರಲ್ಲಿ ಆಡಳಿತಾಧಿಕಾರಿ ಅನಧಿಕೃತವಾಗಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರದ ೪೯೧ ಜನ ಸದಸ್ಯರನ್ನು ಕಾನೂನು ರೀತಿಯಲ್ಲಿ ಅಧಿಕಾರ ಇಲ್ಲದೆ ಸದಸ್ಯರನ್ನಾಗಿ ಸೇರಿಸಲಾಗಿದೆ. ೨೦೧೩ ರಲ್ಲಿ ಸಂಘದ ಮೂಲ ಬೈಲಾವನ್ನು ತಿದ್ದುಪಡಿ ಮಾಡಲಾಗಿದೆ. ಇದರ ನಡುವೆಯೂ ಅನಧಿಕೃತ ವ್ಯಕ್ತಿಗಳು ಚುನಾವಣೆಯಲ್ಲಿ ಆಯ್ಕೆಯಾಗಿ ಆಡಳಿತ ಮಂಡಳಿ ರಚಿಸಿದ್ದಾರೆ. ಅಲ್ಲದೆ, ಸಂಘದ ಆಸ್ತಿಯನ್ನು ವಿಲೇವಾರಿ ಮಾಡುವ ಸಿದ್ಧತೆಯಲ್ಲಿರುವುದು ಕಂಡು ಬಂದಿದೆ. ಆದ್ದರಿಂದ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಬಿಷಪ್ ರವಿಕುಮಾರ ನಿರಂಜನ್, ಉಪಾಧ್ಯಕ್ಷ ಜೈಶೀಲ ಮಾರ್ಡಿನ್ ಭಸ್ಮೆ, ಸತ್ಯಬಾಬು, ಬಲವಂತ ಗುಂಡಮಿ, ನೋಹಾ ಎಡ್ವರ್ಡ್ ಸೇರಿದಂತೆ ಇತರರು ಇದ್ದರು.