ದುಡ್ಡಿಗಾಗಿ ಆತ್ಮ ವಂಚನೆ ಮಾಡಿಕೊಂಡು ಕೆಲಸ ಮಾಡಬೇಡಿ
ಯಾದಗಿರಿ: ದುಡ್ಡಿಗಾಗಿ ಕೆಲಸ ಮಾಡಬೇಡಿ, ಆತ್ಮ ವಂಚನೆ ಮಾಡಿಕೊಂಡರೆ ಏನು ಪ್ರಯೋಜನ, ಯಾದಗಿರಿ ಜಿಲ್ಲೆಯ ಜನರು ಒಳ್ಳೆಯವರಿದ್ದಾರೆ ಹಾಗಾಗಿ ನಿಮ್ಮಗೆ ಅವರು ಕೊಡುವ ಗೌರವ ಉಳಿಸಿಕೊಳ್ಳಿ, ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಿ ಹಾಕಲು ಏನು ಇಲ್ವಾ ನಿಮ್ಮಮನೆ ಕಾಯ್ಲಿ, ಒಬ್ಬರಿಗೆ ಹಾಕಿರೋದು ಇನ್ನೊಬ್ಬರಿಗೆ ಹಾಕಬೇಡಿ, 7ಸಾವಿರದಲ್ಲಿ ಮೂರೂವರೆ ಶಿಕ್ಷಕರಿಲ್ಲ ಎಂದರೆ ಹೇಗೆ, ಇದನ್ನು ಕೇಳಿದ್ರೆ ಹೊಟ್ಟೆ ಕಿಚ್ಚು ಅಂತ ಅವರಿಗೆ ಹೇಳಿ ನೀವೇ ಅವರಿಗೆ ಸ್ಟೇಟ್ಮೆಂಟ್ ಕೊಡ್ತೀರಿ… ಹೀಗೇ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಅವರು ಜಿಲ್ಲೆಯ ಪ್ರಮುಖ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದರು.
ಜಿ.ಪಂ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಇಲಾಖೆಗಳ ಕಾರ್ಯವೈಖರಿ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಎಲ್ಲಾ ಇಲಾಖೆಯವರು ಸರಿಯಾಗಿ ಕೆಲಸ ಮಾಡಿ, ಸಾಮಾನ್ಯರ ಮೇಲೆ ಗದಾಪ್ರಹಾರ ಮಾಡದೆ, ಯಾರ ಒತ್ತಡಕ್ಕೂ ಮಣಿಯದೆ ಕರ್ತವ್ಯ ನಿರ್ವಹಿಸಬೇಕು. ಏಕೆಂದರೆ 500, 600 ರು ಸಂಬಳ ತೊಗೊಳು ಹೆಣ್ಣಮಕ್ಕಳೇ ದುಡಿಯುತ್ತಿರುವಾಗ ಲಕ್ಷಾಂತರ ರು. ಸಂಬಳ ಪಡೆಯುವ ನೀವು ಹೇಗೆ ಕೆಲ್ಸ ಮಾಡಬೇಕ ಎನ್ನುವುದು ತಿಳಿಬೇಕು.
ಆಹಾರ ಇಲಾಖೆ ಮಾನದಂಡದ ಕುರಿತು ಮಾಹಿತಿ ಪಡೆದುಕೊಂಡ ಸಚಿವರು, ಡಿಎಚ್ಒ ಅವರೇ ಮಾತಬೇಡ, ಕೆಲಸ ಮಾಡಿ ಎಂದು ಗದರಿ, ರಕ್ತದೊತ್ತಡ ಪರೀಕ್ಷಾ ಯಂತ್ರ ಸರಿಯಾಗಿ ಇಲ್ಲದಿರುವುದಕ್ಕೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಸಹ ನಡೆಯಿತು.ಇಷ್ಟಕ್ಕೆ ಸುಮ್ಮನೆಯಾಗದ ಸಚಿವರು, ನಿಮ್ಮ ಮನೆ ಕಾಯಲಿ ಒಬ್ಬರಿಗೆ ಹಾಕಿರೋದು ಇನ್ನೊಬ್ಬರಿಗೆ ಹಾಕಬೇಡ್ರಿ ಎಂದರು.ಇದೇ ವೇಳೆ ಸಹಾಯಕ ಆಯುಕ್ತರಿಗೆ ನೀವು ಎಲ್ಲಾ ಕಡೆ ಸುತ್ತಾಡಿ ಎಂದು ಸೂಚಿಸಿದರು.
ನಗರದ ರಸ್ತೆಗಳು ಗುಂಡಿಮಯವಾಗಿದ್ದಕ್ಕೆ ಕೆಂಡಮಂಡಲರಾಗಿ , ಲೋಕಪಯೋಗಿ ಇಲಾಖೆ ಅಧಿಕಾರಿಗಳಿಗೆ ಕೊನೆಯ ಪಕ್ಷ ಗುಂಡಿ ಮುಚ್ಚಿ ಹಾಕಲು ಸಹ ಏನು ಇಲ್ವಾ ಎಂದು ಖಾರವಾಗಿ ಪ್ರಶ್ನಿಸಿದರು.ಜೆಜೆಎಂ ಕಾಮಗಾರಿ ಕುರಿತು ಪ್ರತಿ ತಾಲೂಕಿನ 2 ಹಳ್ಳಿಗಾದರೂ ಪೊಲೀಸ್ ಇಲಾಖೆ ಅಧಿಕಾರಿಗಳು ಭೇಟಿ ನೀಡುವಂತೆ ಎಸ್ಪಿ ಅವರಿಗೆ ಸಲಹೆ ನೀಡಿದರು.
ಯಾದಗಿರಿ ಜಿಲ್ಲೆ, ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಅತ್ಯಂತ ಹಿಂದೆ ಇದ್ದು, ಫಲಿತಾಂಶ ಹೆಚ್ಚಳಕ್ಕೆ ಸುಧಾರಣಾ ಕ್ರಮಗಳನ್ನು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು. ಜನರ ಜೀವನಮಟ್ಟ ಸುಧಾರಣೆಯಲ್ಲಿ ಅವಶ್ಯಕ ಗಮನ ನೀಡುವಂತೆಯೂ ಅವರು ಸಲಹೆ ನೀಡಿದರು.
ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ ರೀತಿಯಲ್ಲಿ ಸೂಕ್ಷ್ಮವಾಗಿ ಇರುವುದರಿಂದ ಇದರ ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿಯ ಜನರ ಬೇಡಿಕೆಗಳಿಗೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಕೆಲವು ನಿಂತು ಹೋಗಿರುವಂತಹ ಎಕ್ಸ್ ಪ್ರೆಸ್ ರೈಲುಗಳನ್ನು ನಿಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಭೆಗೆ ತಿಳಿಸಿದರು.
ಇದೇ ವೇಳೆ ಯಾದಗಿರಿ ರೈಲ್ವೆ ಸ್ಟೇಷನ್ ದಲ್ಲಿ ಅಮ್ರಿತ್ ಭಾರತ ಸ್ಟೇಷನ್ ಕಾಮಗಾರಿ ಪರಿಶೀಲಿಸುವರು.ಅದರಂತೆ ಯಾದಗಿರಿ-ವಾಡಿ-ವಿಕಾರಾಬಾದ್- ಸಿಕಂದರಾಬಾದ್ ರೈಲು ಸೆಕ್ಷನ್ ವಿಂಡೋ ಟ್ರೆಲಿಂಗ್ ಪರಿಶೀಲಿಸಿದರು.