For the best experience, open
https://m.samyuktakarnataka.in
on your mobile browser.

ದುಬೈನಲ್ಲಿ ಅಪಘಾತ, ನಾಲ್ವರ ಮೃತದೇಹ ಭಾರತಕ್ಕೆ

10:18 PM Sep 12, 2024 IST | Samyukta Karnataka
ದುಬೈನಲ್ಲಿ ಅಪಘಾತ  ನಾಲ್ವರ ಮೃತದೇಹ ಭಾರತಕ್ಕೆ

ಗೋಕಾಕ: ವಿಸಿಟಿಂಗ್ ವಿಸಾದ ಮೇಲೆ ದುಬೈಗೆ ತೆರಳಿದ್ದ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ತಾಯಿ, ಮಗ ಹಾಗೂ ಮಗಳು-ಅಳಿಯ ಸೇರಿ ನಾಲ್ವರ ಮೃತದೇಹ ಭಾರತಕ್ಕೆ ಆಗಮಿಸಿದ್ದು ಸೆ. ೧೩ರಂದು ಗೋಕಾಕ ನಗರಕ್ಕೆ ಆಗಮಿಸಲಿದೆ.
ಹೈಮಾಕ ಪ್ರದೇಶದ ರಸ್ತೆ ಅಪಘಾತದಲ್ಲಿ ಕಳೆದ ಆಗಸ್ಟ್ ತಿಂಗಳ ೨೬ರಂದು ನಾಲ್ವರು ಮೃತಪಟ್ಟಿದ್ದರು. ಮೃತ ದೇಹ ಭಾರತೀಯ ರಾಯಭಾರ ಕಚೇರಿಗೆ ಸಂಬಂಧಿಸಿದ ಕ್ರಮಗಳು ಮುಗಿಸಿ ಭಾರತ ದೇಶಕ್ಕೆ ಆಗಮಿಸಿದೆ.
ಮೃತ ಪೂಜಾ ಆದಿಶೇಷ ಉಪ್ಪಾರ(೨೧), ಆದಿಶೇಷ ಬಸವರಾಜ ಉಪ್ಪಾರ(೩) ಅವರುಗಳ ಪಾರ್ಥಿವ ಶರೀರ ರಾಯಚೂರಿನ ದೇವದುರ್ಗ ತಲುಪಿದ್ದು ಬುಧವರಾದಂದು ಅಂತ್ಯಕ್ರಿಯೆ ಜರುಗಿದೆ. ಮೃತ ಗೋಕಾಕ ನಿವಾಸಿಗಳಾದ ವಿಜಯಾ ಮಾಯಪ್ಪ ತಹಶೀಲ್ದಾರ್(೫೨), ಪವನಕುಮಾರ ಮಾಯಪ್ಪ ತಹಶೀಲ್ದಾರ(೨೨) ಅವರ ಮೃತದೇಹ ಹೈದರಾಬಾದ್ ಮಾರ್ಗವಾಗಿ ಸೆ.೧೩ರಂದು ಬೆಳಿಗ್ಗೆ ಗೋಕಾಕ ನಗರಕ್ಕೆ ಆಗಮಿಸಲಿದೆ. ನಂತರ ನಗರದ ಕುಂಬಾರಗಲ್ಲಿಯ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳ ಮೂಲಕ ಅಂತ್ಯಸಂಸ್ಕಾರ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.
ಆದಿಶೇಷ ಹಾಗೂ ಪೂಜಾ ದಂಪತಿ ದುಬೈನ ಸಲಾಲಾನಲ್ಲಿ ನೆಲೆಸಿದ್ದು, ಸಾಲಾಲಾನಲ್ಲಿ ನೆಲೆಸಿದ್ದ ಗರ್ಭಿಣಿ ಮಗಳನ್ನು ಸೀಮಂತ ಕಾರ್ಯಕ್ಕೆ ಕರೆತರಲು ದುಬೈಗೆ ತಾಯಿ ಮಗ ವಿಸಿಟಿಂಗ್ ವಿಸಾದ ಮೇಲೆ ದುಬೈಗೆ ತೆರಳಿದ್ದರು. ಆ.೨೬ರ ರಾತ್ರಿ ೧೦ಗಂಟೆಗೆ ಮೃತರು ಕಾರ್ ಮೂಲಕ ಸಾಲಾಲಾದಿಂದ ಮಸ್ಕತ್‌ಗೆ ತೆರಳುತ್ತಿದ್ದ ಸಮಯದಲ್ಲಿ ಅಪಘಾತ ಸಂಭವಿಸಿದೆ. ಮೃತರ ಶರೀರವನ್ನು ಹೈಮಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಂತರ ಶವಾಗಾರದಲ್ಲಿ ಇರಿಸಲಾಗಿತ್ತು. ಮೃತರ ಶರೀರದ ಡಿಎನ್‌ಎ ಟೆಸ್ಟ್ ಸೇರಿ ಭಾರತೀಯ ರಾಯಭಾರ ಕಚೇರಿಗೆ ಸಂಬಂಧಿಸಿದ ಕ್ರಮಗಳು ವಿಳಂಬವಾದ ಹಿನ್ನಲೆಯಲ್ಲಿ ಅಫಘಾತ ಸಂಭವಿಸಿದ ೧೭ದಿನಗಳ ನಂತರ ಮೃತ ದೇಹ ಭಾರತಕ್ಕೆ ಆಗಮಿಸಿದೆ.