For the best experience, open
https://m.samyuktakarnataka.in
on your mobile browser.

ದುಸ್ಸಾಹಸವೋ, ಸಾಹಸವೋ ಮುಂದೆ ತಿಳಿಯಲಿದೆ

05:54 PM Apr 15, 2024 IST | Samyukta Karnataka
ದುಸ್ಸಾಹಸವೋ  ಸಾಹಸವೋ ಮುಂದೆ ತಿಳಿಯಲಿದೆ

ಹುಬ್ಬಳ್ಳಿ: ನಮ್ಮದು ದುಸ್ಸಾಹಸವೋ, ಸಾಹಸವೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದು ಫಕೀರ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆಯೋಜಿಸಿದ್ದ ಬೆಂಬಲಾರ್ಥ ಸಭೆಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಸ್ಫರ್ಧಿಸುವ ದುಸ್ಸಾಹಸಕ್ಕೆ ಕೈ ಹಾಕಬೇಡಿ ಎಂಬ ಬಿಎಸ್‌ವೈ ಹೇಳಿಕೆಗೆ ತಿರುಗೇಟು ನೀಡಿದ ಶ್ರೀಗಳು, ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವಾಗ ನಾವು ಯಾರ ಮಾತನ್ನೂ ಕೇಳುವುದಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಯಾರೊಟ್ಟಿಗೂ, ಯಾವ ಪಕ್ಷದ ಮುಖಂಡರೊಂದಿಗೂ ಚರ್ಚೆ ಮಾಡುವುದಿಲ್ಲ. ನಮ್ಮ ಭಕ್ತರ ಮತ್ತು ಮತದಾರರ ಜೊತೆಗೆ ಮಾತ್ರ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.
ಸೋಲಿನ ಭಯದಿಂದ ಪ್ರಹ್ಲಾದ ಜೋಶಿ ಅವರು ಅನೇಕ ಸಮುದಾಯಗಳ ಮುಖಂಡರ ಜೊತೆ ಸಭೆ, ಸಂಘಟನೆ ಮಾಡುತ್ತಿದ್ದಾರೆ. ಮನೆ, ಮಠಗಳಿಗೆ ಅಲೆದಾಡುತ್ತಿದ್ದಾರೆ. ಈ ಕೆಲಸ ಮೊದಲೇ ಮಾಡಿದ್ದರೆ ನಾವೇಕೆ ರಾಜಕಾರಣಕ್ಕೆ ಬರುತ್ತಿದ್ದೆವು. ಪ್ರಹ್ಲಾದ ಜೋಶಿ ಅವರ ಭಕ್ತರು, ಮಠದ ಭಕ್ತರು ಎಂದು ಹೇಳಿಕೊಂಡು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನನ್ನ ಪರವಾಗಿ ಜನರೇ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಕೆಲವರು ನಮಗೆ ಭಯವನ್ನುಂಟು ಮಾಡಿದ್ದಾರೆ. ಹೀಗಾಗಿ, ಬಹಿರಂಗವಾಗಿ ನಿಮ್ಮನ್ನು ಬೆಂಬಲಿಸಲು ಆಗುತ್ತಿಲ್ಲ. ಆದರೆ, ಒಳ ಒಳಗೆ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ನಮ್ಮ ಭಕ್ತರು ಹೇಳುತ್ತಿದ್ದಾರೆ. ರಾಜಕಾರಣಿಯಾದವ ಜನರ ಮನವೊಲಿಸುವ ಪ್ರಯತ್ನ ಮಾಡಬೇಕೇ ಹೊರತು ಭಯ ಪಡಿಸಬಾರದು ಎಂದು ಹೇಳಿದರು.
ಸ್ವಾಭಿಮಾನದ ಚುನಾವಣೆಗಾಗಿ ಏ. ೧೮ರಂದು ನಾಮಪತ್ರ ಸಲ್ಲಿಸಲಿದ್ದೇನೆ. ಇಂತಿಷ್ಟೇ ಜನ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಸ್ವಾಭಿಮಾನದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಭಾಗವಹಿಸುವ ಸಾಧ್ಯತೆ ಇದೆ ಎಂದರು.