For the best experience, open
https://m.samyuktakarnataka.in
on your mobile browser.

ದೂಧಸಾಗರ ವೀಕ್ಷಣೆಗೆ ನಿರ್ಬಂಧ ತೆರವು

07:56 PM Aug 14, 2024 IST | Samyukta Karnataka
ದೂಧಸಾಗರ ವೀಕ್ಷಣೆಗೆ ನಿರ್ಬಂಧ ತೆರವು

ಪಣಜಿ: ಸದ್ಯ ಮಳೆ ಇಳಿಮುಖವಾಗಿದ್ದು ಜಲಪಾತಗಳಿಗೆ ತೆರಳುವ ನಿರ್ಬಂಧವನ್ನು ಗೋವಾ ರಾಜ್ಯ ಅರಣ್ಯ ಇಲಾಖೆ ಹಿಂಪಡೆದಿದೆ. ಇದರಿಂದಾಗಿ ಗೋವಾದ ಸುಪ್ರಸಿದ್ಧ ಜಲಪಾತ ವೀಕ್ಷಣೆಗೆ ತೆರಳಲು ಪ್ರವಾಸಿಗರಿಗೆ ಅವಕಾಶ ಲಭಿಸಿದಂತಾಗಿದೆ.
ಒಂದು ತಿಂಗಳ ಹಿಂದೆ ಗೋವಾದ ಪಾಳಿ-ಸತ್ತರಿಯಲ್ಲಿ ಜಲಪಾತಕ್ಕೆ ಹೋದ ಪ್ರವಾಸಿಗರು ಸಿಕ್ಕಿಬಿದ್ದರು. ಅವರು ನದಿ ದಾಟಲು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಬೇಕಾಯಿತು. ಅದೇ ರೀತಿ ಜಲಪಾತದಲ್ಲಿ ಉಕ್ಕಿ ಹರಿಯುವ ನೀರು ಪ್ರವಾಸಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಹೀಗಾಗಿ ಎಲ್ಲ ಜಲಪಾತಗಳಿಗೂ ಅರಣ್ಯ ಇಲಾಖೆ ನಿಷೇಧ ಹೇರಿತ್ತು. ಹೀಗಾಗಿ ಜಲಪಾತಕ್ಕೆ ಯಾರೂ ಹೋಗದಂತೆ ಸೂಚನೆ ನೀಡಲಾಗಿತ್ತು.. ಜಲಪಾತಕ್ಕೆ ಹೋದರೆ ಕ್ರಮ ಕೈಗೊಳ್ಳುವುದಾಗಿ ಅರಣ್ಯ ಇಲಾಖೆಯಿಂದ ಎಚ್ಚರಿಕೆ ನೀಡಿತ್ತು.
ಆದರೆ, ಮಳೆ ನಿಂತಿದ್ದರಿಂದ ಜಲಪಾತದ ನೀರಿನ ತೀವ್ರತೆ ಕಡಿಮೆಯಾಗಿದೆ. ಇದರಿಂದಾಗಿ ಅರಣ್ಯ ಇಲಾಖೆ ವಿಧಿಸಿದ್ದ ನಿಷೇಧಾಜ್ಞೆ ತೆರವಾಗಿದೆ. ಆದರೆ, ಜಲಪಾತಕ್ಕೆ ತೆರಳಲು ಪ್ರವಾಸಿಗರು ಅಗತ್ಯ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಜಲಪಾತದ ಸ್ಥಳದಲ್ಲಿ ಯಾವುದೇ ಮಾಲಿನ್ಯ ಮಾಡಬಾರದು ಎಂದು ಸೂಚಿಸಲಾಗಿದೆ. ಏಕೆಂದರೆ ಹೆಚ್ಚಿನ ಜಲಪಾತಗಳು ಅಭಯಾರಣ್ಯ ಪ್ರದೇಶದಲ್ಲಿವೆ. ಅಭಯಾರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದ್ದು, ತ್ಯಾಜ್ಯ ಎಸೆಯದಂತೆ ಎಚ್ಚರ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ. ಈ ಮೂಲಕ ಗೋವಾದ ಜಗತ್ಪ್ರಸಿದ್ಧ ದೂಧಸಾಗರ ಜಲಪಾತ ವೀಕ್ಷಣೆಗೆ ಕೂಡ ಪ್ರವಾಸಿರಿಗೆ ಅನುಮತಿ ಲಭಿಸಿದಂತಾಗಿದೆ. ಆದರೆ ಜಲಪಾತ ವೀಕ್ಷಣೆಗೆ ತೆರಳುವ ಪ್ರವಾಸಿಗರು ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ.

Tags :