ದೆಹಲಿಯಲ್ಲಿ ಇಂಡಿಯಾ ರ‍್ಯಾಲಿ
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಬಂಧನ ವಿರೋಧಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾನುವಾರ ಜರುಗಿದ ಬೃಹತ್ ಪ್ರಜಾತಂತ್ರ ಉಳಿಸಿ ರ‍್ಯಾಲಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ಇಂಡಿಯಾ ಮೈತಿಕೂಟದ ಐದು ಬೇಡಿಕೆಗಳನ್ನು ಈಡೇರಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.
ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಎಲ್ಲಾ ಪಕ್ಷಗಳಿಗೂ ಸಮಾನವಾದ ಅವಕಾಶ ಕಲ್ಪಿಸಬೇಕು, ವಿರೋಧ ಪಕ್ಷಗಳ ವಿರುದ್ಧ ಆದಾಯ ತೆರಿಗೆ, ಇಡಿ ಹಾಗೂ ಸಿಬಿಐಯ ಬಲವಂತದ ಕ್ರಮಗಳನ್ನು ನಿಲ್ಲಿಸಬೇಕು. ವಿರೋಧ ಪಕ್ಷಗಳನ್ನು ಆರ್ಥಿಕವಾಗಿ ಹತ್ತಿಕ್ಕುವ ಕ್ರಮ ನಿಲ್ಲಿಸಬೇಕು. ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ ಸುಲಿಗೆ ಮಾಡಿರುವುದರ ಕುರಿತು ಸುಪ್ರೀಂಕೋರ್ಟ್ ಮೇಲ್ವಿಚಾರಣೆಯ ವಿಶೇಷ ತನಿಖಾ ತಂಡ ರಚಿಸಬೇಕು. ಕೇಜ್ರಿವಾಲ್ ಹಾಗೂ ಸೊರೆನ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂಬುದು ಪ್ರಿಯಾಂಕಾರವರ ಐದು ಬೇಡಿಕೆಗಳು.
ಜನರ ಧ್ವನಿ ದಮನ ಅಸಾಧ್ಯ: ಪೊಲೀಸ್, ಸಿಬಿಐ ಮತ್ತು ಇಡಿ ಬೆದರಿಕೆಯಿಂದ ದೇಶವನ್ನು ನಡೆಸಬಹುದು ಎಂದು ಬಿಜೆಪಿಯವರು ಭಾವಿಸಿದ್ದಾರೆ. ಮಾಧ್ಯಮಗಳನ್ನು ಖರೀದಿಸಬಹುದು ಮತ್ತು ಹತ್ತಿಕ್ಕಬಹುದು. ಆದರೆ ದೇಶದ ಜನರ ಧ್ವನಿಯನ್ನು ಹತ್ತಿಕ್ಕಲು ಈ ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ಬಿಜೆಪಿ ಮ್ಯಾಚ್ ಫಿಕ್ಸಿಂಗ್ ಮೂಲಕ ಚುನಾವಣೆಯಲ್ಲಿ ಗೆದ್ದು ಸಂವಿಧಾನವನ್ನು ಬದಲಾಯಿಸಿದರೆ ದೇಶ ಉದ್ಧಾರವಾಗುವುದಿಲ್ಲ ಮತ್ತು ಎಲ್ಲಾ ಕಡೆ ಬೆಂಕಿ ಹತ್ತಿಕೊಳ್ಳಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೂಷಿಸಿದರು.
ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನಿಮಗೆ ಪ್ರಜಾಪ್ರಭುತ್ವ ಬೇಕೋ ಅಥವಾ ಸರ್ವಾಧಿಕಾರ ಬೇಕೋ ಎಂಬುದನ್ನು ನೀವೇ ನಿರ್ಧರಿಸಬೇಕು ಎಂದು ಜನರಿಗೆ ತಾಕೀತು ಮಾಡಿದರಲ್ಲದೆ, ಸರ್ವಾಧಿಕಾರ ಬೆಂಬಲಿಸುವವರನ್ನು ದೇಶದಿಂದಲೇ ಹೊರಹಾಕಬೇಕು ಎಂದೂ ಆಕ್ರೋಶ ವ್ಯಕ್ತಪಡಿಸಿದರು.