ದೆಹಲಿ ಆಸ್ಪತ್ರೆಯಲ್ಲಿ ಬೆಂಕಿ: ೭ ಶಿಶುಗಳ ಸಾವು
ನವದೆಹಲಿ: ಪೂರ್ವ ದೆಹಲಿಯ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿದುರಂತದಲ್ಲಿ ಏಳು ನವಜಾತ ಶಿಶುಗಳು ಮೃತಪಟ್ಟಿವೆ. ಇನ್ನುಳಿದ ಆರು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಆಸ್ಪತ್ರೆಯಲ್ಲಿದ್ದ ಸಿಲಿಂಡರ್ ಸ್ಫೋಟದಿಂದ ಈ ದುರಂತ ಸಂಭವಿಸಿದೆ. ಘಟನಾ ನಂತರ ತಲೆಮರೆಸಿಕೊಂಡಿದ್ದ ಆಸ್ಪತ್ರೆ ಮಾಲೀಕ ನವೀನ್ ಚಿಂಚು ಎಂಬವನನ್ನು ಬಂಧಿಸಲಾಗಿದೆ.
ತಡರಾತ್ರಿ ೧೧.೩೦ರ ವೇಳೆ ಆಸ್ಪತ್ರೆಯಲ್ಲಿ ಸ್ಫೋಟದ ಸದ್ದು ಕೇಳಿದ ನಂತರ ಬೆಂಕಿ ವ್ಯಾಪಿಸಿದೆ. ಹೀಗಾಗಿ ಮುಂಬಾಗಿಲಿನಲ್ಲಿ ಬೆಂಕಿ ಹರಡಿರುವುದರಿಂದ ಸ್ಥಳೀಯರು ಹಿಂಬಾಗಿಲಿನಿಂದ ಏಣಿ ಮೂಲಕ ಮೊದಲನೇ ಮಹಡಿ ಏರಿ ಆರು ಮಕ್ಕಳನ್ನು ರಕ್ಷಿಸಿದ್ದಾರೆ.
೨ ಲಕ್ಷ ರೂ ಪರಿಹಾರ: ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ಮೃತಮಕ್ಕಳ ಕುಟುಂಬಗಳಿಗೆ ತಲಾ ೨ ಲಕ್ಷ ರೂ.ಗಳ ಪರಿಹಾರ ಘೋಷಿಸಿದ್ದಾರೆ.
ಮಾನವ ನಿರ್ಮಿತ ದುರಂತ: ಹೈಕೋರ್ಟ್ ತರಾಟೆ: ಗುಜರಾತಿನ ರಾಜ್ ಕೋಟ್‌ನಲ್ಲಿನ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಸಂಭವಿಸಿದ ಅಗ್ನಿದುರಂತದಲ್ಲಿ ಸತ್ತವರ ಸಂಖ್ಯೆ ೩೩ಕ್ಕೇರಿದೆ. ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮಾನವ ನಿರ್ಮಿತ ದುರಂತವೆಂದು ದೂಷಿಸಿದೆ. ಮೃತದೇಹಗಳು ಗುರುತಿಸಲಾಗದಷ್ಟು ಕರಕಲಾಗಿದ್ದು ಸಂಬಂಧಿಕರ ಡಿಎನ್‌ಎ ಮೂಲಕ ಗುರುತು ಪತ್ತೆ ಕಾರ್ಯ ನಡೆದಿದೆ.
ದುರಂತ ಸ್ಥಳದಲ್ಲಿ ಗೇಮ್ ಝೋನ್ ರಚನೆ ಮಾಡಲು ಲೋಹದ ಹಾಳೆಯಲ್ಲಿ ಕಟ್ಟಡ ನಿರ್ಮಿಸಲಾಗುತ್ತಿತ್ತು. ಇಲ್ಲಿ ವೆಲ್ಡಿಂಗ್ ಮಾಡುವಾಗ ಬೆಂಕಿಯ ಕಿಡಿ ಹಾರಿರಬಹುದೆಂದು ಶಂಕಿಸಲಾಗಿದೆ.