ದೆಹಲಿ ಗಣರಾಜ್ಯೋತ್ಸವ ಸ್ತಬ್ಧಚಿತ್ರದಲ್ಲಿ ಕರ್ನಾಟಕ ಸಾಧನೆ
ಕರ್ನಾಟಕವು 15 ಬಾರಿ ಭಾಗವಹಿಸಿ, ಹಲವು ಪ್ರಶಸ್ತಿಗಳ ಸರಮಾಲೆ ಮುಡಿಗೇರಿಸಿದೆ
ನವದೆಹಲಿ: ತೀವ್ರ ಪೈಪೋಟಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವುದು ಪ್ರತಿ ರಾಜ್ಯಕ್ಕೂ ಹೆಮ್ಮೆಯ ಮತ್ತು ಪ್ರತಿಷ್ಠೆಯ ಸಂಕೇತ. ಹಿಂದೆ ಎಲ್ಲಾ ರಾಜ್ಯಗಳಿಗೂ ಪಥಸಂಚಲನದಲ್ಲಿ ಭಾಗವಹಿಸಲು ಅವಕಾಶವಿತ್ತು. ಭದ್ರತೆ ಮತ್ತು ಗಣರಾಜ್ಯೋತ್ಸವದ ಅವಧಿಯಲ್ಲಿ ಮಾಡಿದ ಇಳಿಕೆ, ಪ್ರಾತಿನಿಧ್ಯತೆಯಿಂದಾಗಿ ಸ್ತಬ್ಧಚಿತ್ರಕ್ಕಾಗಿ ಪ್ರತಿನಿಧಿಸುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನು ರಕ್ಷಣಾ ಸಚಿವಾಲಯ 15ಕ್ಕೆ ಇಳಿಸಿದೆ. ಇದು ತೀವ್ರ ಪೈಪೋಟಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಗುಣಮಟ್ಟಕ್ಕೆ, ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸ್ತಬ್ಧಚಿತ್ರಕ್ಕಾಗಿ ಪ್ರಶಸ್ತಿ ಪಡೆದುಕೊಳ್ಳುವುದಕ್ಕಿಂತಲೂ ಪಥಸಂಚಲನದಲ್ಲಿ ಭಾಗವಹಿಸುವುದೇ ಪ್ರತಿಷ್ಠೆಯ ಸಂಕೇತವಾಗಿದೆ. ಇಂತಹ ಕಠಿಣ ಪರೀಕ್ಷೆಯಲ್ಲಿ ಕರ್ನಾಟಕವು 15 ಬಾರಿ ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.
ಪ್ರಶಸ್ತಿಗಳ ಸರಮಾಲೆ: 2005ರಲ್ಲಿ ವೈರಾಗ್ಯ ಮೂರ್ತಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸ್ತಬ್ಧಚಿತ್ರಕ್ಕೆ ಪ್ರಥಮ ಪ್ರಶಸ್ತಿ ದೊರೆತಿತ್ತು, 2008ರಲ್ಲಿ ಹೊಯ್ಸಳ ಕಲೆಯ ಸ್ತಬ್ಧಚಿತ್ರವು ದ್ವಿತೀಯ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ನಿರೂಪಣೆ ಮತ್ತು ಅತ್ಯುತ್ತಮ ಫ್ಯಾಬ್ರಿಕೇಷನ್‍ಗಾಗಿ ಪ್ರಶಸ್ತಿ ಲಭಿಸಿತ್ತು. ಒಂದೇ ಸ್ತಬ್ಧಚಿತ್ರಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಂತಹ ಅಪರೂಪದ ಸಾಧನೆಯನ್ನು ನಮ್ಮ ರಾಜ್ಯವು ಮಾಡಿದೆ ಎನ್ನುವುದು ಹೆಮ್ಮೆಯ ಸಂಗತಿ. 2011ರಲ್ಲಿ ಬೀದರ್‌ನ ಪಾರಂಪರಿಕ ಕಲೆಯಾದ ‘ಬಿದರಿ’ ಸ್ತಬ್ಧಚಿತ್ರಕ್ಕೆ ದ್ವಿತೀಯ ಪ್ರಶಸ್ತಿ, 2012ರಲ್ಲಿ ದಕ್ಷಿಣ ಕನ್ನಡ ಭೂತಾರಾಧನೆಗೆ ತೃತೀಯ ಪ್ರಶಸ್ತಿ, 2015ರಲ್ಲಿ ರಾಜ್ಯವು ಚನ್ನಪಟ್ಟದ ಗೊಂಬೆಗಳಿಗೆ ತೃತೀಯ ಪ್ರಶಸ್ತಿ, ಮತ್ತು 2022ರ ಇಲಾಖೆಯು ಪ್ರದರ್ಶಿಸಿದ್ದ ʼಸಾಂಪ್ರದಾಯಿಕ ಕಸೂತಿ ತೊಟ್ಟಿಲುʼಗೆ ದ್ವಿತೀಯ ಪ್ರಶಸ್ತಿ ಸಂದಿತ್ತು.