For the best experience, open
https://m.samyuktakarnataka.in
on your mobile browser.

ದೆಹಲಿ ರೈತ ಹೋರಾಟ ಪಕ್ಷ, ಸಂಘಟನೆ ಪ್ರೇರಿತ

05:56 PM Feb 15, 2024 IST | Samyukta Karnataka
ದೆಹಲಿ ರೈತ ಹೋರಾಟ ಪಕ್ಷ  ಸಂಘಟನೆ ಪ್ರೇರಿತ

ಕುಷ್ಟಗಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೇರೆ ಬೇರೆ ಸಂಘಟನೆ ಹಾಗೂ ಪಕ್ಷ ಪ್ರೇರಿತವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ದೂರಿದರು.
ಇಲ್ಲಿನ ಅಮರನಾಥೇಶ್ವರ ನಾಗು ಸಾಧು ಮಠದ ಮಹಾಂತಸಹ ದೇವಾನಂದ ಗಿರಿಜಿ ಅವರಿಂದ ಸನ್ಮಾನ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಬೇಡಿಕೆಗಳನ್ನು ಆಲಿಸಲು ಸರ್ಕಾರ ಮಾತುಕತೆಗೆ ಸಿದ್ಧವಾಗಿದೆ. ಕೇಂದ್ರ ಸರ್ಕಾರಕ್ಕೆ ರೈತರನ್ನು ಕಡೆಗಣಿಸಬೇಕು ಎನ್ನುವ ವಿಚಾರ ಇಲ್ಲ ಎಂದರು.
ಮತ್ತೊಂದು ಬಾರಿ ಸೇವೆಗೆ ಸಿದ್ಧ: ನಾನು ಈಗಾಗಲೇ ಎರಡು ಬಾರಿ ಸಂಸದನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಜೊತೆಗೆ ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ತಾಲೂಕುಗಳ ಮತದಾರರನ್ನು ಹತ್ತಿರದಿಂದ ಗಮನಿಸಿದ್ದೇನೆ. ಮತದಾರರ ಆಸೆಯಂತೆ ಮತ್ತೊಮ್ಮೆ ಲೋಕಸಭಾ ಸದಸ್ಯನಾಗಿ ಸೇವೆ ಮಾಡಬೇಕೆಂದುಕೊಂಡಿದ್ದೇನೆ ಎಂದು ತಿಳಿಸಿದರು.
ಈಗಾಗಲೇ ಲೋಕಸಭಾ ಟಿಕೆಟ್ ಕೊಡುವಂತೆ ಕೇಳಿದ್ದೇನೆ. ಟಿಕೆಟ್ ಸಿಗುವ ಭರವಸೆ ಇದೆ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ. ಈಗಾಗಲೇ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ವತಿಯಿಂದ ಡಾ.ಬಸವರಾಜ, ಜನಾರ್ಧನರೆಡ್ಡಿ ಅವರ ಪತ್ನಿ, ಸಿ.ವಿ. ಚಂದ್ರಶೇಖರ, ಪ್ರಭಾಕರ ಚಿಣಿ ಟಿಕೆಟ್ ನೀಡುವಂತೆ ಕೇಳಿಕೊಂಡಿದ್ದಾರೆ. ಟಿಕೆಟ್ ಕೇಳುವದರಲ್ಲಿ ತಪ್ಪೆನ್ನಿಲ್ಲ ಎಂದು ಹೇಳಿದರು.
ಮುಂದಿನ ತಿಂಗಳು ಲೋಕಸಭೆ ಚುನಾವಣೆಯ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಗದಗ-ವಾಡಿ ರೈಲು ಮಾರ್ಗಕ್ಕೆ ಸಂಬಂಧಪಟ್ಟಂತೆ ಇದೇ ತಿಂಗಳು ಕೊನೆಯ ವಾರದಲ್ಲಿ ಕುಷ್ಟಗಿಗೆ ರೈಲು ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಆದರೆ, ಈಗಾಗಲೇ ಲಿಂಗನಬಂಡಿವರೆಗೂ ಪ್ರಾಯೋಗಿಕವಾಗಿ ರೈಲು ಸಂಚರಿಸಿದೆ. ಇನ್ನೇನು ಕುಷ್ಟಗಿಗೆ ರೈಲು ಬರುವುದೊಂದೇ ಬಾಕಿ ಎಂದರು.
ಲಿಂಗನಬಂಡಿಯಿಂದ ರೈಲುಗಳನ್ನು ಓಡಿಸಿದರೆ ಯಾವುದೇ ರೀತಿ ಆದಾಯ ಬರುವುದಿಲ್ಲ. ರೈಲ್ವೆ ಇಲಾಖೆಯ ಕಾರ್ಯಸೂಚಿಯ ಪ್ರಕಾರ ಯಾವ ಜಾಗದಲ್ಲಿ ಅಂಡರ್ ಫಾಸ್ ಮಾಡಬೇಕೆಂಬುದರ ಬಗ್ಗೆ ಮೊದಲೇ ನಿರ್ಧರಿಸಲಾಗುತ್ತದೆ. ಆದರೆ, ಶಾಖಾಪುರ ಗ್ರಾಮಸ್ಥರು ಯಾವ ಜಾಗ ತೋರಿಸುತ್ತಾರೋ ಅಲ್ಲೇ ಅಂಡರ್ ಫಾಸ್ ಮಾಡಬೇಕು ಎಂದಿದ್ದಾರೆ. ಆದರೆ, ಇದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಿಫಲ: ಈಗಾಗಲೇ ಮಾಜಿ ಸಿ.ಎಂ. ಜಗದೀಶ ಶೆಟ್ಟರ್ ಮರಳಿ ಬಿಜೆಪಿಗೆ ಬಂದಿದ್ದಾರೆ. ಅದೇ ರೀತಿ ಲಕ್ಷ್ಮಣ ಸವದಿ ಅವರು ಮತ್ತೆ ಬಿಜೆಪಿಗೆ ಬಂದರೆ ಸಾಕು ಶಕ್ತಿ ಬಂದಂತಾಗುತ್ತದೆ. ಬೆಳಗಾವಿಯಲ್ಲಿ ಮಹಿಳೆಯನ್ನು ವಸ್ತ್ರ ವಿಚ್ಛೇಧನಗೊಳಿಸಿ ಅವಮಾನಿಸಿದ್ದು, ಹಾವೇರಿ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆಯ ಮೇಲೆ ನಡೆದ ಪ್ರಕರಣವನ್ನು ಗಮನಿಸಿದರೆ ಸಾಕು ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ತಿಳಿಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ್ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.