ದೇಗುಲ ನಿಯಂತ್ರಣ; ಪಾರದರ್ಶಕ ನಿಲುವಿಗೆ ಸಕಾಲ
ದೇವಸ್ಥಾನಗಳನ್ನು, ಧಾರ್ಮಿಕ ಸಂಸ್ಥೆಗಳನ್ನು ಭಕ್ತರಿಗೆ ಬಿಟ್ಟುಕೊಡಿ. ಸರ್ಕಾರದ ಹಸ್ತಕ್ಷೇಪವೇಕೆ? ತಿರುಪತಿ ಲಡ್ಡು ವಿವಾದ ದೇಶಾದ್ಯಂತ ಭುಗಿಲೆದ್ದ ಈ ಸಂದರ್ಭದಲ್ಲಿ ಈ ಕೋರಿಕೆ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಿಂದ ಬಂದಿದೆ.
ತಿರುಪತಿ ತಿರುಮಲ ದೇವಸ್ಥಾನವನ್ನು ಸರ್ಕಾರದ ನೇರ ಸುಪರ್ದಿಯಲ್ಲಿ ಪ್ರತ್ಯೇಕ ಮಂಡಳಿ ರಚಿಸಿ ನಿರ್ವಹಿಸಲಾಗುತ್ತಿದೆ. ದೇಶದ ಅತೀ ದೊಡ್ಡ ಮತ್ತು ಜಗತ್ತಿನ ಧಾರ್ಮಿಕ ಸಂಸ್ಥೆಗಳಲ್ಲಿ ಹೆಚ್ಚಿನ ಭಕ್ತರು ಸೇರುವ ಪ್ರದೇಶಗಳಲ್ಲಿ ತಿರುಪತಿ ಒಂದು. ಅಲ್ಲಿನ ಪ್ರಸಾದವಾದ ಲಡ್ಡು ಭಕ್ತರ ಪಾಲಿನ ಅಮೃತ, ದೇವ ಸಮಾನ. ದೇವರೇ ಕೈ ಎತ್ತಿ ಕೊಟ್ಟ ಪ್ರಸಾದ ಎನ್ನುವ ನಂಬಿಕೆ, ವಿಶ್ವಾಸ.
ತಿರುಪತಿ ಲಡ್ಡು ಪರೀಕ್ಷಿಸಿದಾಗ ಪ್ರಾಣಿಜನ್ಯ ಕೊಬ್ಬು, ಪಾಮ್ ಎಣ್ಣೆ, ಇತ್ಯಾದಿಗಳು ಕಲಬೆರಕೆಯಾಗಿವೆ ಎನ್ನುವ ಅಂಶವನ್ನು ಪ್ರಯೋಗಾಲಯದ ಪ್ರತಿಯೊಂದಿಗೆ ಅಲ್ಲಿನ ಮುಖ್ಯಮಂತ್ರಿಯೇ ಬಹಿರಂಗಪಡಿಸಿದರು. ಲಡ್ಡು ಪ್ರಸಾದ ತಯಾರಿಕೆಗೆ ಕಳಪೆ ಮಟ್ಟದ ತುಪ್ಪ ಮತ್ತಿತರ ವಸ್ತುಗಳನ್ನು ಖರೀದಿಸಿದ್ದೇ ಇದಕ್ಕೆ ಕಾರಣ. ಅಲ್ಲಿಯೇ ಕಲಬೆರಕೆಯಾಗಿದೆ ಎಂಬುದು ಆರೋಪ.
ತುಪ್ಪ ಪೂರೈಸಿದ ಸಂಸ್ಥೆಯೇನೋ ತಮ್ಮ ಗುಣಮಟ್ಟದಲ್ಲಿ ರಾಜಿ ಇಲ್ಲ ಎಂದು ಹೇಳಿಕೊಂಡಿದೆ. ತುಪ್ಪ ಖರೀದಿಸಿದ ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳೇ ತನಿಖೆಯಾಗಲೀ ಬಿಡಿ, ಇದು ಅಗ್ಗದ ಪ್ರಚಾರಕ್ಕಾಗಿ ಧಾರ್ಮಿಕ ಭಾವನೆ ಕೆರಳಿಸುವ ದುರುದ್ದೇಶ ಎಂದು ಹೇಳಿದ್ದಾರೆ. ವಿಷಯವೀಗ ಎಸ್‌ಐಟಿ ತನಿಖೆ ಜೊತೆಗೆ, ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.
ಸ್ವತಃ ಪ್ರಧಾನಿಯೇ ಧಾರ್ಮಿಕ ನಂಬಿಕೆಗಳ ಮೇಲೆ ಪ್ರಹಾರ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ತಿರುಪತಿಯನ್ನೀಗ ಶುದ್ಧೀಕರಣಗೊಳಿಸಲಾಗುತ್ತಿದೆ. ಲಾಡು ತಯಾರಿಕೆಗೆ ಈಗ ಮತ್ತೆ ನಂದಿನಿ ತುಪ್ಪವನ್ನು ಖರೀದಿಸಲಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸರ್ಕಾರಗಳು ಅಲ್ಲಿನ ದೇವಸ್ಥಾನದಲ್ಲಿ ನೀಡುವ ಪ್ರಸಾದದ ಗುಣಮಟ್ಟದ ಪರೀಕ್ಷೆಗೆ ತೊಡಗಿದ್ದಾರೆ. ಇಷ್ಟಕ್ಕೂ ತಿರುಪತಿ ಲಡ್ಡು ವಿವಾದ ಇಡೀ ದೇಶದ ಭಕ್ತ ಸಮುದಾಯದ ಆಕ್ರೋಶದ ಜೊತೆ ಜೊತೆಗೆ ನಮ್ಮ ಧರ್ಮ, ಧರ್ಮ ಕ್ಷೇತ್ರ, ಧಾರ್ಮಿಕ ವಿಧಿ ವಿಧಾನ, ದೇವಸ್ಥಾನಗಳಲ್ಲಿ ನಿಮಗೇನು ಕೆಲಸ? ಬಿಟ್ಟುಕೊಡಿ ಎಂದು ಈಗ ಹೊಸ ಅಭಿಯಾನವೇ ಶುರುವಾಗಲು ಕಾರಣವಾಗಿದೆ. ದೇಶದ ಲಕ್ಷಾಂತರ ದೇವಾಲಯಗಳನ್ನು ಸ್ಥಳೀಯರಿಗೆ ಬಿಟ್ಟುಕೊಡಿ. ಈಗಾಗಲೇ ಬೇರೆ ಧರ್ಮೀಯರ, ಚರ್ಚು, ಮಸೀದಿ, ಇಗರ್ಜಿ ನಿರ್ವಹಣೆ ಆಯಾ ಧರ್ಮೀಯರಿಂದಲೇ ಆಗುತ್ತಿರುವಾಗ ನಮಗೇಕಿಲ್ಲ ಎನ್ನುವ ಪ್ರಶ್ನೆಯನ್ನು ಮಾಡಲಾಗುತ್ತಿದೆ.
ಹಾಗಂತ, ಈ ಕೂಗು ಇಂದು ನೆನ್ನೆಯದ್ದೇನಲ್ಲ. ಹಲವು ವರ್ಷಗಳಿಂದ ಇದೆ. ಆದರೆ ದೇವಾಲಯಗಳೇನೋ ಆದಾಯ, ಭಕ್ತರ ಮೇಲಿನ ಹಿಡಿತ, ಎಲ್ಲಕ್ಕೂ ಹೆಚ್ಚಾಗಿ ಆಯಾ ಸಮುದಾಯಗಳ ಓಲೈಕೆ, ಮತಬ್ಯಾಂಕ್‌ಗಳಿಗಾಗಿ ಸರ್ಕಾರ ಸುಲಭವಾಗಿ ಬಿಟ್ಟುಕೊಡದು. ಇದರೊಟ್ಟಿಗೆ ಹಲವೆಡೆ ಸಮುದಾಯ ಮತ್ತು ಭಕ್ತರ ನಡುವೆ ಆಡಳಿತ ಚುಕ್ಕಾಣಿ ಹಿಡಿದವರ ಜೊತೆಗೆ ಸಂಘರ್ಷ. ಇನ್ನು ವಂಶಪಾರಂಪರ‍್ಯ, ಸ್ವಂತ ದೇವರು, ಕುಟುಂಬದ ದೇವಸ್ಥಾನ ಇತ್ಯಾದಿ ಅಂಶಗಳು ಬೇರೆ. ಹಾಗೇ ಸಂಪ್ರದಾಯ, ಪೂಜಾ ವಿಧಾನ, ಪದ್ಧತಿಗಳು ವಿಭಿನ್ನ. ಇದರೊಟ್ಟಿಗೆ ಧಾರ್ಮಿಕ ಸಂಸ್ಥೆಗಳು, ಮಠ ಮಂದಿರಗಳು ಬೃಹದಾಕಾರವಾಗಿ ಹುಟ್ಟಿಕೊಂಡಿವೆ.
ತಿರುಪತಿ ಲಡ್ಡು ಹೇಗೋ, ಹಾಗೇ ಬಹುತೇಕ ದೇವಸ್ಥಾನಗಳಲ್ಲಿಯೂ ಪ್ರಸಾದವನ್ನು ನೀಡಲಾಗುತ್ತಿದೆ. ಪ್ರಸಾದ ಅಂದರೆ, ಮಧ್ಯಾಹ್ನ ಊಟ, ರಾತ್ರಿ ಊಟ, ಹಲವೆಡೆ ಮುಂಜಾನೆಯ ತಿಂಡಿ ಇತ್ಯಾದಿ.
ಜನ ಈ ದಾಸೋಹಗಳಿಗೆ ತಮ್ಮ ಉತ್ಪನ್ನಗಳನ್ನು, ದೇಣಿಗೆ, ಕಾಣಿಕೆಗಳನ್ನು ಭಕ್ತಿ ಪೂರ್ವಕವಾಗಿ ಸಲ್ಲಿಸುತ್ತಾರೆ. ಹಾಗಾಗಿಯೇ ಕೆಲವೆಡೆ ದಾಸೋಹದ ಗೋದಾಮುಗಳು, ಉಪ್ಪರಿಗೆ ತುಂಬಿದ್ದರೆ, ಹಲವೆಡೆ ದಾಸೋಹ ನಿರ್ವಹಿಸಲು ಹೆಣಗಾಡುತ್ತಿದ್ದಾರೆ. ಹಾಗಾಗಿಯೇ ಪ್ರಸಾದದಲ್ಲಿ ವಿಭಿನ್ನತೆ, ವಿಶೇಷತೆ, ವ್ಯತ್ಯಾಸಗಳು ಸಾಕಷ್ಟಿವೆ. ತಿರುಪತಿಯ ಲಾಡು ವಿವಾದ ಎದ್ದ ನಂತರ ಎಲ್ಲ ದೇವಸ್ಥಾನಗಳ ಪ್ರಸಾದ ತಪಾಸಣೆಗೆ ಸರ್ಕಾರವೇನೋ ಆದೇಶಿಸಿದೆ. ಆದರೆ ಈ ವಿವಾದ ಮುಗಿದ ನಂತರ ಈ ಪ್ರಕ್ರಿಯೆ ನಿರಂತರವಾಗಿರುತ್ತದೆಯೇ ಎಂದು ಹೇಳುವುದು ಕಷ್ಟ.
ಕರ್ನಾಟಕದಲ್ಲಿ ೩೪೫೬೩ ಹಿಂದೂ ದೇವಾಲಯಗಳಿವೆ. ಇವುಗಳ ಪೈಕಿ ವರ್ಗ ೧ರ ದೇವಸ್ಥಾನಗಳು ೧೫೮ಕ್ಕೂ ಹೆಚ್ಚು. ದೇವಸ್ಥಾನಗಳ ಆಡಳಿತದಲ್ಲಿ ಸರ್ಕಾರ ಮಧ್ಯಪ್ರವೇಶಿಸುತ್ತಿದೆ ಎನ್ನುವ ಆರೋಪ ಪುನಃ ಪುನಃ ಸಾಬೀತಾಗುತ್ತಿದೆ. ನಿಯಂತ್ರಣವೇ ಇಲ್ಲದಿದ್ದರೆ ಹೇಗೆ ಎನ್ನುವ ಪ್ರಶ್ನೆಯೂ ಕಾಡುತ್ತದೆ. ಎಲ್ಲೆಂದರಲ್ಲಿ ದೇವಸ್ಥಾನ, ಜಾತಿ, ಪಂಗಡ, ಒಳಪಂಗಡಗಳಿವೆ. ದೇವಸ್ಥಾನಗಳಲ್ಲಿ ಇವನ್ನು ನಿಯಂತ್ರಿಸುವ ಜೊತೆಗೆ ನಿರ್ವಹಣೆಯ ಸಮಸ್ಯೆ ಬೃಹದಾಕಾರದ್ದು. ದೇಶದ ಪ್ರಮುಖ ದೇವಾಲಯಗಳ ಸ್ಥಿತಿಗತಿ ನೋಡಿದರೆ, ಪ್ರವಾಸಿ ಸೌಲಭ್ಯ ಮತ್ತಿತರ ವ್ಯವಸ್ಥೆಗಳ ಬಗ್ಗೆ ಹೆಣಗಾಡಬೇಕಿದೆ.
ಕೆಲವು ದೇವಸ್ಥಾನಗಳನ್ನು ಸರ್ಕಾರದ ಸುಪರ್ದಿಯಿಂದ ತಪ್ಪಿಸಿ ಧಾರ್ಮಿಕ ಸಂಸ್ಥೆಗಳಿಗೆ ಕೊಟ್ಟಿದ್ದ ಉದಾಹರಣೆಗಳಿವೆ. ಆದರೆ ಅದು ಮತ್ತೆ ವಿವಾದಕ್ಕೀಡಾಗಿ, ನ್ಯಾಯಾಲಯದ ಮೆಟ್ಟಿಲೇರಿ ಮತ್ತೆ ಸರ್ಕಾರದ ಸುಪರ್ದಿಗೆ ಬಂದಿವೆ.
ಲಡ್ಡು ವಿವಾದದ ನಂತರ ಮಂತ್ರಾಲಯ ಸ್ವಾಮೀಜಿ, ಜಗ್ಗಿ ವಾಸುದೇವ ಸೇರಿದಂತೆ ಹಲವರು ಸರ್ಕಾರದ ವ್ಯವಸ್ಥೆಯಲ್ಲಿ ಅದರ ನೀತಿ ನಿಯಮಗಳ ಅನುಸಾರ ಆಡಳಿತ ನಿರ್ವಹಿಸುತ್ತಿರುವುದೇ ಇದಕ್ಕೆ ಕಾರಣ. ಹಾಗಾಗಿ ಮರಳಿ ಕೊಡಿ. ಮತ್ತು ರಾಷ್ಟ್ರಕ್ಕೊಂದು ಧಾರ್ಮಿಕ, ದೇವಸ್ಥಾನ ನೀತಿ ಇರಲಿ ಎಂದು ಆಗ್ರಹಿಸಿದ್ದಾರೆ.
ನಿಜ. ದೇವಸ್ಥಾನ, ದೇವರ ಪೂಜೆ, ದೇವಾಲಯಗಳ ನಿರ್ವಹಣೆ ಸರ್ಕಾರದ ಕೆಲಸವಲ್ಲ. ಸರ್ಕಾರದ ಆದ್ಯತೆಗಳೇ ಬೇರೆ. ಹಾಗಾಗಿ ವ್ಯಾಪಕ ಚಿಂತನೆಯಂತೂ ಆಗಬೇಕಿದೆ. ತಮಿಳುನಾಡು, ಕೇರಳ, ತೆಲಂಗಾಣ, ಉತ್ತರ ಭಾರತದ ಕೆಲವು ರಾಜ್ಯಗಳ ಬಹುತೇಕ ದೇವಾಲಯಗಳು ಮುಜರಾಯಿ ಇಲಾಖೆಯ ಅಡಿಯಲ್ಲಿಯೇ ಇವೆ. ಇವು ಸಾಕಷ್ಟು ಆದಾಯ ತರುತ್ತಿರುವ ಕಾರಣಕ್ಕೆ ಸರ್ಕಾರ ಇವನ್ನು ಬಿಟ್ಟುಕೊಡಲು ಸಿದ್ಧವೂ ಇಲ್ಲ ಎಂಬುದು ವಾಸ್ತವ. ಇತ್ತೀಚೆಗೆ ಒಂದು ಅಭಿಯಾನ ಆರಂಭವಾಗಿತ್ತು. ಮುಜರಾಯಿ ದೇವಸ್ಥಾನಗಳ ಕಾಣಿಕೆ ಡಬ್ಬಿ-ಹುಂಡಿಗೆ ಹಣ ಹಾಕಬೇಡಿ. ಅದು ಚರ್ಚು ಮಸೀದಿಗಳಿಗೆ ಹೋಗಿ ಅನ್ಯಧರ್ಮೀಯರಿಗೆ ನೆರವಾಗುತ್ತದೆಯೇ ಹೊರತು ಹಿಂದೂ ಧರ್ಮೀಯರಿಗೆ ಉಪಯೋಗ ಇಲ್ಲ ಎಂಬ ಆಕ್ರೋಶ ಹೊರಹೊಮ್ಮಿತ್ತು. ಹಾಗೇನಿಲ್ಲ ಎಂದು ಹೇಳಿದರೂ, ಸರ್ಕಾರ ಸಮಜಾಯಿಷಿ ನೀಡಿದರೂ ಜನ ನಂಬುತ್ತಿರಲಿಲ್ಲ. ಏಕೆಂದರೆ ಈವರೆಗಿನ ನಡವಳಿಕೆ ಪಾರದರ್ಶಕವಾಗಿಲ್ಲದಿರುವುದು.
ದೇವರು, ದೇವಸ್ಥಾನ, ಸರ್ಕಾರಗಳ ಜಟಾಪಟಿಯಲ್ಲಿ ಭಕ್ತ ಸೊರಗಿದ್ದಾನೆ. ದೇವಸ್ಥಾನಗಳ ಉದ್ದೇಶ ಧರ್ಮ ಜಾಗೃತಿ, ಸಂಸ್ಕಾರ ಹಾಗೂ ನೈತಿಕತೆಯ ಬಲವರ್ಧನೆಯಾಗಬೇಕಿದೆ. ಭಕ್ತರ ಶ್ರದ್ಧಾ ಭಕ್ತಿಗೆ ಪೂರಕವಾಗಿ ಸೌಕರ್ಯಗಳನ್ನು ಕಲ್ಪಿಸುವುದಷ್ಟೇ ಸರ್ಕಾರದ ಕೆಲಸವಾಗಬೇಕು. ಗಾಂಧೀಜಿ ಹೇಳುತ್ತಿದ್ದುದೂ ಇದನ್ನೇ. ಒಂದಂತೂ ನಿಜ. ಈ ಎಲ್ಲ ಆಯಾಮಗಳ ಕುರಿತಾದ ಸಮಗ್ರ ಸಂವಾದಕ್ಕಂತೂ ತಿರುಪತಿ ಲಡ್ಡು ಪ್ರಸಾದದ ವಿವಾದ ನಾಂದಿ ಹಾಡಿದಂತಾಗಿದೆ. ಚಿಂತನೆಗಳು ಮಥಿಸಿ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರಗಳ ನಿಜವಾದ ಶುದ್ಧೀಕರಣ ಮತ್ತು ಪುನರುತ್ಥಾನ ಆಗುವಂತಾದರೆ ಸಂವಾದ ಸಾರ್ಥಕವಾಗಲಿದೆ.