For the best experience, open
https://m.samyuktakarnataka.in
on your mobile browser.

ದೇವರು ಮುಕ್ತ-ದೇಗುಲವೂ ಮುಕ್ತ

02:30 AM Nov 12, 2024 IST | Samyukta Karnataka
ದೇವರು ಮುಕ್ತ ದೇಗುಲವೂ ಮುಕ್ತ

ಮಂಡ್ಯ ಜಿಲ್ಲೆ ಹನಕೆರೆ ಗ್ರಾಮದ ಶ್ರೀ ಕಾಲಭೈರವೇಶ್ವರ ದೇವಾಲಯಕ್ಕೆ ದಲಿತರನ್ನು ಬಿಡುವುದಿಲ್ಲ ಎಂದು ಹೇಳಿ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಇಡೀ ಮಾನವ ಕುಲಕ್ಕೆ ಮಾಡಿದ ಅಪಮಾನ. ಇಂದಿನ ಕಾಲದಲ್ಲಿ ಯಾರು ಯಾರನ್ನೂ ದೇವಾಲಯಕ್ಕೆ ಹೋಗುವುದನ್ನು ತಡೆಯುವುದಿಲ್ಲ. ದೇವರು ಎಲ್ಲರಿಗೂ ಇದ್ದಾನೆ ಎಂಬ ನಂಬುಗೆ ಮೇಲೆಯೇ ನಾವು ದೇವಾಲಯ ನಿರ್ಮಿಸಿರುವುದು. ದೇವರು ಮುಕ್ತ ಎಂದಾದ ಮೇಲೆ ದೇವಾಲಯವೂ ಮುಕ್ತವಾಗಿರಲೇಬೇಕು. ಇದರಲ್ಲಿ ಅನುಮಾನವೇ ಬೇಡ. ಯಾವ ದೇವಾಲಯವೂ ಕೆಲವರಿಗೆ ಮಾತ್ರ ಸೀಮಿತಗೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇದು ಈಗಾಗಲೇ ಸಮಾಜ ಒಪ್ಪಿಕೊಂಡಿರುವ ಪದ್ಧತಿ. ಇದಕ್ಕೆ ಕೆಲವರು ವಿರೋಧಿಸುತ್ತಾರೆ ಎಂದರೆ ಅವರು ಯಾವುದೋ ಓಬೀರಾಯನ ಕಾಲದ ಮೂಢನಂಬಿಕೆಗಳನ್ನು ಪಾಲಿಸುತ್ತಿದ್ದಾರೆ ಎಂದೇ ಅರ್ಥ. ದೇವರಲ್ಲಿ ನಂಬಿಕೆ ಇರುವವರು ದೇವಾಲಯಕ್ಕೆ ಹೋಗುತ್ತಾರೆ. ಯಾರು ಯಾರನ್ನೂ ದೇವಾಲಯಕ್ಕೆ ಹೋಗಲು ಒತ್ತಾಯ ಮಾಡುವುದಿಲ್ಲ. ಯಾರಿಗೆ ದೇವರಲ್ಲಿ ನಂಬಿಕೆ ಇದೆಯೋ ಅವರಿಗೆ ದೇವಾಲಯಕ್ಕೆ ಹೋಗಲು ಹಕ್ಕಿದೆ. ಇದನ್ನು ಸ್ವಾತಂತ್ರ್ಯಪೂರ್ವದಲ್ಲೇ ಒಪ್ಪಿಕೊಂಡು ಬಂದಿದ್ದೇವೆ. ದೇವಾಲಯಕ್ಕೆ ಯಾರನ್ನಾದರೂ ಬಿಡುವುದಿಲ್ಲ ಎಂದರೆ ಅದು ಶಿಕ್ಷಾರ್ಹ ಅಪರಾಧ. ಅದರಲ್ಲೂ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಕ್ಕೆ ನಿರ್ಬಂಧ ವಿಧಿಸಲು ಬರುವುದಿಲ್ಲ. ಇಂದಿನ ಯುವ ಪೀಳಿಗೆ ಹಳೆಯ ಕಾಲದ ಪದ್ಧತಿಗಳನ್ನು ಸರ್ವಥಾ ಒಪ್ಪುವುದಿಲ್ಲ. ಹಿಂದೆ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ದಲಿತರನ್ನು ದೇವಾಲಯ ಪ್ರವೇಶಿಸುವಂತೆ ಮಾಡುವುದೇ ಚಳವಳಿಯ ಭಾಗವಾಗಿತ್ತು. ಆ ಕಾಲದಲ್ಲೇ ಮೈಸೂರಿನ ತಗಡೂರು ರಾಮಚಂದ್ರರಾಯರು ದಲಿತರನ್ನು ಟಿ. ನರಸೀಪುರ ಗುಂಜಾ ನರಸಿಂಹಸ್ವಾಮಿ ದೇವಾಲಯಕ್ಕೆ ಕರೆದುಕೊಂಡು ಹೋಗಿ ಎಲ್ಲ ಹೀನ ಪದ್ಧತಿಗಳಿಗೆ ಮಂಗಳ ಹಾಡಿದ್ದರು. ಇದೇರೀತಿ ಕಾರ್ನಾಡ ಸದಾಶಿವರಾಯರು, ಸರ್ದಾರ್ ವೀರಣ್ಣ ಗೌಡ, ಎಚ್.ಸಿ. ದಾಸಪ್ಪ, ಟಿ.ಬಿ. ಕೇಶವಪ್ರಸಾದ್ ಸೇರಿದಂತೆ ಹಲವು ಮುಖಂಡರು ದಲಿತರ ಪುರೋಭಿವೃದ್ಧಿಗೆ ಶ್ರಮಸಿದ್ದರು. ಆಗಿನ ಕಾಲದಲ್ಲಿ ನಶಿಸಿಹೋಗಿದ್ದ ಅನಿಷ್ಟ ಪದ್ಧತಿ ಈಗಲೂ ಮುಂದುವರಿಯುತ್ತಿದೆ ಎಂದರೆ ಆಶ್ಚರ್ಯವಾಗುತ್ತದೆ. ಯಾವುದೇ ದೇವಾಲಯವಾದರೂ ಸ್ಥಳೀಯರು ಅದರ ಜೀರ್ಣೋದ್ಧಾರ ಕೈಗೊಳ್ಳುವುದು ಸಹಜ. ಉಳ್ಳವರು ಹೆಚ್ಚಿನ ದಾನಧರ್ಮ ಮಾಡಿರುತ್ತಾರೆ. ಹಾಗೆಂದ ಮಾತ್ರಕ್ಕೆ ಹಣ ನೀಡದೆ ಇರುವ ಬಡವರನ್ನು ದೇವಾಲಯದಿಂದ ದೂರ ಇಡಲು ಬರುವುದಿಲ್ಲ. ದೇವರ ಮುಂದೆ ಎಲ್ಲರೂ ಸಮಾನರು. ಅದನ್ನು ಒಪ್ಪಿಕೊಂಡೇ ನಾವು ದೇವಾಲಯ ನಿರ್ಮಿಸಿರುವುದು. ಹೀಗಿರುವಾಗ ಕೆಲವು ಸಮುದಾಯವನ್ನು ದೂರವಿಡುವುದು ಪ್ರಜಾತಂತ್ರ ವಿರೋಧಿ ತಂತ್ರ. ಈಗ ತಿರುಪತಿಗೆ ಪ್ರತಿದಿನ ಲಕ್ಷಾಂತರ ಜನ ಹೋಗಿ ಬರುತ್ತಾರೆ. ಯಾರು ಯಾರನ್ನೂ ತಡೆಯುವುದಿಲ್ಲ. ೨೪ ಗಂಟೆ ದೇವಾಲಯ ಜನರಿಂದ ಕಿಕ್ಕಿರಿದು ತುಂಬಿರುತ್ತದೆ ಎಂದ ಮೇಲೆ ಅದೇ ನಿಯಮ ಹನಕೆರೆ ದೇವಾಲಯಕ್ಕೆ ಅನ್ವಯಿಸಲೇಬೇಕು. ಇದರಲ್ಲಿ ಅನುಮಾನ ಬೇಡವೇ ಬೇಡ. ಯಾವುದೋ ಕಾಲದಲ್ಲಿ ರೂಪುಗೊಂಡ ಕಂದಾಚಾರಗಳು ಆಧುನೀಕರಣದಿಂದ ಬದಲಾವಣೆ ಹೊಂದುವುದು ಸಹಜ. ಕೆಲವು ಕಡೆ ಹಳೆಯ ಕಂದಾಚಾರ ಹಾಗೇ ಉಳಿದುಬಿಟ್ಟಿರುತ್ತದೆ. ಅದನ್ನು ಪ್ರಶ್ನಿಸಿದಾಗ ತಂತಾನೇ ಬಿಟ್ಟು ಹೋಗುತ್ತದೆ. ಹನಕೆರೆ ಗ್ರಾಮ ಕೂಡ ಬದಲಾವಣೆಯ ಗಾಳಿಗೆ ಹೊಂದಿಕೊಳ್ಳುವುದು ಅಗತ್ಯ. ಇದಕ್ಕೆ ಕಾನೂನಿನ ಮೊರೆ ಹೋಗುವ ಅಗತ್ಯವೇನೂ ಇಲ್ಲ. ಗ್ರಾಮದ ಮುಖ್ಯಸ್ಥರು ಮಧ್ಯಸ್ಥಿಕೆ ವಹಿಸಿ ಕಹಿ ಮನಸ್ಸುಗಳನ್ನು ಸುಲಭವಾಗಿ ಪರಿವರ್ತಿಸಬಹುದು. ನಮ್ಮ ಶಿಕ್ಷಣದ ಮೂಲ ಉದ್ದೇಶವೇ ಸಮಾನತೆ ತರುವುದು. ಹೀಗಿರುವಾಗ ಯಾವುದೇ ರೀತಿಯ ತಾರತಮ್ಯಕ್ಕೆ ಅವಕಾಶವಿಲ್ಲ. ನಮ್ಮ ದಾಸರು, ಶಿವಶರಣರು ಈ ತಾರತಮ್ಯದ ವಿರುದ್ಧ ಹೋರಾಟವನ್ನೇ ನಡೆಸಿದರು. ಅವರ ಸಾಹಿತ್ಯವೆಲ್ಲ ಇದನ್ನೆ ಕುರಿತದ್ದು ಎಂದು ಹೇಳುವ ಅಗತ್ಯವಿಲ್ಲ. ಉಡುಪಿಯ ಕೃಷ್ಣನ ದೇವಾಲಯದಲ್ಲಿರುವ ಕನಕ ಕಿಂಡಿ ಇದಕ್ಕೆ ಸಾಕ್ಷಿ. ದೇವರು ತನ್ನ ಭಕ್ತರಿಗಾಗಿ ಇರುವುದು ಎಂಬುದು ಸ್ಪಷ್ಟ. ಬೇಡರ ಕಣ್ಣಪ್ಪನಿಂದ ಹಿಡಿದು ಇಂದಿನವರೆಗೆ ನೂರಾರು ಘಟನೆಗಳು ಆಗಿ ಹೋಗಿವೆ. ಜನರ ನಂಬಿಕೆಯನ್ನು ಅಲುಗಾಡಿಸುವ ಅಥವ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸುವ ಯಾವ ಪ್ರಯತ್ನವೂ ಫಲಕಾರಿಯಾಗಿಲ್ಲ. ದೇವರಿದ್ದಾನೋ ಇಲ್ಲವೋ ಎಂಬುದರ ಬಗ್ಗೆ ಈಗಲೂ ಜಗತ್ತಿನಲ್ಲಿ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. ಆದರೂ ಜನ ದೇವಾಲಯಕ್ಕೆ ಹೋಗುವುದನ್ನು ನಿಲ್ಲಿಸಿಲ್ಲ. ಇದು ಪರಂಪರಾನುಗತವಾಗಿ ಬೆಳೆದುಬಂದಿರುವ ಪದ್ಧತಿ. ಅದಕ್ಕೆ ಸ್ಥಳೀಯ ಸಮುದಾಯದವರು ಬೇಲಿಗಳನ್ನು ಹಾಕಲು ಬರುವುದಿಲ್ಲ. ದೇವರು ಎಲ್ಲರಿಗೂ ಇದ್ದಾನೆ ಎಂಬುದು ಪ್ರಮುಖ ಆಧಾರ.