For the best experience, open
https://m.samyuktakarnataka.in
on your mobile browser.

ದೇವರ ಗುಡಿ ಪ್ರವೇಶಕ್ಕೆ ಅಡ್ಡಿ ಸಲ್ಲ

11:37 AM Jan 24, 2024 IST | Samyukta Karnataka
ದೇವರ ಗುಡಿ ಪ್ರವೇಶಕ್ಕೆ ಅಡ್ಡಿ ಸಲ್ಲ

ಅಯೋಧ್ಯೆಯಲ್ಲಿ ರಾಮ ಮಂದಿರದ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನಡೆಯುವ ಕಾಲದಲ್ಲಿಯೇ ರಾಹುಲ್ ಗಾಂಧಿಯವರು ಆಶ್ರಮಕ್ಕೆ ಭೇಟಿ ನೀಡಲು ಮುಂದಾಗಿದ್ದು ಈ ವಿವಾದದ ಮುಖ್ಯ ತಿರುಳು.

ದೇವರ ಗುಡಿಗಳ ಪ್ರವೇಶಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ. ಹಲವಾರು ಸಂದರ್ಭಗಳಲ್ಲಿ ಈ ಪ್ರವೇಶಕ್ಕೆ ಷರತ್ತುಗಳನ್ನು ವಿಧಿಸಬಹುದೇ ವಿನಃ ಯಾವುದೇ ಕಾರಣಕ್ಕೆ ಪ್ರವೇಶವನ್ನು ನಿರ್ಬಂಧಿಸುವ ಸಾಧ್ಯತೆಗಳು ಇಲ್ಲ. ಏಕೆಂದರೆ, ದೇವಾಲಯಗಳು ಸಾರ್ವಜನಿಕ ಆಸ್ತಿ. ನಂಬಿಕೆಯ ಆಧಾರದ ಮೇಲೆ ಭಾರತದ ಸಾಮಾಜಿಕ ಚೌಕಟ್ಟು ಭದ್ರವಾಗಿ ಶತಶತಮಾನಗಳಿಂದ ನೆಲೆಸಿರುವ ಪರಿಣಾಮವಾಗಿ ನಂಬಿಕೆಯ ದ್ಯೋತಕವಾದ ದೇವಸ್ಥಾನಗಳಿಗೆ ಪ್ರವೇಶವನ್ನು ನಿರ್ಬಂಧಿಸುವುದು ದೇವರ ವಿರೋಧಿ ಎನ್ನುವುದಕ್ಕಿಂತ ಜನವಿರೋಧಿ ಕ್ರಮ. ಅಸ್ಸಾಂನಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿಯವರಿಗೆ ಹದಿನಾರನೇ ಶತಮಾನದ ಸಾಮಾಜಿಕ ಸುಧಾರಕ ಹಾಗೂ ಸಂತ ಶಂಕರದೇವ್ ಆಶ್ರಮಕ್ಕೆ ಪ್ರವೇಶವನ್ನು ವಿನಾಕಾರಣ ನಿರ್ಬಂಧಿಸಿರುವ ಬೆಳವಣಿಗೆ ರಾಜಕೀಯ ಕಮಟು ವಾಸನೆ ಹಬ್ಬಲು ಕಾರಣವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ವಿಗ್ರಹ ಪ್ರತಿಷ್ಠಾಪನೆ ಕಾರ್ಯ ನಡೆಯುವ ಕಾಲದಲ್ಲಿಯೇ ರಾಹುಲ್ ಗಾಂಧಿಯವರು ಈ ಆಶ್ರಮಕ್ಕೆ ಭೇಟಿ ನೀಡಲು ಮುಂದಾಗಿದ್ದು ಈ ವಿವಾದದ ಮುಖ್ಯ ತಿರುಳು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ಪ್ರತಿಪಾದಿಸುವಂತೆ `ರಾಮಮಂದಿರ ಪ್ರತಿಷ್ಠಾಪನೆಯ ಕಾಲದಲ್ಲಿಯೇ ರಾಹುಲ್ ಗಾಂಧಿಯವರು ಆಶ್ರಮಕ್ಕೆ ಭೇಟಿ ನೀಡಿದರೆ ಸುದ್ದಿ ವಾಹಿನಿಗಳಿಗೆ ಸುದ್ದಿಗಳ ಬಿತ್ತರ ಮಾಡುವಲ್ಲಿ ಏರುಪೇರಾಗಬಹುದೆಂಬ ಉದ್ದೇಶದಿಂದ ಆಶ್ರಮದ ಪ್ರವೇಶವನ್ನು ಸಂಜೆ ವೇಳೆಗೆ ಇಟ್ಟುಕೊಳ್ಳುವಂತೆ ಸೂಚಿಸಲಾಗಿತ್ತು ಅಷ್ಟೇ. ಇದನ್ನು ನಿರ್ಬಂಧ ಎಂದು ಭಾವಿಸಬಾರದು' ಎಂಬ ಅವರ ವಿವರಣೆ ವಾದದ ಮಟ್ಟಿಗೆ ಸರಿ. ಆದರೆ, ಆಚರಣೆಯ ಮಟ್ಟಿಗೆ ಒಪ್ಪುವುದು ಕಷ್ಟ. ಏಕೆಂದರೆ, ರಾಹುಲ್ ಗಾಂಧಿಯವರ ಆಶ್ರಮ ಪ್ರವೇಶಕ್ಕೂ ನರೇಂದ್ರ ಮೋದಿ ಅವರ ವಿಗ್ರಹ ಪ್ರತಿಷ್ಠಾಪನೆಗೂ ಸಂಬಂಧ ಕಲ್ಪಿಸುವುದು ಹಾಗೂ ಮಾಧ್ಯಮಗಳ ತೊಂದರೆಯನ್ನು ಸರ್ಕಾರ ನಿರ್ವಹಿಸಲು ಅನಗತ್ಯವಾಗಿ ಮುಂದಾಗುವುದು ಒಂದು ರೀತಿಯಲ್ಲಿ ಸಬೂಬಾಗಬಹುದೇ ವಿನಃ ಒಪ್ಪುವ ಕಾರಣವಾಗಲಾರದು.
ಭಾರತ ಬಹುಸಂಸ್ಕೃತಿಯ ರಾಷ್ಟ್ರ. ಈ ದೇಶದಲ್ಲಿರುವ ದೇವರುಗಳ ಸಂಖ್ಯೆ ಕೋಟಿಯನ್ನು ಮೀರಿದ್ದು. ಆರಾಧನೆಯ ರೂಪವೂ ಬೇರೆ ಬೇರೆ. ಹೀಗಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ತೂಗಿ ನೋಡುವುದು ಸರಿಯಾದ ವಿಧಾನವಲ್ಲ. ಇಷ್ಟಕ್ಕೂ ಇದು ಸರ್ಕಾರದ ಜವಾಬ್ದಾರಿಯೂ ಅಲ್ಲ. ದೇವಸ್ಥಾನಗಳು ಹಾಗೂ ಆಶ್ರಮಗಳು ಸಾರ್ವಜನಿಕ ಆಸ್ತಿ ಎಂದಾದ ಮೇಲೆ ಸಾರ್ವಜನಿಕರನ್ನು ದೂರ ಇಡುವ ಕ್ರಮ ಯಾವುದೇ ದೃಷ್ಟಿಕೋನದಿಂದ ನೋಡಿದರೂ ವೈಯಕ್ತಿಕ ಹಿತಾಸಕ್ತಿಯನ್ನು ಒಳಗೊಂಡಿರುತ್ತದೆಯೇ ವಿನಃ ಸಾರ್ವಜನಿಕ ಹಿತಾಸಕ್ತಿ ಇರುವುದಿಲ್ಲ. ಭಾರತ ಜೋಡೋ ಯಾತ್ರೆಯ ಎರಡನೆ ಅಂಕದ ಅಂಗವಾಗಿ ಮಣಿಪುರದಿಂದ ಮುಂಬೈವರೆಗೆ ಹೊರಟಿರುವ ರಾಹುಲ್ ಗಾಂಧಿಯವರಿಗೆ ಆಶ್ರಮದ ಪ್ರವೇಶ ನಿರಾತಂಕವಾಗಿ ಒದಗಿಸಿದ್ದರೆ ಆಕಾಶ ಉದುರಿ ಬೀಳುತ್ತಿರಲಿಲ್ಲ. ಮಾಧ್ಯಮಗಳು ಕೂಗು ಮಾರಿಗಳಂತೆ ಅಬ್ಬರಿಸುತ್ತಲೂ ಇರಲಿಲ್ಲ. ಅವರವರ ಕಾಯಕ ಧರ್ಮ ಅವರದು. ಬೇರೆಯವರ ಕಾಯಕಧರ್ಮದ ನಿರ್ವಹಣೆಗೆ ಸರ್ಕಾರ ಗುತ್ತಿಗೆ ಕರಾರನ್ನು ಮಾಡಿಕೊಂಡಿದ್ದರೆ ಆ ಪ್ರಶ್ನೆ ಬೇರೆ. ಹೀಗಾಗಿ ಅಸ್ಸಾಂ ಮುಖ್ಯಮಂತ್ರಿ ಕೈಗೊಂಡಿರುವ ಕ್ರಮ ಬಿಜೆಪಿ ನಾಯಕತ್ವವನ್ನು ಖುಷಿಪಡಿಸುವ ಉದ್ದೇಶದ್ದೇ ವಿನಃ ನ್ಯಾಯ ನಿಷ್ಠುರತೆಯಿಂದ ಕೂಡಿದ್ದಲ್ಲ. ಇದೊಂದು ರೀತಿಯಲ್ಲಿ ಸ್ವೇಚ್ಚಾಚಾರದ ಕ್ರಮವೂ ಹೌದು. ಪ್ರಮಾಣ ವಚನ ಸ್ವೀಕರಿಸುವಾಗ ರಾಗದ್ವೇಷಗಳಿಂದ ಮುಕ್ತವಾಗಿ ಆಡಳಿತ ನಿರ್ವಹಿಸುವ ವಚನ ಕೈಗೊಂಡಿರುವ ಮುಖ್ಯಮಂತ್ರಿಗಳು ಈಗ ತಮ್ಮ ವರ್ತನೆಯಿಂದ ಅದನ್ನು ತಾವಾಗಿಯೇ ಮುರಿದಂತಾಗಿರುವುದು ಖಚಿತವಾಗಿರುವ ಸಂದರ್ಭದಲ್ಲಿ ಇದಕ್ಕೆ ಅಂಕೆ - ಶಿಕ್ಷೆ ಬೇಡವೇ ಎಂಬುದು ದೇಶದ ಮುಂದಿರುವ ದೊಡ್ಡ ಪ್ರಶ್ನೆ.
ಲೋಕಸಭಾ ಚುನಾವಣೆ ನೆರಳು ದಟ್ಟವಾಗಿ ಕವಿಯುತ್ತಿರುವ ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸಾರ್ವಜನಿಕರನ್ನು ತಮ್ಮ ಕಡೆಗೆ ಒಲಿಸಿಕೊಳ್ಳಲು ನಾನಾ ರೀತಿಯ ಪ್ರಯತ್ನಗಳಲ್ಲಿ ತೊಡಗಿರುವುದನ್ನು ಯಾರೊಬ್ಬರೂ ಪ್ರಶ್ನಿಸಲೂ ಸಾಧ್ಯವಿಲ್ಲ - ಹಾಗೆಯೇ ಶಂಕಿಸಲೂ ಸಾಧ್ಯವಿಲ್ಲ. ಅದು ರಾಜಕೀಯ ಪಕ್ಷಗಳಿಗಿರುವ ಸಂವಿಧಾನಬದ್ಧ ಪರಮಾಧಿಕಾರ. ಕಾಂಗ್ರೆಸ್ ಪಕ್ಷವೂ ಕೂಡಾ ತನ್ನ ಧ್ಯೇಯ ಧೋರಣೆಗಳನ್ನು ಜನರ ಮುಂದಿಡುವ ಜೊತೆಗೆ ಜನರ ದೃಷ್ಟಿಕೋನವನ್ನು ಅರಿಯುವ ಸಲುವಾಗಿ ಹಮ್ಮಿಕೊಂಡಿರುವ ಈ ಜೋಡೋ ಯಾತ್ರೆಯ ಅಂಗವಾಗಿ ಗುಡಿ, ಮಸೀದಿ, ಚರ್ಚ್ ಮೊದಲಾದ ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡುವ ಉದ್ದೇಶಗಳಿಗೆ ಅಡ್ಡಿಪಡಿಸುವುದು ರಾಜ್ಯಾಂಗಬಾಹಿರವಾಗದಿದ್ದರೆ ರಾಜ್ಯಾಂಗಬಾಹಿರ ಎಂಬ ಶಬ್ದದ ವಿವರಣೆ ಏನೆಂಬುದನ್ನು ಅಧಿಕೃತವಾಗಿ ನ್ಯಾಯಾಂಗ ಸ್ಪಷ್ಟಪಡಿಸುವ ಅಗತ್ಯ ಬಂದೊದಗಿದೆ.