For the best experience, open
https://m.samyuktakarnataka.in
on your mobile browser.

ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು-ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ

07:28 PM Nov 17, 2023 IST | Samyukta Karnataka
ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ

ನಂಜನಗೂಡು: ದೇವರ ಹೆಸರಲ್ಲಿ ಮನುಷ್ಯರ ನಡುವೆ ಗೋಡೆ ಕಟ್ಟುವುದು-ದ್ವೇಷಿಸುವುದು ದೇವರಿಗೆ ಒಪ್ಪಿಗೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ನಂಜನಗೂಡು ಕ್ಷೇತ್ರದ ಕಳಲೆ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡ ಚಾರಿತ್ರಿಕ ಕಡೇಮಾಲಮ್ಮ ದೇವಸ್ಥಾನವನ್ನು ಉದ್ಘಾಟಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಕಡೇಮಾಲಮ್ಮ ದೇವಸ್ಥಾನ ಉದ್ಘಾಟಿಸಲು ಬಹಳ ಖುಷಿ ಆಗಿದೆ. ದೇವಿಯಿಂದ ಇಡಿ ಕಳಲೆ ಗ್ರಾಮಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೀನಿ. ನನಗೆ ಈ ಊರಿನ ಪರಿಚಯ ಚೆನ್ನಾಗಿದೆ. ಈ ಊರಲ್ಲಿ ಎಲ್ಲಾ ಧರ್ಮ ಮತ್ತು ಜಾತಿಯವರು ಸಹಬಾಳ್ವೆಯಿಂದ, ಸೌಹಾರ್ದತೆಯಿಂದ ಬದುಕುತ್ತಿರುವುದು ಮಾದರಿ ಮತ್ತು ಆದರ್ಶವಾಗಿದೆ. ಸಮಾಜದಲ್ಲಿ ಬಡವ ಶ್ರೀಮಂತ, ಮೇಲು-ಕೀಳಿಗೆ ಜಾತಿ ವ್ಯವಸ್ಥೆಯೇ ಕಾರಣ. ಆದರೆ ಕಳಲೆ ಗ್ರಾಮದಲ್ಲಿ ಸರ್ವ ಜಾತಿಗಳ ಸೌಹಾರ್ದದ ಬದುಕು ಆಚರಣೆಯಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದರು.
ಎಲ್ಲಾ ಜಾತಿ-ಧರ್ಮದ ಬಡವರಿಗೆ ಆರ್ಥಿಕ ಶಕ್ತಿ ಬಾರದ ಹೊರತು ಅಸಮಾನತೆ ಕಡಿಮೆ ಆಗಲು ಸಾಧ್ಯವಿಲ್ಲ. ಈ ಕಾರಣಕ್ಕೇ ನಮ್ಮ ಸರ್ಕಾರದಿಂದ ಆರ್ಥಿಕವಾಗಿ ಜನರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ ಎಂದರು.
ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರೇ ಈಗ ಗ್ಯಾರಂಟಿಗಳನ್ನು ಕೊಡುತ್ತಿದ್ದಾರೆ. ಹೆಚ್.ಡಿ. ಕುಮಾರಸ್ವಾಮಿ ಅವರಿಗೂ ಗ್ಯಾರಂಟಿ ಯೋಜನೆಗಳ ಬಗ್ಗೆ ಹೊಟ್ಟೆಕಿಚ್ಚು ಬಂದು ಬಿಟ್ಟಿದೆ. ಆದರೆ, ನಾವು ಯಾರಿಗೇ ಹೊಟ್ಟೆಕಿಚ್ಚು ಬಂದರೂ ಜನರಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಲೇ ಇರುತ್ತೇವೆ ಎಂದರು.