For the best experience, open
https://m.samyuktakarnataka.in
on your mobile browser.

ದೇಶಕ್ಕಾಗಿ ಬಲಿದಾನ ಸರ್ವಶ್ರೇಷ್ಠ

03:30 AM Apr 26, 2024 IST | Samyukta Karnataka
ದೇಶಕ್ಕಾಗಿ ಬಲಿದಾನ ಸರ್ವಶ್ರೇಷ್ಠ

ಭಾರತದ ಈಶಾನ್ಯ ಭಾಗದಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟ ಎಲೆಮರೆಯ ಕಾಯಿಯಂತೆ. ಧರ್ಮ, ಸಂಸ್ಕೃತಿ ಮತ್ತು ಪರಂಪರೆಯ ಮೇಲೆ ವಿದೇಶೀ ದಾಳಿ ನಡೆದಾಗ ಅದರ ವಿರುದ್ಧ ತೊಡೆ ತಟ್ಟಿ ಹೋರಾಡಿದ ಮಹಾನುಭಾವ ತ್ಯಾಗಿಗಳ ಸಂಖ್ಯೆ ಅನಂತ. ದೇಶವನ್ನು ದುರ್ಬಲಗೊಳಿಸುವ ಪ್ರತಿಯೊಂದು ಪ್ರಯತ್ನಕ್ಕೂ ತಡೆಯಾದ ಜನಸಾಮಾನ್ಯರು ನಾಡಿನ ಉಳಿವಿಗಾಗಿ ಪ್ರಾಣವನ್ನೇ ಪಣಕ್ಕಿಡಲು ಹಿಂದೆ ಮುಂದೆ ಯೋಚಿಸಲಿಲ್ಲ. ಮುನ್ನುಗ್ಗಿ ಗೆಲುವು ಸಾಧಿಸಿದರೆ ರಾಜ್ಯವನ್ನಾಳುವ, ವೀರಮರಣವನ್ನಪ್ಪಿದರೆ ಸ್ವರ್ಗ ಸೇರುವ ಉನ್ನತ ಯೋಚನೆಯೇ ಆ ಮಣ್ಣಿನ ಶಕ್ತಿ.
ವೀರಧೀರರ ನಾಡು ಭಾರತದಲ್ಲಿ ಸಾಹಸಿಗಳಿಗೆ ಬರವಿಲ್ಲ. ಯಾವ ಮೂಲೆಯಿಂದ ಶತ್ರುಗಳು ಆಕ್ರಮಿಸಿದರೂ ಅವರ ಶಿರಕಡಿದು ತೋರಣ ಕಟ್ಟುವ ಸಾಮರ್ಥ್ಯ ಅಸ್ಸಾಮಿನ ಯುವಕರಿಗಿದೆ. ನಮ್ಮನ್ನು ಅಶಕ್ತರೆಂದು ಭಾವಿಸಿ ರಾಜ್ಯಭಾರ ನಡೆಸಲು ತೀರ್ಮಾನಿಸುವ ಮುನ್ನ ನಿಮ್ಮವರಲ್ಲಿ ಕೊನೆಯ ಬಾರಿ ಮಾತನಾಡಿ ಬನ್ನಿ. ಭಾರತದ ಮಾತಾಭಗಿನಿಯರನ್ನು ಕೆಟ್ಟ ದೃಷ್ಟಿಯಿಂದ ನೋಡುವ ಪಾಪಿಯನ್ನೂ, ಇಲ್ಲಿಯ ಸಂಪದ್ಭರಿತ ಮಣ್ಣನ್ನು ವಶಪಡಿಸಲು ಹವಣಿಸುವ ಲೂಟಿಕೋರನನ್ನೂ ಜೀವಸಹಿತ ಬಿಡುವ ತಪ್ಪನ್ನು ನಾನು ಮಾಡಲಾರೆ. ಇದಕ್ಕೆ ಸೂರ್ಯಚಂದ್ರರೇ ಸಾಕ್ಷಿ. ನಾನು ಬದುಕಿರುವವರೆಗೂ ಶತ್ರುಗಳ ಹೆಜ್ಜೆಗುರುತು ನನ್ನ ನಾಡಿನ ಮೇಲೆ ಮೂಡದು' ಎಂಬ ಸಾಹಸವಾಣಿಯಿಂದ ಜೊತೆಗಾರ ಸೈನಿಕರಲ್ಲಿ ಸ್ಫೂರ್ತಿ ತುಂಬಿ ಮೊಘಲರನ್ನು ಸೋಲಿಸಿದ ಲಚಿತ್ ಬರಫುಕನ್, ದೇಶದ ಅಖಂಡತೆಗಾಗಿ ಶ್ರಮಿಸಿದ ಮಹಾಸಾಹಸಿ. ಅಸ್ಸಾಮಿನ ರಾಜ ಪ್ರತಾಪಸಿಂಹನ ಸೇನಾಧಿಪತಿ ಮೊಮೈ ತಮುಲಿ ದಂಪತಿಗಳಿಗೆ ಜನಿಸಿದ ಲಚಿತ್, ಅಂಬೆಗಾಲಿಡುವಾಗಲೇ ಸಾಹಸಿ ಕಾರ್ಯಗಳಿಂದ ಪ್ರೇರಣೆ ಪಡೆದ ಧೀರ. ಕತ್ತಿವರಸೆ, ಕುದುರೆಸವಾರಿ, ಮುಷ್ಟಿಯುದ್ಧಗಳಲ್ಲಿ ಅಸಾಧಾರಣ ಪ್ರತಿಭೆ, ಪಾಂಡಿತ್ಯ ಸಂಪಾದಿಸಿದ ಲಚಿತ್ ಅತಿ ಕಿರಿಯ ವಯಸ್ಸಿನಲ್ಲೇ ಯುದ್ಧದಲ್ಲಿ ಭಾಗವಹಿಸಿ ಗೆಲುವಿನ ಸವಿಯುಂಡರು. ರಾಜ್ಯದ ರಕ್ಷಣೆಯ ಜವಾಬ್ದಾರಿ ಕೇವಲ ರಾಜ ಅಥವಾ ಸೇನಾಧಿಪತಿಯದಲ್ಲ, ಬದಲಾಗಿ ಪ್ರತಿಯೊಬ್ಬ ನಾಗರಿಕನೂ ಗಡಿಯನ್ನು ಉಳಿಸುವ ನಿಟ್ಟಿನಲ್ಲಿ ಸೈನಿಕನಾಗಬೇಕೆಂದು ಹಳ್ಳಿಗಳಲ್ಲಿ ಜನಜಾಗೃತಿಗೈದ ತರುಣನ ಶಕ್ತಿ, ಸಂಘಟನಾ ಸಾಮರ್ಥ್ಯ ಸರ್ವತ್ರ ಪ್ರಶಂಸೆಗೆ ಪಾತ್ರವಾಯಿತು. ಅಸ್ಸಾಂನ ಸಾಂಸ್ಕೃತಿಕತೆಯನ್ನು ನಾಶಪಡಿಸಲು ದಂಡೆತ್ತಿ ಬಂದ ಅಲ್ಲಾಯಾರ್ ಖಾನನ ಹೆಡೆಮುರಿ ಕಟ್ಟಿದ ಜಯಧ್ವಜ ಸಿಂಹನ ಸಾಹಸ ಮೊಘಲರ ನಿದ್ದೆಗೆಡಿಸಿತು. ಪೂರ್ವ ಭಾರತವನ್ನು ವಶಪಡಿಸಲು ಮೀರ್ ಜುಮ್ಲಾ ನೇತೃತ್ವದಲ್ಲಿ ಯುದ್ಧ ಸಾರಿದ ಮೊಘಲ್ ಸೇನೆ ಅಸ್ಸಾಮನ್ನು ಗೆದ್ದು ಹಿಂದೂ ಯುವತಿಯರನ್ನು ಅಪಹರಿಸಿದ ಘಟನೆ ಜನಸಾಮಾನ್ಯರ ಸ್ವಾಭಿಮಾನವನ್ನು ಬಡಿದೆಚ್ಚರಿಸಿತು. ಅನ್ಯಾಯ, ಅಕ್ರಮಗಳಿಗೆ ಶಸ್ತ್ರದ ಭಾಷೆಯಲ್ಲಿ ಉತ್ತರಿಸಬೇಕೆಂದು ನಿಶ್ಚಯಿಸಿದ ಲಚಿತ್ ಸೂಕ್ತ ಅವಕಾಶಕ್ಕಾಗಿ ಸಮಯ ನಿರೀಕ್ಷಿಸುತ್ತಿದ್ದಂತೆ ಎದುರಾದುದೇ ಪ್ರಸಿದ್ಧ ಸರೈಘಾಟ್ ಸಮರ. ಎಪ್ಪತ್ತು ಸಾವಿರ ಸೈನಿಕರ ವಿಶಾಲ ಸೇನೆಯೊಂದಿಗೆ ಮೊಘಲರ ಪ್ರತಿನಿಧಿಯಾಗಿ ಆಕ್ರಮಣ ನಡೆಸಿದ ರಾಮಸಿಂಹ, ಬಾಣದ ಮೂಲಕ ಕಳುಹಿಸಿದ ಸಂದೇಶ ಲಚಿತ್ ಅಂತರಂಗದ ಶಕ್ತಿಯನ್ನು ನೂರ್ಮಡಿಗೊಳಿಸಿತು. 'ಒಂದು ಲಕ್ಷ ಕಾಣಿಕೆಯನ್ನು ಸಲ್ಲಿಸಿ ಕ್ಷಮಾಪತ್ರ ಬರೆದು ಅಸ್ಸಾಮನ್ನು ತೊರೆದರೆ ಪ್ರಾಣ ಉಳಿದೀತು' ಎಂಬ ಮೊಘಲ್ ಬೆದರಿಕೆ ಪತ್ರಕ್ಕೆ ಯುದ್ಧದ ಮೂಲಕ ಉತ್ತರಿಸುವೆನೆಂಬ ಲಚಿತ್ ಭರವಸೆ ಮಹಾರಾಜರ ಭಯವನ್ನು ದೂರೀಕರಿಸಿತು. ಗೌಹಾಟಿಯ ಪವಿತ್ರಭೂಮಿಯನ್ನು ಅಪವಿತ್ರಗೊಳಿಸಲು ಯಾರೇ ಪ್ರಯತ್ನಿಸಿದರೂ ಅವರ ತಲೆಯನ್ನು ಶರೀರದಿಂದ ಬೇರ್ಪಡಿಸುವುದು ಖಚಿತವೆಂದು ಆರ್ಭಟಿಸಿ ಸಮರಾಂಗಣಕ್ಕೆ ಧುಮುಕಿದ ಲಚಿತ್ ಸಾಹಸಕ್ಕೆ ಬೆಚ್ಚಿಬಿದ್ದ ಶತ್ರುಪಾಳಯ ದಿಕ್ಕಾಪಾಲಾಯಿತು. ಯೇನಕೇನಪ್ರಕಾರೇಣ ಅಸ್ಸಾಮನ್ನು ಸರ್ವನಾಶ ಮಾಡಲೆಂದೇ ಹೊರಟಿದ್ದ ಮಾನವರೂಪೀ ರಾಕ್ಷಸ ಸೇನೆಯನ್ನು ಕುಟ್ಟಿ ಪುಡಿಗೈದ ಲಚಿತ್ ಸಾಹಸ ಅಸೀಮ. ಸರೈಘಾಟ್ ಕದನದಲ್ಲಿ ಸೋಲುಂಡ ಮೊಘಲರ ಅಳಿದುಳಿದ ಸೈನಿಕರು ಜೀವ ಉಳಿದರೆ ಸಾಕೆಂದು ಓಡಿದರು. ಜೀವದಾನದ ಮಾತಾಡಿದ ರಿಪುಗಳು ರಣಾಂಗಣದಲ್ಲಿ ಹತರಾದುದನ್ನು ಕಂಡು ವಿಜಯಧ್ವಜ ಹಾರಿಸಿದ ಲಚಿತ್, ಅಸ್ಸಾಮಿನ ಮಾನಪ್ರಾಣವುಳಿಸಿದ ಸೇನಾನಿ. ಅಸ್ಸಾಂ ನೆಲದ ಮೂಲಸಂಸ್ಕೃತಿಗೆ ಯಾವುದೇ ಧಕ್ಕೆಯಾಗದಂತೆ ಕಾಪಾಡಿದ ಲಚಿತ್, ಧರ್ಮರಕ್ಷಣೆ ಹಾಗೂ ದೇಶರಕ್ಷಣೆಗಾಗಿ ತನ್ನ ಬದುಕನ್ನು ಸವೆಸಿದ ಪ್ರಾತಃಸ್ಮರಣೀಯ ಮಹಾತ್ಮ.ಪ್ರಾಣದ ಆಸೆಗಾಗಿ ನಿಮ್ಮ ಪಕ್ಷವಹಿಸಿ ನನಗೆ ಅನ್ನ, ನೀರಿತ್ತ ದೇಶಕ್ಕೆ ದ್ರೋಹ ಬಗೆಯಲು ನನಗೆ ತಲೆಕೆಟ್ಟಿಲ್ಲ. ಕಟ್ಟಕಡೆಯ ಸೈನಿಕ ಜೀವಂತವಾಗಿರುವವರೆಗೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ನಮ್ಮ ಹೋರಾಟಕ್ಕೆ ಅಳಿವಿಲ್ಲ. ಶತ್ರುಗಳಾದ ಆಂಗ್ಲರ ಜೊತೆಗೆ ಕೈಜೋಡಿಸಿ ನಮ್ಮ ರಾಜ್ಯವನ್ನು ಕೊಳ್ಳೆ ಹೊಡೆದರೆ ನೀವೇನೋ ನನ್ನನ್ನು ಬಿಟ್ಟುಬಿಡುವಿರಿ. ಆದರೆ ನನ್ನೊಬ್ಬನ ಜೀವರಕ್ಷಣೆಗಾಗಿ ಲಕ್ಷಾಂತರ ಜನಸಾಮಾನ್ಯರ ಪ್ರಾಣದ ಜೊತೆ ಚೆಲ್ಲಾಟವಾಡುವುದು ವೀರನಿಗೆ ಸೂಕ್ತವಲ್ಲ. ನಾನು ಈ ದೇಶದ ಹೆಮ್ಮೆಯ ಪುತ್ರ. ನಿಮ್ಮಂತೆ ಮೋಸ, ವಂಚನೆ, ಅನ್ಯಾಯ, ಅಕ್ರಮ, ಲೂಟಿಗಳನ್ನು ಮಾದರಿಯಾಗಿಸಿದ ಸೈನಿಕ ನಾನಲ್ಲ. ಸೂರ್ಯ ಮುಳುಗದ ಸಾಮ್ರಾಜ್ಯವೆಂಬ ಅಹಂಕಾರದಿಂದ ಬೀಗುವ ನಿಮ್ಮ ದಾರ್ಷ್ಟ್ಯ, ಕೊಬ್ಬನ್ನು ಕರಗಿಸಲು ನನ್ನಂತಹ ಸಾವಿರಾರು ಸೈನಿಕರು ಕಾತರರಾಗಿದ್ದಾರೆ. ನನ್ನ ಸಾವು ಕ್ರಾಂತಿಯ ಹತ್ತು ಹೊಸಹುಟ್ಟಿಗೆ ಕಾರಣವಾಗುತ್ತದೆ ಎಂಬುದನ್ನು ಮರೆಯದಿರಿ' ಎಂಬ ಆವೇಶಭರಿತ ಮಾತುಗಳಿಂದ ಬ್ರಿಟಿಷ್ ಅಧಿಕಾರಿಗಳನ್ನು ನಡುಗಿಸಿ ಹುತಾತ್ಮರಾದ ಪವೋನಾ ಬ್ರಜಬಾಸಿ, ಈಶಾನ್ಯ ಭಾರತದ ಸ್ವಾತಂತ್ರ‍್ಯ ಹೋರಾಟದ ಮಿನುಗುತಾರೆ. ಮಣಿಪುರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪವೋನಾ ಬಾಲ್ಯದಲ್ಲೇ ಸೈನಿಕನಾಗುವ ಪ್ರಬಲ ಹಂಬಲವನ್ನು ವ್ಯಕ್ತಪಡಿಸಿದ ಕಾರಣ ಕುದುರೆ ಸವಾರಿ, ಕತ್ತಿವರಸೆ, ಬಿಲ್ಲುಬಾಣ ಭರ್ಜಿಗಳ ಅಭ್ಯಾಸ ಚೆನ್ನಾಗಿಯೇ ಸಾಗಿತು. ಪ್ರತಿಬಾರಿಯೂ ಗುರಿಯಿಡಬೇಕಾದರೆ ಬ್ರಿಟಿಷರನ್ನೇ ಕಲ್ಪಿಸಿದ ಕಾರಣದಿಂದ ಅತಿಕಡಿಮೆ ಸಮಯದಲ್ಲಿ ಮಹಾವೀರನಾಗಿ ಬೆಳೆದ ಪವೋನಾ, ಮಹಾರಾಜಾ ಕುಲಚಂದ್ರರ ನೆಚ್ಚಿನ ಭಂಟನಾಗಿ ರೂಪುಗೊಂಡರು. ರಾಜ್ಯವ್ಯವಸ್ಥೆ, ಆಡಳಿತ, ಸೈನಿಕ ತರಬೇತಿಗಳ ಬಗ್ಗೆ ಅದ್ಭುತ ಅನುಭವ ಹೊಂದಿದ್ದರಿಂದ ರಾಜನಿಂದ ಸಾಮಾನ್ಯ ಸೈನಿಕನವರೆಗೂ ಪವೋನಾ ಬಗ್ಗೆ ಎಲ್ಲಿಲ್ಲದ ಅಕ್ಕರೆ. ವಿವಿಧ ಪ್ರೇರಣಾದಾಯಿ ಕಥೆಗಳ ಮೂಲಕವೇ ಸೈನಿಕರ ಮನೋಬಲ ವೃದ್ಧಿಸಿ ಪ್ರತಿಯೊಬ್ಬ ಯೋಧನೂ ದೇಶಕ್ಕಾಗಿ ಹೋರಾಡುವ ವೇಳೆ ಹುತಾತ್ಮನಾದರೆ ಆತನ ಪಾರ್ಥಿವ ಶರೀರಕ್ಕೆ ಅತ್ಯುಚ್ಚ ಗೌರವ ಸಿಗಬೇಕೆಂದು ರಾಜರನ್ನು ವಿನಂತಿಸಿದ ಕಾರಣ ಸೈನಿಕರ ಬೆಲೆ ಜನರಿಗೆ ತಿಳಿಯಿತು ಮಾತ್ರವಲ್ಲದೆ ದೇಶರಕ್ಷಣೆಯಲ್ಲಿ ನಮ್ಮ ಪಾಲೂ ಸಾಕಷ್ಟಿದೆಯೆಂಬ ಸತ್ಯದ ಅರಿವಾಯಿತು.
ಮಣಿಪುರವನ್ನು ಕುಟ್ಟಿ ಕೆಡವಲು ಬಂದ ಬ್ರಿಟಿಷ್ ಪಾಳಯವನ್ನು ಹಿಮ್ಮೆಟ್ಟಿಸಲು ನಿರ್ಮಾಣಗೊಂಡ ಸ್ವಾಭಿಮಾನಿ ಜವಾನರ ತಂಡದ ಮುಖ್ಯಸ್ಥನಾಗಿ ಸೇನಾದಂಡನಾಯಕನ ಜವಾಬ್ದಾರಿ ಹೆಗಲೇರಿಸಿದ ಪವೋನಾ, ಆಂಗ್ಲೋ ಮಣಿಪುರ ಯುದ್ಧದಲ್ಲಿ ಬ್ರಿಟಿಷರ ಹೆಡೆಮುರಿ ಕಟ್ಟಿದರು. ನೋಡನೋಡುತ್ತಿದ್ದಂತೆ ಒಂದೊಂದೇ ಆಯಕಟ್ಟಿನ ಜಾಗಗಳನ್ನು ಗೆದ್ದು ಆಂಗ್ಲರ ಸೊಕ್ಕಡಗಿಸಿದ ಬ್ರಜಬಾಸಿಯ ಸಾಹಸದಿಂದ ವಿರೋಧಿ ಪಾಳಯ ಚಿಂತೆಗೀಡಾಯಿತು. ಕೊನೆಯ ವ್ಯಕ್ತಿಯ ಉಸಿರು ನಿಲ್ಲುವವರೆಗೂ ಹೋರಾಟ ನಿಲ್ಲದು. ವಿದೇಶೀ ಶಕ್ತಿಗಳನ್ನು ನಿಗ್ರಹಿಸಲು ಒದಗಿರುವ ಈ ಅವಕಾಶ ಕೈಚೆಲ್ಲಿದರೆ ಮತ್ತೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಅಡ್ಡ ಬಂದವರನ್ನು ಕತ್ತರಿಸಿ ಮುಂದೆ ಸಾಗಿ' ಎಂಬ ಪವೋನಾ ಸ್ಫೂರ್ತಿಗೆ ಸೈನಿಕಗಡಣ ಹುಚ್ಚೆದ್ದು ಕುಣಿಯಿತು. ಉತ್ಸಾಹ ಜೋರಾಗುತ್ತಿದ್ದಂತೆ ಬ್ರಿಟಿಷ್ ಸೈನ್ಯ ಕಂಡೊಡನೆ ಹುಲಿಯಂತೆ ಮೇಲೆರಗಿದ ಪವೋನಾ ಅದೆಷ್ಟು ಶತ್ರುಗಳ ಜೀವವನ್ನು ಬಲಿಪಡೆದಿದ್ದರೋ ಲೆಕ್ಕ ಇಲ್ಲ. ದುರ್ದೈವವಶಾತ್ ಸಿಕ್ಕಿಬಿದ್ದ ಬ್ರಜಬಾಸಿ ಶೌರ್ಯದಿಂದ ಆಕರ್ಷಿತರಾದ ಕಂಪನಿ ಸರಕಾರದ ಅಧಿಕಾರಿ ಪ್ರಾಣಭಿಕ್ಷೆ ಒಡ್ಡಿ ತನ್ನತ್ತ ಸೆಳೆಯಲು ಯತ್ನಿಸಿದಾಗ ಅದನ್ನು ತಿರಸ್ಕರಿಸಿದ ಪವೋನಾ ಸಾಹಸ ಸ್ವತಃ ಸರಕಾರಕ್ಕೇ ಅಚ್ಚರಿ ತಂದಿತ್ತಿತು. ತಮ್ಮ ತಲೆಗೆ ಕಟ್ಟಿದ್ದ ಬಟ್ಟೆ ಕಳಚಿ ಶಿರ ಕತ್ತರಿಸಲು ಸೂಚಿಸಿ ಹುತಾತ್ಮರಾದುದಷ್ಟೇ ಅಲ್ಲದೆಸತ್ತರೆ ಸ್ವರ್ಗ, ಗೆದ್ದರೆ ರಾಜ್ಯ'ವೆಂಬ ಕೃಷ್ಣನೀತಿಯಂತೆ ಬಾಳಿದ ಪವೋನಾ ಭಾರತದ ಹೆಮ್ಮೆ. ಭಾರತದ ಸತ್ತ್ವ ಮತ್ತು ಶಕ್ತಿಯ ಉಳಿವಿಗಾಗಿ ಹಂಬಲಿಸಿ, ಜೀವಪ್ರೇಮದ ಅವಕಾಶವನ್ನು ನಿರ್ಲಕ್ಷಿಸಿ ರಾಷ್ಟ್ರಪ್ರೇಮವನ್ನೇ ಉಸಿರಾಗಿಸಿದ ವೀರರೀರ್ವರ ಸ್ಮೃತಿದಿನವಿಂದು. ಇತಿಹಾಸದ ಪುಟಗಳಿಂದ ಮರೆಯಾದರೂ ಅವರು ದೇಶಕ್ಕೆ ಸಲ್ಲಿಸಿದ ಕೊಡುಗೆಯನ್ನು ಮರೆಯಲಾಗದು. ಕಾಯವಳಿದರೇನಂತೆ, ಅಖಂಡ ಭಾರತ ಉಳಿದರೆ ಸಾಕೆಂದು ನಿರ್ಧರಿಸಿ ಹುತಾತ್ಮರಾದ ಸಾಹಸಿಗಳ ಶ್ರದ್ಧೆಗೆ ನಮನಗಳು.