ದೇಶಕ್ಕೆ ಸಹಬಾಳ್ವೆಯ ಮಾರ್ಗ
ಬದುಕು ಖಾಸಗಿಯಾಗಿರಲಿ ಇಲ್ಲವೇ ಸಾರ್ವಜನಿಕವೇ ಆಗಿರಲಿ. ಸಹಬಾಳ್ವೆಯ ತತ್ವ ಯಾವತ್ತಿಗೂ ಸಂಬಂಧಗಳ ಗಟ್ಟಿಗೊಳಿಸುವ ಮಾರ್ಗ. ಇಬ್ಬರಿದ್ದರೂ ಸಾಕು. ಅಭಿಪ್ರಾಯ ಭೇದಗಳು ಸ್ವಾಭಾವಿಕ. ಏಕೆಂದರೆ, ಮನುಷ್ಯ ಮೂಲತಃ ಯೋಚನಾ ಸಾಮರ್ಥ್ಯದ ವ್ಯಕ್ತಿ. ಯೋಚನೆಗಳ ದಾರಿ ಅವರ ಬದುಕಿನ ದಾರಿಯಂತೆ ಬೇರೆಯಾಗುವುದು ಸ್ವಾಭಾವಿಕವೇ. ಇದೇ ಮಾತನ್ನು ಸಾರ್ವಜನಿಕ ಬದುಕಿಗೆ ಅನ್ವಯಿಸಿ ನೋಡಿದಾಗ ಎಲ್ಲಾ ಬಿಕ್ಕಟ್ಟುಗಳ ಹಿಂದಿರುವುದು ಸಹಬಾಳ್ವೆಯ ಸೂತ್ರವನ್ನು ನೇಪಥ್ಯಕ್ಕೆ ಸರಿಸಿರುವುದು. ಭಾರತದಂತಹ ವೈವಿಧ್ಯಮಯ ಹಾಗೂ ಚಲನಶೀಲ ದೇಶದಲ್ಲಿ ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಡಳಿತಕ್ಕೆ ನಾಂದಿ ಹಾಡಿದ ಮೇಲೆ ಉಭಯ ಸರ್ಕಾರಗಳ ನಡುವೆ ಸಂಬಂಧ ಸುಸೂತ್ರವಾಗಿರುವಂತೆ ನೋಡಿಕೊಳ್ಳುವ ಸಂಹಿತೆ ಎಂಬುದು ಏನಾದರೂ ಇದ್ದರೆ ಅದು ಸಹಬಾಳ್ವೆಯ ಸೂತ್ರ. ದೇಶದಲ್ಲಿ ಸಮ್ಮಿಶ್ರ ರಾಜಕಾರಣದ ಪರ್ವ ಆರಂಭವಾಗುತ್ತಿದ್ದಂತೆಯೇ ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಹಾಗೂ ರಾಜ್ಯಗಳ ನಡುವೆ ಭಿನ್ನಮತ ಮೂಡಿ ಬಿಕ್ಕಟ್ಟು ತಲೆದೋರುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯೇ. ಭಿನ್ನಮತ ತಪ್ಪಲ್ಲ. ಏಕೆಂದರೆ, ಭಿನ್ನಮತ ಯಾವತ್ತಿಗೂ ಜನತಂತ್ರದ ಉಸಿರು. ಆದರೆ, ಅದನ್ನು ಬಿಕ್ಕಟ್ಟಿನ ಮಟ್ಟಕ್ಕೆ ಒಯ್ಯುವ ಕರ್ಮಠ ಮನಸ್ಥಿತಿ ಯಾರಿಗೂ ಬರಬಾರದು. ಕೇಂದ್ರ ಸರ್ಕಾರದ ನೆರವಿನಿಂದ ಹಿಡಿದು ಕೇಂದ್ರ ತನಿಖಾ ಸಂಸ್ಥೆಗಳ ಕಾರ್ಯಾಚರಣೆಯ ಸ್ವರೂಪದ ಬಗ್ಗೆ ಉಭಯ ಸರ್ಕಾರಗಳ ಆಡಳಿತಗಾರರಲ್ಲಿ ಭಿನ್ನಮತ ಕಾಣಿಸಿಕೊಂಡು ಈಗ ಭಿನ್ನಮತಕ್ಕೆ ತಿರುಗಿರುವ ಬೆಳವಣಿಗೆ ಯಾವುದೇ ದೃಷ್ಟಿಕೋನದಿಂದ ನೋಡಿದರೂ ಒಳ್ಳೆಯದಲ್ಲ. ಸರಿ ತಪ್ಪುಗಳ ವಕಾಲತು ಹಾಕುವ ಸಮಯವೂ ಇದಲ್ಲ. ಉಭಯ ಸರ್ಕಾರಗಳ ಆಡಳಿತಗಾರರು ಹಾಗೂ ರಾಜಕೀಯ ಮುಖಂಡರು ದೇಶದ ದೃಷ್ಟಿಯಿಂದ ಕೊಡು ಕೊಳ್ಳುವ ನೀತಿಯ ಮೇರೆಗೆ ಒಂದು ಸರ್ವಸಮ್ಮತ ನಿಲುವಿಗೆ ಬರುವುದು ಯೋಗ್ಯವಾದ ಸಂಗತಿ.
ಪ್ರಾಕೃತಿಕ ವಿಕೋಪಗಳಾದ ಅನಾವೃಷ್ಟಿ ಹಾಗೂ ಅತಿವೃಷ್ಟಿಗೆ ಸಂಬಂಧಿಸಿದ ಪರಿಹಾರ ಘೋಷಣೆಯಲ್ಲಿ ನಿಯಮಾಳಿಗಳು ಸ್ಪಷ್ಟವಾಗಿದ್ದರೂ ರಾಜ್ಯಗಳ ರಾಜಕೀಯ ಬಣ್ಣ ನೋಡಿ ಮಣೆ ಹಾಕುವ ಕೇಂದ್ರ ಸರ್ಕಾರದ ವಿಧಾನ ಸಹಜವಾಗಿಯೇ ರಾಜ್ಯ ಸರ್ಕಾರಗಳ ಅತೃಪ್ತಿಗೆ ಕಾರಣವಾಗಿದೆ. ಈ ವಿಚಾರ ಸುಪ್ರೀಂಕೋರ್ಟಿನ ಮೆಟ್ಟಿಲನ್ನು ಏರಿರುವುದು ಈ ವಿವಾದ ಯಾವ ಹಂತ ಮುಟ್ಟಿದೆ ಎಂಬುದರ ದಿಕ್ಸೂಚಿ. ಇದಲ್ಲದೆ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಆದಾಯ ತೆರಿಗೆ, ಇಡಿ ಸಂಸ್ಥೆಗಳನ್ನು ರಾಜ್ಯಗಳ ರಾಜಕೀಯ ಮುಖಂಡರ ಚಹರೆಯನ್ನು ಗುರುತಿಸಿ ಛೂ ಬಿಡುವ ಸಂಸ್ಕೃತಿಯೂ ಕೂಡಾ ದೇಶಾದ್ಯಂತ ಆಕ್ರೋಶಕ್ಕೆ ಗುರಿಯಾಗಿದೆ. ಇದರ ಜೊತೆಗೆ ವೈದ್ಯಕೀಯ ಪದವಿಗೆ ಪ್ರವೇಶ ಕೊಡುವ ನೀಟ್ ಪರೀಕ್ಷೆಯ ಸ್ವರೂಪದಲ್ಲಿಯೂ ಕೂಡಾ ಕೇಂದ್ರ ಸರ್ಕಾರದ ಸಂಪೂರ್ಣ ನಿಯಂತ್ರಣದಲ್ಲಿ ಇರುವುದರಿಂದ ರಾಜ್ಯಗಳ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿರುವ ಕ್ರಮ ಎಷ್ಟೇ ಕೂಗಿ ಹೇಳಿದರೂ ಕೂಡಾ ಸರಿ ಹೋಗಿಲ್ಲ. ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ನೀಟ್ ಪರೀಕ್ಷೆಯ ವ್ಯಾಪ್ತಿಯಿಂದ ದೂರ ಉಳಿಯಲು ನಿರ್ಧರಿಸಿರುವುದು ಗಮನಿಸಬೇಕಾದ ಅಂಶ. ಕರ್ನಾಟಕವೂ ಕೂಡಾ ಈಗ ಅದೇ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ಇಂತಹ ಸೂಕ್ಷ್ಮ ಅಂಶಗಳನ್ನು ನಿಷ್ಪಕ್ಷಪಾತದ ತಜ್ಞರ ಮೂಲಕ ಪರಿಸ್ಥಿತಿಯ ಅಧ್ಯಯನ ಮಾಡಿಸಿ ಬಿಕ್ಕಟ್ಟಿನ ಮೂಲವನ್ನು ಅರಿತು ಸರಿಪಡಿಸುವುದು ಕೇಂದ್ರ ಸರ್ಕಾರದ ಆದ್ಯತೆಯ ಹೊಣೆಗಾರಿಕೆ.
ಸುಮಾರು ೪೦ ವರ್ಷಗಳ ಹಿಂದೆ ರಾಜ್ಯಪಾಲರ ನೇಮಕ, ರಾಜ್ಯ ಸರ್ಕಾರಗಳ ಉಚ್ಚಾಟನೆ ಮೊದಲಾದ ಏಕಪಕ್ಷೀಯ ಕ್ರಮಗಳನ್ನು ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧಿಸಿ ಕೇಂದ್ರದ ವಿರುದ್ಧ ದೊಡ್ಡ ಆಂದೋಲನವನ್ನೇ ಸಾರಿದ್ದವು. ಇದರ ಪರಿಣಾಮವಾಗಿ ಆಗಿನ ಸರ್ಕಾರ ಸರ್ಕಾರಿಯಾ ಆಯೋಗವನ್ನು ರಚಿಸಿ ಬಿಕ್ಕಟ್ಟಿಗೆ ತೇಪೆ ಹಾಕುವ ಕೆಲಸವನ್ನು ಮಾಡಿತ್ತು. ಈಗ ಈ ಬಿಕ್ಕಟ್ಟು ಹೊಸ ಆಯಾಮ ಪಡೆದುಕೊಂಡಿದೆ. ಹಣಕಾಸಿನ ಚಲಾವಣೆಗೆ ಸಂಬಂಧಿಸಿದ ಅಧಿಕಾರವನ್ನೂ ಪರೋಕ್ಷವಾಗಿ ಕೇಳುವ ನಿಟ್ಟಿನಲ್ಲಿ ರಾಜ್ಯಗಳು ಮುಂದಾಗಿವೆ. ಹೀಗಾಗಿ ಮತ್ತೊಂದು ತಜ್ಞರ ಆಯೋಗವನ್ನು ರಚಿಸಿ ಬಿಕ್ಕಟ್ಟನ್ನು ಪರಿಹರಿಸುವುದು ದೇಶದ ದೃಷ್ಟಿಯಿಂದ ಆಗಬೇಕಾದ ಕೆಲಸ. ಇಂತಹ ವಿಚಾರದಲ್ಲಿ ರಾಜಕೀಯ ವೈಚಾರಿಕತೆ ಮುಖ್ಯವಾಗಬಾರದು. ಏಕೆಂದರೆ, ದೇಶ ಮುಖ್ಯ. ದೇಶವಿದ್ದರೆ ರಾಜಕಾರಣ. ನಂತರ ಉಳಿದದ್ದು. ಹೀಗಾಗಿ ರಾಜಕೀಯ ಪಕ್ಷಗಳ ಮುಖಂಡರೂ ಸೇರಿದಂತೆ ಉಭಯ ಸರ್ಕಾರಗಳ ಆಡಳಿತಗಾರರು ಪರಿಸ್ಥಿತಿಯನ್ನು ಅರಿತು ಬಿಕ್ಕಟ್ಟಿನ ಪರಿಹಾರಕ್ಕೆ ಸೂತ್ರ ಹುಡುಕುವುದು ನಿಜವಾದ ಅರ್ಥದಲ್ಲಿ ದೇಶ ಬಲವರ್ಧನೆಯ ಕೆಲಸ.