For the best experience, open
https://m.samyuktakarnataka.in
on your mobile browser.

ದೇಶಕ್ಕೊಂದೇ ಚುನಾವಣೆ ಅನುಷ್ಠಾನ ಅಸಾಧ್ಯ

02:33 AM Sep 20, 2024 IST | Samyukta Karnataka
ದೇಶಕ್ಕೊಂದೇ ಚುನಾವಣೆ ಅನುಷ್ಠಾನ ಅಸಾಧ್ಯ

ಒಂದೇ ದೇಶ ಒಂದೇ ಚುನಾವಣೆ ಘೋಷಣೆ ಆಕರ್ಷಕವಾಗಿ ಕಾಣುತ್ತದೆ. ಆದರೆ ಕಾರ್ಯಗತಮಾಡಲು ನೂರೆಂಟು ಅಡ್ಡಿಗಳಿವೆ. ಮೊದಲನೆಯದಾಗಿ ಮಾನಸಿಕವಾಗಿ ಇದಕ್ಕೆ ಸಿದ್ಧರಾಗಬೇಕು. ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳು ಇನ್ನೂ ಒಪ್ಪಿಲ್ಲ. ಇದರ ಸಾಧಕ ಬಾಧಕಗಳನ್ನು ಮುಕ್ತವಾಗಿ ಚರ್ಚಿಸುವುದು ಅಗತ್ಯ. ಅಲ್ಲದೆ ಸಂವಿಧಾನದ ಹಲವು ವಿಧಿಗಳಿಗೆ ತಿದ್ದುಪಡಿ ತರಬೇಕು. ರಾಜ್ಯ ವಿಧಾನಸಭೆಗಳೂ ಇದಕ್ಕೆ ಒಪ್ಪಬೇಕು. ಹಿಂದೆ ರಾಜಕೀಯ ಪಕ್ಷಗಳ ಸಂಖ್ಯೆ ಕಡಿಮೆ ಇತ್ತು. ಅಲ್ಲದೆ ಪ್ರಾದೇಶಿಕ ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿರಲಿಲ್ಲ. ಈಗ ಪಕ್ಷಗಳ ಸಂಖ್ಯೆಗಳು ಅಧಿಕಗೊಂಡಿವೆ. ಅಲ್ಲದೆ ಒಂದೇ ಚುನಾವಣೆ ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲವಾಗಬಹುದು. ಪ್ರಾದೇಶಿಕ ಪಕ್ಷಗಳಿಗೆ ಕೆಲವು ಅನುಮಾನಗಳಿವೆ. ಬಿಜೆಪಿ ಕೂಡ ಹಲವು ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದೇ ಅಧಿಕಾರಕ್ಕೆ ಬಂದಿದೆ. ಆ ಮಿತ್ರ ಪಕ್ಷಗಳೆಲ್ಲ ಒಪ್ಪಬೇಕು. ಅಷ್ಟು ಸುಲಭದ ಕೆಲಸವಲ್ಲ. ಸದ್ಯಕ್ಕಂತೂ ಇದು ಜಾರಿಗೆ ಬರುವುದು ಕಷ್ಟ. ೨೦೨೯ಕ್ಕೆ ನಡೆಯುವ ಚುನಾವಣೆ ಕಾಲಕ್ಕೆ ಇದನ್ನು ಜಾರಿಗೆ ಬೇಕೆನ್ನುವ ಗುರಿ ತಲುಪುವುದು ಕಷ್ಟ. ಎಷ್ಟೇ ಏಕರೂಪತೆ ತಂದರೂ ಮತ್ತೆ ಬೇರೆ ಬೇರೆ ಚುನಾವಣೆ ನಡೆಸುವ ಸಂದರ್ಭ ಬರುವುದಿಲ್ಲ ಎಂದು ಹೇಳಲು ಬರುವುದಿಲ್ಲ. ನಮ್ಮಲ್ಲಿ ರಾಜಕಾರಣ ಗಣಿತದ ಲೆಕ್ಕದ ಮೇಲೆ ನಡೆಯುವುದಿಲ್ಲ. ೧೯೭೦ಕ್ಕೆ ಮುನ್ನ ೪ ಬಾರಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ನಡೆದಿದ್ದವು. ೧೯೭೦ ನಂತರ ಪ್ರತ್ಯೇಕ ಚುನಾವಣೆಗಳು ನಡೆಯುತ್ತ ಬಂದಿವೆ. ಮೈತ್ರಿ ಪಕ್ಷಗಳ ಆಡಳಿತ ಈಗ ಸಾಮಾನ್ಯ ಸಂಗತಿಯಾಗಿವೆ. ಪ್ರತಿಯೊಂದು ರಾಜಕೀಯ ಪಕ್ಷಗಳು ತಮ್ಮದೇ ಆದ ನೀತಿ ನಿಯಮಗಳನ್ನು ಹೊಂದಿರುತ್ತವೆ. ಅಲ್ಲದೆ ಇಡೀ ದೇಶದ ಹವಾಮಾನ ಮತ್ತು ಇತರ ಸಂದರ್ಭಗಳು ಹೀಗೆ ಇರುತ್ತದೆ ಎಂದು ಹೇಳಲು ಬರುವುದಿಲ್ಲ.
ಒಂದೇ ಚುನಾವಣೆ ನಡೆದರೆ ಕೋಟ್ಯಂತರ ರೂ. ಉಳಿತಾಯವಾಗುತ್ತದೆ ಎಂಬುದು ನಿಜವಾದರೂ ಕೇವಲ ಹಣದ ಮೇಲೆ ಚುನಾವಣೆ ನಿಂತಿಲ್ಲ. ಪ್ರಜಾಪ್ರಭುತ್ವವೇ ಒಂದು ರೀತಿಯಲ್ಲಿ ದುಬಾರಿ. ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ತಲೆ ಎತ್ತಿದೆ. ಒಂದೇ ಚುನಾವಣೆ ಅದರತ್ತ ಸಾಗುವಂತೆ ಮಾಡುತ್ತದೆ ಎಂಬ ಭಯ ಎಲ್ಲರನ್ನೂ ಕಾಡುತ್ತದೆ. ಒಬ್ಬ ವ್ಯಕ್ತಿ ಎಷ್ಟೇ ಉತ್ತಮ ಆಡಳಿತ ನೀಡಿದರೂ ಆತ ಸರ್ವಾಧಿಕಾರಿಯಾಗಲು ಜನ ಬಿಡುವುದಿಲ್ಲ. ಪ್ರಜಾತಂತ್ರ ಎಂದರೆ ಅದೊಂದು ವ್ಯವಸ್ಥೆ. ಅದರ ಮೂಲ ಸ್ವರೂಪ ಉಳಿಸಿಕೊಂಡರೆ ಸಾಕು. ಚುನಾವಣೆ ಮುಕ್ತ ವಾತಾವರಣದಲ್ಲಿ ನಡೆಯಬೇಕು ಎಂಬುದು ಎಲ್ಲರ ಆಶಯವೇ ಹೊರತು ಏಕಕಾಲಕ್ಕೆ ನಡೆಸಬೇಕೆಂಬ ಒತ್ತಾಯವೇನೂ ಇಲ್ಲ. ಈಗಾಗಲೇ ಇದಕ್ಕೆ ಪರ ವಿರೋಧಗಳು ಕೇಳಿ ಬರುತ್ತಿವೆ. ಪ್ರಾದೇಶಿಕ ಪಕ್ಷಗಳಂತೂ ಇದನ್ನು ಸುತಾರಾಂ ಒಪ್ಪುವುದಿಲ್ಲ. ರಾಷ್ಟ್ರೀಯ ಪಕ್ಷಗಳ ವಿರುದ್ಧ ಪ್ರಾದೇಶಿಕ ಪಕ್ಷಗಳು ಸೆಣೆಸುವುದು ಕಷ್ಟ. ಒಂದೇ ಚುನಾವಣೆ ಎಂದಾದಲ್ಲಿ ಬಹುತೇಕ ಪ್ರಾದೇಶಿಕ ಪಕ್ಷಗಳು ನಾಮಾವಶೇಷ ಆಗಿಬಿಡುತ್ತವೆ. ಮಹಿಳಾ ವಿಧೇಯಕವನ್ನೇ ನಾವು ಜಾರಿಗೆ ತರಲು ಸಾಧ್ಯವಾಗಿಲ್ಲ. ಅದೂ ಕೂಡ ಜನರ ಗಮನ ಸೆಳೆಯಲು ಇರುವ ಅಸ್ತ್ರವಾಗಿ ಹೋಗಿದೆ. ಅದೇ ರೀತಿ ಈ ಏಕ ಚುನಾವಣೆಯೂ ಜನರ ಗಮನ ಸೆಳೆಯಲು ಬಳಕೆಯಾಗಿ ನಿಂತು ಹೋದಲ್ಲಿ ಆಶ್ಚರ್ಯವೇನೂ ಇಲ್ಲ.
ಏಕಕಾಲಕ್ಕೆ ಚುನಾವಣೆ ನಡೆಸಬೇಕು ಎಂದರೆ ಸಂವಿಧಾನಕ್ಕೆ ಒಟ್ಟು ೧೮ ತಿದ್ದುಪಡಿಗಳನ್ನು ತರಬೇಕು. ಅಲ್ಲದೆ ಕಾನೂನು ಆಯೋಗ ಇನ್ನೂ ತನ್ನ ವರದಿ ಸಲ್ಲಿಸಿಲ್ಲ. ೧೯೫೧, ೧೯೫೭, ೧೯೬೨, ೧೯೬೭ ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆದಿತ್ತು. ೨೦೧೯ರಲ್ಲಿ ೪ ರಾಜ್ಯಗಳ ಚುನಾವಣೆ ಲೋಕಸಭೆಯೊಂದಿಗೆ ನಡೆದಿತ್ತು. ಜಾಗತಿಕ ಮಟ್ಟದಲ್ಲಿ ನೋಡಿದರೆ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಏಕಕಾಲಕ್ಕೆ ಎಲ್ಲ ಚುನಾವಣೆ ನಡೆಯುತ್ತದೆ. ಅಲ್ಲಿ ಅಧ್ಯಕ್ಷೀಯ ಪದ್ಧತಿ ಇದೆ. ಅಲ್ಲದೆ ನಮ್ಮಷ್ಟು ದೊಡ್ಡದಲ್ಲ. ನಮ್ಮಲ್ಲಿ ಭಾಷೆಗಳೇ ಭಿನ್ನ. ಜನರ ಆಸೆ ಆಕಾಂಕ್ಷೆಗಳೇ ಬೇರೆ ಬೇರೆ. ಲೋಕಸಭೆ ಚುನಾವಣೆ ನಡೆಸಲು ೪೫೦೦ ಕೋಟಿರೂ. ಸರ್ಕಾರ ವೆಚ್ಚ ಮಾಡಬೇಕು. ಇದಲ್ಲದೆ ಆಯಾ ರಾಜಕೀಯ ಪಕ್ಷಗಳ ವೆಚ್ಚ ಬೇರೆ. ಏಕಕಾಲಕ್ಕೆ ನಡೆಸಿದರೆ ಅಭಿವೃದ್ಧಿ ಕಾರ್ಯಗಳು ವಿಳಂಬವಾಗುವುದು ತಪ್ಪುತ್ತದೆ. ಚುನಾವಣೆ ಘೋಷಣೆಯಾದಲ್ಲಿ ೪೫-೬೦ ದಿನ ಆ ಕ್ಷೇತ್ರದಲ್ಲಿ ಯಾವುದೇ ಯೋಜನೆ ಕೈಗೊಳ್ಳುವಂತಿಲ್ಲ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ. ನಮ್ಮ ಜನ ಚುನಾವಣೆ ಫಲಿತಾಂಶವನ್ನು ಜನಾದೇಶ ಎಂದು ಪರಿಗಣಿಸುವುದರಿಂದ ಕೇಂದ್ರ ಮತ್ತು ರಾಜ್ಯಕ್ಕೆ ಪ್ರತ್ಯೇಕ ಚುನಾವಣೆ ನಡೆಸುವುದು ಅನಿವಾರ್ಯ. ಬಹುಮತ ಗಳಿಕೆಗೆ ಪಕ್ಷದ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸಲಿದೆ. ಅದರಿಂದ ಪ್ರತ್ಯೇಕ ಚುನಾವಣೆ ಬಯಸುವುದು ಸಹಜ.