ದೇಶದಾದ್ಯಂತ ಇಂದಿನಿಂದ ಹೊಸ ಕಾನೂನು
ನವದೆಹಲಿ: ಇಂದಿನಿಂದ ಮೂರು ಹೊಸ ಕ್ರಿಮಿನಲ್ ಅಪರಾಧ ಕಾಯಿದೆಗಳು ಜಾರಿಗೆ ಬರಲಿವೆ.
ಭಾರತೀಯ ನ್ಯಾಯ ಸಂಹಿತೆ -2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್)-2023, ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್‌ಎ)-2023 ಇಂದಿನಿಂದ ಜಾರಿಗೆ ಬರಲಿರುವ ಕಾಯಿದೆಗಳಾಗಿವೆ. ಈ ಮೂರು ಕಾನೂನುಗಳು 'ಇಂಡಿಯನ್ ಪೀನಲ್ ಕೋಡ್'(ಐಪಿಸಿ), 'ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್'(ಸಿಆರ್‌ಪಿಸಿ) ಮತ್ತು 'ಎವಿಡೆನ್ಸ್ ಆಕ್ಟ್'ಗಳ ಜಾಗವನ್ನು ತುಂಬಲಿವೆ. ಮೊದಲ ಬಾರಿಗೆ, ಭಾರತೀಯತೆಯ ಅಸ್ಮಿತೆಯೊಂದಿಗೆ ಮೂರು ಪ್ರಮುಖ ಕ್ರಿಮಿನಲ್ ಕಾನೂನುಗಳ ಮೂಲಕ, ನಮ್ಮದೇ ಆದ ಅಪರಾಧ ನ್ಯಾಯ ವ್ಯವಸ್ಥೆಯು ಭಾರತದಿಂದ, ಭಾರತಕ್ಕಾಗಿ ಮತ್ತು ಭಾರತೀಯ ಸಂಸತ್ತಿನಿಂದ ರಚಿಸಲ್ಪಟ್ಟ ವ್ಯವಸ್ಥೆಯಿಂದ ನಡೆಸಲ್ಪಡುತ್ತದೆ. ದೇಶದ ಯಾವುದೇ ಮೂಲೆಯಲ್ಲೂದೂರು ನೀಡುವ ಕ್ರಮವಾದ 'ಝೀರೋ ಎಫ್‌ಐಆರ್', ಆನ್‌ಲೈನ್ ಮಾಧ್ಯಮದ ಮೂಲಕವೂ ಪೊಲೀಸರಿಗೆ ದೂರು ನೀಡುವ ಸೌಲಭ್ಯ, 'ಎಸ್‌ಎಂಎಸ್'ನಂಥ ಡಿಜಿಟಲ್ ಮಾಧ್ಯಮದ ಮೂಲಕವೂ ಸಮನ್ಸ್ ನೀಡುವ ವ್ಯವಸ್ಥೆ ಸೇರಿದಂತೆ ಈ ಮೂರು ಕಾನೂನುಗಳು ಆಧುನಿಕ ತಂತ್ರಜ್ಞಾನಕ್ಕೆ ಒತ್ತು ನೀಡಿವೆ.
ಪೊಲೀಸರಿಗೆ ಅಪ್ಲಿಕೇಶನ್: ಇನ್ನು ಈ ಕುರಿತಂತೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್ ಕಾನ್‌ಸ್ಟೇಬಲ್‌ನಿಂದ ಹಿಡಿದು ಅಧಿಕಾರಿಗಳವರೆಗೂ ಹೊಸ ಅಪರಾಧ ಕಾನೂನಿನ ಬಗ್ಗೆ ತರಬೇತಿ ನೀಡಿದ್ದೇವೆ, ಇದಕ್ಕಾಗಿ ಪೊಲೀಸರಿಗೆ ಅಪ್ಲಿಕೇಶನ್ ಸಿದ್ಧಪಡಿಸಿದ್ದೇವೆ. ಪೊಲೀಸರಿಗೆ ಹೊಂದಾಣಿಕೆ ಆಗುವವರೆಗೂ ಈ ಅಪ್ಲಿಕೇಶನ್ ನೋಡಿಕೊಂಡು ಕೆಲಸ ಮಾಡಬಹುದು ಎಂದು ಹೇಳಿದ್ದಾರೆ.