For the best experience, open
https://m.samyuktakarnataka.in
on your mobile browser.

ದೇಶದೇಳಿಗೆಗೆ ಮೀಸಲೆಮ್ಮ ಪ್ರಾಣ

03:30 AM Sep 26, 2024 IST | Samyukta Karnataka
ದೇಶದೇಳಿಗೆಗೆ ಮೀಸಲೆಮ್ಮ ಪ್ರಾಣ

ಸಮಗ್ರ ಭಾರತವನ್ನು ಆಳಬೇಕೆಂಬ ಮಹತ್ವಾಕಾಂಕ್ಷೆ ಯಿಂದ ೧೯೨೦ರ ಸುಮಾರಿಗೆ ಇಂಗ್ಲೆಂಡ್‌ನಿಂದ ಬಂಗಾಲಕ್ಕೆ ಆಗಮಿಸಿದ ವಿಲಿಯಮ್ ರೋಸ್ ಎಂಬ ಆಂಗ್ಲ ಅಧಿಕಾರಿಗೆ ತನ್ನ ಕನಸು ಸುಲಭದ ತುತ್ತಲ್ಲವೆಂಬ ಸತ್ಯದರ್ಶನವಾದುದು ಕ್ರಾಂತಿಕಾರಿಗಳ ಹೋರಾಟದ ಕಾರಣದಿಂದ. ಹಿಂದುಸ್ಥಾನವನ್ನು ಇನ್ನೂ ಅನೇಕ ಶತಮಾನಗಳ ಕಾಲ ದಾಸ್ಯಕ್ಕೆ ನೂಕಬೇಕೆಂಬ ಆಸೆಯನ್ನು ನಾವು ಬಿಡೋಣ. ನಮ್ಮ ಆಟ ಬಹಳ ಕಾಲ ನಡೆಯದು. ನಾವಿನ್ನೂ ಪಟ್ಟು ಬಿಡದಿದ್ದರೆ ಮರಳಿ ಇಂಗ್ಲೆಂಡ್‌ಗೆ ತೆರಳುವುದು ಕಷ್ಟವಾದೀತು. ಕುಟುಂಬದ ಜೊತೆಗೆ ಕಾಲ ಕಳೆಯಬೇಕೆಂಬ ಅಪೇಕ್ಷೆಯಿರುವವರು ಹೊರಡುವ ಸಿದ್ಧತೆ ನಡೆಸುವುದು ಕ್ಷೇಮ' ಎಂಬ ಪತ್ರ ಬರೆದು ತನ್ನ ಒಡನಾಡಿಗಳನ್ನು ಎಚ್ಚರಿಸಿದ್ದ ರೋಸ್ ಮಾತು ನಿಜವಾಗಲು ಕೇವಲ ಎರಡು ದಶಕಗಳಷ್ಟೇ ಸಾಕಾಯಿತು. ಬ್ರಿಟಿಷರ ಯಾವ ಶಿಕ್ಷೆಗೂ ಬಗ್ಗದ ತರುಣರ ಸಾಹಸ ಕಂಡು ಮೂಕನಾದ ರೋಸ್, ಮೂರೂವರೆ ವರ್ಷಗಳಲ್ಲೇ ಗಂಟುಮೂಟೆ ಕಟ್ಟುವಂತೆ ಮಾಡಿದ ಕ್ರಾಂತಿಕಾರಿಗಳ ಅಸದೃಶ ತ್ಯಾಗಕ್ಕೆ ಎಣೆಯಿಲ್ಲ.ಭಾರತದ ಸ್ವಾತಂತ್ರ‍್ಯ ಚಳವಳಿ ನನ್ನ ಬದುಕಿನ ಧ್ಯೆಯ. ಜನ್ಮಭೂಮಿಯ ಮುಕ್ತಿಗಾಗಿ ಬಾಳನ್ನು ಸಮರ್ಪಿಸುವ ಅವಕಾಶ ಎಲ್ಲರಿಗೂ ಲಭಿಸದು. ಬ್ರಿಟಿಷ್ ಸೇನೆಯಲ್ಲಿ ಕಾರ್ಯನಿರತರಾಗಿರುವ ಭಾರತೀಯ ಸೈನಿಕರು ಏಕಮನಸ್ವಿಗಳಾಗಿ ಆಡಳಿತದ ವಿರುದ್ಧ ದಂಗೆಯೆದ್ದರೆ ಕ್ಷಣಾರ್ಧದಲ್ಲಿ ಇಂಗ್ಲೆಂಡ್ ನೆಲದ ಮೇಲೂ ಭಾರತದ ಧ್ವಜ ಹಾರಾಡಿಸಬಹುದು. ಪ್ರಚಂಡ ಸಾಹಸದ ಭಾರತೀಯರು ಒಗ್ಗೂಡಿದರೆ ಸಾವಿರ ಸಂಖ್ಯೆಯ ವಿದೇಶೀಯರನ್ನು ಒದ್ದೋಡಿಸುವುದು ಕಷ್ಟದ ಕೆಲಸವಲ್ಲ. ಬ್ರಿಟಿಷ್, ಫ್ರೆಂಚ್, ಡಚ್, ಪೋರ್ಚುಗೀಸರಾದಿಯಾಗಿ ಭಾರತದ ನೆಲದಲ್ಲಿ ಬೀಡುಬಿಟ್ಟಿರುವ ಆಕ್ರಮಣಕಾರರೆಲ್ಲರೂ ದೇಶಬಿಟ್ಟು ಓಡುವವರೆಗೆ ನಮ್ಮ ಹೋರಾಟ ನಿಲ್ಲದು' ಎಂಬ ಭಾವಾರ್ಥದ ಪತ್ರವನ್ನು ಸ್ನೇಹಿತನಿಗೆ ಕಳುಹಿಸಿ ಪೂರ್ಣಸ್ವರಾಜ್ಯದ ಕಹಳೆಯೂದಿದ ಕ್ರಾಂತಿಕಾರಿ ಚಂಪಕರಾಮನ್ ಪಿಳ್ಳೆ, ವಿದೇಶಕೇಂದ್ರಿತ ಸ್ವಾತಂತ್ರ‍್ಯಾಂದೋಲನದ ಮಹಾವೀರ. ಕೇರಳದ ತಿರುವನಂತಪುರದ ಚಿನ್ನಸ್ವಾಮಿ ಪಿಳ್ಳೆ ದಂಪತಿಗಳಿಗೆ ಜನಿಸಿದ ಚಂಪಕರಾಮನ್, ಕಾಲೇಜು ಮೆಟ್ಟಲು ಹತ್ತುವ ಮೊದಲೇ ಪ್ರಖರ ಕ್ರಾಂತಿಕಾರಿಯಾಗಿ ರೂಪುಗೊಂಡಿದ್ದರು. ಕೇಸರಿ ಪತ್ರಿಕೆಯ ಸಿಡಿಗುಂಡಿನ ಲೇಖನಗಳಿಂದ ಪ್ರಭಾವಿತರಾದ ಪಿಳ್ಳೆ, ತಿಲಕರ ಬಂಧನ ವಿರೋಧಿಸಿ ತಿರುವನಂತಪುರದಲ್ಲಿ ಜಾಥಾ ಏರ್ಪಡಿಸಿದ್ದರು. ಮಹಾರಾಜಾ ಕಾಲೇಜಿನ ಸಹಪಾಠಿಗಳನ್ನು ಒಗ್ಗೂಡಿಸಿ ಮುಂದಾಳತ್ವ ವಹಿಸಿ ಸ್ವದೇಶೀ ಸಭೆಗಳನ್ನು ನಡೆಸಿದ ಪಿಳ್ಳೆ, ವಿಲಿಯಂ ಸ್ಟ್ರಿಕ್ಲ್ಯಾಂಡ್ ಸ್ನೇಹದಿಂದ ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ತೀರ್ಮಾನಿಸಿದರು. ಇಟಲಿ, ಸ್ವಿಜರ್ಲ್ಯಾಂಡ್, ಜರ್ಮನಿಯಲ್ಲಿ ತಾಂತ್ರಿಕ ಶಿಕ್ಷಣ ಪಡೆದು ರಾಜಕೀಯ ವಿಜ್ಞಾನ ಮತ್ತು ಅರ್ಥಶಾಸ್ತçದಲ್ಲಿ ಪದವಿ ಸಂಪಾದಿಸಿ ಜರ್ಮನಿಯ ವಿದೇಶಾಂಗ ಸಚಿವಾಲಯದಲ್ಲಿ ಕೆಲಕಾಲ ಕಾರ್ಯನಿರ್ವಹಿಸಿದರು.
ಭಾರತೀಯ ಯುವಕರಲ್ಲಿ ರಾಷ್ಟ್ರೀಯ ಭಾವನೆ ಉದ್ದೀಪಿಸುವ ನಿಟ್ಟಿನಲ್ಲಿ ಭಾರತ ಸ್ವಾತಂತ್ರ‍್ಯ ಸಮಿತಿ' ಸ್ಥಾಪಿಸಿದ ಪಿಳ್ಳೆ ಯೋಚನೆಯೇ ಅತ್ಯದ್ಭುತ. ಮೊದಲ ಮಹಾಯುದ್ಧದಲ್ಲಿ ಇಂಗ್ಲೆಂಡ್‌ಗೆ ಸೋಲಾದರೆ ತಕ್ಷಣದ ಕಾರ್ಯಯೋಜನೆಗೆ ಅನುಕೂಲವಾಗುವಂತೆ ಭಾರತದ ಹಂಗಾಮಿ ಸರಕಾರ ಸ್ಥಾಪಿಸಿ ವಿದೇಶಾಂಗ ಸಚಿವರಾಗಿ ನಿಯುಕ್ತರಾದ ಚಂಪಕರು ಜೈ ಹಿಂದ್ ಘೋಷವಾಕ್ಯದ ರೂವಾರಿ. ರಾಸ್ ಬಿಹಾರಿ ಬೋಸ್, ನೇತಾಜಿ ಸುಭಾಷರೊಡನೆ ಸೈನ್ಯನಿರ್ಮಾಣ, ಬ್ರಿಟಿಷ್ ಆಡಳಿತದ ವಿರುದ್ಧ ಸಮರ ಘೋಷಿಸುವ ಮಾತುಕತೆ ನಡೆಸಿ ಯುರೋಪಿನ ಅನೇಕ ನಾಯಕರ ಮೌನಬೆಂಬಲ ಪಡೆಯುವಲ್ಲಿ ಯಶಸ್ವಿಯಾದರು. ಭಾರತೀಯರು ಆಳಿಸಿಕೊಳ್ಳಲಷ್ಟೇ ಯೋಗ್ಯರೆಂಬ ಧಾಟಿಯ ಹಿಟ್ಲರನ ಮಾತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಪ್ಪು ಮಾತಿಗಾಗಿ ಕ್ಷಮೆ ಕೋರಬೇಕೆಂದು ಆಗ್ರಹಿಸಿದ ಪಿಳ್ಳೆ ಅವರ ಧೈರ್ಯಕ್ಕೆ ಜಗತ್ತೇ ನಿಬ್ಬೆರಗಾಯಿತು. ಇಪ್ಪತ್ತೆರಡು ವರ್ಷಗಳವರೆಗೆ ವಿದೇಶೀ ನೆಲದಲ್ಲಿ ಕಾರ್ಯಾಚರಿಸಿ ಗುಪ್ತ ಪತ್ರ ವ್ಯವಹಾರದ ಮೂಲಕ ಸ್ವಾತಂತ್ರ‍್ಯ ಚಳವಳಿಗೆ ಶಕ್ತಿ ತುಂಬಿ, ಸೈನ್ಯರಚನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ಅನುಮಾನಾಸ್ಪದ ಸಾವಿಗೀಡಾದ ಚಂಪಕರಾಮನ್ ಪಿಳ್ಳೆ ದೇಶಪ್ರೇಮ ಅತುಲ್ಯ. ಮರಣದ ಬಳಿಕ ತನ್ನ ಚಿತಾಭಸ್ಮವನ್ನು ಭಾರತದ ಪವಿತ್ರಜಲದಲ್ಲೇ ವಿಸರ್ಜಿಸಿ ಮುಕ್ತಿಗೆ ಅವಕಾಶ ನೀಡಬೇಕೆಂಬ ಅಭಿಲಾಷೆ ವ್ಯಕ್ತಪಡಿಸಿ, ಇತಿಹಾಸದ ಪುಟಗಳಿಂದ ಮರೆಯಾದ ಧೀರನ ಬದುಕು ಯುವಭಾರತಕ್ಕೆ ಪ್ರೇರಣೆ.ಶತಮಾನಗಳ ಆಕ್ರಮಣವನ್ನು ಖಡ್ಗದ ಸಹಾಯದಿಂದ ಎದುರಿಸಿ ಗೆದ್ದ ಭಾರತೀಯರು ಈಗ ಹಾಳೆಯ ಮೇಲೆ ಮನವಿ ಬರೆದು ಅದನ್ನು ಬ್ರಿಟಿಷರಿಗೆ ಸಲ್ಲಿಸಿ ಕೃತಾರ್ಥರಾಗುವ ಕಾಲ ಬಂದಿರುವುದು ಕ್ಷಾತ್ರಪರಂಪರೆಗೆ ಎಸಗುವ ಪ್ರತ್ಯಕ್ಷ ಅಪಚಾರ. ರಾಜ್ಯದ ಸುಖ ಅನುಭವಿಸಬೇಕೆಂದರೆ ಸಮರ ಅನಿವಾರ್ಯ. ವಿಶ್ವಾಸದಿಂದಲೇ ಕೇಳೋಣ. ಒಳ್ಳೆಯ ಮಾತಲ್ಲಿ ದೇಶ ಬಿಟ್ಟು ತೊಲಗಿದರೆ ಗೌರವಯುತವಾಗಿಯೇ ಕಳುಹಿಸೋಣ. ದೇಶದ ಆಡಳಿತದಲ್ಲಿ ಕೈ ಆಡಿಸಿ ತಮಗಿಷ್ಟ ಬಂದಂತೆ ಕಾನೂನು ಕಟ್ಟಳೆಗಳನ್ನು ರೂಪಿಸುವ ದುರ್ಮಾರ್ಗವನ್ನು ಯಾವ ಕಾಲಕ್ಕೂ ಒಪ್ಪಲಾಗದು. ಬಂದೂಕು ಕೈಗೆತ್ತಿ ಕೊನೆಯುಸಿರಿರುವವರೆಗೂ ಹೋರಾಡೋಣ' ಎಂಬ ಸಿಂಹಶಕ್ತಿಯ ಮಾತುಗಳಿಂದ ಭಾರತೀಯ ತರುಣರನ್ನು ಬಡಿದೆಚ್ಚರಿಸಿದ ಕ್ರಾಂತಿಕಾರಿ, ಸಶಸ್ತ್ರ ಕ್ರಾಂತಿಯ ರೂವಾರಿ ರಾಮಚರಣ ಘೋಷ್, ಬಾಂಬ್ ಪರೀಕ್ಷೆಯ ವೇಳೆ ನಡೆದ ದುರ್ಘಟನೆಯಲ್ಲಿ ಹುತಾತ್ಮನಾದ ಸ್ವಾತಂತ್ರ‍್ಯ ಹೋರಾಟಗಾರ. ಬಂಗಾಳದ ಹೂಗ್ಲಿ ಸಮೀಪದ ದೇವಬಂಧು ಘೋಷ್-ಮಧುವತಿ ದಂಪತಿಗಳಿಗೆ ಜನಿಸಿದ ರಾಮಚರಣರು ಶಾಲಾ ಹಂತದಲ್ಲಿರುವಾಗಲೇ ದೇಸೀ ಚಳವಳಿಯತ್ತ ಆಕರ್ಷಿತರಾದರು. ಬಂಗಾಲದ ವಿಭಜನೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ತಂದೆಯು ಬ್ರಿಟಿಷರ ದೌರ್ಜನ್ಯಕ್ಕೀಡಾಗಿ ಮೃತರಾದ ಬಳಿಕ ಅನಾಥರಾದ ಘೋಷ್, ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು. ಅಪ್ಪನ ಸಾವಿಗೆ ಕಾರಣರಾದ ಆಂಗ್ಲರನ್ನೂ, ಅವರ ಸಾಮ್ರಾಜ್ಯವನ್ನೂ ಪುಡಿಗಟ್ಟುವ ಪ್ರತಿಜ್ಞೆಗೈದ ಬಾಲಕ ಮೀಸೆ ಮೂಡುವ ಮೊದಲೇ ಬಂಗಾಳದ ಕ್ರಾಂತಿಕಾರಿ ಸಂಘಟನೆಗಳ ಸದಸ್ಯರಾದರು. ತಮ್ಮ ದೇಶದ ಮುಕ್ತಿಗಾಗಿ ಹೋರಾಡಿದ ಕಾರಣಕ್ಕೆ ಒಬ್ಬರ ಪ್ರಾಣ ತೆಗೆಯಬಹುದಾದರೆ ಸಾವಿರಾರು ಮಂದಿಯ ಬದುಕನ್ನು ನರಕಕ್ಕೆ ದೂಡಿದ ಬ್ರಿಟಿಷರನ್ನು ಸಾಯಿಸುವುದು ತಪ್ಪಲ್ಲವೆಂಬ ನಿರ್ಣಯಕ್ಕೆ ಬಂದ ಘೋಷ್, ಸಶಸ್ತ್ರ ಕ್ರಾಂತಿಯ ಅಖಾಡಕ್ಕಿಳಿದರು. ಅರವಿಂದ ಘೋಷ್ ಹಾಗೂ ಪುಲಿನ್ ಬಿಹಾರಿ ದಾಸರ ಮಾರ್ಗದರ್ಶನದಲ್ಲಿ ಸನ್ನದ್ಧವಾಗಿದ್ದ ಯುವಪಡೆಯ ಬೆಂಬಲದಿಂದ ವಿದ್ಯಾಭ್ಯಾಸ ಮುಂದುವರೆಸಿ ಕ್ರಾಂತಿಕಾರ್ಯದ ಜೊತೆಗೆ ಪದವಿ ಅಭ್ಯಾಸದಲ್ಲೂ ತೊಡಗಿಸಿದ ರಾಮಚರಣರು, ಅಸಹಕಾರ ಚಳವಳಿಯ ಲಾಭವನ್ನು ಪಡೆಯಲು ವಿಫಲವಾದ ಕಾಂಗ್ರೆಸ್ ನಾಯಕತ್ವದಿಂದ ಬಹು ನೊಂದರು.
ದೇಶದೇಳಿಗೆಗಾಗಿ ನಿರ್ಣಯಗಳು ಸ್ವೀಕರಿಸುವುದು ಬಿಟ್ಟು ವೈಯಕ್ತಿಕ ಹಿತಾಸಕ್ತಿಗಳನ್ನು ಗಮನದಲ್ಲಿರಿಸುವುದು ಅಕ್ಷಮ್ಯವೆಂದು ಅಭಿಪ್ರಯಿಸಿದ ಘೋಷ್, ಪತ್ರಮುಖೇನ ನಡೆಸುವ ಹೋರಾಟವನ್ನು ಧಿಕ್ಕರಿಸಿದರು. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದು ನಿರ್ಧರಿಸಿ ಬಾಂಬ್ ತಯಾರಿಕಾ ಘಟಕ ಸೇರಿದ ತರುಣ ಹಗಲಲ್ಲಿ ಕ್ರಾಂತಿಸಾಹಿತ್ಯದ ಪ್ರಚಾರದಲ್ಲಿ ನಿರತರಾದರೆ ರಾತ್ರಿಯಾಗುತ್ತಿದ್ದಂತೆ ಸಶಸ್ತ್ರ ಹೋರಾಟದ ಮುಂದಾಳು. ಆಂಗ್ಲರ ಒಂದೊಂದು ನಡೆಯನ್ನೂ ಕಟುವಾಗಿ ವಿರೋಧಿಸಿ ಇರಿನ್ ವಧೆಗೆ ಮುಹೂರ್ತ ನಿಶ್ಚಯಿಸಿದರು. ಎರಡು ಬಾರಿ ಬಹು ಸುಲಭವಾಗಿ ತಪ್ಪಿಸಿದ ಇರಿನ್ ಬೆಂಬಿಡದೆ ಕಾಡಿದ ಘೋಷರು ಮೂರನೆಯ ಪ್ರಯತ್ನದಲ್ಲಿ ಯಶಸ್ವಿಯಾದರು. ದುರ್ದೈವವಶಾತ್ ಬಾಂಬ್ ತಯಾರಿ ಕಾರ್ಯ ನಡೆಸುತ್ತಿದ್ದಾಗ ಅದು ಆಕಸ್ಮಿಕವಾಗಿ ಸಿಡಿದ ಪರಿಣಾಮ ಸ್ಥಳದಲ್ಲೇ ಹುತಾತ್ಮರಾದರು. ತಾರುಣ್ಯದ ಉತ್ಕೃಷ್ಟ ದಿನಗಳನ್ನು ದೇಶದೇಳಿಗೆಗಾಗಿ ವಿನಿಯೋಗಿಸಿ ಆದರ್ಶ ಜೀವನದ ಉದಾತ್ತತೆಯನ್ನು ಸಾರಿದ ರಾಮಚರಣ ಘೋಷರ ಧನ್ಯಜೀವನ ದೇಶಕ್ಕೆ ಆದರ್ಶ.
ವೈಯಕ್ತಿಕ ಜೀವನವನ್ನೂ ದೇಶದ ಹಿತಕ್ಕಾಗಿ ಧಾರೆಯೆರೆದು ಸ್ವಾತಂತ್ರ‍್ಯ ಹೋರಾಟದಲ್ಲಿ ಮುಂಚೂಣಿ ಪಾತ್ರವಹಿಸಿ ಹುತಾತ್ಮರಾದ ಮಹಾತ್ಮರು ನಾಡಿನ ಯುವಸಮುದಾಯದ ಆದರ್ಶವಾದಾಗಲಷ್ಟೇ ಪ್ರಖರ ರಾಷ್ಟ್ರೀಯ ಭಾವದ ಜನಾಂಗವೊಂದು ಸೃಷ್ಟಿಯಾಗಬಹುದು. ಆ ನಿಟ್ಟಿನಲ್ಲಿ ಚಂಪಕರಾಮನ್ ಪಿಳ್ಳೆ ಹೌತಾತ್ಮ್ಯ ದಿನ ಮತ್ತು ರಾಮಚರಣ ಘೋಷರ ಜನ್ಮದಿನ ಭರತಭೂಮಿಗೆ ಸ್ಫೂರ್ತಿಯಾಗಲಿ.