For the best experience, open
https://m.samyuktakarnataka.in
on your mobile browser.

ದೇಶದ್ರೋಹದ ಹೇಳಿಕೆ: ಸಿಡಿದೆದ್ದ ವಿಧಾನಸಭೆ

11:32 PM Feb 28, 2024 IST | Samyukta Karnataka
ದೇಶದ್ರೋಹದ ಹೇಳಿಕೆ  ಸಿಡಿದೆದ್ದ ವಿಧಾನಸಭೆ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯಥಿ ಸಯ್ಯದ್ ನಾಸಿರ್ ಹುಸೇನ್ ವಿಜೇತರಾದ ಬಳಿಕ ನಡೆಯುತ್ತಿದ್ದ ಸಂಭ್ರಮಾಚರಣೆ ವೇಳೆ ಬೆಂಬಲಿಗನೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವುದಕ್ಕೆ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ವ್ಯಾಪಕ ಪ್ರತಿರೋಧ ವ್ಯಕ್ತಗೊಂಡಿದೆ. ದೇಶದ್ರೋಹಿ ಘೋಷಣೆ ಕೂಗಿದ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ವಿಪಕ್ಷಗಳು ಆಗ್ರಹಿಸಿ ಕಲಾಪದಲ್ಲಿ ಕೋಲಾಹಲ ಸೃಷ್ಟಿಸಿದ ಪರಿಣಾಮ ಎರಡು ಬಾರಿ ಸದನವನ್ನು ಮುಂದೂಡುವ ಅನಿವಾರ್ಯತೆ ಸೃಷ್ಟಿಯಾಯಿತು. ಸರ್ಕಾರದ ಪರವಾಗಿ ಗೃಹಸಚಿವರು ಖಡಕ್ ಉತ್ತರಕ್ಕೂ ತೃಪ್ತರಾಗದ ವಿಪಕ್ಷಗಳು ಸಭಾಧ್ಯಕ್ಷರ ಪೀಠದೆದುರು ಧರಣಿ ನಡೆಸಿ ಪ್ರಶ್ನೋತ್ತರ ಕಡತಗಳನ್ನು ಹರಿದೆಸೆದು ಆಕ್ರೋಶ ಹೊರಹಾಕಿದ್ದಕ್ಕೆ ಬುಧವಾರದ ವಿಧಾನಸಭೆ ಕಲಾಪ ಸಾಕ್ಷಿಯಾಯಿತು.
ವಿಪಕ್ಷ ನಾಯಕ ಆರ್.ಅಶೋಕ್, ಪಾಕಿಸ್ತಾನ ಜಿಂದಾಬಾದ್ ಎಂದಿರುವ ದೇಶದ್ರೋಹಿಗಳನ್ನು ಬಂಧಿಸುವವರೆಗೂ ಬಿಜೆಪಿಯ ಹೋರಾಟ ಮುಂದುವರಿಯಲಿದೆ. ಇದು ಕಾಂಗ್ರೆಸ್‌ಗೆ ನಾಚಿಕೆಗೇಡಿನ ವಿಚಾರ. ಕೂಗಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ. ವಿಧಾನಸೌಧದ ಒಳಗೆ ದೇಶದ್ರೋಹದ ಚಟುವಟಿಕೆ ನಡೆದಿದೆ. ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್ ಈ ಬಗ್ಗೆ ಪ್ರಶ್ನೆ ಕೇಳಿದ ಮಾಧ್ಯದವರನ್ನು ಹೊರಹಾಕಿ ಎಂದು ದಾಷ್ಟ್ರ್ಯದ ಉತ್ತರ ಕೊಟ್ಟಿದ್ದಾರೆ. ಮಾಧ್ಯಮಗಳಲ್ಲಿನ ವೀಡಿಯೋ ದೃಶ್ಯಗಳ ದೇಶದ್ರೋಹಿ ಘೋಷಣೆಯನ್ನು ಖಾತರಿಪಡಿಸಿದರೂ ಸರ್ಕಾರ ಒಪ್ಪಲು ತಯಾರಿಲ್ಲ. ಸರ್ಕಾರಕ್ಕೆ ನೈಜಕಾಳಜಿ ಇದ್ದಿದ್ದರೆ ಈ ಘಟನೆ ನಡೆದ ಕೂಡಲೇ ಸಿಎಂ ತುರ್ತು ಸಚಿವ ಸಂಪುಟ ಸಭೆ ನಡೆಸಿ ಖಂಡಿಸಿ, ಪಾತಕಿಗಳನ್ನು ಹೆಡೆಮುರಿ ಕಟ್ಟಿ ತರುತ್ತೇವೆ ಎಂದು ಪ್ರಕಟಿಸಬೇಕಿತ್ತು ಎಂದು ಆಗ್ರಹಿಸಿದರು. ವಿಧಾನಸೌಧದಲ್ಲೇ ನಡೆದಿರುವ ಘಟನೆಗೆ ಸಾಕ್ಷಿ ಕೇಳುತ್ತಿದ್ದಾರೆ. ೨೪ ಗಂಟೆಯಾದರೂ ಯಾರನ್ನೂ ಬಂಧಿಸಿಲ್ಲ, ಬಂಧಿಸದಂತೆ ಒತ್ತಡ ಹಾಕಲಾಗುತ್ತಿದೆಯೇ? ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಬಿಜೆಪಿ ದೇಶದ್ರೋಹವನ್ನು ಸಹಿಸುವುದಿಲ್ಲ. ಇದನ್ನು ಕಾಂಗ್ರೆಸ್ಸಿಗರೂ ಸಮರ್ಥಿಸಬಾರದು. ಸರ್ಕಾರಕ್ಕೆ ಆತ್ಮಗೌರವ ಇಲ್ಲವೇ? ಕೂಡಲೇ ದೇಶದ್ರೋಹಿಗಳನ್ನು ಬಂಧಿಸಬೇಕು. ಅಂತಹವರಿಗೆ ರಾಜ್ಯದಲ್ಲಿ ಸ್ಥಳವಿಲ್ಲ. ಗಡಿಗಳಲ್ಲಿ ಯೋಧರು ದೇಶ ಕಾಯುತ್ತಿದ್ದಾರೆ. ಅನೇಕರು ಬಲಿದಾನ ಮಾಡಿದ್ದಾರೆ. ಅವರಿಗೆ ಗೃಹ ಸಚಿವರ ಉತ್ತರ ಏನು? ಎಫ್‌ಎಸ್‌ಎಲ್ ವರದಿ ವಿಳಂಬವಾದರೆ ಏನು ಮಾಡುತ್ತೀರಿ? ಸಾಕ್ಷö್ಯ ಎದುರೇ ಇರುವಾಗ ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಎಂದು ಪ್ರಶ್ನಿಸಿದರು.
ಶಾಸಕರ ಆಕ್ರೋಶಕ್ಕೆ ಸ್ಪೀಕರ್ ಸಾಥ್
ಪಾಕ್‌ಪರ ಘೋಷಣೆ ಕೂಗಿದ ಪ್ರಕರಣವನ್ನು ಮುಚ್ಚಿಹಾಕುವ ವ್ಯವಸ್ಥಿತ ಹುನ್ನಾರ ನಡೆಯುತ್ತಿರುವ ಶಂಕೆ ವ್ಯಕ್ತವಾಗುತ್ತಿದೆ. ಎಲ್ಲಕ್ಕಿಂತ ದೇಶ ಮುಖ್ಯ ಎಂದು ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ ಗುಡುಗಿದರು. ದೇಶದ್ರೋಹಿ ಯಾವುದೇ ಧರ್ಮದಲ್ಲಿದ್ದರೂ ಕಠಿಣ ಶಿಕ್ಷೆ ಆಗಬೇಕು.
ದೇಶದ್ರೋಹಿ ಘೋಷಣೆ ಕೂಗಿದವರು 'ತಾಯಿಗಂಡರು' ಎಂಬ ಪದಬಳಸಿದ್ದಕ್ಕೆ ಕಾಂಗ್ರೆಸ್ ಸದಸ್ಯ ಬಸವರಾಜ ರಾಯರೆಡ್ಡಿ ಆಕ್ಷೇಪಿಸಿ ಸದನದಲ್ಲಿ ಪದಬಳಕೆ ಬಗ್ಗೆ ಸಂಹಿತೆ ಇದೆ. ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್ ಅವರು ಪಾಕಿಸ್ತಾನದ ಪರವಾಗಿ ಇರೋರ ಬಗ್ಗೆ ನೀವು ಏನೇ ಭಾಷೆ ಬಳಸಿದ್ರೂ ನನ್ನ ಪರ್ಮಿಷನ್ ಇದೆ ಎಂದು ಯತ್ನಾಳ್ ಮಾತಿಗೆ ಸಹಮತ ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ ಸಭಾಧ್ಯಕ್ಷರೇ ನೀವೊಬ್ಬ ನೈಜ ದೇಶಭಕ್ತರು. ನಿಮ್ಮಂತವರ ಸಂಖ್ಯೆ ಹೆಚ್ಚಬೇಕೆಂದು ಶಹಬ್ಬಾಸ್‌ಗಿರಿ ಕೊಟ್ಟರು.
ದೇಶದ್ರೋಹಿಗಳಿಗೆ ಗಲ್ಲುಶಿಕ್ಷೆ ಆಗಲಿ
ಸಚಿವ ಎಂ.ಬಿ.ಪಾಟೀಲ್ ಸಿಂಧಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ್ದು ಯಾರೆಂದು ತನಿಖೆ ಬಳಿಕ ಗೊತ್ತಾಯಿತಲ್ವಾ? ಮುಸ್ಲಿಮರ ಮೇಲೆ ನೀವೇ ಆರೋಪ ಮಾಡಿದ್ರಿ ಎಂದು ಯತ್ನಾಳರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಯತ್ನಾಳ, ಪಾಕ್ ಪರ ಘೋಷಣೆಗೆ ರಾಜ್ಯದಲ್ಲಿ ಕಡಿವಾಣ ಹಾಕಲು ನಿರ್ಣಯ ಮಾಡಿ.
ಕಾಂಗ್ರೆಸ್ ಪಾಕ್ ಏಜೆಂಟ್, ಮುಖವಾಣಿ ಆಗ್ತಿದೆ ಎಂದಾಗ ಸದನದಲ್ಲಿ ಮತ್ತೆ ಗದ್ದಲದ ಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್ ಸದಸ್ಯ ನರೇಂದ್ರಸ್ವಾಮಿ ಮಾತನಾಡಿ ಚುನಾವಣೆಯಲ್ಲಿ ನಮ್ಮ ಪಕ್ಷದ ಜಯ ಸಹಿಸದೆ ಕುಚೋಧ್ಯ ನಡೆದಿದೆ. ತನಿಖೆಯಾಗಲಿ. ಆರೋಪಿಗೆ ಗಲ್ಲುಶಿಕ್ಷೆಯಾಗಲಿ ಇದು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ನಿಲುವು. ಆದರೆ ಕಾಂಗ್ರೆಸ್ ಯಾರಿಂದಲೂ ದೇಶಭಕ್ತಿ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.