ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೇಶದ ಕೃಷಿ ಸದೃಢವಾಗಿ ಬೆಳೆದರೆ ಆರ್ಥಿಕತೆ ಸದೃಢ

05:42 PM Jan 16, 2025 IST | Samyukta Karnataka

ಧಾರವಾಡ: ರೈತರು ಸಾಮಾಜಿಕ ಸಾಮರಸ್ಯದ ಕೇಂದ್ರಬಿಂಧುವಾಗಿದ್ದು, ವಿಶ್ವದಲ್ಲಿ ಭಾರತ ಬಲಿಷ್ಠವಾಗಿ ಮತ್ತು ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲು ಈ ದೇಶದ ಕೃಷಿ ಸದೃಢವಾಗಿ ಬೆಳೆದರೆ ಮಾತ್ರ ಸಾಧ್ಯ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ದಿ ಕೇಂದ್ರದಲ್ಲಿ ಗುರುವಾರ ಕೃಷಿ ಮಹಾವಿದ್ಯಾಲಯದ ಅಮೃತ ಮಹೋತ್ಸವ ಮತ್ತು ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೧೯೯೦ರ ದಶಕದಲ್ಲಿಯ ಭಾರತ ಮತ್ತು ಇಂದಿನ ಭಾರತವನ್ನು ಗಮನಿಸಿದರೆ ಸಾಕಷ್ಟು ಅಭಿವೃದ್ಧಿಯಾಗಿದೆ. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಇದೆಲ್ಲವೂ ೪ ದಶಕದಲ್ಲಿ ಆಗದ ಕೆಲಸ. ಆದರೂ ಸಾಧ್ಯವಾಗಿದೆ. ಜಗತ್ತಿನ ವಿವಿಧ ದೇಶಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದಾಗುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದರು.
ರೈತರು ಉಳುಮೆ ಮಾಡುತ್ತ ದೇಶದ ಆರ್ಥಿಕತೆಗೆ ಕೊಡುಗೆ ನೀಡುತ್ತ ಬರುತ್ತಿದ್ದಾರೆ. ಇಂದು ಸಾಕಷ್ಟು ಕೃಷಿ ಆಧಾರಿತ ಕೈಗಾರಿಕೆಗಳು ದೇಶದಲ್ಲಿವೆ. ಆದರೆ, ಅವುಗಳು ಲಾಭದತ್ತ ಮುಖ ಮಾಡುತ್ತಿದ್ದು, ರೈತರು ಲಾಭ ಗಳಿಸುತ್ತಿಲ್ಲ. ಆದ್ದರಿಂದ ಕೃಷಿ ಆಧಾರಿಕ ಕೈಗಾರಿಕೆಗಳು ತಮ್ಮ ಸಿಎಸ್‌ಆರ್ ಅನುದಾನದಲ್ಲಿ ಸ್ವಲ್ಪ ಹಣವನ್ನು ಕೃಷಿ ಸಂಶೋಧನೆಗೆ ಮೀಸಲಿಡುವ ಮೂಲಕ ರೈತರ ಆದಾಯ ದ್ವಿಗುಣ ಮಾಡಲು ಸಹಕರಿಸಬೇಕು ಎಂದು ಕರೆ ನೀಡಿದರು.
ಭಾರತ ದೇಶ ಇಂದು ಆರ್ಥಿಕವಾಗಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಜಗತ್ತಿನ ೩ನೇ ಆರ್ಥಿಕ ಶಕ್ತಿಯಾಗುವ ನಿಟ್ಟಿನಲ್ಲಿ ನಾವು ದಾಪುಗಾಲು ಇಡುತ್ತಿದ್ದೇವೆ. ಸದ್ಯ ದೇಶದಲ್ಲಿ ರೈಲು, ರಸ್ತೆ, ವಿಮಾನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತಿದೆ. ಎಲ್ಲೆಡೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಇಷ್ಟೆಲ್ಲ ಇದ್ದರೂ ದಿಲ್ ಮಾಂಗೆ ಮೋರ್ ಎಂದೆನ್ನುತ್ತಿದ್ದಾರೆ ಜನತೆ. ಲಾಲ್ ಬಹದ್ದೂರ ಶಾಸ್ತ್ರಿಯವರು ಜೈ ಜವಾನ್ ಜೈ ಕಿಸಾನ್ ಎಂದಿದ್ದರು, ಅಟಲ್ ಬಿಹಾರಿ ವಾಜಪೇಯಿ ಅವರು ಜೈ ಜವಾನ್ ಜೈ ಕಿಸಾನ ಜೈ ವಿಜ್ಞಾನ ಎಂದರು. ಸದ್ಯ ಪ್ರಧಾನಿ ಮೋದಿ ಅವರು ಅದಕ್ಕೆ ಜೈ ಅನುಸಂಧಾನ ಎಂದಿದ್ದಾರೆ. ಅದಕ್ಕಾಗಿ ಇಂತಹ ಕೃಷಿ ಸಂಸ್ಥೆಗಳ ಕೊಡುಗೆ ಅಪಾರವಾಗಿದೆ ಎಂದರು.
ಅರಿಷಿಣದಂತ ಔಷಧ ಗುಣವುಳ್ಳ ಕೃಷಿ ಉತ್ಪನ್ನವನ್ನು ಮೌಲ್ಯವರ್ಧನೆ ಮಾಡುವ ನಿಟ್ಟಿನಲ್ಲಿ ಕೃಷಿ ಮಹಾವಿದ್ಯಾಲಯ ಶ್ರಮಿಸಬೇಕು. ಅಂದಾಗಲೇ ಅಮೃತ ಮಹೋತ್ಸವಕ್ಕೆ ಮೆರಗು ಬರುತ್ತದೆ. ಜೊತೆಗೆ ಹಳೆಯ ವಿದ್ಯಾರ್ಥಿಗಳು ಕಲಿತ ವಿದ್ಯಾಲಯಕ್ಕೆ ಕೊಡುಗೆ ನೀಡಿದರೆ ಭವಿಷ್ಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆಗೆ ಕೃಷಿ ಬೆನ್ನೆಲುಬಾಗಿದ್ದು, ಕೃಷಿಯಲ್ಲಿ ಹೆಚ್ಚಿನ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವ ಮೂಲಕ ಹೆಚ್ಚಿನ ಸಾಧನೆ ಮಾಡುವ ಅವಶ್ಯಕತೆ ಇದೆ. ಕೃಷಿಯನ್ನು ಇನ್ನಷ್ಟು ಭದ್ರಗೊಳಿಸಲು ವಿದ್ಯಾರ್ಥಿಗಳು ಮತ್ತು ವಿಜ್ಞಾನಿಗಳು ಶ್ರಮಿಸಬೇಕು. ವಿಕಸಿತ ಭಾರತ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೃಷಿ ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ವಿಶ್ವದಲ್ಲಿ ಕಡಿಮೆ ಬೆಲೆಯಲ್ಲಿ ರಾಸಾಯನಿಕ ಗೊಬ್ಬರವನ್ನು ರೈತರಿಗೆ ನೀಡಲಾಗುತ್ತಿದೆ. ೨೦೧೪ರಲ್ಲಿ ೧೮ ಸಾವಿರ ಕೋಟಿ ರೂ. ಇದ್ದ ಕೃಷಿ ಬಜೆಟ್‌ನ್ನು ೧.೨೭ ಲಕ್ಷ ಕೋಟಿ ರೂ. ಕೃಷಿ ಬಜೆಟ್ ನೀಡಿದ್ದೇವೆ. ಅಲ್ಲದೇ ರೈತರಿಗೆ ಉತ್ತಮ ಬೆಂಬಲ ಬೆಲೆ ನೀಡಲಾಗುತ್ತಿದ್ದು, ಪ್ರತಿ ಆರು ತಿಂಗಳಿಗೊಮ್ಮೆ ಅದಕ್ಕೆ ಏರಿಕೆ ಮಾಡಲಾಗುತ್ತಿದೆ. ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗುತ್ತಿದೆ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಸಕ್ಕರೆಯನ್ನು ರಫ್ತು ಮಾಡುವ ಚಿಂತನೆ ಇದೆ. ಅದರ ಜೊತೆಗೆ ಖಾದ್ಯತೈಲ ಮಿಷನ್, ತೋಟಗಾರಿಕೆ ಮಿಷನ್ ಮಾಡುವ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.
ಉಪರಾಷ್ಟ್ರಪತಿ ಅವರ ಪತ್ನಿ ಸುಧೇಶಾ ಧನಕರ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕುಲಪತಿ ಡಾ. ಪಿ.ಎಲ್. ಪಾಟೀಲ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಮತ್ತು ಕೃಷಿ ವಿವಿ ಸಿಬ್ಬಂದಿ ಇದ್ದರು.

Next Article