For the best experience, open
https://m.samyuktakarnataka.in
on your mobile browser.

ದೇಶದ ನಿರಾಳ ಬದುಕಿಗೆ ಶಾಸನ ಸಂಹಿತೆ ಬೆಳಕು

12:16 PM Jan 26, 2024 IST | Samyukta Karnataka
ದೇಶದ ನಿರಾಳ ಬದುಕಿಗೆ ಶಾಸನ ಸಂಹಿತೆ ಬೆಳಕು

ಹೊಸ ಚಿಂತನೆಯ ಮೂಲಕ ಚೈತನ್ಯಶೀಲ ಸಮಾಜ ಸೃಷ್ಟಿಗೆ ಮುಂದಾದಾಗಲಷ್ಟೆ ಇಂತಹ ಮೌನಕ್ರಾಂತಿ ಸಾಧ್ಯ. ಮೌನಕ್ರಾಂತಿಗಳು ಜನಾಭಿಪ್ರಾಯ ರೂಪಿಸುವಲ್ಲಿ ವಹಿಸಿರುವ ಪಾತ್ರ ಜಗದ್ವಿಖ್ಯಾತ.

ಜಗಜ್ಜಾಹೀರಾಗಿರುವಂತೆ ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ರೂಪಿಸಿಕೊಂಡು ಅದರ ಮೂಲಕವೇ ರಾಷ್ಟçದ ಸ್ವರೂಪವನ್ನು ಪಡೆದುಕೊಂಡಿರುವ ಒಂದು ದೇಶ. ಜಗತ್ತಿನ ಬೇರೆ ದೇಶಗಳಿಗೂ ಭಾರತಕ್ಕೂ ಇರುವ ಮೂಲ ವ್ಯತ್ಯಾಸವೆಂದರೆ ಜನಾಂಗೀಯ, ಭಾಷೆ, ಪ್ರಾದೇಶಿಕತೆ. ಭಾರತ ಬಹುಜನಾಂಗಗಳ, ಬಹುಭಾಷೆಗಳ, ಬಹುಪ್ರಾದೇಶಿಕತೆಗಳ ಜೊತೆಗೆ ವೈವಿಧ್ಯಮಯ ಚಲನಶೀಲ ಸಂಸ್ಕೃತಿಯನ್ನು ಹೊಂದಿರುವ ದೇಶ. ಇದೇ ಮಾತನ್ನು ಬ್ರಿಟನ್, ಫ್ರಾನ್ಸ್ ಇಲ್ಲವೇ ಜರ್ಮನಿ ದೇಶಗಳಿಗೆ ಹೇಳಲು ಬರುವುದಿಲ್ಲ. ಹೀಗಾಗಿ ಇಂತಹ ವೈವಿಧ್ಯಮಯ ರಾಷ್ಟçದ ನೆಮ್ಮದಿಯ ಬದುಕಿಗೆ ಶಾಸನ ಸಂಹಿತೆಯಂತೆ ಕಾರ್ಯನಿರ್ವಹಿಸುತ್ತಿರುವ ಸಂವಿಧಾನದ ಪಾತ್ರ ನಿಜಕ್ಕೂ ದೊಡ್ಡದಷ್ಟೇ ಅಲ್ಲ - ನಿರ್ಣಾಯಕ ಕೂಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಾಷ್ಟ್ರೀಯ ಮುಖಂಡರು ಸ್ವಾತಂತ್ರ್ಯ ನಂತರ ದೇಶಕ್ಕೊಂದು ಸ್ವತಂತ್ರ ಸಂವಿಧಾನವನ್ನು ರೂಪಿಸಿರುವ ರೀತಿಯಲ್ಲಿ ವೈಯಕ್ತಿಕ ವೈಶಿಷ್ಟ್ಯದ ವಿಕಸನದ ಜೊತೆಗೆ ಸಾಮೂಹಿಕ ಜಾಣ್ಮೆಯ ವಿಕಾಸಕ್ಕೂ ಮಹತ್ವವಿದೆ. ಇದರಿಂದಾಗಿಯೇ ೭೬ ವರ್ಷಗಳ ಸ್ವತಂತ್ರ ಇತಿಹಾಸದಲ್ಲಿ ಭಾರತ ವಿಜ್ಞಾನ ತಂತ್ರಜ್ಞಾನದಿಂದ ಹಿಡಿದು ಕಲೆ, ಸಾಹಿತ್ಯ ಕ್ರೀಡೆ, ಮೊದಲಾದ ಕ್ಷೇತ್ರಗಳಲ್ಲಿ ಸಾಧಿಸಿರುವ ಗಣನೀಯ ಸಾಧನೆಗೆ ಪೂರಕವಾಗಿದ್ದದ್ದು ನಮ್ಮ ಸಂವಿಧಾನ. ಹೀಗಾಗಿಯೇ ಸಂವಿಧಾನದ ಬೆಳಕಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಭಾರತೀಯರ ಮನೋಧರ್ಮ ಯಾವತ್ತಿಗೂ ಕೂಡಾ ಚಲನಶೀಲ.
ಸಂವಿಧಾನದ ಆಶಯಗಳ ಪೈಕಿ ಮುಖ್ಯವಾದದ್ದು ಶ್ರೀಸಾಮಾನ್ಯನಿಗೆ ಮುಖ್ಯವಾಹಿನಿಯಲ್ಲಿ ಧೀಮಂತರಂತೆ ಕಾರ್ಯ ನಿರ್ವಹಿಸುವ ಮುಕ್ತ ಅವಕಾಶದ ಸೃಷ್ಟಿ. ಇದರಿಂದಾಗಿಯೇ ಬಸ್ ಕಂಡಕ್ಟರ್ ಆಗಿದ್ದವರು, ಗುಮಾಸ್ತರಾಗಿದ್ದವರು ಹಾಗೂ ಅಷ್ಟೇನೂ ಓದು ಬರಹ ಇಲ್ಲದಿದ್ದವರೂ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸುವ ಅವಕಾಶ. ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಚಹಾ ಮಾರುವ ಒಬ್ಬ ಸಾಮಾನ್ಯನಾಗಿದ್ದು ನಂತರ ಹಂತ ಹಂತವಾಗಿ ವ್ಯಕ್ತಿತ್ವ ರೂಪಿಸಿಕೊಂಡು ನಾಯಕತ್ವದ ವಿನ್ಯಾಸ ಹಾಗೂ ವಿಸ್ತಾರಗಳನ್ನು ಬೆಳೆಸಿಕೊಂಡು ದೇಶದ ಸಾರಥಿಯಾಗಿ ರೂಪುಗೊಳ್ಳಲು ಸಾಂವಿಧಾನಿಕ ಅವಕಾಶಗಳು ಕಾರಣ. ನಿಜ. ಇವೆಲ್ಲವೂ ಸಾಂಕೇತಿಕ ಎಂದು ವಿಶ್ಲೇಷಿಸುವವರ ಮಾತನ್ನು ನಿರಾಕರಿಸುವುದು ಕಷ್ಟ. ಹೀಗಾಗಿ ೭೬ ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಶ್ರೀಸಾಮಾನ್ಯರಲ್ಲದೆ ದನಿಯಿಲ್ಲದವರಿಗೆ - ಬಾಯಿಲ್ಲದವರಿಗೆ ಮುಖ್ಯವಾಹಿನಿಯಲ್ಲಿ ಕಾರ್ಯ ನಿರ್ವಹಿಸುವಂತಹ ಅವಕಾಶ ಸೃಷ್ಟಿಯಾಗುವಂತೆ ಮಾಡುವ ಅಗತ್ಯ ಈಗಿನದು. ಶಾಸನದ ಮೂಲಕವೇ ಇಂತಹ ಸಾಧ್ಯತೆಗಳನ್ನು ಕಾರ್ಯರೂಪಕ್ಕೆ ತರುವುದು ಕಷ್ಟ. ಏಕೆಂದರೆ, ಸಾಮುದಾಯಿಕ ಬದುಕು ಸಾಂವಿಧಾನಿಕ ಬದುಕಿಗಿಂತಲೂ ವಿಶಿಷ್ಟ. ಸಮುದಾಯದಲ್ಲಿ ಇಂತಹ ಪ್ರಜ್ಞೆ ಮೂಡಿದಾಗಲಷ್ಟೆ ಅಮಾಯಕರಿಗೆ ಅವಕಾಶಗಳ ಸೃಷ್ಟಿ.
ಇಂತಹ ಸುಧಾರಣೆಗೆ ಮುಖ್ಯವಾಗಿ ಬೇಕಾದದ್ದು ಸಾರ್ವಜನಿಕ ಮನೋಧರ್ಮದ ಬದಲಾವಣೆ. ಇದು ಕೇವಲ ಮಾತುಗಳಿಂದ ಆಗುವಂತಹ ಕೆಲಸವಲ್ಲ. ವೈಚಾರಿಕತೆಯೂ ಈ ವಿಚಾರದಲ್ಲಿ ನಿಸ್ಸಹಾಯಕವಾಗಲೂಬಹುದು. ಹೊಸ ಚಿಂತನೆಯ ಮೂಲಕ ಚೈತನ್ಯಶೀಲ ಸಮಾಜ ಸೃಷ್ಟಿಗೆ ಮುಂದಾದಾಗಲಷ್ಟೆ ಇಂತಹ ಮೌನಕ್ರಾಂತಿ ಸಾಧ್ಯ. ಮೌನಕ್ರಾಂತಿಗಳು ಜನಾಭಿಪ್ರಾಯ ರೂಪಿಸುವಲ್ಲಿ ವಹಿಸಿರುವ ಪಾತ್ರ ಜಗದ್ವಿಖ್ಯಾತ. ಜನತಂತ್ರವೆಂದ ಮೇಲೆ ಯಾವತ್ತಿಗೂ ನಿರ್ಣಾಯಕವಾಗುವುದು ತಲೆ ಎಣಿಕೆ. ಆದರೆ, ತಲೆ ಎಣಿಕೆ ಸರ್ಕಾರ ರಚನೆಗೆ ಮಾತ್ರ. ಉಳಿದಂತೆ ತಲೆಯ ಒಳಗೆ ತಿರುಳನ್ನು ತುಂಬುವುದು ಈ ಮೌನಕ್ರಾಂತಿ. ಲೋಕಾನುಭವ ಹಾಗೂ ಲೋಕನಿಷ್ಠೆಯ ಕಣ್ಣುಗಳಿಂದ ಸಮಾಜದ ಗತಿಸ್ಥಿತಿಯನ್ನು ಗುರುತಿಸುವಾಗ ಮುಕ್ಕಣ್ಣನಂತಿರಬೇಕು. ಎರಡೂ ಮಗ್ಗಲುಗಳನ್ನು ಅರಿತ ನಂತರ ಮೂರನೆಯ ಮಗ್ಗುಲ ಸಾಧ್ಯತೆಗಳನ್ನೂ ಗುರುತಿಸಿ ನಿರ್ಣಯಕ್ಕೆ ಬರುವುದು ಮುಕ್ಕಣ್ಣರಿಗೆ ಸುಲಭ. ಆದರೆ, ವಿಪರ್ಯಾಸದ ಸಂಗತಿಯೆಂದರೆ ಈಗ ಒಕ್ಕಣ್ಣರ ಕಾಲ. ವೈಚಾರಿಕ ದೃಷ್ಟಿದೋಷದಿಂದ ಬಳಲುತ್ತಿರುವವರು ತಮ್ಮ ವೈಚಾರಿಕತೆಯ ಕಣ್ಣಿನಲ್ಲೇ ಇಡೀ ಬದುಕನ್ನು ಕಂಡು `ಇದೇ ಸತ್ಯ - ಇದಷ್ಟೇ ಮಿಥ್ಯ' ಎಂಬ ನಿರ್ಣಯಕ್ಕೆ ಒಕ್ಕಣ್ಣರು ಬರುತ್ತಿರುವ ಈ ಕಾಲಘಟ್ಟದಲ್ಲಿ ಮುಕ್ಕಣ್ಣರ ಧ್ವನಿ ಹೆಚ್ಚಾಗುವಂತೆ ಮಾಡುವುದು ಈಗಿನ ಅಗತ್ಯ. ಸಂವಿಧಾನದ ಬಲವರ್ಧನೆ ಮಾಡುವುದು ಎಂದರೆ ಈ ಮುಕ್ಕಣ್ಣರ ಸಂತತಿಯನ್ನು ವೃದ್ಧಿಸುವುದು ಎಂದೇ. ಹೀಗಾಗಿ ೭೫ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶವಾಸಿಗಳಿಗೆ ಮುಕ್ಕಣ್ಣನ ಪ್ರಜ್ಞೆ ಮೂಡಿದರೆ ಇದು ನಿಜವಾದ ಅರ್ಥದಲ್ಲಿ ದೇಶದ ಸಾರ್ವಭೌಮತ್ವ ಹಾಗೂ ರಕ್ಷಣೆಗೆ ಒಂದು ವಜ್ರದ ಗುರಾಣಿ.