ದೇಶದ ಮೊದಲ ಶಿಕ್ಷಕಿ
ಇಂದು ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ತನ್ನಿಮಿತ್ತ ಲೇಖನ.
ಶೈನಾ ಶ್ರೀನಿವಾಸ್ ಶೆಟ್ಟಿ, ಉಡುಪಿ
ಹೆಣ್ಣೊಬ್ಬಳು ಶಾಲೆಗೆ ಹೋಗಿ ವಿದ್ಯೆಯನ್ನು ಕಲಿಯುವುದು ಎಂದರೆ ಅದು ಕನಸಿನ ಮಾತೇ ಆಗಿದ್ದ ಕಾಲ ಘಟ್ಟವದು. ಅಂತಹ ಕಠಿಣ ಪರಿಸ್ಥಿತಿಯಲ್ಲಿ ತಾನು ವಿದ್ಯೆಯನ್ನು ಕಲಿತು ಸಮಾಜದ ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ಬೋಧಿಸಲು ಮುಂದಾದರು. ತಾನು ಅನುಭವಿಸಿದ ನೋವು, ಕಷ್ಟ, ಅವಮಾನಗಳು ನೂರೆಂಟಿದ್ದರೂ ಅದನ್ನು ಲೆಕ್ಕಿಸದೆ ಬಂಡೆಯಂತೆ ನಿಂತು ಛಲ ಬಿಡದೆ ಸಾಧಿಸಿ, ಹೆಣ್ಣು ಮಕ್ಕಳಿಗೆ ವಿದ್ಯೆಯನ್ನು ಬೋಧಿಸಿದ ಅಕ್ಷರ ಮಾತೆ, ಜ್ಞಾನದಾತೆಯೇ ಸಾವಿತ್ರಿ ಬಾಯಿ ಫುಲೆ ಇವರು.
ಬಾಲ್ಯ ವಿವಾಹ ರೂಢಿಯಲ್ಲಿದ್ದ ಸಮಯ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸವನ್ನು ಪಡೆದು ತಾನೇ ಶಿಕ್ಷಕಿಯಾಗಿ ಕೋಟ್ಯಂತರ ಮಹಿಳೆಯರಿಗೆ ಆದರ್ಶ ಪ್ರಾಯರಾದ ಭಾರತದ ಮೊದಲ ಶಿಕ್ಷಕಿಯೇ ಸಾವಿತ್ರಿಬಾಯಿ ಫುಲೆ.
ಮಹಾರಾಷ್ಟ್ರದ ಸತಾರ ಜಿಲ್ಲೆಯ 'ನೈಗಾಂವ್' ನಲ್ಲಿ ೩ ಜನವರಿ ೧೮೩೧ ರಲ್ಲಿ ಸಾವಿತ್ರಿಬಾಯಿ ಫುಲೆ ಅವರ ಜನನವಾಯಿತು. ತಮ್ಮ ಎಂಟನೇ ವಯಸ್ಸಿನಲ್ಲೆ ಹದಿಮೂರರ ಹರೆಯದ ಜ್ಯೋತಿ ಬಾ ಫುಲೆಯವರನ್ನು ವಿವಾಹವಾದರು. ಆ ಕಾಲದಲ್ಲಿ ಬಾಲ್ಯ ವಿವಾಹ ಸರ್ವೇ ಸಾಮಾನ್ಯವಾಗಿದ್ದರೂ ಮುಂದೆ ಅದರ ನಿರ್ಮೂಲನೆಗಾಗಿ ಪತಿಯೊಂದಿಗೆ ಹೆಜ್ಜೆ ಹಾಕಿದರು. ಸಾವಿತ್ರಿ ಬಾಯಿಯವರಿಗೆ ಪತಿಯೇ ಮೊದಲ ಗುರು. ತಮ್ಮ ಹದಿನೇಳನೆಯ ವಯಸ್ಸಿನಲ್ಲಿಯೇ ಮಹಾರಾಷ್ಟ್ರದ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕ ತರಬೇತಿಯನ್ನು ಪಡೆದು ಪೂರ್ಣ ಪ್ರಮಾಣದಲ್ಲಿ ಶಿಕ್ಷಕಿಯಾಗಿ ಹೊರಬಂದರು.
ಪತಿಯ ಸರಳ ಸಜ್ಜನಿಕೆ, ಶಿಸ್ತು, ಸಂಯಮಗಳನ್ನು ತನ್ನಲ್ಲಿ ಅಳವಡಿಸಿಕೊಂಡು ಸಾವಿತ್ರಿಬಾಯಿ ಅವರು ಪತಿಯ ಸಮಾಜ ಸುಧಾರಣಾ ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತರು.
ತಮ್ಮ ಜೀವನದುದ್ದಕ್ಕೂ ಸಮಾಜ ಸುಧಾರಣೆ, ಪ್ರಗತಿಪರ ಹೋರಾಟ, ಮಹಿಳಾ ಶಿಕ್ಷಣ, ಸಮಾಜದ ಏಳಿಗೆಯ ದೃಷ್ಟಿಕೋನವನ್ನೇ ಇರಿಸಿಕೊಂಡು ಪತಿಗೆ ಹೆಗಲು ಕೊಟ್ಟರು. ಒಬ್ಬರನ್ನೊಬ್ಬರು ಗೌರವಿಸುವ ಗುಣದ ಜೊತೆಗೆ ವೈಯಕ್ತಿಕ ಭಾವನೆಗಳಿಗೆ ಹೆಚ್ಚಿನ ಗಮನ ಕೊಟ್ಟರು. ಜ್ಯೋತಿ ಬಾ ಫುಲೆ ಅವರ ಆದರ್ಶದ ಬದುಕಿನ ನೆರಳಲ್ಲೇ ಸಾವಿತ್ರಿ ಬಾಯಿ ಫುಲೆ ಅವರ ಬದುಕು ಸಾಗಿತ್ತು. ಹೀಗೆ ಒಬ್ಬರಿಗೊಬ್ಬರು ನೆರಳಾಗಿ ಆದರ್ಶ ಪ್ರಾಯರಾಗಿದ್ದರು.
ಈ ದಂಪತಿಗಳಿಗೆ ಮಕ್ಕಳಿಲ್ಲದಿದ್ದರೂ ತಾವು ವಿದ್ಯೆಯನ್ನು ಕಲಿಸುವ ಮಕ್ಕಳೆಲ್ಲರೂ ತಮ್ಮ ಮಕ್ಕಳೆಂಬ ಭಾವದಿಂದ ಬದುಕನ್ನು ಸಂತಸದಿಂದ ಸಾಗಿಸಿದರು. ಮುಂದೆ ಯಶವಂತನೆಂಬ ಬಾಲಕನನ್ನು ದತ್ತು ಪಡೆದು ಸಾಕಿ ಸಲಹುತ್ತಾರೆ. ಹೀಗೆ ತಮ್ಮ ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಮಾಜಕ್ಕೆ ಒಂದಲ್ಲ ಒಂದು ಆದರ್ಶವನ್ನು ನೀಡುತ್ತಾ ಸಮಾಜಕ್ಕೆ
ಆದರ್ಶ ಪ್ರಾಯರಾಗಿದ್ದರು ಫುಲೆ ದಂಪತಿಗಳು. ಮುಂದೆ ಸಾವಿತ್ರಿ ಬಾಯಿ ಅವರು ಭಿಡೆ ಅವರ ಮನೆಯಲ್ಲಿ ಆರಂಭಗೊಂಡ ಕನ್ಯಾ ಶಾಲೆಯ ಮುಖ್ಯ ಶಿಕ್ಷಕಿಯಾದರು. ಆ ಕಾಲಘಟ್ಟದ ಕೆಲವೊಂದು ನಿಬಂಧನೆ, ಕಟ್ಟುಪಾಡುಗಳನ್ನು ಮೀರಿ ನಿಂತು ತನಗಾದ ಅಪಮಾನವೆಲ್ಲವನ್ನೂ ಮರೆತು ಪತಿಯೊಂದಿಗೆ ಸಮಾಜ ಸೇವೆಗೆ ಜೀವನವನ್ನು ಮುಡಿಪಾಗಿಸಿದರು.
ಮನೆಯಿಂದ ಶಾಲೆಗೆ ಬರುವ ದಾರಿಯಲ್ಲಿ ಅವರ ಕೆಲಸಕ್ಕೆ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಕೆಲವು ತಿಳಿಗೇಡಿಗಳು ಅವರಿಗೆ ಕೆಸರು, ಸಗಣಿ, ಕಲ್ಲನ್ನು ಎಸೆಯುತ್ತಾರೆ. ಆದರೆ ಇವರು ಮಾತ್ರ ತನ್ನ ಕೈಂಕರ್ಯಕ್ಕೆ ಎಂದೂ ಕೂಡ ಬೆನ್ನು ತಿರುಗಿಸದೆ ಬಂಡೆಯಂತೆ ಭದ್ರವಾಗಿ ತಳವೂರಿ ನಿಲ್ಲುತ್ತಾರೆ.
ಇದರ ಪ್ರತಿಫಲವಾಗಿ ಹದಿನೆಂಟು ಪಾಠ ಶಾಲೆಗಳನ್ನು ಫುಲೆ ದಂಪತಿಗಳು ಆರಂಭಿಸಲು ನಾಂದಿಯಾಯಿತು.
ಸಮಾಜದ ಅನಿಷ್ಟ ಪದ್ಧತಿಗಳಾದ ಸತಿ ಸಹಗಮನ, ಕೇಶ ಮುಂಡನ, ಬಾಲ್ಯವಿವಾಹದ ವಿರುದ್ಧ ಧ್ವನಿ ಎತ್ತಿ ನಿಲ್ಲುವುದರ ಜೊತೆಗೆ ಅಬಲಾಶ್ರಮ, ಮಹಿಳೆಯರ ವಿದ್ಯಾಭ್ಯಾಸದ ಪ್ರಾಮುಖ್ಯತೆ ಹಾಗೂ ಅದರ ಅವಶ್ಯಕತೆಯನ್ನು ಜನರಿಗೆ ಮನಮುಟ್ಟಿಸಲು ಹೋರಾಟ ನಡೆಸುತ್ತಾರೆ. ಇವರ ಈ ಕಾರ್ಯಕ್ಕೆ ಸ್ವತಃ ಬ್ರಿಟಿಷ್ ಸರಕಾರವೇ ತಲೆ ತೂಗಿ ಇವರನ್ನು ಇಂಡಿಯಾಸ್ ಫಸ್ಟ್ ಲೇಡಿ ಟೀಚರ್ ಎಂಬ ಬಿರುದು ಕೊಟ್ಟು ಸನ್ಮಾನಿಸುತ್ತದೆ.
ಇಡಿ ಸಮಾಜವನ್ನೇ ತನ್ನ ಕುಟುಂಬವೆಂಬಂತೆ ಪ್ರೀತಿಸಿ ಪ್ರತಿಯೊಬ್ಬರ ಕಷ್ಟಗಳಿಗೆ ಸ್ಪಂದಿಸುತ್ತಾ ತಮ್ಮ ಜೀವನವನ್ನು ಮುಡಿಪಾಗಿಸುತ್ತಾರೆ. ಅವರ ಬದುಕಿನ ಕೊನೆ ಕೂಡ ಸಮಾಜಮುಖಿ ಕಾರ್ಯದೊಂದಿಗೆ ಅಂತ್ಯವಾಗುತ್ತದೆ.
ಪ್ಲೇಗ್ ಪೀಡಿತ ರೋಗಿಗಳ ಶುಶ್ರೂಷೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಸಮಯದಲ್ಲಿ ಸಾವಿತ್ರಿಬಾಯಿ ಅವರಿಗೆ ಈ ಸೋಂಕು ತಗಲಿ ಕೊನೆಯುಸಿರೆಳೆಯುತ್ತಾರೆ. ಅವರ ಜೀವನದ ಜನನದಿಂದ ಮರಣದವರೆಗೂ ಒಂದಲ್ಲ ಒಂದು ಆದರ್ಶದ ಮೌಲ್ಯವನ್ನು ಸಮಾಜಕ್ಕೆ ಬಿಟ್ಟುಹೋಗಿದ್ದಾರೆ. 'ಹೆಣ್ಣೊಂದು ಕಲಿತರೆ ಶಾಲೆಯೊಂದನ್ನು ತೆರೆದಂತೆ'ಎಂಬ ಮಾತು ಇವರ ಜೀವನಕ್ಕೆ ಹೇಳಿ ಮಾಡಿಸಿದಂತಿದೆ. ಇಂತಹ ಮಹಾನ್ ಸಮಾಜ ಸುಧಾರಕಿ,ಅಕ್ಷರ ಮಾತೆಯನ್ನು ಆದರ್ಶ ವ್ಯಕ್ತಿಯನ್ನು ಅನುದಿನವೂ ನಾವು ನೆನೆಯಬೇಕಿದೆ. ಎಲ್ಲರೂ ಇವರ ಆದರ್ಶಗಳು ಹಾಗೂ ಜೀವನದ ಮೌಲ್ಯಗಳನ್ನು ಜೀವನದಲ್ಲಿ ಸಾಧ್ಯವಾಗುವಷ್ಟು ಅಳವಡಿಸಿಕೊಂಡರೆ ಅದು ಈ ಮಹಾನ್ ಸಾಧಕಿ, ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆಯವರಿಗೆ ಕೊಡುವ ದೊಡ್ಡ ಗೌರವವಾಗಿದೆ.