For the best experience, open
https://m.samyuktakarnataka.in
on your mobile browser.

ದೇಶಸೇವೆಯೇ ಈಶಸೇವೆ

03:00 AM Mar 21, 2024 IST | Samyukta Karnataka
ದೇಶಸೇವೆಯೇ ಈಶಸೇವೆ

ತಮ್ಮ ಮೂಗಿನ ನೇರಕ್ಕೆ ಕಾನೂನುಗಳನ್ನು ಜಾರಿಗೊಳಿಸಿ, ದೇಸೀ ವ್ಯವಸ್ಥೆಯನ್ನು ಬುಡಮೇಲುಗೊಳಿಸುವ ಬ್ರಿಟಿಷ್ ಸರಕಾರದ ಆಟಕ್ಕೆ ಮಂಗಳ ಹಾಡಿದ ಭಾಯಿ ಬಾಲಮುಕುಂದರು ಕಳೆದ ಶತಮಾನದ ಮಹಾಸಾಹಸಿಗಳಲ್ಲೊಬ್ಬರು. 'ಭಾರತದ ಯುವಕರ ಸಾಮರ್ಥ್ಯ, ದೇಶಪ್ರೇಮಕ್ಕೆ ಸವಾಲೆಸೆಯುವ ಆಂಗ್ಲರ ಯೋಜನೆಗಳಿಗೆ ತಕ್ಕ ಪ್ರತ್ಯುತ್ತರ ನೀಡುವ ಕಾಲ ದೂರವಿಲ್ಲ. ಮೋಸ, ವಂಚನೆಯ ಕೋಟೆಯೊಳಗೆ ಅದೆಷ್ಟು ಕಾಲ ಮೆರೆಯುವಿರೋ ನಾವೂ ನೋಡುತ್ತೇವೆ. ಜಗತ್ತಿನ ಅನೇಕ ನಾಗರಿಕ ಸಂಸ್ಕೃತಿಗಳ ನಾಶಗೈದು ಆಧುನಿಕತೆಯ ಸ್ಪರ್ಶದ ಬಗ್ಗೆ ಬಡಾಯಿ ಕೊಚ್ಚುವ ಇಂಗ್ಲೆಂಡ್‌ನ ರಾಣಿಗೆ ನಾಚಿಕೆಯಾಗಬೇಕು. ರಕ್ತದೋಕುಳಿ ಹರಿಸಿ, ಅನ್ಯಾಯದ ಎಲ್ಲೆ ಮೀರಿ ಬಡವರ ಬದುಕನ್ನು ಕಸಿದುಕೊಳ್ಳುವ ಸರಕಾರಕ್ಕೆ ಧಿಕ್ಕಾರ. ಒಂದಲ್ಲ, ಹತ್ತುಬಾರಿ ಗಲ್ಲುಶಿಕ್ಷೆ ವಿಧಿಸಿದರೂ ಅಂಜುವವನು ನಾನಲ್ಲ. ನೇಣಿನ ಕುಣಿಕೆಗೆ ಕೊರಳೊಡ್ಡಿ ಮೋಕ್ಷಕ್ಕೆ ಹೋಗುವ ಯೋಚನೆಯಂತೂ ನನಗಿಲ್ಲ. ಮತ್ತೆ ಹುಟ್ಟಿ ದೇಶಕಟ್ಟುವ ನನ್ನ ಸಂಕಲ್ಪಕ್ಕೆ ಅಡ್ಡಿಪಡಿಸುವ ವ್ಯಕ್ತಿ ಇನ್ನೂ ಹುಟ್ಟಿಲ್ಲ' ಎಂಬ ಸಿಡಿಗುಂಡಿನ ಲೇಖನ ಬರೆದು ಗುಡುಗಿದ ಪರಾಕ್ರಮಿ ಬಾಲಮುಕುಂದ ಸಶಸ್ತ್ರ ಕ್ರಾಂತಿಗೆ ಹೊಸ ದಿಕ್ಕಿತ್ತ ಸ್ವಾತಂತ್ರ‍್ಯ ಹೋರಾಟಗಾರ. ಪಂಜಾಬಿನ ಸುಸಂಸ್ಕೃತ, ರಾಷ್ಟ್ರೀಯ ಚಿಂತನೆಯ ಕುಟುಂಬದಲ್ಲಿ ಜನಿಸಿದ ಬಾಲಮುಕುಂದರ ವಿದ್ಯಾರ್ಥಿಜೀವನ ಅವರ ಭವ್ಯ ಭವಿತವ್ಯಕ್ಕೆ ಭದ್ರ ಬುನಾದಿಯಾಯಿತು. ಪದವಿ ಶಿಕ್ಷಣದ ಬಳಿಕ ಶಿಕ್ಷಕರಾಗಿ ವೃತ್ತಿಜೀವನ ಆರಂಭಿಸಿ ಅಲ್ಪಕಾಲದಲ್ಲೇ ಉತ್ತಮ ಉಪಾಧ್ಯಾಯರೆಂಬ ಗೌರವಕ್ಕೂ ಪಾತ್ರರಾಗಿ ಪಾಠಪ್ರವಚನಗಳ ಜೊತೆಜೊತೆಗೆ ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿದರು. ಸಹೋದರ ಭಾಯಿ ಪರಮಾನಂದರ ವೈಚಾರಿಕ ಚಿಂತನೆಗಳು, ದೇಶಭಕ್ತಿಯ ಲೇಖನ, ಭಾಷಣಗಳಿಂದ ಪ್ರಭಾವಿತರಾಗಿ ತಾವೂ ಆ ದಿಕ್ಕಿನತ್ತ ಪಯಣಿಸಲು ಸಂಕಲ್ಪಿಸಿದರು.
ಬ್ರಿಟಿಷರ ದರ್ಪ, ಅಹಂಕಾರಕ್ಕೆ ಮನವಿ ಪತ್ರ ಸಲ್ಲಿಕೆ, ವಿನಮ್ರ ವಿನಂತಿ ಹಾಗೂ ಪರಸ್ಪರ ಸಂಧಾನ ಮಾತುಕತೆ ಪರಿಹಾರವಲ್ಲ, ಏಟಿಗೆ ಎದಿರೇಟು ಕೊಡುವುದೇ ಆಕ್ರಮಣಕಾರರಿಗೆ ಅರ್ಥವಾಗುವ ಸುಲಭ ಭಾಷೆ ಎಂದು ಘೋಷಿಸಿದ ಮುಕುಂದರು ಯುವಕರನ್ನು ಸಂಘಟನೆಯ ಕಾರ್ಯದತ್ತ ಆಕರ್ಷಿಸಿದರು. ಹೊರಜಗತ್ತಿಗೆ ಶಿಕ್ಷಕರಾಗಿ ಗುರುತಿಸಿದ್ದರೂ ಪ್ರಖರ ಕ್ರಾಂತಿಕಾರಿಯಾಗಿ ಮೂಡಿದ ಬಾಲಮುಕುಂದರ ಯೋಚನೆ ಹಾಗೂ ಯೋಜನೆಗಳ ಬಗ್ಗೆ ಅನೇಕರಿಗೆ ವಿಶ್ವಾಸ ಮೂಡಿತು. ಬಾಂಬ್ ದಾಳಿ, ಬಂದೂಕಿನ ಸದ್ದಿನಿಂದ ಬ್ರಿಟಿಷ್ ಸಾಮ್ರಾಜ್ಯವನ್ನು ನಡುಗಿಸಬಹುದೆಂಬ ಪರಿಕಲ್ಪನೆಯನ್ನು ನೀಡಿ ಅದರ ಕಾರ್ಯಸಾಧನೆಗೆ ಬೇಕಾದ ವ್ಯವಸ್ಥೆಯಲ್ಲಿ ವ್ಯಸ್ತರಾದರು. ತ್ಯಾಗವಿಲ್ಲದೆ ಸುಖವಿಲ್ಲವೆಂಬ ಮಾತನ್ನು ಪದೇಪದೇ ಹೇಳಿ ತರುಣರ ಗೊಂದಲವನ್ನು ದೂರೀಕರಿಸಿ ಮಹಾಕ್ರಾಂತಿಗೆ ಮುನ್ನುಡಿ ಬರೆದರು. ಹಾರ್ಡಿಂಗ್ ಮೆರವಣಿಗೆಯ ಮೇಲೆ ಬಾಂಬೆಸೆದ ಪರಾಕ್ರಮದ ಹಿಂದೆ ಬಾಲಮುಕುಂದರ ಸಹಕಾರವೂ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಲಾರೆನ್ಸ್ ಗಾರ್ಡನ್ ಸಮೀಪ ಸ್ಫೋಟಿಸಿದ ಬಾಂಬ್ ಆಂಗ್ಲರ ಬುಡ ಅಲುಗಾಡಿಸಿತು. ಮಿಂಚಿನ ವೇಗದಲ್ಲಿ ನಡೆದ ಕಾರ್ಯಾಚರಣೆಯ ಜಾಡು ಹಿಡಿದ ಪೊಲೀಸರ ಕಣ್ತಪ್ಪಿಸಿ ಓಡಾಡಿದರೂ ಬಹುಕಾಲ ಹೊರಗುಳಿಯಲಾಗಲಿಲ್ಲ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ಸಂದರ್ಭ ನೋಡಿ ಮುಕುಂದರನ್ನು ಸೆರೆಹಿಡಿದ ಅಧಿಕಾರಿಗಳು ಸಜೀವ ಬಾಂಬ್ ಅವರ ಬಳಿಯಿರಬಹುದೆಂದು ಶಂಕಿಸಿ ಭೀತರಾಗಿದ್ದರು. ಅನೇಕ ಯುವಕರು ಒಬ್ಬೊಬ್ಬರಾಗಿ ಬಂಧನಕ್ಕೊಳಗಾಗುತ್ತಿದ್ದಂತೆ ಗುಪ್ತ ಸಂದೇಶ ಕಳುಹಿಸಿದ ಭಾಯಿ, ಯಾವುದೇ ಕಾರಣಕ್ಕೂ ಸಂಘಟನೆ ಬಲಹೀನವಾಗದಂತೆ ಶ್ರಮಿಸಲು ಕರೆಯಿತ್ತರು. ಅಮರರಾಗುವ ಹಿಂದಿನ ದಿನವೂ ಬಿಡುಗಡೆಗೊಳ್ಳುವ ಕೈದಿಗಳಿಗೆ ಮುಂದಿನ ಕಾರ್ಯಸೂಚಿಯ ಕುರಿತು ಚಿತ್ರಣವಿತ್ತು ನಗುನಗುತ್ತಲೇ ನೇಣಿನ ಕುಣಿಕೆಗೆ ಕೊರಳೊಡ್ಡಿದ ಭಾಯಿ ಬಾಲಮುಕುಂದರ ಕ್ರಿಯಾಶಕ್ತಿ ಅತುಲ್ಯ. ತಾಯ್ನೆಲವನ್ನು ಅತ್ಯುಚ್ಚ ಭಾವದಿಂದ ಆರಾಧಿಸುವ ಪ್ರತಿಯೊಬ್ಬರಿಗೂ ಅವರ ಜನ್ಮದಿನ ಪ್ರೇರಣೆಯ ಪರ್ವದಿನ.
ಇಡಿಯ ಭಾರತವೇ ತಮ್ಮ ವಸಾಹತೆಂಬ ಅಹಂಕಾರದಲ್ಲಿ ಬಡ ರೈತರನ್ನು ಹಿಂಸಿಸುವ ಮನೋಧರ್ಮವನ್ನು ರೂಢಿಸಿದ್ದ ಬ್ರಿಟಿಷ್ ಅಧಿಕಾರಿಗಳ ಚಳಿ ಬಿಡಿಸಿದ ಮೋಹನಲಾಲ್ ಪಾಂಡ್ಯಾ, ರಾಮರಾಜ್ಯದ ಬೀಜ ಬಿತ್ತಿದ ಸ್ವಾತಂತ್ರ‍್ಯ ಹೋರಾಟಗಾರ. 'ನಮ್ಮ ದೇಶಕ್ಕೆ ವ್ಯಾಪಾರದ ಉದ್ದೇಶದಿಂದ ಬಂದು ಇಲ್ಲಿಯ ಆಡಳಿತವನ್ನು ಕೈಗೆತ್ತಿಕೊಂಡು ದರ್ಪ, ದೌರ್ಜನ್ಯವೆಸಗುತ್ತಿರುವ ನೀತಿ ಸರ್ವಥಾ ಸರಿಯಲ್ಲ. ಇನ್ನೊಬ್ಬರ ಸಮಾಧಿಯ ಮೇಲೆ ಸಾಮ್ರಾಜ್ಯ ನಿರ್ಮಿಸಲು ಹೊರಟಿರುವ ಸರಕಾರದ ನಡೆ ಅಕ್ಷಮ್ಯ. ನೀವು ಯಾರನ್ನು ಮುಟ್ಟಿ ನೆಮ್ಮಂದಿಯಿಂದ ಇರುವಿರೋ ನನಗೆ ತಿಳಿದಿಲ್ಲ. ಆದರೆ ಭಾರತದ ಅನ್ನದಾತ ರೈತರ ಮೇಲೆ ದಬ್ಬಾಳಿಕೆ ಮುಂದುವರಿದರೆ ಪರಿಸ್ಥಿತಿ ನೆಟ್ಟಗಿರದು. ಕೃಷಿಕನನ್ನು ದೇವರೆಂದು ಪೂಜಿಸುವ ನಾಡಿನಲ್ಲಿ ಅಪಕಾರ್ಯಗಳಿಗೆ ಆಸ್ಪದ ನೀಡದಿರಿ' ಎಂಬ ಎಚ್ಚರಿಕೆಯ ಸಂದೇಶದಿಂದ ಆಂಗ್ಲ ಸರಕಾರದ ದುರಾಡಳಿತ ಖಂಡಿಸಿದ ಕ್ರಾಂತಿಕಾರಿ ಪಾಂಡ್ಯಾ, ಗಾಂಧಿವಾದಿ ನಾಯಕರಾಗಿ ಸುಪ್ರಸಿದ್ಧರು. ಗುಜರಾತಿನ ಪುಟ್ಟ ಹಳ್ಳಿಯಲ್ಲಿ ಜನಿಸಿದ ಮೋಹನಲಾಲರು ಪರಂಪರಾಗತವಾಗಿ ಬಂದ ಕೃಷಿ ಕಾರ್ಯದ ಜೊತೆಜೊತೆಗೆ ಶೈಕ್ಷಣಿಕವಾಗಿಯೂ ಉನ್ನತ ಸ್ಥಾನ ಸಂಪಾದಿಸಿದರು. ಪದವಿಯ ಬಳಿಕ ಕೆಲಕಾಲ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ ಬ್ರಿಟಿಷರ ಕುನೀತಿಗಳನ್ನು ಬಯಲಿಗೆಳೆದ ಪಾಂಡ್ಯಾ, ಬಳಿಕ ಅಧ್ಯಾಪಕರಾಗಿ ವೃತ್ತಿಜೀವನ ಮುಂದುವರಿಸಿದರು. ವಿದ್ಯಾರ್ಥಿಗಳಲ್ಲಿ ಮರೆಯಾಗಿದ್ದ ದೇಶಭಕ್ತಿಯನ್ನು ಜಾಗೃತಗೊಳಿಸಿ ಭಾರತೀಯತೆಯ ಕಂಪನ್ನು ಬೀರುವಲ್ಲಿ ಸಫಲರಾದರಲ್ಲದೆ ವಂಗಭಂಗ ವಿರೋಧೀ ಆಂದೋಲನದಲ್ಲಿ ಸಕ್ರಿಯವಾಗಿ ಭಾಗಿಯಾದರು. ಸ್ವಾತಂತ್ರ‍್ಯ ಹೋರಾಟದ ಆಸಕ್ತಿಗೆ ವೃತ್ತಿ ಅಡ್ಡಿಯಾಗುತ್ತಿದ್ದರಿಂದ ರಾಜೀನಾಮೆಯಿತ್ತು ಮುನ್ನಡೆದ ಪಾಂಡ್ಯಾ, 'ತರುಣವಿಹಾರ ಸಂಘ' ಸ್ಥಾಪಿಸಿ ಯುವಕರನ್ನು ಕಲೆಹಾಕಿ ರಾಷ್ಟçಪ್ರೇಮದ ಸಭೆಗಳನ್ನು ಆಯೋಜಿಸಿದರು. ವೈಸ್‌ರಾಯ್ ಮಿಂಟೋನ ಮೇಲೆ ಬಾಂಬ್ ಎಸೆಯುವ ಯೋಜನೆಯಲ್ಲೂ ಭಾಗಿಯಾದ ಪಾಂಡ್ಯಾ, ಐದು ವರ್ಷಗಳ ಕಾಲ ಭೂಗತರಾಗಿ ಗುಪ್ತ ಕಾರ್ಯಾಚರಣೆಯಲ್ಲಿ ತೊಡಗಿದರು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಕೊನೆಯಾಗಬೇಕಿದ್ದರೆ ಶಿಕ್ಷಣ ಅವರನ್ನು ತಲುಪುವುದು ಅನಿವಾರ್ಯವೆನ್ನುವುದನ್ನು ಅರಿತು ಮಹಿಳಾ ಸಬಲೀಕರಣಕ್ಕಾಗಿ ಸಾಮಾಜಿಕ ಜಾಗೃತಿ ಮೂಡಿಸಿದರು.
ರೈತರು ಕಷ್ಟಪಟ್ಟು ಬೆಳೆದ ಫಸಲಿಗೆ ಬಂದ ಈರುಳ್ಳಿಯ ಭೂಮಿಯನ್ನು ಸ್ವಾಧೀನಪಡಿಸಿದ ಬ್ರಿಟಿಷರ ಕ್ರಮ ವಿರೋಧಿಸಿ ಅವರ ಕಣ್ತಪ್ಪಿಸಿ ಅದರ ಕಟಾವು ಮಾಡಿ ಈರುಳ್ಳಿ ಚೋರನೆಂಬ ಬಿರುದಿಗೆ ಪಾತ್ರರಾದ ಪಾಂಡ್ಯಾ ಸಾಹಸ ಅದ್ಭುತ. ಸದಾ ಕಾಲ ತನ್ನವರ ಹಿತ ಹಾಗೂ ದೇಶದ ಅಸ್ಮಿತೆಯ ಉಳಿವನ್ನೇ ಬಯಸಿ ಕೊನೆಯ ಉಸಿರಿನವರೆಗೂ ಅದಕ್ಕಾಗಿಯೇ ತನ್ನ ಸರ್ವಸ್ವವನ್ನೂ ಧಾರೆಯೆರೆದು ಅಸ್ತಂಗತರಾದ ಮೋಹನಲಾಲ ಪಾಂಡ್ಯರ ಹೋರಾಟದ ಹಾದಿ ಅಜರಾಮರ. ರೈತರಿಗೆ ಅನ್ಯಾಯವಾದಾಗ ಧ್ವನಿ ಏರಿಸಿ ಪ್ರಶ್ನಿಸಿದ್ದ ಪಾಂಡ್ಯರ ಸ್ಮೃತಿದಿನ ನಮ್ಮನ್ನೂ ಆ ಹಾದಿಯತ್ತ ಪ್ರೇರೇಪಿಸಲಿ.