For the best experience, open
https://m.samyuktakarnataka.in
on your mobile browser.

ದೇಶಹಿತದ ಕಾಯಕ, ನಾಡಿಗದುವೆ ಪ್ರೇರಕ

03:36 AM Oct 24, 2024 IST | Samyukta Karnataka
ದೇಶಹಿತದ ಕಾಯಕ  ನಾಡಿಗದುವೆ ಪ್ರೇರಕ

`ಭಾರತದ ಸಂಪತ್ತನ್ನು ಸಾವಿರ ವರ್ಷಗಳ ಕಾಲ ದೋಚಿದ ವಿದೇಶೀಯರು ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಕದಿಯಲು ಸಾಧ್ಯವಾಗಲಿಲ್ಲ. ಪ್ರತಿದಿನವೂ ಹಲವು ಬಗೆಯ ಹೊಸತನದಿಂದ ಕಂಗೊಳಿಸುವ ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸುವುದು ಯಾರಿಂದಲೂ ಸಾಧ್ಯವಿಲ್ಲ. ಹಾಗೆಂದು ನಾವು ಸುಮ್ಮನಿದ್ದರೆ ಅಭ್ಯಾಸವಿಲ್ಲದ ಕಾರಣ ಅಪರೂಪದ ವಿದ್ಯೆ ನಷ್ಟವಾಗುವುದರಲ್ಲಿ ಸಂಶಯವಿಲ್ಲ. ಜಗತ್ತಿಗೆ ಭಾರತೀಯತೆಯ ಆಧ್ಯಾತ್ಮ ಜ್ಞಾನವನ್ನು ಪಸರಿಸುವ ಕಾರ್ಯದಲ್ಲಿ ಪ್ರತಿಯೊಂದು ಸಂಸ್ಥಾನವೂ ಜೊತೆಯಾಗಬೇಕು. ದೇಸೀ ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವ ಜೊತೆಗೆ ಯೋಗಶಾಸ್ತ್ರದ ಹಿರಿಮೆಯನ್ನು ಸಾರಬೇಕು' ಎಂಬ ಕಳಕಳಿಯಿಂದ ಸುಸಮೃದ್ಧ ರಾಜ್ಯವನ್ನಾಳಿದ ಶ್ರೀಮಂತ ಸರದಾರ ಭವಾನರಾವ್ ಶ್ರೀನಿವಾಸ ರಾವ್ ಪಂತ ಪ್ರತಿನಿಧಿ, ಬಾಳಾಸಾಹೇಬ್ ಪಂತರೆಂದೇ ಸುಪ್ರಸಿದ್ಧರು. ಔಂಧ್ ಸಂಸ್ಥಾನದ ಮಹಾರಾಜಾ ಶ್ರೀನಿವಾಸ ಪರಶುರಾಮ ಪಂತ್ ದಂಪತಿಗಳಿಗೆ ಜನಿಸಿದ ಬಾಳಾಸಾಹೇಬರು ಉತ್ಕೃಷ್ಟ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆದರು. ಶಾಸ್ತ್ರಾಧ್ಯಯನ, ಶಸ್ತ್ರಪಾಠ, ರಾಜೋಚಿತ ಸಂಸ್ಕಾರಗಳಿಂದ ಪರಿಪೂರ್ಣತೆಯತ್ತ ಸಾಗಿದ ಪ್ರತಿನಿಧಿ, ಡೆಕ್ಕನ್ ಕಾಲೇಜಿನಲ್ಲಿ ಪದವಿ ಪೂರೈಸಿದರು. ಪ್ರಖರ ರಾಷ್ಟ್ರೀಯತೆಯ ಕೇಂದ್ರವಾದ ವಿದ್ಯಾಸಂಸ್ಥೆಯಲ್ಲಿ ಭಾರತೀಯ ಪರಂಪರೆಯನ್ನು ಪರಿಪೂರ್ಣವಾಗಿ ಅರ್ಥೈಸಿದ ಪಂತ್, ದೇಶಭಕ್ತಿಯ ವಿಶೇಷ ಶಿಕ್ಷಣವನ್ನೂ ಪಡೆದರು. ಅನೇಕ ಮಹನೀಯರ, ಸ್ವಾತಂತ್ರ‍್ಯ ಹೋರಾಟಗಾರರ ಪರಿಚಯವನ್ನೂ ಮಾಡಿಕೊಂಡ ಬಳಿಕ ತಮ್ಮ ಸಂಸ್ಥಾನದಿಂದಲೂ ದೇಶಭಕ್ತರ ಕಾರ್ಯಕ್ಕೆ ನೆರವಾದರು. ಪೂನಾದ ಸಾರ್ವಜನಿಕ ಸಭಾದ ಅಧ್ಯಕ್ಷರಾಗಿ ಸ್ವದೇಶೀ ಚಿಂತನೆಗಳನ್ನು ಪಸರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿ ಹನ್ನೆರಡು ವರ್ಷಗಳ ಕಾಲ ತಂದೆಯ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಪಂತ್, ಔಂಧ್ ಸಿಂಹಾಸನ ಏರಿದ ಬಳಿಕ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ಜಾರಿಗೆ ತಂದರು. ಸಂಸ್ಕೃತದಲ್ಲಿ ವಿಶೇಷ ಆಸಕ್ತಿ ವಹಿಸಿ ಪ್ರಾಚೀನ ಸಾಹಿತ್ಯದಲ್ಲಿ ಅಡಗಿರುವ ಆಡಳಿತಾತ್ಮಕ ನೀತಿಗಳ ಸಂಶೋಧನೆಯನ್ನು ಪ್ರೋತ್ಸಾಹಿಸಿದರು. ಹಿಂದೂ ಸಂಸ್ಕೃತಿಯ ಮಾನಬಿಂದುಗಳಾದ ವೇದ, ಉಪನಿಷತ್ತುಗಳು ಹೊರಸೂಸುವ ಜೀವನ ಸಂದೇಶವನ್ನು ಜನಸಾಮಾನ್ಯರಿಗೆ ತಿಳಿಹೇಳುವ ಪ್ರಯತ್ನಕ್ಕೂ ಕೈಹಾಕಿ ವಿದ್ವಾಂಸರ ತಂಡ ಸಿದ್ಧಪಡಿಸಿದ ಪಂತರು ಸಾಹಿತ್ಯಪೋಷಣೆಯ ಬಲಭೀಮ. ಸನಾತನ ಸಂಸ್ಕೃತಿಯ ಮಹಾನ್ ಸತ್ವವನ್ನು ಜಗದಗಲ ಪಸರಿಸಲು ಕಾರ್ಯತತ್ಪರರಾಗಿ ಮಹಾಮಹೋಪಾಧ್ಯಾಯ ಮಹಾಂತರನ್ನು ಸಂಪರ್ಕಿಸಿ ಗ್ರಂಥರಚನೆ, ಅನುವಾದ ಕಾರ್ಯದಲ್ಲೂ ತೊಡಗಿಸಿದರು.
ಪ್ರಜಾಪ್ರಭುತ್ವ ಅಂಗೀಕಾರಗೊಳ್ಳುವ ಮೂವತ್ತು ವರ್ಷಗಳ ಮೊದಲೇ ಔಂಧ್ ಸಂಸ್ಥಾನದಲ್ಲಿ ಪ್ರಜಾಹಿತ ಸಭೆಗಳನ್ನು ಸ್ಥಾಪಿಸಿ ಗ್ರಾಮಕೇಂದ್ರಿತ ಸರಳ ಸರಕಾರಗಳನ್ನು ಸ್ಥಾಪಿಸಿದರು. ಗ್ರಾಮಸ್ವರಾಜ್ಯದ ಶ್ರೇಷ್ಠತೆಯನ್ನು ಸಾರಿ ಇಂದಿನ ಸ್ಮಾರ್ಟ್ ಸಿಟಿ ಕಲ್ಪನೆಗೆ ವಿಭಿನ್ನವಾದ ಗ್ಲೋಬಲ್ ವಿಲೇಜ್ ಚಿಂತನೆಯ ದೀಪ ಬೆಳಗಿದರು. ಗ್ರಾಮೀಣ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಕೃಷಿ ಕಾರ್ಯಗಳಲ್ಲಿ ನವೀನ ಪ್ರಯೋಗಗೈದು ರಾಜ್ಯದ ಅಭಿವೃದ್ಧಿಯ ಜೊತೆಗೆ ತಲಾ ಆದಾಯ ವೃದ್ಧಿಗೂ ಯೋಜನೆ ರೂಪಿಸಿದರು. ಕಲೆ, ಚಿತ್ರಕಲೆಗಳ ಆಶ್ರಯದಾತರಾಗಿ ಕೀರ್ತನಕಾರರಾಗಿಯೂ ಗುರುತಿಸಲ್ಪಟ್ಟ ಪಂತರು ಅತ್ಯುತ್ತಮ ದೇಹದಾರ್ಢ್ಯಪಟು. ಸೂರ್ಯನಮಸ್ಕಾರದ ವ್ಯಾಯಾಮಕ್ರಮವನ್ನು ಸಂಯೋಜಿಸಿ ಯೋಗಶಾಸ್ತ್ರವನ್ನು ಶಿಕ್ಷಣದ ಭಾಗವಾಗಿಸಿದ ಪಂತ್, ಅನೇಕ ದೇವಾಲಯ ಹಾಗೂ ವಸ್ತು ಸಂಗ್ರಹಾಲಯಗಳ ಸ್ಥಾಪಕ. ಸ್ವಾತಂತ್ರ‍್ಯಾನಂತರವೂ ಔಂಧ್ ಜನತೆಯ ಪ್ರೀತಿಗೆ ಪಾತ್ರರಾಗಿ ಜನಸ್ನೇಹಿ ಕಾರ್ಯಗಳಲ್ಲಿ ತೊಡಗಿಸಿ ಅಸ್ತಂಗತರಾದ ಮಹಾರಾಜಾ ಭವಾನರಾವ್ ಪಂತ ಪ್ರತಿನಿಧಿ, ಆಧುನಿಕ ಕಾಲದ ಯೋಗ ರಾಯಭಾರಿಯೆಂದರೆ ಅತಿಶಯೋಕ್ತಿಯಲ್ಲ.
'ಪರೀಕ್ಷೆ ಬರೆದು, ಅಂಕ ಗಳಿಸಿ, ಪದವಿ ಪ್ರಮಾಣಪತ್ರ ಪಡೆಯುವುದಷ್ಟೇ ಶಿಕ್ಷಣದ ಉದ್ದೇಶವಲ್ಲ. ಹೊಟ್ಟೆಪಾಡಿಗಾಗಿ ವಿದ್ಯಾರ್ಜನೆಗೈಯುವುದು ಅಕ್ಷಮ್ಯ ಅಪರಾಧ. ನಮ್ಮೊಳಗಿನ ಋಣಾತ್ಮಕ ಧೋರಣೆಗಳನ್ನು ದೂರಮಾಡಿ ಸಕಾರಾತ್ಮಕ ಯೋಚನೆಗಳನ್ನು ತುಂಬುವ ಕೆಲಸ ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲೂ ನಡೆದರೆ ಭಾರತದ ವಿಪುಲ ಮಾನವ ಸಂಪನ್ಮೂಲದ ಸದ್ಬಳಕೆ ಸಾಧ್ಯ. ಪಠ್ಯೇತರ ಚಟುವಟಿಕೆಗಳಿಂದ ಪಡೆದ ಸ್ಫೂರ್ತಿಯನ್ನು ಅವಕಾಶವಾಗಿ ಪರಿವರ್ತಿಸಿ ಹೆಜ್ಜೆಯಿಟ್ಟರೆ ಅಸಾಧ್ಯಗಳನ್ನೂ ಸಾಧಿಸುವುದು ಬಹುಸುಲಭ. ಕನಸುಗಳನ್ನು ಪೋಣಿಸುವುದರ ಜೊತೆಗೆ ಅದರ ಬೆನ್ನೇರಿ ಸವಾರಿ ನಡೆಸಿದರೆ ಮಾತ್ರ ಯಶಸ್ಸಿನ ಬಾಗಿಲು ಬಡಿಯಬಹುದು' ಎಂಬ ಪ್ರೇರಣಾದಾಯಕ ಮಾತುಗಳಿಂದ ತರುಣರನ್ನು ಜಾಗೃತಗೊಳಿಸಿದ ಚಿರಯುವಕ ಜನರಲ್ ಗೋಪಾಲ ಗುರುನಾಥ ಬೇವೂರ್, ಅಣ್ವಸ್ತ್ರಶಕ್ತಿಕೇಂದ್ರಿತ ಭಾರತದ ಕನಸುಕಂಡ ಅಷ್ಟಮ ಸೇನಾಮುಖ್ಯಸ್ಥ. ವಿದ್ಯಾವಂತ ಕುಟುಂಬದ ಗುರುನಾಥ ವೆಂಕಟೇಶ ಬೇವೂರ್ - ರುಕ್ಮಿಣಿಯಮ್ಮ ದಂಪತಿಗಳಿಗೆ ಜನಿಸಿದ ಗೋಪಾಲರು, ಡೆಹ್ರಾಡೂನಿನಲ್ಲಿ ಬಾಲ್ಯದ ಶಿಕ್ಷಣ ಮುಗಿಸಿ ಬಳಿಕ ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಪದವಿ ಅಧ್ಯಯನಗೈದರು. ದೇಶಸೇವೆ, ಸೇನಾ ಸಮವಸ್ತ್ರದ ಕುರಿತು ಶಾಲಾದಿನಗಳಿಂದಲೂ ಆಸಕ್ತರಾಗಿದ್ದ ಬೇವೂರ್, ಬ್ರಿಟಿಷ್ ಭಾರತೀಯ ಸೈನ್ಯ ಸೇರಿ ತಮ್ಮ ನಿಷ್ಕಳಂಕ ವ್ಯಕ್ತಿತ್ವ ಹಾಗೂ ಕರ್ತವ್ಯನಿಷ್ಠೆಗೆ ಹೆಸರಾದರು. ಯಾವುದೇ ಅಪಾಯಕರ ಸನ್ನಿವೇಶಗಳನ್ನೂ ಸುಲಭವಾಗಿ ಎದುರಿಸುವ ಕಲೆಯನ್ನು ಕರಗತಗೊಳಿಸಿ, ವಿವಿಧ ಹುದ್ದೆಗಳನ್ನು ಸುಲಲಿತವಾಗಿ ನಿಭಾಯಿಸಿ, ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಬರ್ಮಾದಲ್ಲಿ ಕಾರ್ಯನಿರ್ವಹಿಸಿದರು. ದೇಶವಿಭಜನೆಯ ವೇಳೆ ಸೈನ್ಯದ ಶಸ್ತ್ರಾಸ್ತ್ರ, ಇತರೆ ವಸ್ತುಗಳು ಹಾಗೂ ರೆಜಿಮೆಂಟ್ ಹಂಚಿಕೆ ಕಾರ್ಯದಲ್ಲಿ ವ್ಯಸ್ತರಾದ ಬೇವೂರ್ ತಮ್ಮ ಬಲೂಚ್ ರೆಜಿಮೆಂಟ್ ಪಾಕಿಸ್ತಾನದ ಪಾಲಾದಾಗ ಡೋಗ್ರಾ ರೆಜಿಮೆಂಟಿಗೆ ಸೇರ್ಪಡೆಯಾದರು.
ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಹುಟ್ಟುಹಾಕಿ ಕನಿಷ್ಟ ಸೈನಿಕ ತರಬೇತಿ ನೀಡುವ ಹಿನ್ನೆಲೆಯಲ್ಲಿ ಎನ್.ಸಿ.ಸಿ.ಯ ನಿರ್ದೇಶಕರಾಗಿ ನೇಮಕಗೊಂಡ ಬೇವೂರ್, ಸಂಸ್ಥೆಯ ಬೆಳವಣಿಗೆಗೆ ಅಪಾರ ಶ್ರಮಿಸಿದರಲ್ಲದೆ ತರುಣರ ಮನದಲ್ಲಿ ದೇಸೀ ವಿಚಾರಗಳ ಚರ್ಚೆಗೆ ಅವಕಾಶ ಕಲ್ಪಿಸಿದರು. ಕಡ್ಡಾಯ ಸೈನಿಕ ಶಿಕ್ಷಣದ ಯೋಚನೆಯನ್ನು ಸಾಕಾರಗೊಳಿಸಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿದರೂ ಅದಕ್ಕೆ ಪೂರಕ ಸ್ಪಂದನೆ ದೊರೆಯಲಿಲ್ಲ. ಹಾಗಿದ್ದರೂ ತಮ್ಮ ಸೀಮಿತ ಕಾರ್ಯವ್ಯಾಪ್ತಿಯಲ್ಲಿ ಆಗಬಹುದಾದ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಬಹುಜನರಿಗೆ ಪ್ರೇರಣೆಯಾದರು. ಸೇನೆಯ ವಿವಿಧ ದಾಯಿತ್ವವನ್ನು ದಕ್ಷತೆಯಿಂದ ಪಾಲಿಸಿ, ಚೀನಾ ವಿರುದ್ಧದ ಯುದ್ಧಕಾಲದಲ್ಲಿ ಮಿಲಿಟರಿ ತರಬೇತಿ ವಿಭಾಗದ ನಿರ್ದೇಶಕರಾಗಿ ಅನುಪಮ ಸೇವೆ ಸಲ್ಲಿಸಿದರು. ಪಾಕ್ ವಿರುದ್ಧದ ಎರಡು ಯುದ್ಧಗಳ ವ್ಯೂಹರಚನೆಯಲ್ಲಿ ಪಾಲ್ಪಡೆದ ಬೇವೂರ್, ಸೇನಾನಾಯಕರಾಗಿ ನಿಯುಕ್ತರಾದ ಬಳಿಕ ಸೈನ್ಯಕ್ಕೆ ಹೊಸಶಕ್ತಿ ತುಂಬಿದರು. ಸುತ್ತಲೂ ಕಾಡುವ ಶತ್ರುಗಳಿರುವಾಗ ಅಣ್ವಸ್ತ್ರ ಸಂಗ್ರಹದತ್ತ ಹೊರಳಬೇಕೆಂದು ಸರಕಾರಕ್ಕೆ ಸಲಹೆಯಿತ್ತು ಸೇನಾವಲಯಕ್ಕೆ ಪ್ರಥಮ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು. ದೇಶದ ಬಜೆಟ್ ರೂಪಿಸುವಾಗ ಸೈನ್ಯಕ್ಕೆ ಬಹುದೊಡ್ಡ ಪ್ರಮಾಣದ ಹಣಕಾಸಿನ ನೆರವನ್ನು ನೀಡಿ ಸೈನಿಕರ ಜೀವರಕ್ಷಣೆಯ ಬಗ್ಗೆ ಅಧಿಕಾರೂಢರು ಯೋಚಿಸಬೇಕೆಂದು ಕರೆಯಿತ್ತರು. ನಿವೃತ್ತಿಯ ಬಳಿಕ ಕೆಲಕಾಲ ಡೋಗ್ರಾ ರೆಜಿಮೆಂಟಿನ ನಿರ್ದೇಶಕರಾಗಿ ಅನುಪಮ ಸೇವೆ ಸಲ್ಲಿಸಿದ ಜನರಲ್ ಗೋಪಾಲ್, ಡೆನ್ಮಾರ್ಕ್ ದೇಶಕ್ಕೆ ರಾಯಭಾರಿಯಾಗಿ ತೆರಳಿದರು. ಪೂನಾ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯತನ ಹಾಗೂ ಕಿರ್ಲೋಸ್ಕರ್ ಸಂಸ್ಥೆಯ ನಿರ್ದೇಶಕತ್ವ ಸ್ಥಾನವನ್ನೂ ಯಶಸ್ವಿಯಾಗಿ ನಿಭಾಯಿಸಿದರು. ತಮ್ಮ ಈರ್ವರು ಪುತ್ರರನ್ನು ವಾಯುಸೇನಾ ಅಧಿಕಾರಿಗಳನ್ನಾಗಿ ರೂಪಿಸಿ, ಅನೇಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿಯಿತ್ತು ಭಾರತೀಯ ಸೈನ್ಯದಲ್ಲಿರುವ ಅವಕಾಶ ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ನೂರಾರು ಉಪನ್ಯಾಸ ನೀಡಿ ನಾಡಿಗಾಗಿ ಚಂದನದಂತೆ ಜೀವ ತೇಯ್ದ ಪದ್ಮಭೂಷಣ, ಪರಮವಿಶಿಷ್ಟ ಸೇವಾ ಪದಕ ಪುರಸ್ಕೃತ ಜನರಲ್ ಬೇವೂರ್, ನಾಡಿನ ಹೆಮ್ಮೆ.
ರಾಷ್ಟ್ರದ ಸೇವೆಯನ್ನೇ ಪರಮೋಚ್ಚ ಧ್ಯೇಯವೆಂದು ಭಾವಿಸಿ ನಾಡಿಗಾಗಿ ಬಾಳಿ, ಬೆಳಗಿದ ಭವಾನರಾವ್ ಪಂತರ ಜನ್ಮದಿನ ಮತ್ತು ಗೋಪಾಲ ಬೇವೂರರ ಸ್ಮೃತಿದಿನ ನವಭಾರತದ ರೂಪಿಗೆ ಅಹರ್ನಿಶಿ ದುಡಿಯುತ್ತಿರುವ ಅನೇಕರಿಗೆ ನಿತ್ಯಸ್ಫೂರ್ತಿ.