ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ದೇಶ ರಕ್ಷಣೆ, ಆರ್ಥಿಕ ಪ್ರಗತಿಗೆ ನೌಕಾಪಡೆಯ ಕೊಡುಗೆ

03:30 AM Sep 07, 2024 IST | Samyukta Karnataka

ಭಾರತ ೭,೫೦೦ ಕಿಲೋಮೀಟರ್‌ಗಳಿಗೂ ಹೆಚ್ಚು ವಿಸ್ತಾರವಾದ ವಿಶಾಲ ಕರಾವಳಿ ಪ್ರದೇಶವನ್ನು ಹೊಂದಿದೆ. ಆದ್ದರಿಂದ, ಭಾರತ ಬಹಳ ಹಿಂದಿನ ಕಾಲದಿಂದಲೂ ಮೂಲತಃ ಒಂದು ಸಾಗರ ಆಧಾರಿತ ದೇಶ. ಭಾರತವನ್ನು ಸುತ್ತುವರಿದಿರುವ ಸಮುದ್ರಗಳು ದೇಶದ ಇತಿಹಾಸ, ಆರ್ಥಿಕತೆ ಮತ್ತು ಭದ್ರತೆಯನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿವೆ. ಆದರೆ, ಬಹಳಷ್ಟು ಜನರು ಇಂದಿಗೂ ಸಾಗರ ಭದ್ರತೆ ಎಂದರೇನು ಎನ್ನುವ ಕುರಿತು ಸ್ಪಷ್ಟ ಚಿತ್ರಣ ಹೊಂದಿಲ್ಲ. ಅವರು ಸಾಗರ ಭದ್ರತೆ ಎಂದರೆ ನೌಕಾ ಸೇನೆಯ ಹಡಗುಗಳು ದೂರ ಸಮುದ್ರದ ನೀರಿನಲ್ಲಿ ಗಸ್ತು ತಿರುಗುವುದು, ಕಾರ್ಯಾಚರಣೆ ನಡೆಸುವುದು ಅಷ್ಟೇ ಎಂಬ ಯೋಚನೆ ಹೊಂದಿದ್ದಾರೆ. ಆದರೆ ವಾಸ್ತವವಾಗಿ ಹೇಳುವುದಾದರೆ, ಸಾಗರ ಭದ್ರತೆ ಎನ್ನುವುದು ಮಿಲಿಟರಿ ಕಾರ್ಯಾಚರಣೆಯನ್ನು ಮೀರಿದ ಕಾರ್ಯವಾಗಿದ್ದು, ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಮಹತ್ವದ ಸ್ತಂಭವಾಗಿದೆ. ಅದರೊಡನೆ, ಭಾರತದ ನಾಗರಿಕರ ದೈನಂದಿನ ಜೀವನದ ಮೇಲೂ ಸಾಗರ ಭದ್ರತೆ ಪರಿಣಾಮ ಬೀರುತ್ತದೆ. ಭಾರತದ ಸಮುದ್ರ ಪ್ರದೇಶದ ಪ್ರಮುಖ ರಕ್ಷಕನಾದ ಭಾರತೀಯ ನೌಕಾ ಸೇನೆ ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ.
ಆರ್ಥಿಕ ಸ್ಥಿರತೆ ಮತ್ತು ಪ್ರಗತಿ
ಭಾರತದ ಆರ್ಥಿಕ ಪ್ರಗತಿ ಬಹುಮಟ್ಟಿಗೆ ಅದರ ಸಮುದ್ರಗಳ ಭದ್ರತೆಯ ಮೇಲೆ ಆಧಾರಿತವಾಗಿದೆ. ಭಾರತದ ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ, ೯೦% ಪ್ರಮಾಣ ಮತ್ತು ೭೦% ಮೌಲ್ಯದ ವ್ಯಾಪಾರ ಸಮುದ್ರ ಮಾರ್ಗದಲ್ಲೇ ನಡೆಯುತ್ತವೆ. ಭಾರತದ ಪ್ರದೇಶದಲ್ಲಿರುವ, ಜಗತ್ತಿನ ಅತ್ಯಂತ ನಿಬಿಡ ಜಲಮಾರ್ಗಗಳಲ್ಲಿ ಒಂದಾದ ಹಿಂದೂ ಮಹಾಸಾಗರ ಪ್ರದೇಶ (ಐಒಆರ್) ಮಧ್ಯ ಪೂರ್ವ, ಆಫ್ರಿಕಾ ಮತ್ತು ಆಗ್ನೇಯ ಏಷ್ಯಾಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ. ಈ ಸಮುದ್ರ ಮಾರ್ಗದ ಮೂಲಕ ಇಂಧನ, ನೈಸರ್ಗಿಕ ಅನಿಲದಂತಹ ಅವಶ್ಯಕ ವಸ್ತುಗಳ ಅನಿರ್ಬಂಧಿತ ಪೂರೈಕೆ ಭಾರತದ ಆರ್ಥಿಕ ಸ್ಥಿರತೆಗೆ ಅತ್ಯವಶ್ಯಕವಾಗಿದೆ.
ಹಿಂದೂ ಮಹಾಸಾಗರದಲ್ಲಿ ಭಾರತೀಯ ನೌಕಾಪಡೆಯ ಉಪಸ್ಥಿತಿ ಇಲ್ಲಿನ ಸಾಗರ ಸಂವಹನಾ ವ್ಯವಸ್ಥೆಗಳ (ಸೀ ಲೇನ್ಸ್ ಆಫ್ ಕಮ್ಯುನಿಕೇಶನ್-ಎಸ್‌ಎಲ್‌ಒಸಿಗಳು) ರಕ್ಷಣೆಗೆ ಅತ್ಯಂತ ಮುಖ್ಯವಾಗಿದೆ. ನೌಕಾಪಡೆ ನಡೆಸುವ ದೈನಂದಿನ ಗಸ್ತು, ಕಡಲ್ಗಳ್ಳತನ ನಿರೋಧಕ ಕಾರ್ಯಾಚರಣೆಗಳು, ಮತ್ತು ಸಹಾಯ ಕಾರ್ಯಾಚರಣೆಗಳು ಕಡಲ್ಗಳ್ಳತನ, ಭಯೋತ್ಪಾದನೆ, ಮತ್ತು ಇತರ ಅಸಾಂಪ್ರದಾಯಿಕ ಭದ್ರತಾ ಸಮಸ್ಯೆಗಳನ್ನು ನಿವಾರಿಸಲು ನೆರವಾಗಿವೆ. ಉದಾಹರಣೆಗೆ, ಭಾರತೀಯ ನೌಕಾಪಡೆ ಏಡನ್ ಕೊಲ್ಲಿಯಲ್ಲಿ ನಡೆಸಿದ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ವ್ಯಾಪಾರ ಹಡಗುಗಳನ್ನು ಸುರಕ್ಷಿತವಾಗಿಸಿ, ಭಾರತದ ಆರ್ಥಿಕತೆಗೆ ಮುಖ್ಯವಾದ ಸಮುದ್ರ ಮಾರ್ಗವನ್ನು ಸುರಕ್ಷಿತವಾಗಿಸಿದೆ. ಇದರ ಪರಿಣಾಮವಾಗಿ, ಜನರ ಅವಶ್ಯಕ ವಸ್ತುಗಳ ಬೆಲೆಗಳು ಸ್ಥಿರವಾಗಿರುತ್ತವೆ, ಇಂಧನ ಸಂಪನ್ಮೂಲಗಳು ಲಭಿಸುತ್ತವೆ ಮತ್ತು ಒಟ್ಟಾರೆ ಆರ್ಥಿಕತೆ ಪ್ರಗತಿ ಹೊಂದುತ್ತದೆ.
ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ
ಸಾಗರ ಭದ್ರತೆ ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವದ ತಳಹದಿಯಾಗಿದೆ. ಹಿಂದೂ ಮಹಾಸಾಗರ ಕೇವಲ ಒಂದು ವ್ಯಾಪಾರ ಮಾರ್ಗ ಮಾತ್ರವಲ್ಲದೆ, ಪ್ರಾದೇಶಿಕ ಮತ್ತು ಜಾಗತಿಕ ಶಕ್ತಿಗಳು ಮಿಳಿತವಾಗುವ ಕಾರ್ಯತಂತ್ರದ ಪ್ರಾಮುಖ್ಯತೆ ಹೊಂದಿರುವ ತಾಣವೂ ಹೌದು. ಹಿಂದೂ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಬಾಹ್ಯ ಶಕ್ತಿಗಳ, ಅದರಲ್ಲೂ ಬೆಳೆಯುತ್ತಿರುವ ಚೀನೀ ನೌಕೆಗಳ ಉಪಸ್ಥಿತಿ ಭಾರತದ ಸಮುದ್ರ ಸಾರ್ವಭೌಮತ್ವಕ್ಕೆ ಸವಾಲಾಗಿವೆ.
ಭಾರತದ ಸಮುದ್ರ ಗಡಿಗಳನ್ನು ರಕ್ಷಿಸುವಲ್ಲಿ ಭಾರತೀಯ ನೌಕಾ ಸೇನೆ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಹೆಚ್ಚಿನ ಕಣ್ಗಾವಲು, ಮಾರಿಟೈಮ್ ಡೊಮೇನ್ ಅವೇರ್‌ನೆಸ್ (ಎಂಡಿಎ) ರೀತಿಯ ಕ್ರಮಗಳು ಮತ್ತು ಇತರ ನೌಕಾಪಡೆಗಳ ಜೊತೆಗಿನ ಸಹಯೋಗಗಳಿಂದ ಭಾರತೀಯ ನೌಕಾ ಸೇನೆ ದೇಶದ ಹಿತಾಸಕ್ತಿಗಳನ್ನು ರಕ್ಷಿಸುತ್ತಿದೆ. ನೌಕಾಪಡೆ ಹೊಂದಿರುವ ಸಬ್‌ಮರೀನ್ ಬಳಗ ಮತ್ತು ಕ್ಷಿಪಣಿಗಳು ಎದುರಾಳಿಗಳಲ್ಲಿ ಭೀತಿ ಉಂಟುಮಾಡಿ, ಶತ್ರುಗಳನ್ನು ಭಾರತದ ಮೇಲೆ ದಾಳಿ ನಡೆಸದಂತೆ ತಡೆಯುತ್ತವೆ. ಇಂತಹ ಪ್ರಬಲ ಸಾಗರ ಭದ್ರತಾ ವ್ಯವಸ್ಥೆ ದೇಶದ ಪ್ರಜೆಗಳು ಬಾಹ್ಯ ಅಪಾಯಗಳಿಂದ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತವೆ. ಆ ಮೂಲಕ ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುತ್ತವೆ.
ವಿಕೋಪ ಪರಿಹಾರ ಮತ್ತು ನೆರವು
ಭಾರತೀಯ ನೌಕಾಪಡೆಯ ಪಾತ್ರ ಕೇವಲ ಸಾಂಪ್ರದಾಯಿಕ ಭದ್ರತಾ ಕಾರ್ಯಾಚರಣೆಗಳಿಗೆ ಮಾತ್ರವೇ ಸೀಮಿತವಾಗಿಲ್ಲ. ನೌಕಾಪಡೆ ನೈಸರ್ಗಿಕ ಅಪಾಯಗಳಿಗೆ ತುತ್ತಾಗುವ ದೇಶದ ವಿವಿಧ ಭಾಗಗಳಲ್ಲಿ ವಿಪತ್ತು ಪರಿಹಾರ ಮತ್ತು ಮಾನವೀಯ ನೆರವನ್ನೂ ಒದಗಿಸುತ್ತದೆ. ಭಾರತದ ಕರಾವಳಿ ಪ್ರದೇಶಗಳು ಸಾಮಾನ್ಯವಾಗಿ ಚಂಡಮಾರುತಗಳು ಮತ್ತು ಸುನಾಮಿಗಳ ಹೊಡೆತಕ್ಕೆ ತುತ್ತಾಗುತ್ತವೆ. ಭಾರತೀಯ ನೌಕಾ ಸೇನೆಯ ಕ್ಷಿಪ್ರ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಗಳು ದೇಶದಲ್ಲಿ ಅವೆಷ್ಟೋ ಜನರ ಜೀವ ರಕ್ಷಿಸಿವೆ.
ಸಂಪನ್ಮೂಲ ನಿರ್ವಹಣೆಯಲ್ಲಿ ಪಾತ್ರ
ಭಾರತದ ಸಮುದ್ರಗಳ ವಾತಾವರಣದ ಆರೋಗ್ಯವೂ ದೇಶದ ಜನರ ಹಿತವೂ ಪರಸ್ಪರ ಸಂಬಂಧಿಸಿವೆ. ಸಮುದ್ರಗಳು ಆರೋಗ್ಯವಾಗಿದ್ದರೆ ಜನರಿಗೂ ಅದರಿಂದ ಪ್ರಯೋಜನವಾಗಲಿದೆ. ನೌಕಾಪಡೆ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಹಾಗೂ ಸಮುದ್ರ ಸಂಪನ್ಮೂಲಗಳನ್ನು ಸಂರಕ್ಷಿಸುತ್ತದೆ. ಅಕ್ರಮ ಮೀನುಗಾರಿಕೆ, ಬೇಟೆ ಮತ್ತು ಸಮುದ್ರ ಮಾಲಿನ್ಯವನ್ನು ತಪ್ಪಿಸುವ ಸಲುವಾಗಿ ನೌಕಾಪಡೆ ನಿರಂತರವಾಗಿ ಗಸ್ತು ತಿರುಗುತ್ತದೆ. ಇಂತಹ ಕ್ರಮಗಳು ಕೋಟ್ಯಂತರ ಜನರ ಜೀವನಕ್ಕೆ ಅಗತ್ಯವಾದ ಸಮುದ್ರದ ವ್ಯವಸ್ಥೆಯನ್ನು ರಕ್ಷಿಸಲು ಅತ್ಯಗತ್ಯವಾಗಿವೆ. ಅದರಲ್ಲೂ ಕರಾವಳಿಯ ಕೋಟ್ಯಂತರ ಭಾರತೀಯರು ಮೀನುಗಾರಿಕೆ ಮತ್ತು ಸಂಬಂಧಿತ ಉದ್ಯಮಗಳ ಮೇಲೆ ಅವಲಂಬಿರಾಗಿದ್ದಾರೆ.
ಜಾಗತಿಕ ಪ್ರಭಾವ
ಭಾರತದ ಸಾಗರ ಭದ್ರತಾ ವ್ಯವಸ್ಥೆ ಜಗತ್ತಿನ ಮೇಲೆ ಭಾರತದ ಪ್ರಭಾವ ಮತ್ತು ರಾಜತಾಂತ್ರಿಕ ಸ್ಥಾನಮಾನವನ್ನು ಹೆಚ್ಚಿಸಿದೆ. ಒಂದು ಜವಾಬ್ದಾರಿಯುತ ನೌಕಾ ಶಕ್ತಿಯಾಗಿರುವ ಭಾರತ, ಜಾಗತಿಕ ಸಾಗರ ಆಡಳಿತದಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿದೆ. ಬಹುರಾಷ್ಟ್ರೀಯ ನೌಕಾಪಡೆಗಳ ಅಭ್ಯಾಸದಲ್ಲಿ ಪಾಲ್ಗೊಂಡಿರುವುದು, ಏಡನ್ ಕೊಲ್ಲಿಯಲ್ಲಿ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆ ನಡೆಸಿರುವುದು ಮತ್ತು ಇಂಡಿಯನ್ ಓಶನ್ ನೇವಲ್ ಸಿಂಪೋಸಿಯಂನ (ಐಒಎನ್‌ಎಸ್) ನೇತೃತ್ವ ವಹಿಸಿರುವುದು ಪ್ರಾದೇಶಿಕ ಸ್ಥಿರತೆ ಕಾಪಾಡುವಲ್ಲಿ ಮತ್ತು ಸಹಕಾರ ಸಾಧಿಸುವಲ್ಲಿ ಭಾರತದ ಪ್ರಯತ್ನಗಳಿಗೆ ಉದಾಹರಣೆಗಳಾಗಿವೆ.
ಸಾಗರ ಭದ್ರತೆಗೆ ಸಂಬಂಧಿಸಿದಂತೆ ಭಾರತ ಕ್ರಿಯಾಶೀಲ ವಿಧಾನವನ್ನು ಅನುಸರಿಸುತ್ತಿದೆ. ಇದಕ್ಕೆ ಭಾರತೀಯ ನೌಕಾ ಸೇನೆಯ ಸಾಮರ್ಥ್ಯ ಸೂಕ್ತ ಉತ್ತೇಜನ ನೀಡುತ್ತಿದೆ. ಆ ಮೂಲಕ ಭಾರತ ತನ್ನ ಭೂ ಪ್ರದೇಶದಲ್ಲಿ ತನ್ನ ಶಕ್ತಿ ಮತ್ತು ಪ್ರಭಾವವನ್ನು ಬೀರಲು ಸಾಧ್ಯವಾಗಿದೆ. ಇದು ಭಾರತದ ಕಾರ್ಯತಂತ್ರದ ಸ್ವಾಯತ್ತತೆಯನ್ನು ಹೆಚ್ಚಿಸಿ, ಹಿಂದೂ ಮಹಾಸಾಗರದ ಪ್ರಾಂತ್ಯದಲ್ಲಿ ಸ್ಥಿರ ಮತ್ತು ಸುರಕ್ಷಿತ ಸಾಗರ ವಾತಾವರಣವನ್ನು ನಿರ್ಮಿಸಲು ಅನುಕೂಲ ಕಲ್ಪಿಸಿದೆ. ಇದರ ಪ್ರಯೋಜನ ಭಾರತವೂ ಸೇರಿದಂತೆ, ಈ ಪ್ರದೇಶದ ಎಲ್ಲ ರಾಷ್ಟçಗಳಿಗೂ ಲಭಿಸಿದೆ. ಭಾರತದ ನೌಕಾಬಲದ ಹೆಚ್ಚಳ ಭಾರತೀಯ ನಾಗರಿಕರ ಪಾಲಿಗೆ ದೊಡ್ಡ ಜಾಗತಿಕ ಉಪಸ್ಥಿತಿಯಾದರೆ, ದೇಶಕ್ಕೆ ಜಾಗತಿಕ ಮಟ್ಟದಲ್ಲಿ ತನ್ನ ಆರ್ಥಿಕ ಮತ್ತು ಭದ್ರತಾ ಹಿತಾಸಕ್ತಿಗಳಿಗೆ ಬೆಂಬಲ ಒದಗಿಸುತ್ತದೆ.
ಭಾರತದ ಸಾಗರ ಪ್ರದೇಶಗಳ ಸಮಗ್ರ ರಕ್ಷಕನಾಗಿರುವ ಭಾರತೀಯ ನೌಕಾ ಸೇನೆ ದೇಶದ ಆರ್ಥಿಕ ಸ್ಥಿರತೆ, ರಾಷ್ಟ್ರೀಯ ಭದ್ರತೆ, ವಿಪತ್ತು ಪರಿಹಾರ, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ಪ್ರಭಾವ ಬೀರುವಲ್ಲಿ ಅತ್ಯಂತ ದೊಡ್ಡ ಪಾತ್ರ ನಿರ್ವಹಿಸುತ್ತಿದೆ. ಸಮುದ್ರ ಪ್ರದೇಶ ಸುರಕ್ಷಿತವಾಗಿರುವುದು ಮಿಲಿಟರಿ ವಲಯಕ್ಕೆ ಮಾತ್ರ ಪೂರಕವಾಗಿರುವುದಲ್ಲ. ಅದರೊಡನೆ, ದೇಶದ ಆರ್ಥಿಕ ಅಭಿವೃದ್ಧಿ, ವ್ಯಾಪಾರ, ಪರಿಸರ ರಕ್ಷಣೆ ಮತ್ತು ರಾಜತಾಂತ್ರಿಕ ಸ್ಥಾನಗಳ ಮೇಲೂ ಪ್ರಭಾವ ಬೀರುತ್ತದೆ.
ಭಾರತ ಪ್ರಸ್ತುತ ಕಾಲಮಾನದಲ್ಲಿ ಒಂದು ದೊಡ್ಡ ಜಾಗತಿಕ ಶಕ್ತಿಯಾಗಿ ಬೆಳವಣಿಗೆ ಹೊಂದುತ್ತಿದೆ. ಈ ಬೆಳವಣಿಗೆಯನ್ನು ಇನ್ನಷ್ಟು ಹೆಚ್ಚಿಸಲು ಸಾಗರ ರಕ್ಷಣೆಯೂ ಮುಖ್ಯವಾಗಿದೆ. ಭಾರತದ ಸಮುದ್ರ ಹಿತಾಸಕ್ತಿಗಳನ್ನು ಸಂರಕ್ಷಿಸಲು ಭಾರತೀಯ ನೌಕಾ ಸೇನೆ ಕಟಿಬದ್ಧವಾಗಿದೆ.
ಇದರಿಂದಾಗಿ ಸಮುದ್ರಗಳು ಎಲ್ಲ ಭಾರತೀಯರ ಸಮೃದ್ಧಿ, ಸುರಕ್ಷತೆ ಮತ್ತು ಸ್ಥಿರತೆಗೆ ಕಾರಣವಾಗಿವೆ. ಸಾಮಾನ್ಯ ಭಾರತೀಯರ ಪಾಲಿಗೆ ನೌಕಾಪಡೆಯ ಉಪಕ್ರಮಗಳು ಭಾರತವನ್ನು ಸುರಕ್ಷಿತ ಮತ್ತು ಹೆಚ್ಚು ಸಮೃದ್ಧ ದೇಶವನ್ನಾಗಿಸಿವೆ. ಭದ್ರತೆ ಮತ್ತು ಸ್ಥಿರತೆಯ ಭಾವಗಳು ದೈನಂದಿನ ಜೀವನದ ಪ್ರತಿಯೊಂದು ಆಯಾಮದಲ್ಲೂ ಅನುಭವಕ್ಕೆ ಬರುತ್ತಿವೆ.

Next Article