For the best experience, open
https://m.samyuktakarnataka.in
on your mobile browser.

ದೇಶ ವಿಭಜನೆ ಮಾತಿನ ಅತಿರೇಕ

10:45 PM Feb 02, 2024 IST | Samyukta Karnataka
ದೇಶ ವಿಭಜನೆ ಮಾತಿನ ಅತಿರೇಕ

ನೂರಾರು ವರ್ಷಗಳ ಕಾಲ ಅಹರ್ನಿಶಿ ಹೋರಾಡಿ ಸ್ವತಂತ್ರ ರಾಷ್ಟ್ರ ಸಂಸ್ಥಾಪನೆಯಾಗಿ ೭೬ ವರ್ಷಗಳು ಉರುಳಿದ ನಂತರವೂ ಪರಿಸ್ಥಿತಿಯ ಪೂರ್ವಾಪರವನ್ನು ಅರ್ಥ ಮಾಡಿಕೊಳ್ಳದೆ ಏಕಾಏಕಿ ದೇಶ ವಿಭಜನೆಯ ನಿಲುವನ್ನು ಪ್ರಸ್ತಾಪಿಸುವುದು ನಿಜಕ್ಕೂ ಅತಿರೇಕದ ವರ್ತನೆ. ಅದರಲ್ಲೂ ಶಾಸನಗಳ ರೂಪಿಸುವ ಮಹತ್ವದ ಜವಾಬ್ದಾರಿ ಹೊತ್ತಿರುವ ಸಂಸದರು ಇಂತಹ ಮಾತನ್ನು ಆಡಿರುವುದು ಸಹಜವಾಗಿಯೇ ಸಾರ್ವಜನಿಕ ವಲಯದಲ್ಲಿ ಕಿಚ್ಚು ಹಚ್ಚಿದಂತಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಡಿ.ಕೆ. ಸುರೇಶ್ ಅವರು ೨೦೨೪-೨೫ರ ಸಾಲಿನ ಮುಂಗಡಪತ್ರದ ಸ್ವರೂಪದ ಬಗ್ಗೆ ವಿಶ್ಲೇಷಿಸುವಾಗ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ಕೊರಗನ್ನು ವ್ಯಕ್ತಪಡಿಸುವ ಭರದಲ್ಲಿ ದಕ್ಷಿಣ ಭಾರತ ರಾಜ್ಯಗಳು ಪ್ರತ್ಯೇಕ ರಾಷ್ಟ್ರದ ಕೂಗನ್ನು ಎತ್ತಬೇಕಾಗಿರುವ ಕಾಲ ಬಂದಿದೆ ಎಂಬ ಅರ್ಥ ಬರುವಂತೆ ಹೇಳಿರುವುದು ಯಾವ ದೃಷ್ಟಿಕೋನದಿಂದಲೂ ಸರಿಯಲ್ಲ. ಶ್ರೀಸಾಮಾನ್ಯರು ಹಾಗೊಮ್ಮೆ ಇಂತಹ ಅಭಿಪ್ರಾಯವನ್ನು ಮಂಡಿಸಿದ್ದರೆ ಅದಕ್ಕೆ ಕಾನೂನು ಜಾರಿ ಸಂಸ್ಥೆಗಳು ವಿವಿಧ ರೀತಿಯ ಪ್ರಕ್ರಿಯೆಗೆ ಮುಂದಾಗಿಬಿಡುತ್ತಿದ್ದವೋ ಏನೋ. ಆದರೆ, ಸಂಸದರಾಗಿರುವ ಸುರೇಶ್ ಅವರ ವರ್ತನೆಗೆ ತೆಪ್ಪಗಿರಬೇಕಾದ ಪರಿಸ್ಥಿತಿ ಉದ್ಭವಿಸಲು ಕಾರಣ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಆವರಿಸಿರುವ ರಾಜಕೀಯ ಪರಿಸ್ಥಿತಿ. ಹಾಗೆ ನೋಡಿದರೆ, ಸುರೇಶ್ ದೇಶ ವಿಭಜನೆ ಬಯಸುವ ಸಂಸದರಲ್ಲ. ಅವರೆಂದಿಗೂ ಕೂಡಾ ಇದುವರೆಗೆ ಅಂತಹ ಮಾತಾಗಲೀ ಇಲ್ಲವೆ ಕ್ರಿಯೆಯಲ್ಲಾಗಲೀ ತೊಡಗಿಸಿಕೊಂಡ ನಿದರ್ಶನಗಳಿಲ್ಲ. ಆದರೆ, ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡುವಾಗ ಹೀಗೆ ದೇಶ ವಿಭಜನೆಯ ಅರ್ಥದ ನಿಲುವು ಪ್ರತಿಪಾದಿಸಿರುವುದು ಭಾವನಾತ್ಮಕವೇ ವಿನಃ ವಾಸ್ತವಿಕ ಪ್ರಜ್ಞೆಯಿಂದಲ್ಲ ಎಂಬ ಹಲವರ ಮಾತನ್ನು ನಿರಾಕರಿಸುವುದು ಕಷ್ಟವೇ. ಏನೇ ಆದರೂ ಸುರೇಶ್ ಅವರೇ ಆಗಲಿ ಅಥವಾ ಬೇರೆ ಯಾರೇ ಆಗಿರಲಿ ಇಂತಹ ದೇಶ ವಿಭಜನೆ ಮಾತುಗಳ ಪ್ರಯೋಗದ ದುಸ್ಸಾಹಸಕ್ಕೆ ಕೈಹಾಕುವುದು ಸರಿಯಲ್ಲ.
ಇದಕ್ಕೆ ಸಮಾನಾಂತರವಾಗಿ ಸುರೇಶ್ ಅವರ ಮಾತಿಗೆ ಸಂಸತ್ತಿನ ಉಭಯ ಸದನಗಳಲ್ಲಿ ವ್ಯಾಪಕ ಆಕ್ರೋಶದ ನಿಲುವು ವ್ಯಕ್ತವಾಗಿದೆ. ಸುರೇಶ್ ಅವರ ಕ್ಷಮೆಯಾಚನೆಗೂ ಕೂಡಾ ಹಲವರು ಸಂಸದರು ಪಟ್ಟು ಹಿಡಿದಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಅತ್ಯಂತ ಎಚ್ಚರಿಕೆಯಿಂದ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ `ಕಾಂಗ್ರೆಸ್‌ನವರೇ ಆಗಲಿ ಅಥವಾ ಬೇರೆ ಯಾವ ಪಕ್ಷದವರೇ ಆಗಿರಲಿ ದೇಶ ವಿಭಜನೆಯ ಮಾತನ್ನು ಸಹಿಸಿಕೊಳ್ಳುವುದಿಲ್ಲ' ಎಂದು ಗುಡುಗಿರುವುದು ಅನುಭವ ಹಾಗೂ ಜಾಣ್ಮೆಯ ಪ್ರತೀಕ. ಕರ್ನಾಟಕದಲ್ಲಿ ಕೆಲವು ಸಚಿವರು ಕೂಡಾ ಸುರೇಶ್ ಅಭಿಪ್ರಾಯಗಳಿಗೆ ಸಮ್ಮತಿಸದೆ ಪರೋಕ್ಷವಾಗಿ ತಮ್ಮ ಅತೃಪ್ತಿಯನ್ನು ಸೂಚಿಸಿದ್ದಾರೆ. ಬಿಜೆಪಿ ಮುಖಂಡರಂತೂ ಹೋರಾಟ, ಗಡಿಪಾರು ಮುಂತಾದ ಶಬ್ದ ಪ್ರಯೋಗಗಳ ಮೂಲಕ ರಾಜಕೀಯ ಮೇಲುಗೈ ಸಾಧಿಸಲು ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಪರಿಸ್ಥಿತಿಯ ಇನ್ನೊಂದು ಮುಖ.
ಕೇಂದ್ರ ಸರ್ಕಾರಕ್ಕೆ ಎಲ್ಲ ರಾಜ್ಯಗಳಿಂದಲೂ ತೆರಿಗೆಯ ಪಾಲು ಸಂದಾಯವಾಗುತ್ತದೆ. ಇದರ ಪೈಕಿ ನಿರ್ದಿಷ್ಟ ಮಾನದಂಡಗಳ ಆಧಾರದ ಮೇರೆಗೆ ರಾಜ್ಯಗಳಿಗೆ ಸಂಗ್ರಹವಾದ ತೆರಿಗೆಯ ಪೈಕಿ ಕೆಲ ಅಂಶವನ್ನು ಹಿಂದಕ್ಕೆ ನೀಡಲಾಗುತ್ತದೆ. ಇದು ಆಯಾ ರಾಜ್ಯಗಳ ಅಭಿವೃದ್ಧಿಗೆ ಬಳಕೆಯಾಗಬೇಕಾದ ಹಣ. ಹಲವಾರು ಸಂದರ್ಭಗಳಲ್ಲಿ ಹೆಚ್ಚಿನ ತೆರಿಗೆ ಒದಗಿಸುವ ರಾಜ್ಯಗಳಿಗೆ ಅದೇ ಪ್ರಮಾಣದಲ್ಲಿ ಕೇಂದ್ರದಿಂದ ಹಣ ಬರುವುದಿಲ್ಲ. ಇದು ಹೊಸ ಬೆಳವಣಿಗೆಯೇನೂ ಅಲ್ಲ. ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇರೆಗೆ ಕೇಂದ್ರ ಸರ್ಕಾರ ತೆರಿಗೆ ಹಣದ ಪಾಲನ್ನು ರಾಜ್ಯಗಳಿಗೆ ವಿತರಣೆ ಮಾಡುತ್ತದೆ. ಸಂಸದ ಸುರೇಶ್ ಎತ್ತಿರುವ ತಕರಾರರೆಂದರೆ ಕರ್ನಾಟಕದಿಂದ ಗರಿಷ್ಠ ಪ್ರಮಾಣದಲ್ಲಿ ಕೇಂದ್ರದ ಬೊಕ್ಕಸಕ್ಕೆ ತೆರಿಗೆ ಹಣ ಸಂದಾಯವಾಗುತ್ತದೆ. ಆದರೆ, ಈ ಹಣ ವಿನಿಯೋಗವಾಗುವುದು ಉತ್ತರ ಭಾರತದ ರಾಜ್ಯಗಳಿಗೆ. ವಾಸ್ತವವಾಗಿ ಕರ್ನಾಟಕಕ್ಕೆ ಈ ಹಣ ವಿನಿಯೋಗವಾಗಬೇಕಾಗಿತ್ತು. ದಕ್ಷಿಣ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ಇಂತಹ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಪ್ರತಿಭಟಿಸಿ ದಕ್ಷಿಣ ರಾಜ್ಯಗಳು ಪ್ರತ್ಯೇಕ ರಾಷ್ಟçದ ಕೂಗನ್ನು ಎತ್ತಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ಲೇಷಿಸಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ರಾಜಕೀಯ ಕ್ಷೇತ್ರದಲ್ಲಿ ವಿವರಗಳಿಗಿಂತಲೂ ನಿರ್ಣಯಾತ್ಮಕವಾದ ಕೆಲವು ಶಬ್ದ ಪ್ರಯೋಗಗಳೇ ಮುಖ್ಯವಾಗಿಬಿಡುತ್ತವೆ. ಪ್ರತ್ಯೇಕ ರಾಷ್ಟ್ರ-ದೇಶ ವಿಭಜನೆ ಎಂಬ ನುಡಿಗಟ್ಟುಗಳನ್ನು ಮಾತ್ರ ಆಯ್ದುಕೊಂಡು ಉಳಿದ ವಿವರಗಳನ್ನು ಜಾಣತನದಿಂದ ಕೈಬಿಟ್ಟು ವಿವಾದಕ್ಕೆ ಒಗ್ಗರಣೆ ಹಾಕಿರುವ ಕ್ರಮ ನಾನಾ ರೀತಿಯ ಪರಿಣಾಮಗಳಿಗೆ ಕಾರಣವಾಗುತ್ತದೆ. ಅದೇನೇ ಇದ್ದರೂ ಜವಾಬ್ದಾರಿ ಸ್ಥಾನದಲ್ಲಿರುವರು ದೇಶ ಭಾಷೆ ನೆಲ ಜಲ ಮೊದಲಾದ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಾಗ ಅಗತ್ಯಕ್ಕಿಂತ ಹೆಚ್ಚಿನ ಸಂಯಮ ರೂಡಿಸಿಕೊಳ್ಳುವ ಅನಿವಾರ್ಯತೆಯನ್ನು ಈ ಬೆಳವಣಿಗೆ ಎತ್ತಿ ತೋರುತ್ತದೆ.