For the best experience, open
https://m.samyuktakarnataka.in
on your mobile browser.

ರಾಜ್ಯಕ್ಕೆ ಕೇಂದ್ರದ ತೆರಿಗೆ ಕೊಸರು

11:24 AM Jan 06, 2024 IST | Samyukta Karnataka
ರಾಜ್ಯಕ್ಕೆ ಕೇಂದ್ರದ ತೆರಿಗೆ ಕೊಸರು

ರಾಜ್ಯದ ತೆರಿಗೆಯ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಒಂದು ರೂಪಾಯಿ ತೆರಿಗೆ ಹಣ ರಾಜ್ಯದಿಂದ ಹೋದರೆ ಅದಕ್ಕೆ ಪ್ರತಿಯಾಗಿ ಕೇಂದ್ರದಿಂದ ಬರುವ ಹಣ ಕೇವಲ ೧೫ ಪೈಸೆ ಮಾತ್ರ. ಆದರೆ, ಬಿಹಾರಕ್ಕೆ ೭.೬ ರೂ., ಉತ್ತರ ಪ್ರದೇಶಕ್ಕೆ ೨.೩೬ ರೂಪಾಯಿ, ಅನುದಾನ ದೊರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ

ಒಕ್ಕೂಟ ವ್ಯವಸ್ಥೆಯ ದೇಶವಾಗಿರುವ ಭಾರತದಲ್ಲಿ ಕೇಂದ್ರ ಸರ್ಕಾರ ಬಲಿಷ್ಠವಾಗಿರಬೇಕು ಹಾಗೂ ರಾಜ್ಯ ಸರ್ಕಾರಗಳು ಸದೃಢವಾಗಿರಬೇಕು ಎಂಬುದು ರಾಜ್ಯಾಂಗದ ಮೂಲಕ ಘೋಷಿತವಾಗಿರುವ ಸಂಗತಿ. ಎರಡೂ ಸರ್ಕಾರಗಳೂ ಕೂಡಾ ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸಿದರಷ್ಟೆ ಒಕ್ಕೂಟ ವ್ಯವಸ್ಥೆ ಬಲವರ್ಧನೆ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಸಮ್ಮಿಶ್ರ ರಾಜಕೀಯ ವ್ಯವಸ್ಥೆ ತಳವೂರುತ್ತಿರುವ ಸಂದರ್ಭದಲ್ಲಿ ಕೇಂದ್ರದ ವಿರುದ್ಧ ರಾಜ್ಯಗಳು ನಾನಾ ಕಾರಣಕ್ಕೆ ಅತೃಪ್ತಿ ವ್ಯಕ್ತಪಡಿಸುತ್ತಿರುವ ಬೆಳವಣಿಗೆಯ ಹಿಂದಿರುವುದು ಕೇವಲ ರಾಜಕೀಯ ಭಿನ್ನಮತವಷ್ಟೆ ಕಾರಣವಲ್ಲ. ತೆರಿಗೆ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಕೂಗು ನಿನ್ನೆ ಮೊನ್ನೆಯದಲ್ಲ. ಇಂದಿರಾಗಾಂಧಿಯವರ ಕಾಲದಿಂದಲೂ ಈ ಕೂಗು ಹಿಮಾಲಯ ಪರ್ವತದಲ್ಲಿ ಮಾರ್ದನಿಗೊಂಡರೂ ಕೇಂದ್ರ ಸರ್ಕಾರ ಕಿವುಡಾಗಿರುವುದು ಈಗ ಇತಿಹಾಸ ಆದರೆ, ವರ್ತಮಾನದಲ್ಲಿಯೂ ಕೂಡಾ ಇಂತಹುದೇ ಕೂಗು ಮತ್ತೆ ಮಾರ್ದನಿಗೊಳ್ಳುತ್ತಿರುವುದು ಹೊಸ ಸಂಗತಿ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎತ್ತಿರುವ ಆಕ್ಷೇಪವೆಂದರೆ ದೇಶದಲ್ಲಿಯೇ ಅತ್ಯಂತ ಗರಿಷ್ಠ ಪ್ರಮಾಣದ ತೆರಿಗೆಯನ್ನು ಕೊಡುವ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರುವ ಅನುದಾನದ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ಎಂಬುದು. ಕಳೆದ ಐದು ವರ್ಷಗಳ ಹಿಂದೆ ಯಾವ ಪ್ರಮಾಣದ ಅನುದಾನವಿತ್ತೋ ಅದೇ ಪ್ರಮಾಣದ ಅನುದಾನ ಈಗಲೂ ಕೂಡಾ ಒದಗುತ್ತಿರುವುದು ತಾರತಮ್ಯದ ಧೋರಣೆಗೆ ನಿದರ್ಶನ.
ರಾಜ್ಯದ ತೆರಿಗೆಯ ಪ್ರಮಾಣ ಮಾತ್ರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ. ಒಂದು ರೂಪಾಯಿ ತೆರಿಗೆ ಹಣ ರಾಜ್ಯದಿಂದ ಹೋದರೆ ಅದಕ್ಕೆ ಪ್ರತಿಯಾಗಿ ಕೇಂದ್ರದಿಂದ ಬರುವ ಹಣ ಕೇವಲ ೧೫ ಪೈಸೆ ಮಾತ್ರ. ಆದರೆ, ಬಿಹಾರಕ್ಕೆ ೭.೬ ರೂ., ಉತ್ತರ ಪ್ರದೇಶಕ್ಕೆ ೨.೩೬ ರೂಪಾಯಿ, ಅನುದಾನ ದೊರೆಯುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ. ಇದು ವಿರ‍್ಯಾಸವೂ ಕೂಡಾ. ದೇಶದಲ್ಲಿ ಜಿಎಸ್‌ಟಿ ತೆರಿಗೆಯನ್ನು ಗರಿಷ್ಠ ಪ್ರಮಾಣದಲ್ಲಿ ಸಂಗ್ರಹಿಸುತ್ತಿರುವ ಎರಡನೆ ರಾಜ್ಯ ಕರ್ನಾಟಕ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ೨೦೨೦ ಮತ್ತು ೨೦೨೨ರ ನಡುವೆ ೧೫ನೆ ಹಣಕಾಸು ಆಯೋಗದ ಮೂಲಕ ರಾಜ್ಯಕ್ಕೆ ೮೯,೫೭೪ ಕೋಟಿ ರೂಪಾಯಿ ಅನುದಾನ ದೊರೆತಿದೆ. ಇಂತಹ ತಾರತಮ್ಯದ ಧೋರಣೆ ಏಕೆ ಎಂಬುದು ಸಿದ್ದರಾಮಯ್ಯನವರು ಮುಂದಿಟ್ಟಿರುವ ಪ್ರಶ್ನೆ. ಕೇಂದ್ರ ಸರ್ಕಾರ ಈ ಸಂಬಂಧದಲ್ಲಿ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೂ ಸೇರಿದಂತೆ ಹಲವಾರು ಮಂದಿ ಬಹಿರಂಗಪಡಿಸಿರುವ ವಿವರಗಳ ಪ್ರಕಾರ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ದೊರೆಯಬೇಕಾದ ಸಮಸ್ತ ಹಣವನ್ನೂ ಕರ್ನಾಟಕಕ್ಕೆ ಒದಗಿಸಲಾಗಿದೆಯಂತೆ. ಹೀಗಿರುವಾಗ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಗುರುತು ಹಿಡಿಯುವುದು ಕಷ್ಟ. ಎರಡೂ ಸರ್ಕಾರಗಳು ಅಂಕಿ ಅಂಶಗಳನ್ನೊಳಗೊಂಡಿರುವ ಕೋಷ್ಟಕಗಳಲ್ಲಿ ಪ್ರತ್ಯೇಕ ಅಂಕಿಗಳನ್ನು ನೀಡಿರುವುದು ಕೂಡಾ ಗೊಂದಲಕ್ಕೆ ಕಾರಣ. ಈ ಸಂಬಂಧದಲ್ಲಿ ಎರಡೂ ಸರ್ಕಾರಗಳು ಪ್ರತ್ಯೇಕವಾಗಿ ಶ್ವೇತಪತ್ರ ಹೊರಡಿಸುವುದು ಸೂಕ್ತವಾದ ಮಾರ್ಗ. ಅದಿಲ್ಲವಾದರೆ ರಾಜಕೀಯ ಸುಂಟರಗಾಳಿ ಗರಿಗಟ್ಟಲು ಎರಡೂ ಸರ್ಕಾರಗಳು ಎಡೆಮಾಡಿಕೊಟ್ಟಂತಾಗುತ್ತದೆ.
ಕೇಂದ್ರ ಹಾಗೂ ರಾಜ್ಯಗಳ ನಡುವಣ ಸುಗಮ ಸಂಬಂಧ ಸ್ಥಾಪನೆಯ ನಿಟ್ಟಿನಲ್ಲಿ ಹಣಕಾಸು ಹಂಚಿಕೆ ಯಾವಾಗಲೂ ನಿರ್ಣಾಯಕವಾಗಿರುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಕರ್ನಾಟಕದ ರಾಮಕೃಷ್ಣ ಹೆಗಡೆ ಅವರ ನೇತೃತ್ವದಲ್ಲಿ ವಿಜಯವಾಡದಲ್ಲಿ ಶೃಂಗಸಭೆ ನಡೆಸಿ ಕೈಗೊಂಡ ತೀರ್ಮಾನದ ಪ್ರಕಾರ ಈ ಬಿಕ್ಕಟ್ಟನ್ನು ತಿಳಿಗೊಳಿಸಿ ರಾಜ್ಯಗಳಿಗೆ ನ್ಯಾಯ ದೊರೆಯುವಂತೆ ಮಾಡಲು ಪಟ್ಟು ಹಿಡಿದಾಗ ರೂಪುಗೊಂಡ ಸರ್ಕಾರಿಯಾ ಆಯೋಗದ ಶಿಫಾರಸುಗಳು ನಿರೀಕ್ಷಿತ ಪ್ರಮಾಣದಲ್ಲಿ ಜಾರಿಗೆ ಬಾರದೇ ಹೋಗಿರುವುದು ಈ ಗೊಂದಲಕ್ಕೆ ಕಾರಣ. ಇನ್ನೂ ಕೆಲವರು ಹೇಳುವಂತೆ ಸರ್ಕಾರಿಯಾ ಆಯೋಗ ಮಹತ್ವ ನೀಡಿದ್ದು ರಾಜಕೀಯ ಎಳೆಯ ಸಂಬಂಧದ ಸುಧಾರಣೆಗೆ ಮಾತ್ರ. ಆರ್ಥಿಕ ಸುಧಾರಣೆಗೆ ಅಷ್ಟಾಗಿ ಒತ್ತು ನೀಡಿರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಹಣಕಾಸು ಹಂಚಿಕೆ ಹಾಗೂ ತೆರಿಗೆ ಸಂಗ್ರಹದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಆಯೋಗವನ್ನು ರಚಿಸುವುದು ಸಕಾಲಿಕವಾದ ಕ್ರಮವಾದೀತು. ಆದರೆ, ಇದಕ್ಕೆ ಬೇಕಾದದ್ದು ಪ್ರತಿಪಕ್ಷಗಳ ಮಟ್ಟದಲ್ಲಿ ಒಮ್ಮತದ ನಿಲುವು. ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸುವ ಮೂಲಕ ರಾಜ್ಯ ಹಾಗೂ ಕೇಂದ್ರದ ನಡುವಿನ ಸಂಬಂಧ ಸುಧಾರಿಸುವಂತೆ ಮಾಡುವ ಸಾಧ್ಯತೆಗಳು ಸುಲಭವಾಗಿವೆ.