ರಾಮನವಮಿಗೆ ರಜೆ ಘೋಷಿಸಿದ ದೀದಿ
ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ರಾಜ್ಯ ಸರ್ಕಾರ ರಾಮ ನವಮಿಗೆ ಸಾರ್ವಜನಿಕ ರಜೆ ಘೋಷಿಸಿದೆ. ಏಪ್ರಿಲ್ 17 ರಂದು ರಾಮನವಮಿಗೂ ಮೊದಲು ಸರ್ಕಾರ ಶ್ರೀರಾಮನ ಆರಾಧನೆಯಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಅವಕಾಶ ನೀಡಲಾಗುತ್ತದೆ ಎಂದು ಮಹತ್ವದ ನಿರ್ಧಾರ ಪ್ರಕಟಿಸಿದೆ.
ರಾಮನವಮಿಗೆ ರಜೆ ನೀಡದ ಸರ್ಕಾರದ ಧೋರಣೆಯನ್ನು ಬಿಜೆಪಿ ಟೀಕಿಸಿತ್ತು. ಸರ್ಕಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ರಾಜ್ಯದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ರಾಜ್ಯ ಸರ್ಕಾರಿ ಕಚೇರಿಗಳು, ಅವುಗಳ ಸಂಬಂಧಿತ ಸಂಸ್ಥೆಗಳು ಮತ್ತು ಉದ್ಯಮಗಳು ಏಪ್ರಿಲ್ 17ರ ರಾಮನವಮಿಯಂದು ಮುಚ್ಚಿರುತ್ತವೆ.
ಕೆಲ ವರ್ಷಗಳಲ್ಲಿ ರಾಜ್ಯದಲ್ಲಿ ರಾಮನವಮಿ ಮೆರವಣಿಗೆಗೆ ಸಂಬಂಧಿಸಿದಂತೆ ಹಿಂಸಾಚಾರಗಳು ನಡೆದಿವೆ. ಕಳೆದ ವರ್ಷ, ರಾಮ ನವಮಿ ಮೆರವಣಿಗೆ ನಡೆಸುತ್ತಿದ್ದಾಗ ಮೂರು ಸ್ಥಳಗಳಿಂದ ಕಲ್ಲು ತೂರಾಟ ನಡೆದು, ಹಿಂಸಾಚಾರ ಉಂಟಾಗಿತ್ತು. ಜೈ ಶ್ರೀ ರಾಮ್ ಘೋಷಣೆಗಳನ್ನು ಕೇಳಿದಾಗಲೆಲ್ಲ ಸಿಎಂ ಮಮತಾ ಬ್ಯಾನರ್ಜಿ ಅವರು ಕುಪಿತರಾಗುತ್ತಿದ್ದರು. ಆದರೆ, ಕೊನೆಗೆ ರಾಮ ನವಮಿಯಂದು ಸಾರ್ವಜನಿಕ ರಜಾ ದಿನ ಘೋಷಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರ 2011ರಲ್ಲಿ ಅಧಿಕಾರಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಹಿಂದೂ ಹಬ್ಬಕ್ಕೆ ಸಾರ್ವಜನಿಕ ರಜೆ ನೀಡಿದೆ.