ದೇಹದ ಬಹುಮುಖ್ಯ ಫಿಲ್ಟರ್ ಮೂತ್ರಪಿಂಡ
ಸಾಮಾನ್ಯವಾಗಿ ನಾವು ದೇಹದ ಹೊರಗಿರುವಂತಹ ಅಂಗಾಂಗಗಳಿಗೆ ಹೆಚ್ಚಿನ ಆರೈಕೆ ಮಾಡುತ್ತೇವೆ, ಚರ್ಮದಲ್ಲಿ ಸ್ವಲ್ಪ ಗಾಯವಾದರೂ ಸಾಕು, ಔಷಧಿ ಹಚ್ಚಿ ಗಾಯ ಬೇಗನೇ ಗುಣವಾಗುವ ಹಾಗೆ ನೋಡಿಕೊಳ್ಳುತ್ತೇವೆ. ಅದೇ ದೇಹದೊಳಗೆ ಇರುವಂತಹ ಪ್ರಮುಖ ಅಂಗಾಂಗಗಳ ಆರೋಗ್ಯವನ್ನು ಕಡೆಗಣಿಸುತ್ತೇವೆ. ಇದೇ ನಿರ್ಲಕ್ಷ್ಯದಿಂದ ಕೊನೆಗೆ ಹಾಸಿಗೆಯಲ್ಲಿ ಮಲಗಬೇಕಾದ ಪರಿಸ್ಥಿತಿ ಬಂದೊದಗುತ್ತದೆ.
ಹೇಗೆ ನಾವು ಕುಡಿಯುವ ಕಾಫಿ/ಟೀಯನ್ನು ಸೋಸಲು ಫಿಲ್ಟರ್ ಬಳಸುತ್ತೇವೆಯೋ, ಹಾಗೆಯೇ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಮೂತ್ರಪಿಂಡ (ಕಿಡ್ನಿ) ಫಿಲ್ಟರ್ ಎಂದು ಕರೆಯಲ್ಪಡುತ್ತದೆ. ನಮ್ಮ ದೇಹದ ಸೂಕ್ಷ್ಮ ಹಾಗೂ ಅತಿ ಹೆಚ್ಚು ಕಾರ್ಯನಿರ್ವಹಿಸುವ ಅತ್ಯಂತ ಮಹತ್ವದ ಅಂಗವೆಂದರೆ ಅದುವೇ ಕಿಡ್ನಿ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕವಾಗಿ ಹೊರಗೆ ಹಾಕುವ ಕೆಲಸ ಮಾಡುವುದು, ದೇಹದಲ್ಲಿ ರಕ್ತ ಶುದ್ಧೀಕರಣ, ಮೂತ್ರ ವಿಸರ್ಜನೆ, ಹಲವು ಹಾರ್ಮೋನ್‌ಗಳ ಉತ್ಪಾದನೆಗೆ ನೆರವಾಗುತ್ತದೆ. ಹಾಗಾಗಿ ಮೂತ್ರಪಿಂಡಗಳ ಕಾರ್ಯಕ್ಷಮತೆ ಕುಸಿದರೆ ಬದುಕೇ ದುಸ್ತರ. ಇತ್ತೀಚೆಗೆ ಮೂತ್ರಪಿಂಡಗಳ ವೈಫಲ್ಯಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಡಯಾಲಿಸಿಸ್ ಹಾಗೂ ಮೂತ್ರಪಿಂಡ ಕಸಿ ಮಾಡುವ ಅವಶ್ಯಕತೆ ಬರುವುದಿಲ್ಲ. ಕಿಡ್ನಿ ವೈಫಲ್ಯಕ್ಕೆ ಆಧುನಿಕ ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ, ಹೆಚ್ಚು ನೋವು ನಿವಾರಕ ಮಾತ್ರೆಗಳ ಸೇವನೆ, ಅತಿಯಾದ ರಕ್ತದೊತ್ತಡ, ದೀರ್ಘಕಾಲದ ಸಕ್ಕರೆ ಕಾಯಿಲೆ ಮತ್ತಿತರ ಸಮಸ್ಯೆಗಳು ಕಾರಣವಾಗುತ್ತವೆ. ಈ ಹಿಂದೆ ವಯಸ್ಸಾದವರಲ್ಲಿ ಕಿಡ್ನಿ ವೈಫಲ್ಯ ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗ ವಯಸ್ಸಿನ ಭೇದವಿಲ್ಲದೆ ಚಿಕ್ಕ ಮಕ್ಕಳು ಸಹ ಕಿಡ್ನಿ ವೈಫಲ್ಯಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ರೋಗಿಗಳಿಗೆ ಡಯಾಲಿಸಿಸ್ ಅಥವಾ ಮೂತ್ರಪಿಂಡದ ಬದಲಾವಣೆ ಮಾತ್ರ ಸೂಕ್ತ ಪರಿಹಾರ.
ರೋಗದ ಮೊದಲ ಹಂತಗಳಲ್ಲಿ ಹೆಚ್ಚಿನ ರೋಗಿಗಳಿಗೆ ಯಾವುದೇ ಗಮನಾರ್ಹ ಚಿಹ್ನೆಗಳು ಅಥವಾ ರೋಗಲಕ್ಷಣಗಳನ್ನು ಕಂಡುಹಿಡಿಯಲು ಸಾಧ್ಯತೆ ಕಮ್ಮಿ. ತಿಂಗಳುಗಳು ಕಳೆದಂತೆ ರೋಗ ಹೆಚ್ಚುತ್ತಿರುವ ತೀವ್ರತೆಯೊಂದಿಗೆ ಲಕ್ಷಣಗಳು ಗೋಚರಿಸುತ್ತವೆ. ಮೂತ್ರ ಗಾಢವಾಗಿ ಬಹುತೇಕ ಕಂದು, ಕೆಂಪು ಅಥವಾ ಚಹಾ-ಬಣ್ಣಕ್ಕೆ ತಿರುಗುತ್ತದೆ. ಊದಿಕೊಳ್ಳುವ ಪಾದ, ಕೈ, ಕಣ್ಣುಗಳು, ಆಗಾಗ್ಗೆ ಬರುವ ಮೂತ್ರ ಮತ್ತು ವಿಸರ್ಜನೆ. ಮನಸ್ಸಿನಲ್ಲಿ ಏಕಾಗ್ರತೆಯ ಕೊರತೆ, ಉಸಿರಾಟದ ತೊಂದರೆಗಳು, ಹಸಿವು ಕಡಿಮೆಯಾಗುವುದು, ವಾಕರಿಕೆ ಅಥವಾ ವಾಂತಿ ಬರುವುದು, ನಿರಂತರ ತುರಿಕೆ, ದಣಿವು ಮತ್ತು ಆಯಾಸ, ಮೈ ಚರ್ಮದ ಬಣ್ಣ ಬದಲಾಗುವುದು, ಇದರಿಂದ ಮೂತ್ರಪಿಂಡದ ಕಾರ್ಯಗಳು ಕ್ಷೀಣಿಸುವುದರೊಂದಿಗೆ ಅನೇಕ ಇತರ ಸಮಸ್ಯೆಗಳು ಉಂಟಾಗುತ್ತವೆ. ಅತಿಯಾದ ಮದ್ಯಸೇವನೆ, ಧೂಮಪಾನ, ಹೃದಯ ಸಂಬಂಧಿ ಕಾಯಿಲೆಗಳು, ಹೆಪಟೈಟಿಸ್ ಸಿ ವೈರಸ್ ಮತ್ತು ಎಚ್‌ಐವಿ ಸೋಂಕುಗಳು ಮೂತ್ರಪಿಂಡದ ಮೇಲೆ ಗಂಭೀರ ಸಮಸ್ಯೆ ಉಂಟುಮಾಡುತ್ತದೆ.
ಹಾಗಾಗಿ ಇದರ ಆರೋಗ್ಯವನ್ನು ಕಾಪಾಡುವುದಕ್ಕೆ ನಾವು ತುಂಬಾ ಗಮನ ನೀಡಬೇಕಾದ ಅನಿವಾರ್ಯತೆ ಇದೆ. ಆರೋಗ್ಯಕರ ಜೀವನಶೈಲಿ ಹಾಗೂ ಆಹಾರಕ್ರಮವನ್ನು ಪಾಲಿಸಿಕೊಂಡು ಹೋಗಬೇಕು. ಕೆಲವೊಮ್ಮೆ ನಾವು ಸೇವಿಸುವಂತಹ ಆಹಾರವು ಆರೋಗ್ಯವಾಗಿದ್ದರೂ, ನಾವು ಅನುಸರಿಸುತ್ತಿರುವ ಜೀವನಶೈಲಿಯಿಂದಾಗಿ ಕೆಲವೊಂದು ಸಲ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ಉಂಟಾಗಿ ಕಾಯಿಲೆ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು.
ದಿನನಿತ್ಯ ಕಡ್ಡಾಯವಾಗಿ ೪ ರಿಂದ ೫ ಲೀಟರ್ ನೀರು ಕುಡಿಯಬೇಕು. ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಸೇವಿಸಬೇಕು. ನಿದ್ರೆಯು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಮುಖ್ಯವಾಗಿದೆ, ಇದು ೨೪ ಗಂಟೆಗಳಲ್ಲಿ ಮೂತ್ರಪಿಂಡದ ಹೊರೆಯನ್ನು ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ. ದೇಹದ ತೂಕವನ್ನು ಹೆಚ್ಚಾಗದಂತೆ ಕಾಪಾಡಿಕೊಳ್ಳುವುದು ಮತ್ತು ನಿಯಮಿತ ನಡಿಗೆ ಮತ್ತು ವ್ಯಾಯಾಮ ಮಾಡುವುದು, ರಕ್ತದೊತ್ತಡ ಮಧುಮೇಹ, ಕೊಲೆಸ್ಟ್ರಾಲ್ ಮಟ್ಟವನ್ನು ಗಮನದಲ್ಲಿರಿಸಿಕೊಳ್ಳುವುದು ದೇಹಕ್ಕೆ ಹಾಗೂ ಮೂತ್ರಪಿಂಡಗಳಿಗೂ ಒಳಿತು.
ಇವು ಪ್ರಯೋಜನಕಾರಿ
ಹುರುಳಿಕಾಳು, ಗೋಡಂಬಿ, ಬಾದಾಮಿ ಬೀಜ, ಬೆಳ್ಳುಳ್ಳಿ, ಬಸಳೆ, ಶುಂಠಿ, ಅರಿಸಿಣ ಮಿಶ್ರಿತ ಆಹಾರ ಸೇವನೆ ಹಾಗೂ ಹುರುಳಿಕಾಳು ನೀರು ಕುಡಿಯುವುದರಿಂದ, ಕಲ್ಲುಬಾಳೆ ಗಿಡದ ದಿಂಡುವಿನ ಪಾನಕ, ಪಲ್ಯದ ಸೇವನೆಯಿಂದ ಕಿಡ್ನಿ ಉತ್ತಮ ಸ್ಥಿತಿಯಲ್ಲಿರುತ್ತದೆ. ಬೀನ್ಸ್ ಕ್ಯಾರೆಟ್ ಸೂಪ್, ತಾಜಾ ಹಣ್ಣುಗಳಾದ ಸೇಬು, ಪೇರಳೆ, ಪಪ್ಪಾಯಿ, ಗೋಧಿ ಆಧರಿತ ಬಿಸ್ಕೆಟ್‌ಗಳು, ಗಿಡಮೂಲಿಕೆ ಚಹಾ, ಕೆನೆರಹಿತ ಹಾಲು ಮೂತ್ರಪಿಂಡಕ್ಕೆ ಉತ್ತಮ ಇದರ ಜೊತೆಗೆ ಯೋಗ ಮತ್ತು ಧ್ಯಾನದಂತಹ ಹಲವು ದೈಹಿಕ ಚಟುವಟಿಕೆಗಳು ದೇಹದ ದೃಢತೆಯನ್ನು ಕಾಪಾಡುವಲ್ಲಿ ಮುಖ್ಯಪಾತ್ರವಹಿಸುತ್ತದೆ.
ಇವುಗಳಿಂದ ದೂರವಿರಿ
ಕಡಲೆ ಕಾಯಿಯಿಂದ ದೂರವಿರಿ. ಇದರಿಂದ ದೇಹದಲ್ಲಿ ಪ್ರೊಟೀನ್ ಹಾಗೂ ಕೊಲೆಸ್ಟ್ರಾಲ್ ಹೆಚ್ಚುತ್ತವೆ. ಬೆಣ್ಣೆ ಹಣ್ಣು, ಕಿತ್ತಲೆ ಹಣ್ಣು, ಆಲೂಗಡ್ಡೆ, ಟೊಮೇಟೊ, ಒಣಗಿಸಿದ ಅಥವಾ ಸಂರಕ್ಷಿಸಿದ ಮಾಂಸಗಳು, ಧೂಮಪಾನ, ಮದ್ಯಪಾನದಿಂದ ದೂರವಿರಬೇಕು, ಗಾಳಿ ತುಂಬಿದ ಪಾನೀಯಗಳು, ಬೇಕರಿಯ ತಿಂಡಿಗಳನ್ನು ತ್ಯಜಿಸಬೇಕು. ಉಪ್ಪು ಮತ್ತು ಸಕ್ಕರೆಯನ್ನು ಆದಷ್ಟು ಕಡಿಮೆ ಸೇವಿಸಬೇಕು. ನಾವು ತಿನ್ನುವ ಮಾಂಸಗಳಲ್ಲಿ ಪ್ರೊಟೀನ್ ಹೆಚ್ಚಿದ್ದು ಇದು ರಕ್ತದಲ್ಲಿ ಅಧಿಕ ಆಮ್ಲವನ್ನು ಉತ್ಪಾದಿಸುತ್ತದೆ, ಇದು ಮೂತ್ರಪಿಂಡಕ್ಕೆ ಹಾನಿಕಾರಕವಾಗಿ ಮೂತ್ರಪಿಂಡದ ಆರೋಗ್ಯವನ್ನು ಕುಗ್ಗಿಸುತ್ತದೆ.