ದೇಹದ ಹೆಡ್ಡಾಫೀಸ್ ತಲೆಗೆ ತಲೆಶೂಲೆ
ಸಾಮಾನ್ಯವಾಗಿ ನಾವು ಪ್ರಪಂಚದಲ್ಲಿ ಎಷ್ಟೋ ಕಂಪನಿಗಳು, ಬ್ಯಾಂಕು, ಕಚೇರಿಗಳನ್ನು ಕಾಣುತ್ತೇವೆ. ಅವುಗಳಿಗೆ ಒಂದು ಮುಖ್ಯ ಕಚೇರಿ ಅರ್ಥಾತ್ ಹೆಡ್-ಆಫೀಸ್‌ಗಳಿದ್ದು ಅವುಗಳ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತವೆ. ಹಾಗೆಯೇ ಮನುಷ್ಯನ ಇಡೀ ದೇಹಕ್ಕೆ ತಲೆಯೇ ಒಂದು ಹೆಡ್-ಆಫೀಸ್. ಅಂತಹ ಹೆಡ್ಡಾಫೀಸ್‌ಗೆ ತೊಂದರೆಯಾದರೆ ಹೇಗೆ ಅಲ್ಲವೇ?
ಪ್ರತಿಯೊಬ್ಬರ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಿಯೇ ತೀರುವ ನೋವೆಂದರೆ ಅದು ತಲೆನೋವು. ಎಲ್ಲರನ್ನೂ ಹಲವು ಬಗೆಯ ತಲೆನೋವುಗಳು ಕಾಡುತ್ತದೆ, ಇದೊಂದು ರೋಗವೂ ಹೌದು, ಯಾವುದೇ ಬೇರೆ ರೋಗದ ಲಕ್ಷಣವೂ ಆಗಿರಬಹುದು. ಪ್ರಸ್ತುತ ಜೀವನಶೈಲಿಯಲ್ಲಿ ಬಹಳ ಬದಲಾವಣೆಗಳ ಕಾರಣದಿಂದಾಗಿ ಬರುವ ಸಾಮಾನ್ಯ ಸಮಸ್ಯೆಯೇ ತಲೆನೋವು, ಜೀವನದಲ್ಲಿ ಪ್ರತಿಯೊಬ್ಬರು ಅನುಭವಿಸುವ ಒತ್ತಡ, ಹಾರ್ಮೋನ್‌ಗಳ ಬದಲಾವಣೆಗಳು, ನಿದ್ರಾಹೀನತೆ, ಗ್ಯಾಸ್ಟ್ರಿಕ್ ಸಮಸ್ಯೆಗಳು, ಪರಿಸರ, ಪರಿಸ್ಥಿತಿಗಳ ಪ್ರತಿಕೂಲದಿಂದ ಉಂಟಾಗುವ ತಲೆನೋವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ತಲೆನೋವು ವಯಸ್ಸು, ಲಿಂಗದ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬರಿಗೂ ನೋವುಂಟು ಮಾಡುತ್ತದೆ, ತಲೆನೋವಿನ ತೀವ್ರತೆ ಸಾಧಾರಣದಿಂದ ಇನ್ನು ನೋವು ತಡೆಯಲಾಗುತ್ತಿಲ್ಲ ಅನ್ನುವಷ್ಟರವರೆಗೂ ಉಂಟಾಗುತ್ತದೆ. ಸಾಮಾನ್ಯವಾಗಿ ತಲೆನೋವಿಗೆ ಹಲವಾರು ಕಾರಣಗಳನ್ನು ಕಾಣಬಹುದು.
ನಮ್ಮ ಶರೀರದ ಸ್ವಾಭಾವಿಕ ಕರೆಗಳು ಎಂದರೆ ಮಲ, ಮೂತ್ರ, ವಾತ, ಸೀನು, ಆಕಳಿಕೆ, ಕೆಮ್ಮು, ಹಸಿವು, ಬಾಯಾರಿಕೆ, ನಿದ್ರೆ, ಕಣ್ಣೀರು, ಏದುಸಿರು ಇವುಗಳನ್ನು ಸಕಾಲದಲ್ಲೇ ಗಮನಿಸದಿರುವುದು, ರಾತ್ರಿ ನಿದ್ದೆಗೆಡುವುದು, ಅತಿಯಾದ ಮದ್ಯಪಾನ, ಧೂಮಪಾನ, ನಿಗದಿತ ಸಮಯದಲ್ಲಿ ಊಟ ಮಾಡದೆ ಇರುವುದು, ಅತಿಯಾದ ಜಂಕ್ ಫುಡ್‌ಗಳ ಸೇವನೆ, ಗಾಳಿಗೆ ತಲೆ ಒಡ್ಡುವುದು, ಧೂಳು, ಹೊಗೆ, ಮಂಜು, ಬಿಸಿಲುಗಳಲ್ಲಿ ಬಹಳ ಹೊತ್ತು ಇರುವುದು. ಅತಿಯಾದ ಬಿಸಿನೀರಿನಿಂದ ತಲೆಸ್ನಾನ ಮಾಡುವುದು, ಮಾನಸಿಕ ಚಿಂತೆ, ತಲೆಗೆ ಅಥವಾ ನೆತ್ತಿಗೆ ಎಣ್ಣೆ ಹಚ್ಚುವ ಅಭ್ಯಾಸವಿಲ್ಲದಿರುವುದು ಇದೆಲ್ಲವೂ ಒಂದು ರೀತಿ ತಲೆನೋವುಗಳಿಗೆ ಕಾರಣವೆನ್ನಬಹುದು. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ನಿಮ್ಮ ತಲೆಯ ಒಂದು ಬದಿಯ ಮೇಲೆ ಪರಿಣಾಮ ಬೀರುವ ಮೈಗ್ರೇನ್ ಅಥವಾ ನಿರ್ದಿಷ್ಟ ಅವಧಿಯಲ್ಲಿ ನಿಯಮಿತವಾಗಿ ಸಂಭವಿಸುವ ಕ್ಲಸ್ಟರ್, ಅತೀ ಒತ್ತಡದ ತಲೆನೋವು, ಸೈನಸ್, ನಿರ್ಜಲೀಕರಣ, ಆಗಾಗ್ಗೆ ಮರುಕಳಿಸುವ ತಲೆನೋವುಗಳಂತಹ ವಿವಿಧ ರೀತಿಯ ತಲೆನೋವುಗಳ ವರ್ಗೀಕರಿಸಿರುವುದನ್ನು ಕಾಣಬಹುದು.
ಸದಾ ವಿವಿಧ ರೀತಿಯಲ್ಲಿ ಕಾಡುವ ವಿವಿಧ ತಲೆನೋವುಗಳಿಗೆ ನೀವು ಮನೆಯಲ್ಲೇ ಬಹಳಷ್ಟು ವಿಧದಲ್ಲಿ ಮನೆಮದ್ದು ಮಾಡಿಕೊಳ್ಳಬಹುದು. ಉದಾಹರಣೆಗೆ: ತಲೆಗೆ ಎಣ್ಣೆ ಹಾಕುವುದು, ಹಸಿವು ಬಾಯಾರಿಕೆ ಗಮನಿಸಿ ಸೇವಿಸುವುದು,
ದೇಹದ ಸಕಲ ಅನಾರೋಗ್ಯಕ್ಕೂ ಮದ್ದು ನಿದ್ದೆ. ಹೀಗಾಗಿ ತಲೆನೋವು ಬಂದರೆ ಚೆನ್ನಾಗಿ ಕನಿಷ್ಠ ೧ ಗಂಟೆ ಮಲಗಿ ನಿದ್ದೆ ಮಾಡಿ. ಕಣ್ಣು ಸೇರಿದಂತೆ ದೇಹದ ಎಲ್ಲಾ ಭಾಗಗಳಿಗೆ ವಿಶ್ರಾಂತಿ ಸಿಗುವ ಕಾರಣ ತಲೆನೋವು ಮಾಯವಾಗುತ್ತದೆ. ಯಾವುದೇ ತಲೆನೋವು ಸತತವಾಗಿ ಪದೇಪದೇ ಕಾಡುತ್ತಿದ್ದರೆ ನೋವು ನಿವಾರಕಗಳನ್ನು ಬಳಸುತ್ತಾ ಮುಂದೂಡುವುದು ಸರಿಯಲ್ಲ, ಅದು ಮತ್ತೊಂದು ಗಂಭೀರ ಸಮಸ್ಯೆಯ ಸೂಚಕವೂ ಆಗಿರಬಹುದು. ಹಾಗಾಗಿ ವೈದ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು.
ಹೀಗೆ ಮಾಡಿದಲ್ಲಿ ತಲೆನೋವು ಮಾಯ
೧೫ ದಿನಕ್ಕೊಮ್ಮೆಯಾದರೂ ಅಭ್ಯಂಗ ಸ್ನಾನವನ್ನು ಮಾಡುವುದು. ಮೈಗ್ರೇನ್ ನಿವಾರಣೆಗೆ ಪಾಕ್ ಸೊಪ್ಪಿನ ರಸ ಮತ್ತು ಕ್ಯಾರೆಟ್ ರಸ ಬೆರೆಸಿ ಸೇವನೆ ಉತ್ತಮ. ತುಳಸಿ ಎಲೆಯ ರಸವನ್ನು ಶ್ರೀಗಂಧದ ಪುಡಿ ಜತೆ ಕಲಸಿದ ಲೇಹ, ಸೀಬೆ ಹಣ್ಣಿನ ಸಿಪ್ಪೆ ಮತ್ತು ಸೀಬೆ ಎಲೆಯನ್ನು ಅರೆದ ರಸ, ಪುದೀನ ಎಲೆಗಳ ರಸ, ಬಸಳೆ ಸೊಪ್ಪಿನರಸಗಳನ್ನು ಆಗಾಗ್ಗೆ ಹಣೆಗೆ ಲೇಪಿಸಿಕೊಳ್ಳಿ. ಶೀತದಿಂದ ಮೂಗು ಕಟ್ಟಿ ತಲೆನೋವಾದಲ್ಲಿ ತುಂಬೆ ಗಿಡದ ಕಾಂಡವನ್ನು ಬಿಸಿ ನೀರಿನಲ್ಲಿ ಕುದಿಸುವಾಗ ಬರುವ ಆವಿಯನ್ನು ಮುಖಕ್ಕೆ ತೆಗೆದುಕೊಳ್ಳಿ. ಒಂದು ಚಮಚ ಕೊಬ್ಬರಿ ಎಣ್ಣೆಗೆ ಅರ್ಧ ಚಮಚ ಲಿಂಬುರಸವನ್ನು ಸೇರಿಸಿ ನೆತ್ತಿಗೆ ಹಾಕಿಕೊಳ್ಳಿ.