ದೈವೀಸಂದೇಶವನ್ನು ಆಕರ್ಷಿಸುವ ಪ್ರಶಾಂತತೆ
ಒಂದು ಕಡೆ ನಿಲ್ಲಲು ಮತ್ತು ಜಗತ್ತನ್ನು ಚಲಿಸಲು' ಆರ್ಕಿಮಿಡೀಸ್ ಒಂದು ಸ್ಥಳವನ್ನು ಹುಡುಕುತ್ತಿದ್ದ. ವಾಸ್ತವವಾಗಿ ಅದು ಅಸ್ತಿತ್ವದಲ್ಲಿದೆ ಮತ್ತದು ನಮ್ಮೊಳಗೇ ಇದೆ. ಆದರೆ ಅದು ಆಕರ್ಷಕ ಆದರೆ ದಾರಿ ತಪ್ಪಿಸುವ ಚಿತ್ರಗಳ ಸರಣಿಯಿಂದ ಆವರಿಸಲ್ಪಟ್ಟಿದೆ. ಇದು ಮನಸ್ಸು-ದೇಹದ ಮೇಲಿನ ಔಷಧ ಪ್ರಯೋಗ ಮತ್ತು ಅದರ ಪ್ರಭಾವವು ಏಕೆ ಅಸಮಂಜಸವಾಗಿರುತ್ತದೆ ಎಂಬುದನ್ನು ವಿವರಿಸುತ್ತದೆ. ಕ್ಯಾನ್ಸರಿನಿಂದ ಬದುಕುಳಿದ ಅಥವಾ ಮಾರಣಾಂತಿಕ ಕಾಯಿಲೆಯಿಂದ ತನ್ನನ್ನು ತಾನು ಗುಣಪಡಿಸಿಕೊಳ್ಳಬಲ್ಲ ವ್ಯಕ್ತಿಯು ಇತರರಂತೆಯೇ ಅದೇ ಮಾನಸಿಕ ವ್ಯವಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಾನೆ ಎಂದು ನಾವು ಊಹಿಸುತ್ತೇವೆ. ಆದರೆ ಅದು ನಿಜವಲ್ಲ; ಮಾನಸಿಕ ಪ್ರಕ್ರಿಯೆಗಳು ಆಳವಿರಬಹುದು ಅಥವಾ ಇಲ್ಲದಿರಬಹುದು. ಆಳವಾಗಿ ಹೋಗುವುದು ಎಂದರೆ ಅವಿತಿರಿಸಲ್ಪಟ್ಟ ಪ್ರಜ್ಞೆಯ ನೀಲಿನಕ್ಷೆಯನ್ನು ಸಂಪರ್ಕಿಸುವುದು ಮತ್ತು ಅದನ್ನು ಬದಲಾಯಿಸುವುದು. ಆಗ ಮಾತ್ರವೇ ಕ್ಯಾನ್ಸರ್ ವಿರುದ್ಧ ಹೋರಾಡುವ ದೃಶ್ಯೀಕರಣವನ್ನು ಮನಸ್ಸಿನಲ್ಲಿ ಮೂಡಿಸಿಕೊಳ್ಳಬಹುದು. ಅಂದರೆ ರೋಗವನ್ನು ಹಿಮ್ಮೆಟ್ಟಿಸಲು ಮನಸ್ಸು ಸಾಕಷ್ಟು ದೃಢವಾಗಿರಬೇಕು. ಆದರೆ ಹೆಚ್ಚಿನ ಜನರು ಅದನ್ನು ಮಾಡಲು ಸಾಧ್ಯವಿಲ್ಲ ಏಕೆಂದರೆ; ಸೂಕ್ತವಾದ ಕಾರ್ಯವಿಧಾನಗಳನ್ನು ಪ್ರಚೋದಿಸಲು ಅಂತಹ ಅನಾರೋಗ್ಯ ಸ್ಥಿತಿಯಲ್ಲಿ ಅವರ ಆಲೋಚನಾಶಕ್ತಿ ತುಂಬಾ ದುರ್ಬಲವಾಗಿರುತ್ತದೆ.
ನಮ್ಮ ಆಲೋಚನಾಶಕ್ತಿಯನ್ನು ಆಮೂಲಾಗ್ರವಾಗಿ ಸುಧಾರಿಸಲು ಧ್ಯಾನವು ಸಾಕಷ್ಟು ಪ್ರಬಲವಾಗಿದೆಯೇ ಎಂಬುದು ಪ್ರಾಯೋಗಿಕ ಪ್ರಶ್ನೆಯಾಗಿದೆ. ವಿಜ್ಞಾನಿಗಳು ನಡೆಸಿದ ಹಲವಾರು ಅಧ್ಯಯನಗಳು ಧ್ಯಾನವು ದೇಹ ಮತ್ತು ಮನಸ್ಸಿನಲ್ಲಿ ಸರಳ ವಿಶ್ರಾಂತಿಗಿಂತ ಹಲವು ಪಟ್ಟು ಪರಿಣಾಮಕಾರಿಯಾಗಿ ಆಳವಾದ ಬದಲಾವಣೆಯನ್ನು ಉಂಟು ಮಾಡಬಹುದು ಎಂಬುದನ್ನು ತೋರಿಸಿವೆ. ಪಾಶ್ಚಾತ್ಯ ಜಗತ್ತಿನಲ್ಲಿ ಮಾನಸಿಕ ಒತ್ತಡವನ್ನು ನಿವಾರಿಸಲು, ರಕ್ತದೊತ್ತಡವನ್ನು ಸುಧಾರಿಸಲು ಅನುಸರಿಸುವ ಔಷಧೋಪಚಾರ ಪದ್ಧತಿಗಿಂತಲೂ ಧ್ಯಾನವು ಬಹುಪಾಲು ಪರಿಣಾಮಕಾರಿ ಎಂಬುದು ಸಾಬೀತುಗೊಂಡಿದೆ.
ನಾಲ್ಕನೇ ಸ್ಥಿತಿಯಾದ ಪ್ರಜ್ಞಾವಸ್ಥೆ' ಎಂಬುದು ಅಸ್ತಿತ್ವದಲ್ಲಿದೆ ಎಂಬುದನ್ನು ಬೆಳಕಿಗೆ ತಂದ ಮೊದಲ ಪಾಶ್ಚಿಮಾತ್ಯ ವಿಜ್ಞಾನಿ, ಅಮೆರಿಕನ್ ಶರೀರಶಾಸ್ತ್ರಜ್ಞ ರಾಬರ್ಟ್ ಕೀತ್ ವ್ಯಾಲೇಸ್. ಆತ ೧೯೬೭ರಲ್ಲಿ ಅತೀಂದ್ರಿಯ ಧ್ಯಾನದ ಸಂದರ್ಭದಲ್ಲಿ ವ್ಯಕ್ತಿಯ ದೇಹದಲ್ಲಿ ನಡೆಯುವ ಶಾರೀರಿಕ ಬದಲಾವಣೆಗಳ ಕುರಿತು ಸಂಶೋಧನೆ ಕೈಗೊಂಡಿದ್ದ. ಆ ಕಾಲಘಟ್ಟದಲ್ಲಿ ಲಭ್ಯವಿದ್ದ ವೈಜ್ಞಾನಿಕ ಉಪಕರಣಗಳನ್ನು ಬಳಸಿಕೊಂಡು ಹಲವಾರು ವರ್ಷಗಳ ಅವಧಿಯಲ್ಲಿ ಧ್ಯಾನದಲ್ಲಿ ನಿರತರಾದವರಿಂದ ಧ್ಯಾನಾವಸ್ಥೆಯಲ್ಲಿ ಅವರ ಮೆದುಳಿನ ಅಲೆಗಳು, ರಕ್ತದೊತ್ತಡ, ಹೃದಯಬಡಿತ ಮತ್ತು ದೈಹಿಕ ಬದಲಾವಣೆ ಇತ್ಯಾದಿಗಳು ಒಳಗೊಂಡಂತೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿದ. ಸಂಶೋಧನೆಯಲ್ಲಿ ಕಂಡುಕೊಂಡ ಅಂಶಗಳು: ಮೊದಲನೆಯದಾಗಿ, ಧ್ಯಾನವನ್ನಾರಂಭಿಸಿದ ಕೆಲವೇ ಕ್ಷಣಗಳಲ್ಲಿ ಆಳವಾದ ವಿಶ್ರಾಂತಸ್ಥಿತಿ, ನಿಧಾನಗೊಂಡ ಉಸಿರಾಟಸ್ಥಿತಿ ಮತ್ತು ಹೃದಯಬಡಿತಗಳನ್ನು ಗುರುತಿಸಿದ. ಉಸಿರಾಟದಲ್ಲಿ ಆಮ್ಲಜನಕದ ಪ್ರಮಾಣವು ಕುಸಿಯುವುದನ್ನು ಕಂಡ. ಇದು ವಿಶೇಷ ಮಹತ್ವದ ಅಂಶವಾಗಿದೆ ಏಕೆಂದರೆ ದೇಹದ ಚಯಾಪಚಯ ಪ್ರಕ್ರಿಯೆಯಲ್ಲಿ ಇಂಧನವಾಗಿ ಆಮ್ಲಜನಕವು ಬಳಕೆಯಾಗುತ್ತಿರುತ್ತದೆ. ಶರೀರಶಾಸ್ತçಜ್ಞರು ಈ ಸ್ಥಿತಿಯನ್ನು
ಹೈಪೋಮೆಟಬಾಲಿಕ್ ಸ್ಟೇಟ್' ಎಂದು ಉಲ್ಲೇಖಿಸುತ್ತಾರೆ. ಧ್ಯಾನಸ್ಥರು ತಮ್ಮ ಆಳವಾದ ವಿಶ್ರಾಂತಸ್ಥಿತಿಯನ್ನು ಕೆಲವೇ ನಿಮಿಷಗಳಲ್ಲಿ ಸಾಧಿಸುತ್ತಾರೆ. ಇದೇ ಸ್ಥಿತಿಯನ್ನು ನಿದ್ರಾವಸ್ಥೆಯಲ್ಲಿ ತಲುಪಲು ಕನಿಷ್ಠ ನಾಲ್ಕರಿಂದ ಆರು ಗಂಟೆಗಳ ಸಮಯ ತಗಲುತ್ತದೆ. ಹಿಮಾಲಯದಲ್ಲಿ ತಪೋನಿರತರಾದ ಸಾಧುಸಂತರು ದೀರ್ಘಾವಧಿಯವರೆಗೆ ಉಸಿರಾಟವನ್ನು ಸ್ಥಗಿತಗೊಳಿಸಿ ಮನಸ್ಸನ್ನು ಆಲೋಚನಾರಹಿತವಾಗಿ ಇಡಬಲ್ಲಂತಹ ಸಾಮರ್ಥ್ಯ ಹೊಂದಿರುತ್ತಾರೆ. ಈ ಸ್ಥಿತಿಯಲ್ಲಿ ಅಂದರೆ ಅತೀಂದ್ರಿಯ ಧ್ಯಾನಾವಸ್ಥೆಯಲ್ಲಿ ದೇಹವನ್ನು ಸಂಪೂರ್ಣವಾಗಿ ಸ್ಥಿರಗೊಳಿಸಿದ್ದರೂ ಬಾಹ್ಯ ಅನುಭವಗಳ ಸ್ಪಷ್ಟ ಅರಿವು ಅವರಿಗೆ ಆಗುತ್ತಿರುತ್ತದೆ. ಉಪಕರಣಗಳನ್ನು ಬಳಸಿ ದೈವೀನಿಯಮಗಳನ್ನು ಅರಿಯಲು ಮುಂದಾಗುವುದು ವಿಜ್ಞಾನವಾದರೆ; ಮನಸ್ಸನ್ನು ಏಕಾಗ್ರತೆಗೆ ಒಳಪಡಿಸಿ ಸೃಷ್ಟಿನಿಯಮವನ್ನು ಅರಿಯಲು ಮುಂದಾಗುವುದು ಅಧ್ಯಾತ್ಮ. ಕೊನೆಗೆ ಬಿಚ್ಚಿಕೊಳ್ಳುವ ಸತ್ಯವೇ ವೇದಾಂತ. ವಿಜ್ಞಾನದ ದಾರಿಯಲ್ಲಿ ಮಿತಿಯಿದೆ; ಅಧ್ಯಾತ್ಮದ ದಾರಿಯಲ್ಲಿ ಪರಿಪೂರ್ಣತೆ ಇದೆ.
ಸಾಮಾನ್ಯವಾಗಿ ಕಾಲಕಾಲಕ್ಕೆ ಸರಿಯಾಗಿ ಪೌಷ್ಠಿಕ ಆಹಾರ, ದೇಹಕ್ಕೆ ಸರಿಯಾದ ವ್ಯಾಯಾಮ, ಮನಸ್ಸು-ದೇಹದ ನಡುವೆ ಸಮತೋಲನ ಭಾವ ಇವೆಲ್ಲ ಇದ್ದಾಗಲೂ ಕೆಲವರಲ್ಲಿ ಒಂದಲ್ಲ ಒಂದು ದೈಹಿಕ ಅಥವಾ ಮಾನಸಿಕ ನೋವು ಕಾಣಿಸಿಕೊಳ್ಳುವುದಿದೆ. ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ದೈಹಿಕ ತೊಂದರೆ ಕಾಣಿಸಿಕೊಳ್ಳದಿದ್ದರೂ ಬದುಕಿನಲ್ಲಿ ಏನೋ ನಿರುತ್ಸಾಹ, ದೇಹದಲ್ಲಿ ವಿನಾಕಾರಣ ನೋವು, ಮನಸ್ಸು ಯಾಕೋ ಹತೋಟಿ ತಪ್ಪಿದ ಅನುಭವ, ಮಾಡಿದ ಕೆಲಸದಲ್ಲಿ ಎಷ್ಟೇ ಶ್ರದ್ಧೆವಹಿಸಿದರೂ ಫಲಿತಾಂಶ ವ್ಯತಿರಿಕ್ತವಾಗಿರುವುದು…ಹೀಗೆ ಅನೇಕ ಸಂಗತಿಗಳಿಗೆ ಪ್ರಕೃತಿಯಲ್ಲಿ ಬೇರೆಯದ್ದೇ ಕಾರಣವಿರುತ್ತದೆ. ಅದನ್ನು ಅರಿತುಕೊಂಡು ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಯನ್ನು ಅತೀಂದ್ರಿಯ ವಿಜ್ಞಾನ' ಎಂದು ಕರೆಯಲಾಗುತ್ತದೆ. ಅತೀಂದ್ರಿಯ ಜ್ಞಾನದ ಪ್ರತ್ಯಕ್ಷಾನುಭವದ ಕುರಿತಾದ ಶ್ರೇಷ್ಠಮೂಲಗಳಲ್ಲಿ ಒಂದಾದ
ಯೋಗವಾಸಿಷ್ಠ'ವು ನಾಲ್ಕನೇ ಸ್ಥಿತಿಯಾದ ಪ್ರಜ್ಞಾವಸ್ಥೆಯ ಬಗ್ಗೆ ಹೀಗೆ ಹೇಳುತ್ತದೆ: ಪ್ರಯಾಸವಿಲ್ಲದ ಉಸಿರಾಟದ ಸ್ಥಗಿತವು ಪ್ರಜ್ಞಾವಸ್ಥೆಯ ಅತ್ಯುನ್ನತ ಸ್ಥಿತಿಯಾಗಿದೆ. ಅದು ಸ್ವಯಂ, ಶುದ್ಧ, ಅನಂತ ಪ್ರಜ್ಞೆ. ಇದನ್ನು ತಲುಪಿದವನು ಎಂದಿಗೂ ದುಃಖಿಸುವುದಿಲ್ಲ.' ಇದನ್ನು ಬೇರೆ ರೀತಿಯಲ್ಲಿ ನೋಡುವುದಾದರೆ; ವ್ಯಾಲೇಸ್ ಮಾಡಿದ್ದು ಮನಸ್ಸು-ದೇಹದ ಸಂಬಂಧವನ್ನು ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದು. ಋಷಿಗಳು ಹೇಳಿರುವಂತೆ;
ಒಬ್ಬನ ದೇಹವು ತನ್ನ ಅರಿವಿನ ಸ್ಥಿತಿಗೆ ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸುತ್ತದೆ' ಎಂಬುದೀಗ ವೈಜ್ಞಾನಿಕವಾಗಿ ಒಪ್ಪಿಕೊಂಡ ಸತ್ಯ. ವಿರೋಧಾಭಾಸವೇನೆಂದರೆ; ನಾವು ನಮ್ಮೊಳಕ್ಕೆ ಆಳವಾಗಿ ಧುಮುಕುವುದನ್ನು ಇನ್ನಷ್ಟೇ ಕಲಿಯಬೇಕಿರುವುದು. ಧ್ಯಾನವು ಪ್ರತಿದಿನ ನಮ್ಮನ್ನು ನಿರಂತರವಾಗಿ ಪ್ರಭಾವಿಸುತ್ತಿರುವ ಬಾಹ್ಯ ಪ್ರಕ್ರಿಯೆಯನ್ನು ನಿಯಂತ್ರಿಸಲು ನಮಗೆ ತಿಳಿದೋ, ತಿಳಿಯದೆಯೋ ಕಲಿಸುತ್ತದೆ. ಧ್ಯಾನದಿಂದ ಮನಸ್ಸು ಪ್ರಶಾಂತವಾಗಿದ್ದ ಕ್ಷಣಗಳಲ್ಲಿ ಸ್ವಾಭಾವಿಕವಾಗಿ ಉದಿಸುವ ಅಂತಃಪ್ರೇರಣೆಯೇ ಮುಖ್ಯ ದಿಗ್ದರ್ಶನ. ಪ್ರಶಾಂತ ಮನಸ್ಸು ವಾರ್ತಾಗ್ರಾಹಕ ಪ್ರಸಾರಕದ ಮೂಲಕ ಭಾವನೆಗಳನ್ನು ಕಳಿಸುವಂಥ ಮತ್ತು ಸ್ವೀಕರಿಸುವಂಥ ಅಲ್ಲದೆ ಅನವಶ್ಯವೆನಿಸಿದುದನ್ನು ಹೊರದೂಡುವಂಥ ಶಕ್ತಿಯನ್ನು ಹೊಂದಿದೆ. ರೇಡಿಯೋ ಪ್ರಸರಣ ಕೇಂದ್ರದ ಶಕ್ತಿಯು ಆ ಕೇಂದ್ರವು ಬಳಸುವ ವಿದ್ಯುಚ್ಛಕ್ತಿಯ ಪ್ರಮಾಣದಿಂದ ಹೇಗೆ ನಿಯಂತ್ರಿಸಲ್ಪಡುತ್ತದೆಯೋ ಹಾಗೆಯೇ ಮಾನವ ರೇಡಿಯೋದ ಕಾರ್ಯಸಾಧಕ ಶಕ್ತಿಯು ಪ್ರತಿ ವ್ಯಕ್ತಿ ಹೊಂದಿರುವ ಇಚ್ಛಾಶಕ್ತಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಬ್ರಹ್ಮಾಂಡದಲ್ಲಿ ಎಲ್ಲಾ ಭಾವನೆಗಳೂ ನಿರಂತರವಾಗಿ ಸ್ಪಂದಿಸುತ್ತಿರುತ್ತವೆ. ಗಾಢವಾದ ಚಿತ್ತೆಕಾಗ್ರತೆಯಿಂದ ಭಾವನೆಗಳನ್ನು ಪತ್ತೆಹಚ್ಚಬಹುದು. ಭಾವನೆಗಳು ಸಾರ್ವತ್ರಿಕವಾಗಿ ಇರುವಂಥವೇ ಹೊರತು ವ್ಯಕ್ತಿಗಳಲ್ಲಿ ಸೇರಿಕೊಂಡಿರುವಂತಹವಲ್ಲ. ಮನುಷ್ಯ `ಸರ್ವಾಂತರ್ಯಾಮಿಯಾದ ಆತ್ಮ' ಎಂಬುದನ್ನು ತಿಳಿಸುವ ಮೊದಲ ವೈಜ್ಞಾನಿಕ ಸೂಚನೆಗಳೆಂದರೆ; ಆಕಾಶವಾಣಿ ಮತ್ತು ದೂರದರ್ಶನ. ಇವು ಜನರ ಧ್ವನಿಯನ್ನೂ ದರ್ಶನವನ್ನೂ ಲಕ್ಷಾಂತರ ಮಂದಿಯ ಬಳಿಗೆ ತತ್‌ಕ್ಷಣವೇ ತಂದುಕೊಡುತ್ತವೆ.
ಮನಸ್ಸು ಚಂಚಲವಿದ್ದಾಗ ಗುರುವಿನ ಅಥವಾ ದೈವಿಕಸಂದೇಶ ನಮ್ಮ ಅರಿವಿಗೇ ಬರುವುದಿಲ್ಲ. ದೇವಸ್ಥಾನಗಳಿಗೆ ಹೋದಾಗ ಶಾಂತಮನಸ್ಸಿನಿಂದ ಕೆಲವು ನಿಮಿಷ ಕುಳಿತಾಗ ನಮ್ಮ ನಾಡಿಗಳು, ಚಕ್ರಗಳು ಸಕ್ರಿಯವಾಗಿ ಕಂಪನದ ಅನುಭವ ಉಂಟಾಗುತ್ತದೆ. ದೇವರನ್ನು ನೀವು ನಿಮ್ಮ ಬೇಸಿಗೆಯ ಅತಿಥಿಯನ್ನಾಗಿ ಆಹ್ವಾನಿಸದಿದ್ದರೆ ನಿಮ್ಮ ಬಾಳಿನ ಚಳಿಗಾಲದಲ್ಲಿ ಅವನು ಬರುವುದಿಲ್ಲ ಎಂಬುದು ನೆನಪಿರಬೇಕು.