ದೊಂಬಿ ನಿಗ್ರಹ ಮಾಡಲು ಶಾಸನ ರೂಪಿಸುವ ಶಿಫಾರಸು
ಸ್ವಾತಂತ್ರ್ಯದ ಬದುಕಿಗೆ ಯಾವತ್ತಿಗೂ ಷರತ್ತುಗಳು ಅನ್ವಯ; ಇದು ಯಾವತ್ತಿಗೂ ಮುಕ್ತವಲ್ಲ. ಷರತ್ತುಗಳಿಲ್ಲದ ಸ್ವಾತಂತ್ರ್ಯ ಸ್ವೇಚ್ಚಾಚಾರಕ್ಕೆ ತಿರುಗುವ ಅಪಾಯಗಳು ಇರುವುದನ್ನು ಹಲವಾರು ಸಂದರ್ಭದಲ್ಲಿ ಜಗತ್ತು ಗುರುತಿಸಿದೆ. ಸ್ವಾತಂತ್ರ್ಯದ ಮೂಲಕ ಪ್ರಾಪ್ತವಾಗುವ ಅಭಿವ್ಯಕ್ತಿ, ಹೋರಾಟ, ಪ್ರತಿಭಟನೆ, ಸತ್ಯಾಗ್ರಹ ಮೊದಲಾದ ಜನತಂತ್ರ ಪದ್ಧತಿಯ ಅಭಿಯಾನಗಳಿಗೆ ಮುಕ್ತ ಅವಕಾಶ ಇದೆ ಎಂದು ಹೇಳುವುದು ವಾದದ ಮಟ್ಟಿಗೆ ಸರಿ. ಆದರೆ, ಈ ಎಲ್ಲ ಪ್ರತಿಭಟನೆಯ ಮಾರ್ಗಗಳಿಗೂ ಷರತ್ತುಗಳು ಅನ್ವಯ. ಅದಿಲ್ಲದೇ ಹೋದರೆ ಅರಾಜಕತೆ ಮಿತಿಮೀರಿ ಕಾಡಿನ ನ್ಯಾಯದ ಸ್ಥಿತಿಯನ್ನು ಎದುರಿಸಬೇಕಾಗಿಬರುವುದು ಅನಿವಾರ್ಯ. ಪ್ರತಿಭಟನೆಯ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ನಷ್ಟವುಂಟು ಮಾಡುವ ಹಕ್ಕು ಯಾರಿಗೂ ಇಲ್ಲ. ಇದು ಒಂದು ಅಪರಾಧ. ಆದರೆ, ದೊಂಬಿಯಲ್ಲಿ ಜರುಗುವ ಇಂತಹ ಘಟನಾವಳಿಗೆ ಇದುವರೆಗೆ ನಷ್ಟ ತುಂಬಿಕೊಡುವ ರೀತಿಯಲ್ಲಿ ಶಾಸನಗಳು ರೂಪುಗೊಂಡಿಲ್ಲ. ಇದರ ಪರಿಣಾಮವೆಂದರೆ ಪ್ರತಿಭಟನೆಯ ಕಾವನ್ನು ಹೆಚ್ಚಿಸುವ ಸಲುವಾಗಿಯೇ ಅಥವಾ ತಮ್ಮ ಪ್ರಭಾವವನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡುವ ಸಲುವಾಗಿಯೋ ಕೆಲವರು ಸಾರ್ವಜನಿಕ ಆಸ್ತಿಪಾಸ್ತಿ ನಷ್ಟಕ್ಕೆ ಪ್ರೇರಣೆ ನೀಡುವ ನಿದರ್ಶನಗಳು ಹಲವಾರು. ಭಾರತದ ಕೆಲವು ರಾಜ್ಯಗಳಲ್ಲಿ ಇಂತಹ ಆಸ್ತಿ ನಷ್ಟ ಮಾಡಿದವರನ್ನು ಗುರುತಿಸಿ ಅವರ ಆಸ್ತಿಯನ್ನು ಧ್ವಂಸ ಮಾಡುವ ಕ್ರಮಗಳು ಜಾರಿಗೆ ಬಂದಿರುವುದೇನೋ ಸರಿ. ಆದರೆ, ಎಷ್ಟರ ಮಟ್ಟಿಗೆ ಇದು ಕಾನೂನುಬದ್ಧ ಎಂಬುದು ಇನ್ನೂ ಇತ್ಯರ್ಥವಾಗಬೇಕಾದ ಸಂಗತಿ. ಬದಲಾದ ಪರಿಸ್ಥಿತಿಯನ್ನು ಪರಿಗಣಿಸಿ ದೇಶದ ಕಾನೂನು ಆಯೋಗವು ಶಿಫಾರಸು ಮಾಡಿರುವ ಪ್ರಕಾರ ಸಾರ್ವಜನಿಕ ಆಸ್ತಿ ನಷ್ಟ ತುಂಬಿದರಷ್ಟೆ ಆರೋಪಿಗಳಿಗೆ ಜಾಮೀನು ಕೊಡುವ ಶಾಸನವನ್ನು ರೂಪಿಸುವಂತೆ ಸರ್ಕಾರಕ್ಕೆ ತಿಳಿಸಿರುವ ಸಂಗತಿ ನಿಜಕ್ಕೂ ಸ್ವಾಗತಾರ್ಹ. ಏಕೆಂದರೆ, ಪ್ರತಿಭಟನೆ ಯಾವುದೇ ಇರಲಿ. ಮೊದಲು ಹಾನಿಗೊಳಗಾಗುವುದು ಸರ್ಕಾರಿ ಬಸ್‌ಗಳು ಹಾಗೂ ಸರ್ಕಾರಿ ಕಚೇರಿಗಳು. ಇದರಿಂದ ಸಾರ್ವಜನಿಕರಿಗೆ ಆಗುವ ನಷ್ಟ ಅಷ್ಟಿಷ್ಟಲ್ಲ. ಇದನ್ನು ತಗ್ಗಿಸುವ ನಿಟ್ಟಿನಲ್ಲಿ ಕಾನೂನು ಆಯೋಗದ ಶಿಫಾರಸು ನಿಜಕ್ಕೂ ಒಂದು ಸಕಾಲಿಕ ಕ್ರಮ ಮತ್ತು ಪ್ರತಿಭಟನೆ ಹೆಸರಿನಲ್ಲಿ ದೊಂಬಿಗಿಳಿಯುವ ದುಷ್ಕರ್ಮಿಗಳಿಗೆ ಒಂದು ಎಚ್ಚರಿಕೆ ಗಂಟೆ.
ಇಂತಹ ಕಾನೂನುಗಳು ಯಾವಾಗಲೂ ರಾಷ್ಟçಮಟ್ಟದಲ್ಲಿ ರೂಪುಗೊಳ್ಳುವುದು ಸೂಕ್ತ. ರಾಜ್ಯಗಳಿಗೆ ಮಾತ್ರ ಸೀಮಿತವಾಗುವ ಕಾನೂನು ಚಿಕ್ಕದು. ಇದರಿಂದ ಒಂದು ರಾಜ್ಯದ ಆರೋಪಿ ಇಲ್ಲವೇ ಅಪರಾಧಿ ಇನ್ನೊಂದು ರಾಜ್ಯದಲ್ಲಿ ಸಜ್ಜನನಾಗಿ ಕಾನೂನಿನ ದೃಷ್ಟಿಯಲ್ಲಿ ಪರಿಗಣಿತನಾಗುತ್ತಾನೆ. ಈ ಕಾನೂನು ರಾಷ್ಟçವ್ಯಾಪಿಯಾದರೆ ಕೃತ್ಯ ಎಲ್ಲೇ ನಡೆದರೂ ಆರೋಪಿ ಹಾಗೂ ಅಪರಾಧಿಯ ಸ್ಥಾನ ಬದಲಾಗುವುದಿಲ್ಲ. ಉತ್ತರ ಪ್ರದೇಶದ ಕೆಲವು ಪ್ರಸಂಗಗಳಲ್ಲಿ ಸರ್ಕಾರಿ ಆಸ್ತಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡಿದ ಸಮಾಜಘಾತುಕ ಶಕ್ತಿಗಳ ಸ್ವಯಾರ್ಜಿತ ಆಸ್ತಿಯನ್ನು ಗುರುತಿಸಿ ಬುಲ್ಡೋಜರ್ ಬಳಕೆ ಮಾಡಿ ಅದನ್ನು ಧ್ವಂಸ ಮಾಡಿ ಭಂಜಕ ಶಕ್ತಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಸರ್ಕಾರದ ಈ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪದ ದನಿ ಎದ್ದಿತ್ತು. ಹೈಕೋರ್ಟಿಗೂ ಕೂಡಾ ಸರ್ಕಾರದ ವಿರುದ್ಧ ಮನವಿಗಳು ಹೋಗಿದ್ದವು. ಹೀಗಾಗಿ ಸರ್ಕಾರ ಕೈಗೊಳ್ಳುವ ಇಂತಹ ಶಿಸ್ತುಕ್ರಮಕ್ಕೆ ಕಾನೂನಿನ ಬಲ ಇದೆಯೋ ಇಲ್ಲವೋ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ದೇಶದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿರುವ ಕಾನೂನು ಆಯೋಗ ಎಲ್ಲ ರೀತಿಯ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಸ್ವಾತಂತ್ರ್ಯದ ಚೌಕಟ್ಟಿನಲ್ಲಿ ಪ್ರತಿಭಟನೆಗೆ ಅವಕಾಶ ಮೊಟಕಾಗದಂತೆ ಎಚ್ಚರಿಕೆ ವಹಿಸುತ್ತಲೇ ಪ್ರತಿಭಟನೆಯ ಹೆಸರಿನಲ್ಲಿ ದೊಂಬಿ ಸೃಷ್ಟಿಸಿ ಆಸ್ತಿ ನಷ್ಟ ಮಾಡುವವರಿಗೆ ತಕ್ಕ ಪಾಠ ಕಲಿಸುವ ನಿಟ್ಟಿನಲ್ಲಿ ಶಾಸನವನ್ನು ರೂಪಿಸುವ ಅಗತ್ಯವನ್ನು ಪ್ರತಿಪಾದಿಸಿದೆ. ಕೇಂದ್ರ ಕಾನೂನು ಆಯೋಗದ ಈ ಶಿಫಾರಸು ಆಧರಿಸಿ ಕೇಂದ್ರ ಸರ್ಕಾರ ವಿಧೇಯಕವನ್ನು ರೂಪಿಸಿ ಸಂಸತ್ತಿನಲ್ಲಿ ಮಂಡಿಸಿದ ನಂತರ ಇದಕ್ಕೆ ಶಾಸನವಾಗುವ ಅರ್ಹತೆಯನ್ನು ಪಡೆದುಕೊಳ್ಳುತ್ತದೆ. ಈಗಿರುವ ಸಮ್ಮಿಶ್ರ ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಧರ್ಮಸೂಕ್ಷö್ಮವಾದ ವಿಧೇಯಕಗಳು ಒಪ್ಪಿಗೆ ಪಡೆಯುತ್ತವೋ ಅಥವಾ ನೆನೆಗುದಿಗೆ ಬೀಳುತ್ತವೋ ಎಂಬುದನ್ನು ಕಾಲವಷ್ಟೆ ಹೇಳಬೇಕು.